लाइव कैलेंडर

February 2025
M T W T F S S
 12
3456789
10111213141516
17181920212223
2425262728  
06/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಒಂದು ಪ್ರಹಸನ
******************

ಸ್ಥಳ :
ಬೆಳಗಾವಿಯ ಸುವರ್ಣ ಸೌಧ.

ಸನ್ನಿವೇಶ :
ವಿಧಾನ ಮಂಡಲ ಅಧಿವೇಶನ.

ಮುಖ್ಯ ಪಾತ್ರಗಳಲ್ಲಿ :
ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್,
ಶ್ರೀ ಸಿ ಟಿ ರವಿ.

ಇತರೆ ಪಾತ್ರ ವರ್ಗದಲ್ಲಿ :
ಶ್ರೀ ಸಿದ್ದರಾಮಯ್ಯ ,
ಶ್ರೀ ಡಿಕೆ ಶಿವಕುಮಾರ್,
ಶ್ರೀ ಆರ್ ಅಶೋಕ್ ,
ಶ್ರೀ ಬಿ ವೈ ವಿಜಯೇಂದ್ರ,
ಶ್ರೀ ಬಸವರಾಜ ಹೊರಟ್ಟಿ,
ಶ್ರೀ ಯು ಟಿ ಖಾದರ್.

ನಿರ್ದೇಶನ : ಅನಾಮಿಕ…

ಸಂಗೀತ ಮತ್ತು ಛಾಯಾಗ್ರಹಣ :
ಕನ್ನಡ ಸುದ್ದಿ ಮಾಧ್ಯಮಗಳು.

ಸಂಭಾಷಣೆ ಮತ್ತು ಸಂಕಲನ: ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು….

ದೃಶ್ಯ ಒಂದು
*************

ಎಲ್ಲರಿಗೂ ನಮಸ್ಕಾರ,
ನಾನು ಕರ್ನಾಟಕ ರಾಜ್ಯದ ಮಾಜಿ ಸಚಿವ ಮತ್ತು ಹಾಲಿ ವಿಧಾನಪರಿಷತ್ ಸದಸ್ಯ ಸಿ ಟಿ ರವಿ…..
ಇದೇ ತಿಂಗಳು ದಿನಾಂಕ 19/12/ 2024 ರ ಗುರುವಾರದಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ಕೊನೆಯ ದಿನ ವಿಧಾನ ಪರಿಷತ್ ನಲ್ಲಿ ನನಗೆ ಮತ್ತು ಹಾಲಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಒಂದು ವಾಗ್ಯುದ್ಧ ಅಥವಾ ಜಗಳವೇ ಆಯಿತು. ಅಂಬೇಡ್ಕರ್ ಅವರ ಕುರಿತಾಗಿ ನಮ್ಮ ಕೇಂದ್ರ ಸಚಿವರಾದ ಶ್ರೀ ಅಮಿತ್ ಶಾ ಅವರ ಹೇಳಿಕೆಯ ವಿರುದ್ದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಂಬೇಡ್ಕರ್ ಅವರ ಭಾವಚಿತ್ರವನ್ನು ಪ್ರದರ್ಶಿಸುತ್ತಾ ಜೋರಾಗಿ ಅಮಿತ್ ಶಾ ಅವರಿಗೆ ಧಿಕ್ಕಾರ ಎಂದು ಕೂಗುತ್ತಿದ್ದರು. ಆಗ ನನಗೂ ಕೋಪ ಬಂದು ನಮ್ಮ ನಾಯಕರ ವಿರುದ್ಧ ಮಾತನಾಡಿದ ಕಾರಣದಿಂದ ಅವರ ಪಕ್ಷದ ಸಂಸತ್ತಿನ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರಿಗೆ ಮಾದಕ ವ್ಯಸನಿ ( ಡ್ರಗ್ ಅಡಿಕ್ಟ್) ಎಂದು ಹೇಳಿದೆ. ಅದಕ್ಕೆ ಕೋಪಗೊಂಡ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನನ್ನನ್ನು ಕೊಲೆಗಡುಕ…. ಕೊಲೆಗಡುಕ…. ಎಂದು ಜೋರಾಗಿ ಕೂಗಿದರು. ಅದಕ್ಕೆ ಕೋಪಗೊಂಡ ನಾನು ಅವರನ್ನು ಒಂದು ರೀತಿ ಅದಕ್ಕೆ ಪ್ರತಿಕಾರವಾಗಿ ಸಹಜವಾಗಿಯೇ ಪ್ರಾ‌ಸ್ಟಿಟ್ಯೂಟ್ ಎಂದು ಕರೆದೆ ಅಥವಾ ಹಾಗೆ ಹೇಳಿದ್ದೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆರೋಪಿಸಿದ್ದಾರೆ.

ತದನಂತರ ನಡೆದ ಘಟನೆಗಳ ಸರಮಾಲೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದರು. ಸ್ವಲ್ಪ ತಲೆಗೆ ಪೆಟ್ಟಾಯಿತು. ಆಗ ಅಲ್ಲಿನ ಪೊಲೀಸರು ಅನುಮತಿ ಇಲ್ಲದೆ ವಿಧಾನಸಭೆಯ ಒಳಗೆ ಪ್ರವೇಶಿಸಿ ನನ್ನನ್ನು ರಕ್ಷಿಸಿದರು ಕೂಡ. ಹಾಗೆಯೇ ಸ್ವಲ್ಪ ಸಮಯದ ನಂತರ ಲಕ್ಷ್ಮಿ ಹೆಬ್ಬಾಳ್ಕರ್ ಅವರ ದೂರಿನ ಮೇರೆಗೆ ನನ್ನನ್ನು ಬಂಧಿಸಿದರು. ರಾತ್ರಿಯೆಲ್ಲಾ ನನ್ನನ್ನು ಅಪರಿಚಿತ ಸ್ಥಳಗಳಲ್ಲಿ ಸುತ್ತಾಡಿಸಿದರು. ಅದಕ್ಕೆ ಕೋಪಗೊಂಡ ನಾನು ನೀವು ನನ್ನನ್ನು ಎನ್ ಕೌಂಟರ್ ಮಾಡಲು ಪ್ರಯತ್ನಿಸುತ್ತಿದ್ದೀರಿ ಎಂದು ಅವರ ಮೇಲೆ ಆರೋಪಿಸಿದೆ.

ನಂತರ ನ್ಯಾಯಾಲಯ ನನ್ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಈ ಬಗ್ಗೆ ಎಲ್ಲೆಡೆ ರಾಷ್ಟ್ರವ್ಯಾಪಿಯಾಗಿ ಚರ್ಚೆ ನಡೆಯುತ್ತಿದೆ.

ಇದು ಕೇವಲ ನಮ್ಮಿಬ್ಬರ ವಿಷಯ ಮಾತ್ರವಲ್ಲ, ರಾಜ್ಯದ ಜನತೆ ಮತ್ತು ವಿಧಾನ ಮಂಡಲದ ಗೌರವದ ಪ್ರಶ್ನೆ. ಅದಕ್ಕಾಗಿ ನಾನು ಇದನ್ನು ಇನ್ನಷ್ಟು ಧೀರ್ಘವಾಗಿ ಬೆಳೆಸದೆ ಸಂಧಾನಕ್ಕೆ ಸಿದ್ಧನಾಗಿದ್ದೇನೆ…..

ದೃಶ್ಯ 2
**********

ಎಲ್ಲರಿಗೂ ನಮಸ್ಕಾರ, ನಾನು ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ,

ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಆದ ಘಟನೆಗಳ ಸರಮಾಲೆಯನ್ನು
ಶ್ರೀ ‌ಸಿ ಟಿ ರವಿಯವರು ಹೇಳಿರುವ ವಿಷಯ ಹೆಚ್ಚು ಕಡಿಮೆ ಸರಿ ಇದೆ ಮತ್ತು ನಾನು ಇದನ್ನು ಒಪ್ಪಿಕೊಳ್ಳುತ್ತೇನೆ. ಬಹುತೇಕ ಘಟನೆ ಅದೇ ರೀತಿ ನಡೆದಿದೆ.

ಇದೀಗ ಅವರು ಸಾರ್ವಜನಿಕ ಪ್ರತಿನಿಧಿಗಳ ಸಮಗ್ರತೆಯನ್ನು, ನಂಬಿಕೆಯನ್ನು, ಉಳಿಸಿಕೊಳ್ಳುವ ಕಾರಣಕ್ಕಾಗಿ ಸಂಧಾನಕ್ಕೆ ಸಿದ್ಧವಿರುವುದಾಗಿ ಹೇಳಿದ್ದಾರೆ. ನಾನು ಕೂಡ ಅವರ ಆಹ್ವಾನವನ್ನು ಸ್ವೀಕರಿಸಿ ಇದನ್ನು ಹೆಚ್ಚು ಬೆಳೆಸದೆ ಸಂಧಾನಕ್ಕಾಗಿ ಸಿದ್ದಳಿದ್ದೇನೆ.

ದೃಶ್ಯ – 3
**********

ಈಗ ಸಂಧಾನ ಪ್ರಕ್ರಿಯೆ ಪ್ರಾರಂಭ.
( ಸಂಧಾನಕಾರರಾಗಿ –
ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪರವಾಗಿ ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಅವರು ಹಾಜರಾಗಿದ್ದಾರೆ.

ಶ್ರೀ ಸಿ ಟಿ ರವಿಯವರ ಪರವಾಗಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್ ಅಶೋಕ್ ಅವರು ಹಾಜರಾಗಿದ್ದಾರೆ.

ಮುಖ್ಯ ಸಂಧಾನಕಾರರಾಗಿ ನ್ಯಾಯಾಧೀಶರ ಸ್ಥಾನದಲ್ಲಿ ವಿಧಾನ ಪರಿಷತ್ತಿನ
ಸಭಾಪತಿ ಶ್ರೀ ಬಸವರಾಜ್ ಹೊರಟ್ಟಿ ಅವರು ಮತ್ತು ವಿಧಾನಸಭೆಯ ಸ್ಪೀಕರ್ ಶ್ರೀ ಯು ಟಿ ಖಾದರ್ ಅವರು ಭಾಗಿಯಾದ್ದಾರೆ )….

ದೃಶ್ಯ – 4
************

( ಮೊದಲಿಗೆ ಸಿ ಟಿ ರವಿಯವರಿಗೆ ಅವರ ಸರಿ ತಪ್ಪುಗಳ ಬಗ್ಗೆ ಸಾಕಷ್ಟು ಚರ್ಚಿಸಲು ಅವಕಾಶ ಕಲ್ಪಿಸಲಾಗಿದೆ)
” ಕೋಪದ ಭರದಲ್ಲಿ ಏನು ನಡೆದಿದೆಯೋ ಅದು ಖಂಡಿತವಾಗಲೂ ಉದ್ದೇಶ ಪೂರ್ವಕವಲ್ಲ. ಜಗಳದ ಸಹಜತೆ ಸ್ವಲ್ಪ ಅತಿರೇಕಕ್ಕೆ ಹೋಗಿ ಅಸಹಜವಾಗಿ ಮಾತುಗಳು ಹೊರಬಂದಿದೆ. ಅದಕ್ಕೆ ನಾನು ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷಮಾಪಣೆಯನ್ನು ಯಾವುದೇ ಷರತ್ತು ಇಲ್ಲದೆ ಕೇಳುತ್ತಿದ್ದೇನೆ ಮತ್ತು ಅವರಿಗೆ ರಾಖಿ ಕಟ್ಟುವ ಮೂಲಕ ಆಕೆಗೆ ನನ್ನ ತಂಗಿ ಅಥವಾ ಅಕ್ಕನ ಸ್ಥಾನವನ್ನು ನೀಡುತ್ತಿದ್ದೇನೆ. ಈ ವಿಷಯವನ್ನು ಇಲ್ಲಿಗೆ ಮುಕ್ತಾಯ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ….”

ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್
” ನಾನು ನನ್ನ ಅಣ್ಣ ಅಥವಾ ತಮ್ಮ ಎಂದು ಭಾವಿಸಿರುವ ಶ್ರೀ ಸಿ ಟಿ ರವಿಯವರು ಆಡಿರುವ ಮಾತುಗಳಿಗೆ ಬೇಷರತ್ತಾಗಿ ಮತ್ತು ಪ್ರಾಮಾಣಿಕವಾಗಿ ಕ್ಷಮೆ ಕೇಳಿರುವುದರಿಂದ ಹಾಗು ರಾಖಿ ಕಟ್ಟಿರುವುದರಿಂದ ಅದನ್ನು ಒಪ್ಪಿಕೊಂಡಿದ್ದೇನೆ ಮತ್ತು ರಾಜ್ಯದ ವಿಧಾನ ಮಂಡಲದ ಘನತೆಯನ್ನು ಉಳಿಸಿಕೊಳ್ಳಲು ಮತ್ತು ಜನತೆಗೆ ಕ್ಷಮಾಗುಣದ ಒಳ್ಳೆಯ ಸಂದೇಶ ಸಾರಲು ಘಟನೆಯನ್ನು ಇಲ್ಲಿಗೇ ನಿಲ್ಲಿಸಿ, ಈಗ ಸಂಧಾನಕಾರರ ಜಾಗದಲ್ಲಿರುವ ಆರು ಜನ ಮಾಧ್ಯಮದ ಮುಂದೆ ಬಂದು ಈ ಘಟನೆಯನ್ನು ಇಲ್ಲಿಗೇ ಮುಕ್ತಾಯಗೊಳಿಸುತ್ತಿದ್ದೇವೆ, ಇನ್ನು ಮುಂದೆ ಈ ರೀತಿಯ ಬೇಜವಾಬ್ದಾರಿ, ಆಜಾಗರೂಕ ನಡವಳಿಕೆಯನ್ನು ಪ್ರದರ್ಶಿಸುವುದಿಲ್ಲವೆಂದು ಈ ಮೂಲಕ ಭರವಸೆ ನೀಡುತ್ತೇವೆ….”

ಈ ರೀತಿಯ ಒಂದು ಸಂಧಾನ ಪ್ರಕ್ರಿಯೆ ನಿಜಕ್ಕೂ ವಾಸ್ತವ ರೂಪದಲ್ಲಿ ಸುಖಾಂತ್ಯ ಕಾಣುವುದಾದರೆ ಎಷ್ಟೊಂದು ಒಳ್ಳೆಯದು ಮತ್ತು ಆಶಾದಾಯಕ ಬೆಳವಣಿಗೆಯಲ್ಲವೇ. ಅನಾವಶ್ಯಕವಾದ ಆರೋಪಗಳು, ಅದಕ್ಕಾಗಿ ದೆಹಲಿ ಮಟ್ಟದ ಹೋರಾಟಗಳು, ಜನರಿಗೆ ಒಂದು ರೀತಿಯ ಮನರಂಜನೆ ಎಲ್ಲವೂ ಬೇಗ ಮುಕ್ತಾಯವಾದರೆ ಸರ್ಕಾರ ಮತ್ತು ಮಾಧ್ಯಮಗಳು ಜನರ ಇತರೆ ಸಮಸ್ಯೆಗಳ ಬಗ್ಗೆ ಗಮನಹರಿಸಬಹುದಲ್ಲವೇ.

ದೊಡ್ಡ ನಾಯಕರು ಇಷ್ಟು ಸಣ್ಣ ವಿವೇಚನೆ, ಪ್ರಬುದ್ಧತೆ, ಒಳ್ಳೆಯತನವನ್ನು ಪ್ರದರ್ಶಿಸಲು ಸಾಧ್ಯವಾಗದೇ ಕೇವಲ ದ್ವೇಷ, ಅಸೂಯೆಗಳನ್ನು ಮುಂದುವರಿಸಿಕೊಂಡು ಹೋಗುವುದು ಸಮಾಜಕ್ಕೆ ಮಾರಕವಲ್ಲವೇ. ತಿಳುವಳಿಕೆ ಎಂಬುದು ನಡವಳಿಕೆಯಾಗಿ ಮಾರ್ಪಾಡಾಗದಿದ್ದರೆ, ಒಳ್ಳೆಯತನ ನಮ್ಮ ವರ್ತನೆಯಾಗದಿದ್ದರೆ ಎಲ್ಲಾ ಧರ್ಮಗಳ ಆಚಾರ – ವಿಚಾರಗಳು ವ್ಯರ್ಥ ಮತ್ತು ನಿಷ್ಪ್ರಯೋಜಕ.

ಆದ್ದರಿಂದ ಸುಧಾರಣೆ ಇಲ್ಲಿಂದಲೇ ಪ್ರಾರಂಭವಾಗಲಿ ಎಂದು ಆಶಿಸುತ್ತಾ, ನಾಟಕದ ಪರದೆಗೆ ಅಂತಿಮ ತೆರೆ ಎಳೆಯಲಾಗುತ್ತದೆ……..

ಪ್ರೇಕ್ಷಕರಿಂದ ಭಾರೀ ಚಪ್ಪಾಳೆ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068……..

About Author

Leave a Reply

Your email address will not be published. Required fields are marked *