ವಾಮಮಾರ್ಗದಲ್ಲಿ ಹೊಸ ಬಡಾವಣೆಗಳಿಗೆ ಅನುಮತಿ-
1 min readಮೂಡಿಗೆರೆ:ವಾಮಮಾರ್ಗದಲ್ಲಿ ಹೊಸ ಬಡಾವಣೆಗಳಿಗೆ ಅನುಮತಿ-ಪ.ಪಂ.ಸಾಮಾನ್ಯ ಸಭೆಯಲ್ಲಿ ಗದ್ದಲ-ಬಿಜೆಪಿ ಸದಸ್ಯರಿಂದ ಸಭಾ ತ್ಯಾಗ-ಧರಣಿ
December 30, 2024
ಮೂಡಿಗೆರೆ:ಇಲ್ಲಿನ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಸೋಮವಾರ ನಡೆದ ವೇಳೆ ಆಡ ಳಿತಾರೂಡ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ಸದಸ್ಯರ ನಡುವೆ ಹೊಸ ಬಡಾವಣೆಗಳಿಗೆ ಅನುಮತಿ ನೀಡಿರುವ ಕುರಿತು ಗಂಭೀರ ಚರ್ಚೆ,ಆರೋಪ ಪ್ರತ್ಯಾರೋಪ ನಡದು ಸಭೆ ಗದ್ದಲದ ಗೂಡಾಯಿತು.
2023 ಅಕ್ಟೋಬರ್ 18, 2024ರ ಜನವರಿ 25 ಮತ್ತು ಜೂನ್ 28 ರಂದು ಆಡಳಿತಾಧಿಕಾರಿ ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ ಎಂದು ಸುಳ್ಳು ನಡಾವಳಿ ನಮೂದಿಸಲಾಗಿದೆ. ಆಡಳಿತಾಧಿಕಾರಿಯವರ ನೇತೃತ್ವದಲ್ಲಿ 1 ಸಭೆ ಕೂಡಾ ನಡೆದಿಲ್ಲ.3 ಸಭೆ ನಡೆದಿದೆ ಎಂದು ನಮೂದಿಸಿರುವ ನಿರ್ಣಯ,ಕಳೆದ ಬಾರಿ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯ ಸೇರಿದಂತೆ 4 ಸಭಾ ನಡಾವಳಿಯನ್ನು ಇಂದಿನ ಸಭೆಯಲ್ಲಿ ಓದಿ ಹೇಳುವಂತೆ ಬಿಜೆಪಿಯ ಐವರು ಸದಸ್ಯರು ಒತ್ತಾಯಿಸಿದಾಗ ಹಳೆಯ ನಡಾವಳಿ ಪುಸ್ತಕವನ್ನು ಈ ಬಾರಿಯ ಸಭೆಯಲ್ಲಿ ಓದಲು ಅವಕಾಶ ನೀಡುವುದಿಲ್ಲ, ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಕಾoಗ್ರೆಸ್ ಸದಸ್ಯರು ಹೇಳಿದಾಗ ಭಾರಿ ಗದ್ದಲಕ್ಕೆ ಕಾರಣವಾಯಿತು.
ಇದಕ್ಕೆ ಬಿಜೆಪಿ ಸದಸ್ಯರು ಸಭೆಯಲ್ಲೇ ಪ್ರತಿಭಟನೆ ನಡೆಸಿದರು.ವಿರೋಧ ಪಕ್ಷದ ಪ್ರತಿಭಟನೆಗೆ ಆಡಳಿತ ಪಕ್ಷ ನಿರ್ಲಕ್ಷ್ಯ ತೋರಿ ಸಭೆ ಮುಂದುವರಿಸಿದಾಗ ಬಿಜೆಪಿ ಸದಸ್ಯರು ಸಭೆ ಬಹಿಷ್ಕರಿಸಿ ಹೊರನಡೆದರು. ಅವರ ಪೈಕಿ ಮನೋಜ್ ಕುಮಾರ್, ಆಶಾ ಮೋಹನ್ ಮತ್ತು ಕಮಲಮ್ಮ ಎಂಬುವವರು ಪ.ಪಂ.ಆವರಣದಲ್ಲಿ ಸoಜೆ ಸಭೆ ಮುಗಿಯುವವರೆಗೂ ಉಪವಾಸ ಕುಳಿತು ಧರಣಿ ನಡೆಸಿದರು.
ಪ್ರತಿಭಟನೆ ನಡೆಸಿದ ಮನೋಜ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಪ.ಪಂ.ನ ಮೊದಲ ಅಧ್ಯಕ್ಷರ ಅವಧಿ ಮುಗಿದ ಬಳಿಕ 15 ತಿಂಗಳು ಆಡಳಿತಾಧಿಕಾರಿ ಅಧಿಕಾರ ನಡೆಸಿದ್ದಾರೆ. ಅವರ ಅವಧಿಯಲ್ಲಿ 3 ಸಭೆ ನಡೆದಿದೆ ಎಂದು ಸುಳ್ಳು ನಡಾವಳಿ ಸೃಷ್ಟಿಸಿದ್ದಾರೆ. ಆಡಳಿತಾಧಿಕಾರಿ ಅವರ ಅವಧಿಯಲ್ಲಿ ಒಂದು ಸಭೆ ಕೂಡಾ ನಡೆದಿಲ್ಲ.ಅವರು ಸಭೆ ನಡೆಸಿದ್ದರೆ ಸದಸ್ಯರನ್ನು ಆಹ್ವಾನಿಸಬೇಕಿತ್ತು.ಸದಸ್ಯರನ್ನು ಆಹ್ವಾನಿಸದೆ ಸಭೆ ನಡೆಸುವಂತಿಲ್ಲ. ನಕಲಿ ನಡಾವಳಿಯಲ್ಲಿ ಆಡಳಿತಾಧಿಕಾರಿ ಮತ್ತು ಸದಸ್ಯರ ಸಹಿಯಿಲ್ಲ.ಪ.ಪಂ.ಮುಖ್ಯಾಧಿಕಾರಿಯವರ ಸಹಿ ಮಾತ್ರ ಇದೆ.ಇದು ಕಾನೂನ ಬಾಹಿರ ಕ್ರಮವಾಗಿದೆ.ಈ ಬಗ್ಗೆ ಆಗಲೇ ಜಿಲ್ಲಾಧಿಕಾರಿ ಗಳಿಗೆ ದೂರು ನೀಡಲಾಗಿದೆ.
ಜಿಲ್ಲಾಧಿಕಾರಿ ಕಛೇರಿಯಿಂದ ಡಿ.13ರoದು ಪ.ಪಂ.ಕಛೇರಿಗೆ ಪತ್ರ ಬರೆದು ಆಡಳಿತಾಧಿಕಾರಿಯ ಸಹಿ ಇಲ್ಲದ ವಿವಿಧ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಲಾಗಿದೆ.ಸಭಾ ನಡಾವಳಿಯಲ್ಲಿ ಆಡಳಿತಾಧಿಕಾರಿ ಸಹಿ ಇರಬೇಕು. ಅಲ್ಲದೆ ಅದು ಊರ್ಜಿತವಾಗುವುದಿಲ್ಲ. ಹಾಗಾಗಿ ಮುಂದಿನ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಂಡು ಜಿಲ್ಲಾಧಿಕಾರಿ ಯವರ ಕಛೇರಿಗೆ ವರದಿ ನೀಡುವಂತೆ ಸೂಚಿಸಿ ಜಿಲ್ಲಾಧಿಕಾ ರಿಯವರಿಂದ ಪತ್ರ ಬಂದಿದೆ.ಆ ಪತ್ರವನ್ನು ಆಡಳಿತ ಪಕ್ಷದ ಸದಸ್ಯರು ನಿರ್ಲಕ್ಷಿಸಿದ್ದಾರೆ.ಪಟ್ಟಣ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ದೂರಿದರು.
ಸದಸ್ಯೆ ಆಶಾ ಮೋಹನ್ ಮಾತನಾಡಿ, ಪ.ಪಂ.ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ನಾಲ್ಕೈದು ತಿಂಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಸದಸ್ಯರ ಒಪ್ಪಿಗೆ ಪಡೆಯದೆ ಸುಳ್ಳು ನಡಾವಳಿ ಸೃಷ್ಟಿಸುವುದು ಭ್ರಷ್ಟಾಚಾರದ ಮೂಲಕ ಕ್ರಿಯಾ ಯೋಜನೆ ತಯಾರಿಸಿದಂತೆ ನಡಾವಳಿ ಪುಸ್ತಕದಲ್ಲಿ ಸಮ್ಮನೆ ನಮೂದಿಸಿ ಅನುಮತಿ ನೀಡುವುದು ಆಡಳಿತ ಪಕ್ಷದ ಚಾಳಿಯಾಗಿದೆ.ಇವರ ವಿರುದ್ದ ಜಿಲ್ಲಾಧಿಕಾರಿಗಳುನ ತನಿಖೆ ನಡೆಸ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.