ಈ ಹೊತ್ತಿನ ಸಂಭ್ರಮವನ್ನು ನಿಮ್ಮ ಜೊತೆಯಲ್ಲದೆ ಮತ್ಯಾರ ಜತೆಗೂಡಿ ಸಂಭ್ರಮಿಸಲಿ.
1 min readಈ ಹೊತ್ತಿನ ಸಂಭ್ರಮವನ್ನು ನಿಮ್ಮ ಜೊತೆಯಲ್ಲದೆ ಮತ್ಯಾರ ಜತೆಗೂಡಿ ಸಂಭ್ರಮಿಸಲಿ.
ಬಿಲೀವ್ ಮೀ ಆರ್ ನಾಟ್; ನನ್ನ ಇಡೀ ಜೀವನದಲ್ಲಿ ನಾನು ಕವಿತೆ ಬರೆಯುತ್ತೆನ್ನೆನ್ನುವ ಪ್ರಯತ್ನವನ್ನು ಮಾಡಿದ್ದು ಜಿಲ್ಲಾ ಯುವ ಜನೋತ್ಸವದಲ್ಲಿ ಮತ್ತು ಬರೆದ ಮೊದಲ ಕವಿತೆಗೆ ಪ್ರಥಮ ಬಹುಮಾನ ಪಡೆದ ಹೆಮ್ಮೆ ಮತ್ತು ಖುಷಿ ಎರಡೂ ಇದೆ.
ರಿಜಿಸ್ಟ್ರೇಷನ್ ಸಮಯದಲ್ಲಿ ನನ್ನೊಂದಿಗಿದ್ದ ಗೆಳೆಯರಿಗೆ ಆಗಲೂ ಆಶ್ಚರ್ಯ “ಪೃಥ್ವಿ, ನೀನು ನಿಜವಾಗ್ಲೂ ಕವಿತೆ ಬರೀತಿಯಾ!!” ಎಂದು ಸೋಜಿಗವಾಗಿ ಕೇಳುತ್ತಿದ್ದರು. ನಾನೋ ಉಡಾಫೆಯಾಗಿ “ಇನ್ನೂ ಮಧ್ಯಾಹ್ನದ ತನಕ ಸಮಯವಿದೆ. ಆಗ ನೋಡಿದರಾಯ್ತು” ಎಂದು ಸುಮ್ಮನಾಗಿದ್ದೆ. ಭಾಷಣಕ್ಕೆ ಆಗಷ್ಟೆ ತಯಾರಿ ನಡೆಸಿಕೊಳ್ಳುತ್ತಿದ್ದೆ. ಭಾಷಣ ಮೂಗಿದ ಕೂಡಲೇ “ನೀನು ಮೊದ್ಲು ಹೋಗಿ ಕವಿತೆ ಬರಿ” ಎಂದು ಪ್ರೀತಿಯಿಂದ ಇಮ್ರಾನ್ ಅಣ್ಣನ ಆಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಕವಿತೆ ಸ್ಪರ್ಧೆಯ ಕಡೆ ಬಿರುಸಿನ ಹೆಜ್ಜೆ ಹಾಕಿದೆ. ಆಗಲೇ ಸ್ಪರ್ಧೆಯ ಮೂಲ ನಿಯಮಗಳನ್ನು ಸ್ಥೂಲವಾಗಿ ಹೇಳುತ್ತಿದ್ದರು. ನಾನು ಅವರು ಕೊಟ್ಟ ಪೇಪರ್, ನನ್ನ ಪೆನ್ನು ತಗೊಂಡು ನಿಗಧಿಯಾಗಿದ್ದ ಸ್ಥಳದಲ್ಲಿ ಹೋಗಿ ಕೂತುಕೊಂಡೆ. ಹೇಳಿದ್ದೆಲ್ಲ ಮುಗಿದ ಮೇಲೆ ಬರೆಯೋದಕ್ಕೆ ಶುರುಮಾಡಿ ಎಂದರು.
ಯಾರಿಗೂ ಹೇಳ್ಬೇಡಿ ಒಂದು ಸಿಕ್ಕಾಪಟ್ಟೆ ಕಾನ್ಫಿಡೆನ್ಶಿಯಲ್ ಮ್ಯಾಟರ್ರು. ಮನೆಯಿಂದನೇ ಒಂದು ಪದ್ಯವನ್ನು ಬಾಯಿಪಾಠ ಮಾಡಿಟ್ಟುಕೊಂಡು ಹೋಗಿದ್ದೆ. ಹಹ್ಹಹ್ಹಾ ಅಂದುಕೊಂಡಂತೆ ಮೊದಲ ಸಾಲನ್ನು ಬರೆದೆ, ಎರಡನೇ ಸಾಲಿಗೆ ಬರೋ ಹೊತ್ತಿಗೆ ಎಲ್ಲವೂ ಅಯೋಮಯವಾಗಿ ಮರೆತೇ ಹೋಗಿ ಬೀಡೋದಾ!! ಛೇ.. ಇದೇನು ಹೀಗಾಯ್ತಾಲ್ಲ ಎಂದುಕೊಂಡವನಿಗೆ ಮೊದ್ಲು ಅನ್ಸಿದ್ದೆ ಇಲ್ಲಿಂದ ನಿಧಾನಕ್ಕೆ ಕಾಲ್ಕಿತ್ತು ಕೋರ್ಟಿನ ಕಡೆಗೆ ಹೋಗಿ ಬಿಡೋಣ ಅನಿಸುತ್ತಿತ್ತು. ಆದರೆ, ಶೃತಿ-ಅಮ್ಮ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ನಿನಗೆ ಅದೆಷ್ಟೇ ಕಷ್ಟವಾಗಲಿ ಅರ್ಧಕ್ಕೆ ಬಿಟ್ಟು ಬರಬೇಡ. ಏನೋ ಪ್ರಯತ್ನಮಾಡು. ಗೆದ್ದರೆ ಖುಷಿ; ಸೋತರೆ ಅದೇ ಅನುಭವ; ತಲೆ ಕಡೆಸಿಕೊಳ್ಳಲೇ ಬೇಡ ಎಂದ ಮಾತು ಕಿವಿಯಲ್ಲಿ ಅನುರಣಿಸಿತು.
ಆಗಿದ್ದಾಗೇ ಹೋಗಲಿ ಬರೆದೇ ಬಿಡೋಣ ಎಂದು ಕೊಂಡು ನಿರ್ಧರಿಸಿದ್ದೇ ತಡ ಬಾಯಿಪಾಠ ಮಾಡಿದ್ದ ಸಾಲುಗಳನ್ನೆಲ್ಲ ಮರೆತು ಹೊಸದಾಗಿ ಕವಿತೆಯೊಂದನ್ನ ಬರೆದೆ. ಎರೆಡೆರಡು ಬಾರಿ ಓದಿ, ನಿರ್ವಾಹಕರಿಗೆ ಕೊಟ್ಟು ಬಂದೆ. ಆಚೆ ಬಂದ ಕೂಡಲೇ ಅಕ್ಕನಿಗೆ ಫೋನ್ ಮಾಡಿ ನಡೆದಿದ್ದೆಲ್ಲ ಹೇಳಿದೆ “ಅಂದುಕೊಂಡಿದ್ದೆಲ್ಲ ಮರೆತೇ ಹೋಯ್ತು ಶೃತಿ” ಎಂದಾಗಲೇ ಅವಳು ಜೋರಾಗಿ ನಗಲು ಶುರುವಿಟ್ಟಳು. “ಮತ್ತೇನು ಬರೆದೆ” ಎಂದು ಕುತೂಹಲವಾಗಿ ಕೇಳಿದಳು. ಬರೆದ ಕವಿತೆಯನ್ನು ಓದಿ ಹೇಳಿದೆ, ಮೂವತ್ತು-ನಲವತ್ತು ಸೆಕೆಂಡ್ ಅವಳೇನು ಮಾತನಾಡಲೇ ಇಲ್ಲ. ಮೌನವಾಗಿದ್ದು ಕವಿತೆಯ ಸುತ್ತ ತನ್ನ ಕಲ್ಪನೆಯನ್ನ ಹರವಿಟ್ಟುಕೊಂಡಿದ್ದಳು. ಆಮೇಲೆ ಮಾತು ಶುರುಮಾಡಿ “ಪೃಥ್ವಿ ನಿಜವಾಗ್ಲೂ ಹೇಳ್ತಿದ್ದೀನಿ, ಸಖತ್ ಕವಿತೆ ಕಣೋ” ಎಂದಾಗ ನಾನು ನಿಂತಲ್ಲೇ ರೋಮಾಂಚಿತನಾದೆ. ಮತ್ತೆ ಮುಂದುವರೆದು ಹೇಳಿದ ಅವಳು “ನೀನು ಇನ್ಮೇಲೆ ಕವಿ ಕಣೋ” ಎಂದಾಗ ನಗು ಬಂತು. “ಹೇ. ಸುಮ್ನಿರೇ, ಒಂದು ಕವಿತೆ ಬರೆದೋರ್ನೆಲ್ಲ ಕವಿ ಅಂದ್ರೆ ಏನ್ ಕತೆ” ಅಂತ ಕಿಚಾಯಿಸಿದೆ. ಆದರೆ ಒಂದು ಮಾತೊಂತು ಸತ್ಯ. ಆಗಾಗ ಗೆಳೆಯರು ಸಿಕ್ಕಾಗ ಕವಿತೆ ಬರೆದಾಗ ಮನಸ್ಸಿಗೆ ಏನೋ ಒಂದು ಖುಷಿ ಆಗುತ್ತೆ ಅಂತಿರ್ತಾರೆ. ಅಂತದ್ದೇ ಖುಷಿಯನ್ನು, ಪದಗಳಲ್ಲಿ ವರ್ಣಿಸಲು ಆಗದೇ ಇದ್ದದನ್ನು ನಾನು ಅನುಭಾವಿಸಿದೆ. ಕವಿತೆ ಬರೆದ ಸಂಭ್ರಮದಲ್ಲಿ ಸುತ್ತೆಲ್ಲ ಜಗತ್ತನ್ನು ಮರೆತು ಕುಣಿದಾಡುವಷ್ಟು ಸಂತೋಷ ನನ್ನ ಮನಸ್ಸಿನಲ್ಲಾಗುತ್ತಿತ್ತು.
***
ಮತ್ತೂ ವಿಶೇಷ ಏನ್ ಗೊತ್ತಾ!! ನಾನು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೂ ಇದೇ ಮೊದಲ ಬಾರಿಗೆ. ಹಿಂದೆಂದೂ ಈ ರೀತಿಯ ಸಾರ್ವಜನಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅನುಭವವೇ ಇಲ್ಲದವನು. ಶಾಲೆ ಸಮಯದಲ್ಲಿ ಪ್ರತಿಭಾ ಕಾರಂಜಿ, ಸ್ಕೂಲಿನ ವಾರ್ಷಿಕೋತ್ಸವಕ್ಕೆ ಸಣ್ಣಪುಟ್ಟ ಸ್ಪರ್ಧೆಗಳನ್ನು ಎದುರಿಸಿದ್ದು ಬಿಟ್ಟರೆ ಇದೇ ಮೊದಲು ಇಂತಹ ದೊಡ್ಡ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಹಹ್ಹಹ್ಹಾ..
***
ಮೊದಲ ಅನುಭವ, ಸಹಜವಾಗಿ ಕುತೂಹಲವೊಂತು ಇದ್ದೇ ಇತ್ತು. ಭಾಷಣ, ಕವಿತೆ, ಕತೆ ಇದಿಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ನನ್ನ ಮಿಕ್ಕುಳಿದ ಕೋರ್ಟಿನ ಕೆಲಸಗಳನ್ನು ಮುಗಿಸಿಕೊಂಡು ಸಣ್ಣದಾಗಿ ಕಾಫಿ, ಬೋಂಡ ತಿಂದು ಬಂದು ಕುಳಿತಾಗಲೂ ಜಾನಪದ ಸ್ಪರ್ಧೆಗಳು ಇನ್ನೂ ನಡೆಯುತ್ತಲೆ ಇತ್ತು. ಅದೆಲ್ಲ ಮುಗಿದು ಸಮಾರೋಪ ಶುರುವಾಗಿ ಅತಿಥಿಗಳೆಲ್ಲ ಮಾತು ಮುಗಿಸಿ ಒಂದೊಂದೆ ಸ್ಪರ್ಧೆಯ ಬಹುಮಾನ ವಿತರಣೆ ಶುರು ಮಾಡಿದರು. ಕವಿತೆಯ ವಿಭಾಗದಲ್ಲಿ ಪ್ರಥಮ ಪೃಥ್ವಿ ಎಂದಾಗ ನಾನು ಬೇರೆ ಯಾರೋ ಇರಬೇಕು ಎಂದು ಸುಮ್ಮನೇ ಕುಳಿತಿದ್ದೆ ನೀವೆ ಪೃಥ್ವಿ ಬನ್ನಿ ಎಂದಾಗ ಮಾತುಗಳೆಲ್ಲ ದಿಢೀರನೇ ಮರೆತೇ ಹೋಯಿತು. ಅಲ್ಲಿಯವರೆಗೆ ಧೈರ್ಯವಾಗಿದ್ದ ನನಗೆ ಸಣ್ಣದಾಗಿ ಹೊಟ್ಟೆಯಲ್ಲೊಂದು ಚಿಟ್ಟೆ ಹಾರಾಡುವಂತಾಗಿದ್ದು ಸುಳ್ಳಲ್ಲ.
ಅಲ್ಲಿದ್ದ ಗೆಳೆಯರು ಶಿಳ್ಳೆ ಹೊಡೆದರು, ನನ್ನ ಗೆಲುವನ್ನು ತಮ್ಮದೆಂನ್ನುವಂತೆ ಸಂಭ್ರಮಿಸಿದರು. ಬಹುಮಾನ ಪಡೆದು ಕಳೆಗಿದ ಎರಡು ಮೂರು ನಿಮಿಷದ ಅಂತರದಲ್ಲೇ ಭಾಷಣದಲ್ಲಿ ದ್ವಿತೀಯ ಬಹುಮಾನವೆಂದು ಘೋಷಿಸಿಯೇ ಬಿಟ್ಟರು. ನನಗೊಂತು ಎಲ್ಲಿಲ್ಲದ ಮುಜುಗರ.
***
ಅಮ್ಮ ನಾನ್ನ ನ ಬಿಗುಮಾನ, ಅಕ್ಕನ ಖುಷಿ, ಗೆಳೆಯರ ಸಂಭ್ರಮ, ಕವಿ ಮಿತ್ರರು ಸೇಂ ಪಿಂಚ್ ಅಂದಿದ್ದು ಎಂದಿಗೂ ಮರೆಯದೇ ಉಳಿಯುವ ನೆನಪು.
ಪ್ರೀತಿಯಿಂದ,
ಪೃಥ್ವಿ ಸೂರಿ.ಕಡೂರು.