day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಕನ್ನಡಿಗರಿಗೆ ಉದ್ಯೋಗ ಮೀಸಲಾತಿ. ಬಹು ಆಯಾಮಗಳ ಒಂದು ಚಿಂತನ – ಮಂಥನ ಸರಳವಾಗಿ….. – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ. ಬಹು ಆಯಾಮಗಳ ಒಂದು ಚಿಂತನ – ಮಂಥನ ಸರಳವಾಗಿ…..

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ. ಬಹು ಆಯಾಮಗಳ ಒಂದು ಚಿಂತನ – ಮಂಥನ ಸರಳವಾಗಿ…..

ಕರ್ನಾಟಕದ ಖಾಸಗಿ ಉದ್ದಿಮೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಮೀಸಲಾತಿ ಘೋಷಣೆಗೆ ಸರ್ಕಾರ ಮುಂದಾಗಿದೆ. ಇದಕ್ಕೆ ಬಹುತೇಕ ಕನ್ನಡಿಗರು ಸಂಭ್ರಮಿಸಿದರೆ, ಅನ್ಯ ಭಾಷಿಕರು ಮತ್ತು ಇಲ್ಲಿಯ ಕೆಲವು ಉದ್ಯಮಪತಿಗಳು ಬಲವಾದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ….

ಈ ನಿಯಮದ ಎರಡು ಮುಖಗಳನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ……

ಮೊದಲನೆಯದಾಗಿ, ಯಾವುದೇ ಪ್ರದೇಶದ ಉದ್ಯೋಗಗಳು, ಸಂಪನ್ಮೂಲಗಳು, ಮೂಲಭೂತ ವಸ್ತುಗಳ ಮೇಲೆ ಬಹುತೇಕ ಅಲ್ಲಿನ ಸ್ಥಳಿಯರಿಗೇ ಮೊದಲ ಹಕ್ಕು ಹಾಗೂ ಅವರಿಗೇ ಮೊದಲ ಪ್ರಾಧಾನ್ಯತೆ ಕೊಡಬೇಕು. ಇದು ಪ್ರಾಕೃತಿಕ ಸಹಜ ಸ್ವಾಭಾವಿಕ ನ್ಯಾಯ. ವಿಶ್ವಸಂಸ್ಥೆಯ ಮೂಲ ಆಶಯವೂ ಕೂಡ, ಹಾಗೆಯೇ ಎಲ್ಲಾ ನಾಗರಿಕತೆಗಳ ಆಗ್ರಹವೂ ಕೂಡ….,

ಏಕೆಂದರೆ ಒಂದು ಭೂ ಪ್ರದೇಶದ ನೆಲ ಜಲ ಭಾಷೆ ಸಂಸ್ಕೃತಿ ಎಲ್ಲವೂ ಅಲ್ಲಿನ ಮೂಲ ನಿವಾಸಿಗಳೊಂದಿಗೆ ಅಂತರ್ಗತವಾಗಿರುತ್ತದೆ. ಆ ಮೂಲ ನಿವಾಸಿಗಳೇ ಅಲ್ಲಿನ ನಿಜವಾದ ಬೇರುಗಳು. ಅದರ ಮೇಲೆ ಯಾವುದೇ ಇತರ ಸಂಸ್ಕೃತಿಯ ಹೇರಿಕೆಯು ಅಸಹಜ ಬೆಳವಣಿಗೆಯಾಗುತ್ತದೆ. ಒಂದು ವೇಳೆ ಒತ್ತಾಯಪೂರ್ವಕವಾಗಿ, ಅಕ್ರಮಣಕಾರಿಯಾಗಿ ಹೇರಲ್ಪಟ್ಟರೆ ಸಂಸ್ಕೃತಿ ವಿನಾಶದ ಅಂಚಿಗೆ ಹೋಗುವುದು ನಿಶ್ಚಿತ ಮತ್ತು ಈಗಾಗಲೇ ಅನೇಕ ನಾಗರಿಕತೆಗಳು, ಸಂಸ್ಕೃತಿಗಳು, ಈ ಕಾರಣದಿಂದಾಗಿ ನಾಶವೂ ಆಗಿದೆ. ಅದಕ್ಕಾಗಿಯೇ ಶಿಕ್ಷಣ, ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ಹೊರಹರಿವನ್ನು ಸಾಧ್ಯವಾದಷ್ಟು ತಡೆಯಬೇಕು. ಇಲ್ಲದಿದ್ದರೆ ಸಂಘರ್ಷಗಳು ನಡೆದು ಹಿಂಸಾತ್ಮಕ ಘಟನೆಗಳು ಕೂಡ ಸಂಭವಿಸಬಹುದು……

ಇದು ಕೇವಲ ಕರ್ನಾಟಕ ಅಥವಾ ಕನ್ನಡಕ್ಕೆ ಮಾತ್ರ ಸೀಮಿತವಲ್ಲ. ಭಾರತದ ಎಲ್ಲಾ ರಾಜ್ಯಗಳಿಗೂ, ವಿಶ್ವದ ಎಲ್ಲಾ ದೇಶಗಳಿಗೂ, ಎಲ್ಲಾ ಸಮಾಜಕ್ಕೂ ಏಕಪ್ರಕಾರವಾಗಿಯೇ ಅನ್ವಯಿಸುತ್ತದೆ. ಆದ್ದರಿಂದ ಸ್ಥಳೀಯ ಉದ್ಯೋಗಗಳನ್ನು ಸ್ಥಳಿಯರಿಗೆ ಮೀಸಲಿಡುವುದು ನಿಜಕ್ಕೂ ಒಂದು ಸಹಜ ಸ್ವಾಭಾವಿಕ ಪ್ರಾಕೃತಿಕ ನ್ಯಾಯ…….

ಇದರ ಇನ್ನೊಂದು ಮುಖವು ಇದೆ. ವಿಶ್ವ ಮುಕ್ತ ಮಾರುಕಟ್ಟೆಗೆ ಒಪ್ಪಿಕೊಂಡು ಜಾಗತೀಕರಣಕ್ಕೆ ಸಹಿ ಹಾಕಿದ ನಂತರ ಇಡೀ ವಿಶ್ವವೇ ಒಂದು ಕುಟುಂಬವಾಗಿದೆ. ಇದರಿಂದ ಅತಿಯಾದ ಸ್ಪರ್ಧೆ ಮತ್ತು ಆರ್ಥಿಕ ಅಭಿವೃದ್ಧಿಯ ವೇಗ ತೀಕ್ಷ್ಣತೆಯನ್ನು, ತೀವ್ರತೆಯನ್ನು ಪಡೆದಿದೆ. ಹೆಚ್ಚು ಹೆಚ್ಚು ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು, ಹೆಚ್ಚು ಹೆಚ್ಚು ಹಣ ಸಂಪಾದಿಸಿ, ಎಷ್ಟು ಸಾಧ್ಯವೊ ಅಷ್ಟು ವೇಗವಾಗಿ ಹಣಕಾಸಿನಲ್ಲಿ ಯಶಸ್ಸನ್ನು ಪಡೆದು ಬೆಳವಣಿಗೆ ಹೊಂದಬೇಕು. ಆ ನಿಟ್ಟಿನಲ್ಲಿ ಪ್ರತಿಭೆ, ಸಾಮರ್ಥ್ಯ, ಬುದ್ಧಿವಂತಿಕೆ, ಶ್ರಮ ಬಹು ಮುಖ್ಯವಾಗುತ್ತದೆ……

ಆದರೆ ಉದ್ದಿಮೆದಾರರು ಅಥವಾ ಬಂಡವಾಳಶಾಹಿಗಳು ಅದನ್ನು ಮೀರಿ ತಂತ್ರ ಕುತಂತ್ರ ಮೋಸ ವಂಚನೆ, ಏನೇ ಮಾಡಿಯಾದರು ಅಂದರೆ ಯಾವುದೇ ಮಾರ್ಗದಲ್ಲಾದರೂ ತಾವು ಯಶಸ್ಸಾಗಬೇಕು ಎನ್ನುವ Succes at any cost ಸಿದ್ಧಾಂತಕ್ಕೆ ಶರಣಾಗಿದ್ದಾರೆ. ಆ ಕಾರಣಕ್ಕಾಗಿ ಅವರು ಬೇರೆ ಯಾವುದೇ ಮೌಲ್ಯಯುತ ಮಾನದಂಡಗಳನ್ನು ಅನುಸರಿಸುವುದಿಲ್ಲ. ಅದೆಲ್ಲವನ್ನು ತಿರಸ್ಕರಿಸಿ ಆರ್ಥಿಕ ಯಶಸ್ಸನ್ನೇ ಬಹುದೊಡ್ಡ ಮಾನದಂಡವಾಗಿ ಪರಿಗಣಿಸುತ್ತಾರೆ. ಈ ವಿಷಯದಲ್ಲಿ ಉದ್ಯಮಪತಿಗಳು ಹೇಳುವ ಬಹುದೊಡ್ಡ ಆರೋಪವೆಂದರೆ, ಸ್ಥಳೀಯರಿಗೆ ಉದ್ಯೋಗಗಳಲ್ಲಿ ಮೀಸಲಾತಿಯನ್ನು ನೀಡಿದರೆ ಅವರಲ್ಲಿ ಗುಂಪುಗಾರಿಕೆ ಬೆಳೆಯುತ್ತದೆ, ಸಂಘಟನೆಗಳನ್ನು ಮಾಡಿಕೊಂಡು ಅನಾವಶ್ಯಕವಾಗಿ ಪ್ರತಿಭಟಿಸುತ್ತಾರೆ. ಸೋಮಾರಿತನ ಹೆಚ್ಚಾಗುತ್ತದೆ, ನಮ್ಮ ಕೆಲಸಕ್ಕೆ ಬೇಕಾದ ಕೌಶಲ್ಯತೆ ಇರುವುದಿಲ್ಲ, ರಾಜಕೀಯ ಒತ್ತಡಗಳು ವಿಪರೀತವಾಗಿರುತ್ತದೆ, ಅವರನ್ನು ಹೆಚ್ಚು ದುಡಿಸಿಕೊಳ್ಳುವುದು ಕಷ್ಟವಾಗುತ್ತದೆ…..

ಆದ್ದರಿಂದ ಕೌಶಲ್ಯಕ್ಕೆ, ಪ್ರತಿಭೆಗೆ ಮುಕ್ತವಾಗಿದ್ದಲ್ಲಿ, ದೇಶದ ಯಾವುದೇ ಪ್ರಜೆ ಅರ್ಹನಾದಲ್ಲಿ ಅವನಿಗೆ ಉದ್ಯೋಗ ನೀಡಿದರೆ ನಮ್ಮ ಉತ್ಪಾದನಾ ಸಾಮರ್ಥ್ಯವು ಹೆಚ್ಚಾಗಿ ಅಧಿಕ ಲಾಭ ಬರುತ್ತದೆ, ದೇಶ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ಸ್ಥಳೀಯ ಮೀಸಲಾತಿಗೆ ಯಾವುದೇ ಒತ್ತಡ ಬೇಡ ಎಂದು ಹೇಳುತ್ತಾರೆ. ಅವರ ದೃಷ್ಟಿಯಲ್ಲಿ ಈ ನಿಲುವು ಅತ್ಯಂತ ಉತ್ತಮವಾದದ್ದು, ಉನ್ನತವಾದದ್ದು ಪ್ರಗತಿಪರವಾದದ್ದು……

ಈಗ ನಮ್ಮ ಮುಂದೆ ಈ ಎರಡು ಆಯ್ಕೆಗಳಿವೆ…

ಒಂದು, ನಮ್ಮದೇ ಸಂಪನ್ಮೂಲಗಳು, ವ್ಯಕ್ತಿಗಳನ್ನು ಉಪಯೋಗಿಸಿಕೊಂಡು ಇರುವುದರಲ್ಲಿ ಉತ್ತಮ ಉದ್ದಿಮೆ ಬೆಳೆಸಿಕೊಂಡು ನೆಮ್ಮದಿಯಿಂದ, ನಮ್ಮ ಸಂಸ್ಕೃತಿಯ ನಡುವೆ ಬದುಕುವುದು ಅಥವಾ ಆರ್ಥಿಕ ಕೇಂದ್ರಿತ ಅಭಿವೃದ್ಧಿಯನ್ನು ಬೆಂಬಲಿಸಿ ಸಂಸ್ಕೃತಿಯೋ, ಭಾಷೆಯೋ ನಾಗರಿಕತೆಯೋ ಹಾಳಾದರು ಚಿಂತಿಸದೆ, ಒಟ್ಟಿನಲ್ಲಿ ರೋಗಗಳು ಹೆಚ್ಚಾದರೂ ಚಿಂತೆ ಇಲ್ಲ ಆಸ್ಪತ್ರೆಗಳು ಹೆಚ್ಚಾಗಲಿ, ಕಳ್ಳರು ಹೆಚ್ಚಾದರೂ ಚಿಂತೆ ಇಲ್ಲ ಪೊಲೀಸರ ವ್ಯವಸ್ಥೆ ಹೆಚ್ಚಾಗಲಿ ಎಂದು ಇದನ್ನು ಒಪ್ಪಿಕೊಂಡು ಬದುಕುವುದು……

ನಿಜವಾಗಲೂ ವಸ್ತು – ಉದ್ಯೋಗ ಸಂಸ್ಕೃತಿಗಿಂತ ನಮ್ಮ ನಡುವಿನ ಸಾಂಸ್ಕೃತಿಕ ವ್ಯಕ್ತಿತ್ವವೇ ಬದುಕಿನಲ್ಲಿ ನೆಮ್ಮದಿ ನೀಡುವ ಸಾಧನ, ಮೊದಲು ಅದರ ಆದ್ಯತೆ ಆಗಬೇಕು, ಅದರ ರಕ್ಷಣೆಗಾಗಿ ನಾವು ಹೋರಾಡಬೇಕು, ಸ್ಥಳೀಯತೆಯನ್ನು ನಿರಾಕರಿಸಿದರೆ ನಾವು ನಮ್ಮದೇ ನೆಲದಲ್ಲಿ ಪರಕೀಯರಾಗುತ್ತೇವೆ ಹಾಗೂ ಬೇರೆ ಸಂಸ್ಕೃತಿಯ ದಬ್ಬಾಳಿಕೆಗೆ, ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾಗುತ್ತೇವೆ ಎಂಬುದು ವಾದ…….

ಇದೀಗ ಈ ಎರಡರ ಮಧ್ಯೆ ವಾಸ್ತವಕ್ಕೆ ಹತ್ತಿರವಾದ ಒಂದು ಅಭಿಪ್ರಾಯವನ್ನು ರೂಪಿಸಿಕೊಂಡು ಸರ್ಕಾರದ ಮಟ್ಟದಲ್ಲಿ ಅದು ಜಾರಿಯಾಗಬೇಕಿದೆ. ಯಾವುದೇ ಒಂದು ರಾಜ್ಯಕ್ಕೆ ಸೀಮಿತವಾಗದೆ ಇಡೀ ಭಾರತಕ್ಕೆ ಅನ್ವಯವಾಗುವಂತಹ ಒಂದು ಕೇಂದ್ರೀಕೃತ ನಿಯಮ ಜಾರಿಯಾಗಬೇಕಿದೆ. ಅದರ ಪ್ರಕಾರ ಡಿ ಮತ್ತು ಸಿ ವರ್ಗದ ಉದ್ಯೋಗಗಳಲ್ಲಿ ಸ್ಥಳೀಯ ಭಾಷಿಕರಿಗೆ ಶೇಕಡ 75% ರಷ್ಟು ಉದ್ಯೋಗಗಳನ್ನು ಮೀಸಲಿಡುವುದು ನಿಜಕ್ಕೂ ಉತ್ತಮ ಆಲೋಚನೆ ಎಂದೆನಿಸುತ್ತದೆ. ಹಾಗೆಯೇ ಬಿ ಮತ್ತು ಎ ವರ್ಗದ ಉದ್ಯೋಗಗಳಲ್ಲಿ ಶೇಕಡ 60% ರಷ್ಟು ಮೀಸಲಿಟ್ಟರೆ ಅದು ಕೂಡ ಉತ್ತಮ ನಡೆಯಾಗಬಹುದು. ಏಕೆಂದರೆ ಹೆಚ್ಚುಕಡಿಮೆ ಪ್ರಜಾಪ್ರಭುತ್ವದ ಮೌಲ್ಯಗಳ ರೀತಿ ಬಹುಮತ ಸ್ಥಳೀಯರ ಕೈಯಲ್ಲೇ ಉಳಿಯುತ್ತದೆ‌…..

ಉದ್ಯಮಪತಿಗಳು ಯಾವ ರಾಜ್ಯಕ್ಕೋ, ಯಾವ ದೇಶಕ್ಕೋ ಸೇರಿರಲಿ, ಉದ್ಯೋಗಿಗಳು ಯಾರೇ ಆಗಿರಲಿ ಆದರೆ ಬಹುಸಂಖ್ಯಾತರು ಮಾತ್ರ ಅಲ್ಲಿನ ಮೂಲ ನಿವಾಸಿಗಳೇ ಆಗಿರುತ್ತಾರೆ. ಆಗ ಅಲ್ಲಿನ ಸಂಸ್ಕೃತಿಗೆ ಯಾವುದೇ ಹೆಚ್ಚಿನ ಧಕ್ಕೆಯಾಗುವುದಿಲ್ಲ. ಸಹಜವಾಗಿಯೇ ಮೂಲ ನಿವಾಸಿಗಳು ಸುರಕ್ಷತೆಯ ದೃಷ್ಟಿಯಿಂದಲೂ ಭದ್ರ ನೆಲೆಯನ್ನು ಕಂಡುಕೊಳ್ಳುತ್ತಾರೆ. ಉಳಿದವರಿಗೂ ಹೇಗಿದ್ದರೂ ಅವರವರ ಭಾಷೆಯಲ್ಲಿ ಶೇಕಡಾ 60% ರಷ್ಟು ಉದ್ಯೋಗಾವಕಾಶ ಇದ್ದೇ ಇರುತ್ತದೆ…..

ಇಲ್ಲದಿದ್ದರೆ ಕೆಲವೊಮ್ಮೆ ಬೇರೆ ಭಾಷಿಕರು ಉನ್ನತ ಹುದ್ದೆಗೆ ಬಂದು, ಸಹಜವಾಗಿಯೇ ತಮ್ಮ ಭಾಷಿಕರನ್ನೇ ಹೆಚ್ಚಾಗಿ ನೇಮಿಸಿಕೊಂಡು, ತಮ್ಮ ಬೆಂಬಲಕ್ಕೆ ಅವರು ಇರುವಂತೆ ನೋಡಿಕೊಳ್ಳಲು ಅವರದೇ ಬಹುದೊಡ್ಡ ಸಂಖ್ಯೆಯ ಜನರನ್ನು ಒಟ್ಟುಗೂಡಿಸುವುದು, ಆಹಾರ ಕ್ರಮಗಳನ್ನು ಅನುಸರಿಸುವುದು, ಭಾಷೆಯನ್ನು ಮಾತಾಡುವುದು, ಅವರ ಹಬ್ಬಹರಿದಿನ, ಸಂಭ್ರಮಗಳನ್ನು ಆಚರಿಸುವುದು ಹೀಗೆ ಒಂದಷ್ಟು ಅನಪೇಕ್ಷಿತ, ಅತಿರೇಕ ಸೃಷ್ಟಿಯಾಗುತ್ತವೆ. ಅದರಿಂದ ಸ್ಥಳೀಯರಿಗೆ ಅಸಮಾಧಾನವಾಗುವುದು ಎಲ್ಲಾ ಕಡೆಯೂ ನಡೆಯುತ್ತಿದೆ. ಇದು ಕನ್ನಡಕ್ಕೆ ಮಾತ್ರ ಸೀಮಿತವಲ್ಲ‌ ಇದನ್ನು ಸರಳ ಮತ್ತು ಸಹಜವಾಗಿ ಗ್ರಹಿಸಬೇಕಿದೆ…..

” ಬಹುತ್ವ ಭಾರತ್ ಬಲಿಷ್ಠ ಭಾರತ್ ” ಎಂಬ ಘೋಷಣೆಗೆ ಒಂದು ಅರ್ಥವೂ ಇರುತ್ತದೆ. ಹಾಗೆಯೆ ಇದನ್ನು ಮೀರಿ ಇದಕ್ಕಿಂತಲೂ ಉತ್ತಮವಾದ ಇನ್ನೇನಾದರೂ ಕಾರ್ಯ ಯೋಜನೆ ಇದ್ದರೆ ಖಂಡಿತವಾಗಲೂ ಅದನ್ನೂ ಜಾರಿಗೆ ತರಬಹುದು. ಆದರೆ ಸ್ಥಳೀಯ ನಾಗರೀಕತೆ ಮತ್ತು ಸಂಸ್ಕೃತಿಗೆ ಧಕ್ಕೆಯಾಗದಂತೆ, ಮೂಲ ನಿವಾಸಿಗಳ ಶೋಷಣೆಯಾಗದಂತೆ ತಡೆಯಬೇಕಾದ ಬಹುದೊಡ್ಡ ಕರ್ತವ್ಯ ಸರ್ಕಾರಗಳದ್ದು. ಆ ನಿಟ್ಟಿನಲ್ಲಿ ಜನರು ಸಹ ಸದಾ ಜಾಗೃತವಾಗಿರಬೇಕು……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ‌. ಎಚ್. ಕೆ. 9844013068…….

About Author

Leave a Reply

Your email address will not be published. Required fields are marked *