day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಗಜಮುಖನೇ ಗಣಪತಿಯೇ ನಿನಗೆ ವಂದನೆ – AVIN TV

लाइव कैलेंडर

September 2024
M T W T F S S
 1
2345678
9101112131415
16171819202122
23242526272829
30  

AVIN TV

Latest Online Breaking News

ಗಜಮುಖನೇ ಗಣಪತಿಯೇ ನಿನಗೆ ವಂದನೆ

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಗಜಮುಖನೇ ಗಣಪತಿಯೇ ನಿನಗೆ ವಂದನೆ

ಬಾಲ್ಯದ ದಿನಗಳಲ್ಲಿ ಗಣೇಶನ ಹಬ್ಬ ಬಂದರೆ ಎದೆಯಲ್ಲಿ ತುಂಬಿ ತುಳುಕುವಷ್ಟು ಸಂಭ್ರಮ. ಊರ ಸಮುದಾಯ ಭವನದಲ್ಲಿ ಕಲರ್ ಪುಲ್ ಗಣೇಶನನ್ನು ಪ್ರತಿಷ್ಠಾಪಿಸುವ ಒಂದಷ್ಟು ದಿನಗಳ ಮುಂಚಿನಿಂದಲ್ಲೆ ಮಕ್ಕಳೆಲ್ಲಾ ಸಮುದಾಯಭವನಕ್ಕೆ ಹೋಗಿ ಇನ್ನೂ ಕೆಲವು ದಿನದಲ್ಲಿ ಬರಲಿರುವ ಗಣೇಶನ ಹಬ್ಬಕ್ಕೆ ಊರಿನ ಹುಡುಗರು, ಹಿರಿಕರು ಸಿದ್ದತೆ ಮಾಡಿಕೊಳ್ಳುವುದನ್ನು ಬೆರಗಿನಿಂದ, ಖುಷಿಯಿಂದ ನೋಡುತ್ತಿದ್ದೆವು.

ಶ್ರೀವಿದ್ಯಾಗಣಪತಿ ಸೇವಾ ಸಮಿತಿಯ ತಂಡ ಗೌರಿ ಗಣೇಶನನ್ನು ತರಲು ಗಾಡಿ ಮಾಡಿಕೊಂಡು ಪೇಟೆಗೆ ಹೋಗಿದ್ದಾರಂತೆ ಎಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಊರಿನ ಪುಟಾಣಿಗಳೆಲ್ಲಾ ಬರಲಿರುವ ಗಣೇಶನನ್ನು ನೋಡಲು ಹುಡುಕುಗಣ್ಣಿನಿಂದ ಪೇಟೆಯಿಂದ ಊರಿನ ಕಡೆಗೆ ಬರುವ ಹಾದಿಯ ಕಡೆಗೆ ನೋಡುತ್ತಿದ್ದೆವು.
ಬಣ್ಣ ಬಣ್ಣದ ಬಂಟಿಂಗ್ಸ್ ಗಳು, ಗಣೇಶನ ಹಿಂಬದಿಯ ಬಣ್ಣದ ಕಾಗದದ ಪ್ರಭಾವಳಿ, ಹೂ, ಹಣ್ಣು ಕಾಯಿ, ಮೈಕ್, ಸ್ಪೀಕರ್, ಪೂಜಾ ಸಾಮಾಗ್ರಿಗಳು ಗಾಡಿಯಲ್ಲಿ ಗೌರಿ ಗಣೇಶನ ಜೊತೆಗೆ ಬರುತ್ತಿದ್ದಂತೆ ಊರಿನ ಬಹುತೇಕರು ಅಲ್ಲಿ ಜಮಾಯಿಸಿ ಬಣ್ಣದ ಬಂಟಿಂಗ್ಸ್ ಗಳನ್ನು ಕಟ್ಟುವ, ಸಮುದಾಯದ ಭವನದ ಮಾಡಿಗೆ ಮೈಕ್ ಕಟ್ಟುವ ಮುಂತಾದ ಕಾರ್ಯಗಳಲ್ಲಿ ತೊಡಗುತ್ತಿದ್ದರು. ಮೈಕಿನಲ್ಲಿ ಗಜಮುಖನೇ ಗಣಪತಿಯೇ, ಶರಣು ಶರಣು ಶರಣಯ್ಯ ಹಾಡು ಮೊಳಗುತ್ತಿದ್ದಂತೆ ಇಡಿ ಊರಿಗೆ ಹಬ್ಬದ ಕಳೆ ತುಂಬುತ್ತಿತ್ತು. ಹಾಡು ಊರಿನ ಬೆಟ್ಟಗುಡ್ಡಗಳಲ್ಲಿ ಪ್ರತಿಧ್ವನಿಸಿ ಗಣೇಶನನ್ನು ಪ್ರತಿಷ್ಠಾಪಿಸಿ ವಿಸರ್ಜಿಸುವವರೆಗೂ ಊರಿನ ಎಲ್ಲರ ಬಾಯಲೂ ಮೈಕಿನ ಹಾಡು ಗುನುಗುತ್ತಿತ್ತು.
ಊರ ದೇವಸ್ಥಾನಕ್ಕೆ ಭಕ್ತರು ದೇವರನ್ನು ನೋಡಲು ಹೋದರೆ ನಮ್ಮ ಗಣೇಶ ಭಕ್ತರಿರುವ ಗಲ್ಲಿಗೆ, ಸಮುದಾಯ ಭವನಕ್ಕೆ, ಶಾಲೆಗೆ, ಭಕ್ತರಿದ್ದಲ್ಲಿಗೆ ಬರುವವನು. ಗಣೇಶನನ್ನು ಪ್ರತಿಷ್ಠಾಪಿಸಿ ವಿಸರ್ಜಿಸುವ ಅಷ್ಟು ದಿನವೂ ಶಾಲೆಗೆ ಹೋಗುವ ಮುನ್ನ ಸಮುದಾಯಭವನಕ್ಕೆ ಹೋಗಿ ಗಣೇಶನಿಗೆ ನಮಿಸಿ ಶಾಲೆಗೆ ಹೋಗುವುದು ಮತ್ತೆ ಸಂಜೆ ಶಾಲೆ ಮುಗಿಸಿದ ಮೇಲೆ ಸಮುದಾಯಭವನದಕ್ಕೆ ಹೋಗುವುದು ಬಾಲ್ಯದ ನವಿರು ನೆನಪಿನ ಕ್ಷಣಗಳು.
ರಾತ್ರಿ ರಸಮಂಜರಿ, ಭಕ್ತಿಗೀತೆ, ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲಾ ಮುಗಿದು ಮಂಗಳಾರತಿ ಸಮಯಕ್ಕೆ ಊರಿನ ಎಲ್ಲರೂ ಸೇರಿ ಪ್ರಾರ್ಥಿಸುವ ಆ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಎಲ್ಲರ ಭಾವವನ್ನು ಒಂದು ಲಯಕ್ಕೆ ತರುವ ಆ ಪ್ರಾರ್ಥನೆಯ ಶಕ್ತಿ ದೊಡ್ಡದು. ಎಲ್ಲರೂ ಎಲ್ಲರ ಒಳಿತಿಗಾಗಿ ಸಾಮೂಹಿಕವಾಗಿ ಗಜಾನನನನ್ನು ಪ್ರಾರ್ಥಿಸುವ ಆ ಗುಂಪಿನಲ್ಲಿ ನಾವು ಮಕ್ಕಳೆಲ್ಲರೂ, ವರ್ಣರಂಜಿತ ಗಣೇಶನನ್ನು, ಊರಿನ ಮನೆಗಳ ಅಂಗಳದಿಂದ ತಂದ ತರಾವರಿ ಹೂಗಳನ್ನು, ಜೋಡಿಸಿಟ್ಟ ಹಣ್ಣುಗಳನ್ನು, ಮಹಾಮಂಗಳಾರತಿ ಜ್ವಾಲೆಯ ಬಳುಕನ್ನು, ಅರ್ಚಕರ ಮಂತ್ರದ ಏರಿಳಿತವನ್ನು, ಜನರ ಪ್ರಾರ್ಥನೆಯನ್ನೂ, ಮಂಗಳರಾತಿಯ ನಂತರ ಭಕ್ತಾಧಿಗಳಿಗೆ ನೀಡಲು ಇಟ್ಟ ಬೆಲ್ಲ ಅವಲಕ್ಕಿಯ ಪ್ರಸಾದವನ್ನು ನೋಡುತ್ತಾ ಕೇಳುತ್ತಾ ಕೈ ಮುಗಿದು ನಿಲ್ಲುತ್ತಿದ್ದೆವು.
ಶಾಲೆಯಲ್ಲಿ ಸರಸ್ವತಿ ಪೂಜೆಯ ದಿನ ವಿದ್ಯಾರ್ಥಿಗಳ ಬಳಿ ಹೇಳಿಸುತ್ತಿದ್ದ ಒಳ್ಳೆ ಮಾತುಗಳನಾಡಿಸು, ಒಳ್ಳೆ ಕೆಲಸವ ಮಾಡಿಸು, ಒಳ್ಳೆ ದಾರಿಯಲ್ಲಿ ನಮ್ಮ ನಡೆಸು, ವಿದ್ಯೆಯ ಕಲಿಸು ಎನ್ನುವ ಪ್ರಾರ್ಥನೆಯನ್ನೆ ಮಕ್ಕಳೆಲ್ಲರೂ ಒಟ್ಟಿಗೆ ಹೇಳುತ್ತಿದ್ದೆವು.
ಗಣಪತಿ ವಿಸರ್ಜನೆಯ ದಿನ ಟ್ಯಾಕ್ಟರ್‌ನ ಬಣ್ಣ ಬಣ್ಣ ಜಗಮಗಿಸುವ ವಿದ್ಯುತ್ ದೀಪಗಳ ಬಳ್ಳಿಗಳ ನಡುವೆ ನಮ್ಮ ಗಣೇಶ. ಊರ ಬೀದಿಯಲ್ಲಿ ವಿಸರ್ಜನಾ ಮೆರವಣಿಗೆ ಸಾಗುತ್ತಿದ್ದರೆ ಪ್ರತಿ ಮನೆಯವರು ತಮ್ಮ ತಮ್ಮ ಮನೆಗಳ ಮುಂದೆ ಗಣೇಶನಿಗೆ ದೀಪ ಬೆಳಗಿ ಹಣ್ಣುಕಾಯಿ ಮಾಡಿಸುತ್ತಿದ್ದರು. ಯುವಕರು ಕಾಯಿ ಒಡೆದು ನಮಸ್ಕರಿಸುತ್ತಿದ್ದರು. ಮಕ್ಕಳೆಲ್ಲರೂ ಕಾಯಿಚೂರುಗಳನ್ನು ಹೆಕ್ಕಿ ಗಣೇಶನ ಜೊತೆಗೆ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದೆವು.
ಊರ ಕೆರೆಯ ಏರಿಯಲ್ಲಿ ಜನಜಾತ್ರೆ. ಗಣೇಶನಿಗೆ ಪೂಜೆ ಸಲ್ಲಿಸಿ ಗಣೇಶನನ್ನು ಕೆರೆಯ ನೀರಿಗೆ ಬಿಡುತ್ತಿದ್ದರು. ಗಣೇಶನನ್ನು ವಿಸರ್ಜಿಸಿ ಬರುವಾಗ ಮನಸ್ಸು ಖಾಲಿ ಖಾಲಿ. ಸಂಭ್ರಮ ಇಷ್ಟು ಬೇಗ ಮುಗಿಯಿತಲ್ಲ ಮತ್ತಷ್ಟು ದಿನ ಇರಬಾರದೇ ಎಂದು. ಆದರೂ ಮುಂದಿನ ವರ್ಷದ ಗಣೇಶನ ಹಬ್ಬ ಬೇಗ ಬರಲಿ ಎಂದುಕೊಳ್ಳುತ್ತಾ ಹಿಂದಿರುಗುತ್ತಿದ್ದವು.
ಗಣೇಶ ಚಿತ್ರ ಕಲಾವಿದರ ನೆಚ್ಚಿನ ದೇವರು. ಶಾಲೆಗಳಲ್ಲಿ ಕೂಡ ಮಕ್ಕಳು ಚಿತ್ರ ಬಿಡಿಸಲು ಪ್ರಾರಂಭಿಸುವುದೇ ಗಣೇಶನ ಚಿತ್ರದಿಂದ. ಪ್ರತಿಭಾ ಕಾರಂಜಿಯ ದಿನ ಮಣ್ಣಿನ ಕಲಾಕೃತಿಗೆ ಗಣೇಶನೇ ನಮ್ಮ ಆಯ್ಕೆ. ಗಣೇಶನ ಸಹೋದರ ಸುಬ್ರಮಣ್ಯ ಮೂರು ಲೋಕ ಸುತ್ತಿ ಬರುವಷ್ಟರಲ್ಲಿ ತಂದೆ ತಾಯಿಯರನ್ನೆ ಸುತ್ತು ಬಂದು ಬುದ್ದಿವಂತ ಎನಿಸಿಕೊಂಡವ, ದ್ವಾಪರ ಯುಗದಲ್ಲಿ ವೇದವ್ಯಾಸರು ಹೇಳಿದಂತೆ ಮಹಾಭಾರತವನ್ನು ಬರೆದವ, ದಪ್ಪ ಹೊಟ್ಟೆ, ಮುರಿದ ದಂತ, ಹಾವನ್ನು ಹೊಟ್ಟೆಗೆ ಸುತ್ತಿಕೊಂಡ, ಗರಿಕೆ ಕೊಟ್ಟರೆ ಸಾಕು ಪ್ರಸನ್ನನಾಗುವ ಖಾಸಾ ನಮ್ಮವನೇ ಎನಿಸುವ ಆಪ್ತ ದೈವ ಗಣೇಶ.
ಈಗ ಊರಿನಲ್ಲಿ ಎಲ್ಲಾ ಮೊದಲಿನಂತಿಲ್ಲ. ಮುಂಚೆ ಊರಿಗೊಂದೆ ಗಣೇಶನ ಪ್ರತಿಷ್ಠಾಪನೆ ಮಾಡುತ್ತಿದ್ದರೇ ಈಗ ಪಕ್ಷಕ್ಕೊಂದು, ಬೀದಿಗೊಂದು, ಗುಂಪು ಗುಂಪುಗಳಿಗೊಂದು ಗಣೇಶನ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಊರವರ ಮನಸ್ಸನ್ನು ಅಂದು ಒಂದಾಗಿಸುತ್ತಿದ್ದ ಗಣೇಶ. ಇಂದು ಆ ಬೀದಿಯ ಗಣೇಶನಿಗಿಂತ ಈ ಬೀದಿಯ ಗಣೇಶನ ವಿಗ್ರಹ ದೊಡ್ಡದಿರಬೇಕು, ಆ ಪಕ್ಷದವರು ಪ್ರತಿಷ್ಠಾಪಿಸುವ ಗಣೇಶನ ವಿಗ್ರಹಕ್ಕಿಂತ ಈ ಪಕ್ಷದವವರು ಪ್ರತಿಷ್ಠಾಪಿಸುವ ಗಣೇಶ ವಿಗ್ರಹ ದೊಡ್ಡದಿರಬೇಕು, ಅವರಿಗಿಂತ ವಿಜೃಂಭಣೆಯಿಂದ ಮಾಡಬೇಕು ಎನ್ನುವ ಪ್ರತಿಷ್ಠೆ, ಜಿದ್ದು, ಊರಿನ ಮನಸ್ಸು ಒಡೆದು ಹಾಕಿದೆ.
ಊರಿನ ಮಕ್ಕಳ ಮನಸ್ಸಲ್ಲಿ ಇದು ನಮ್ಮ ಗಣೇಶ, ಅದು ಅವರ ಗಣೇಶ ಎನ್ನುವ ಭಾವ ಮೂಡಿ ಬಿಟ್ಟಿದೆ. ಊರಿನ ಎಲ್ಲಾ ಮಕ್ಕಳು ಒಂದೆಡೆ ಸೇರದೇ ಅವರವರ ಬೀದಿಯ ಗಣೇಶನ ಬಳಿ ಹೋಗುತ್ತಾರೆ. ಊರಿನ ಸಮುದಾಯಭವನದ ಮೈಕಿನಲ್ಲಿ ಗಜಮುಖನೇ ಗಣಪತಿಯೇ ಹಾಡು ಮೊಳಗುತ್ತಿದ್ದರೇ ಮತ್ತೊಂದು ಬೀದಿಯಲ್ಲಿ ಶರಣು ಶರಣಯ್ಯ ಶರಣು ಬೆನಕ ಹಾಡಿನ ಡಿಜೆ ವರ್ಷನ್ ಅಬ್ಬರಿಸುತ್ತಿರುತ್ತವೆ. ಊರಿನ ಕಿವಿಗಳಿಗೆ ತರಾವರಿ ಮೈಕುಗಳಿಂದ ಹಾಡುಗಳು ಕಿವಿಗೆ ಬೀಳುತ್ತಿರುತ್ತವೆ.

-ನಂದೀಶ್ ಬಂಕೇನಹಳ್ಳಿ.

About Author

Leave a Reply

Your email address will not be published. Required fields are marked *