ಸಾವಿರಾರು ಭಾವಗಳಿಗೆ ಜೀವ ಧ್ವನಿಯಾಗಿದ್ದ ಗಾನಕೋಗಿಲೆ ಎಸ್ ಜಾನಕಿ ಅಮ್ಮ ಇನ್ನು ನೆನಪು ಮಾತ್ರ.*..
1 min read
ಅವಿನ್ ಟಿವಿ ಸುದ್ದಿಜಾಲ *ಸಾವಿರಾರು ಭಾವಗಳಿಗೆ ಜೀವ ಧ್ವನಿಯಾಗಿದ್ದ ಗಾನಕೋಗಿಲೆ ಎಸ್ ಜಾನಕಿ ಅಮ್ಮ ಇನ್ನು ನೆನಪು ಮಾತ್ರ.*
ಮೈಸೂರು ಜುಲೈ 11: ಭಾರತೀಯ ಚಿತ್ರರಂಗದ ಅದ್ಭುತ ಗಾಯಕಿ, ‘ಗಾನ ಕೋಗಿಲೆ’ ಮತ್ತು ‘ದಕ್ಷಿಣ ಭಾರತದ ನೈಟಿಂಗೇಲ್’ ಎಂದೇ ಖ್ಯಾತರಾಗಿದ್ದ ಎಸ್. ಜಾನಕಿ (೮೮ ವರ್ಷ) ಅವರು ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಹಲವು ವರ್ಷಗಳಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೇ ನೆಲೆಸಿದ್ದ ಜಾನಕಿ ಅಮ್ಮ ಅವರ ನಿಧನದಿಂದಾಗಿ ಇಡೀ ಭಾರತೀಯ ಚಿತ್ರರಂಗ ಮತ್ತು ಕೋಟ್ಯಂತರ ಸಂಗೀತ ಅಭಿಮಾನಿಗಳು ತೀವ್ರ ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಆರು ದಶಕಗಳ ಸುದೀರ್ಘ ಸಂಗೀತ ಪಯಣ
೧೯೩೮ರ ಏಪ್ರಿಲ್ ೨೩ರಂದು ಜನಿಸಿದ ಎಸ್. ಜಾನಕಿ ಅವರು ಭಾರತೀಯ ಸಂಗೀತ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಬಹುಮುಖ ಪ್ರತಿಭೆಯ ಗಾಯಕಿಯಾಗಿದ್ದರು. ತಮ್ಮ ೧೯ನೇ ವಯಸ್ಸಿನಲ್ಲಿ, ೧೯೫೭ರಲ್ಲಿ ತಮಿಳು ಚಿತ್ರ ‘ವಿಧಿಯಿನ್ ವಿಲಾಯಟ್ಟು’ ಮೂಲಕ ಗಾಯನ ವೃತ್ತಿಜೀವನವನ್ನು ಆರಂಭಿಸಿದ ಅವರು, ಅದೇ ವರ್ಷ ಆರು ವಿಭಿನ್ನ ಭಾಷೆಗಳಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಅಂದಿನಿಂದ ಸತತ ಆರು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಜಾನಕಿ ಅಮ್ಮ ಅವರು, ೨೦೧೬ರಲ್ಲಿ ಚಿತ್ರರಂಗ ಮತ್ತು ವೇದಿಕೆ ಪ್ರದರ್ಶನಗಳಿಂದ ನಿವೃತ್ತಿ ಘೋಷಿಸಿದ್ದರು.
ಆದರೆ, ಅಭಿಮಾನಿಗಳ ಒತ್ತಾಯದ ಮೇರೆಗೆ ೨೦೧೮ರಲ್ಲಿ ‘ಪನ್ನಾಡಿ’ ಎಂಬ ತಮಿಳು ಚಿತ್ರಕ್ಕಾಗಿ ಮತ್ತೆ ಹಾಡುವ ಮೂಲಕ ಮರಳಿದ್ದರು.
೪೮,೦೦೦ಕ್ಕೂ ಹೆಚ್ಚು ಗೀತೆಗಳ ಗಾನ ವೈಭವ
ಎಸ್. ಜಾನಕಿ ಅವರು ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾಗದೆ, ಭಾರತೀಯ ಮತ್ತು ವಿದೇಶಿ ಭಾಷೆಗಳು ಸೇರಿದಂತೆ ೨೦ಕ್ಕೂ ಹೆಚ್ಚು ಭಾಷೆಗಳಲ್ಲಿ ಬರೋಬ್ಬರಿ ೪೮,೦೦೦ಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ.
ಇವುಗಳಲ್ಲಿ ಚಲನಚಿತ್ರ ಗೀತೆಗಳು, ಆಲ್ಬಮ್ಗಳು, ದೂರದರ್ಶನ ಮತ್ತು ರೇಡಿಯೋ ಗೀತೆಗಳು, ಏಕವ್ಯಕ್ತಿ ಗೀತೆಗಳು, ಯುಗಳ ಗೀತೆಗಳು ಹಾಗೂ ಶೀರ್ಷಿಕೆ ಗೀತೆಗಳು ಸೇರಿವೆ.
ಅವರು ಹಾಡಿರುವ ಪ್ರಮುಖ ಭಾಷೆಗಳು,ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಸಂಸ್ಕೃತ, ಒಡಿಯಾ, ತುಳು, ಉರ್ದು, ಪಂಜಾಬಿ, ಬಡಗ, ಬಂಗಾಳಿ, ಕೊಂಕಣಿ ಇತ್ಯಾದಿ.
ವಿದೇಶಿ ಭಾಷೆಗಳು: ಇಂಗ್ಲಿಷ್, ಜಪಾನೀಸ್, ಜರ್ಮನ್ ಮತ್ತು ಸಿಂಹಳ.
ವಿಶೇಷವೆಂದರೆ, ಅವರು ತಮ್ಮ ವೃತ್ತಿಜೀವನದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದು ನಮ್ಮ ಹೆಮ್ಮೆಯ ಕನ್ನಡ ಭಾಷೆಯಲ್ಲಿ, ಆನಂತರದ ಸ್ಥಾನ ಮಲಯಾಳಂ ಭಾಷೆಗೆ ಸಲ್ಲುತ್ತದೆ. ಅವರ ಅದ್ಭುತ ಭಾವಾಭಿವ್ಯಕ್ತಿ ಮತ್ತು ಧ್ವನಿ ಮಾಧುರ್ಯದಿಂದಾಗಿ ಅವರನ್ನು “ಅಭಿವ್ಯಕ್ತಿ ಮತ್ತು ಸಮನ್ವಯತೆಯ ರಾಣಿ” ಎಂದು ಕರೆಯಲಾಗುತ್ತಿತ್ತು.
ಪ್ರಶಸ್ತಿ ಮತ್ತು ಪುರಸ್ಕಾರಗಳು
ಸಂಗೀತ ಲೋಕಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ ಜಾನಕಿ ಅವರಿಗೆ ಅಪಾರ ಗೌರವ ಮತ್ತು ಪ್ರಶಸ್ತಿಗಳು ಒಲಿದು ಬಂದಿವೆ.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ೪ ಬಾರಿ ಉತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರ ಪ್ರಶಸ್ತಿ.
ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ರಾಜ್ಯ ಸರ್ಕಾರಗಳಿಂದ ಒಟ್ಟು ೩೩ ಪ್ರಶಸ್ತಿಗಳು.
ಗೌರವ ಡಾಕ್ಟರೇಟ್ ಮೈಸೂರು ವಿಶ್ವವಿದ್ಯಾಲಯದಿಂದ ಕೊಡ ಮಾಡಲ್ಪಟ್ಟಿದೆ,
ರಾಜ್ಯ ಪ್ರಶಸ್ತಿಗಳು: ಕರ್ನಾಟಕ ಸರ್ಕಾರದಿಂದ ‘ರಾಜ್ಯೋತ್ಸವ ಪ್ರಶಸ್ತಿ’ ಮತ್ತು ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ ಲಭಿಸಿದೆ.
ಪದ್ಮಭೂಷಣ ನಿರಾಕರಣೆ. ೨೦೧೩ ರಲ್ಲಿ ಭಾರತ ಸರ್ಕಾರ ಘೋಷಿಸಿದ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಭೂಷಣ’ವನ್ನು ಸ್ವೀಕರಿಸಲು ಅವರು ನಿರಾಕರಿಸುವ ಮೂಲಕ ದೇಶದ ಗಮನ ಸೆಳೆದಿದ್ದರು.
ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಹಾಗೂ ಸಂಗೀತ ಪ್ರೇಮಿಗಳು ಕಂಬನಿ ಮಿಡಿದಿದ್ದು, ಭಾರತೀಯ ಸಂಗೀತದ ಸುವರ್ಣ ಯುಗದ ಒಂದು ಮಹತ್ವದ ಅಧ್ಯಾಯ ಇಂದು ಮುಕ್ತಾಯಗೊಂಡಂತಾಗಿದೆ. ಜಾನಕಿ ಅಮ್ಮ ಅವರ ಭೌತಿಕ ಕಾಯ ನಮ್ಮನ್ನಗಲಿದ್ದರೂ, ಅವರು ಹಾಡಿಹೋದ ಸಾವಿರಾರು ಹಾಡುಗಳ ಮೂಲಕ ಅವರು ಎಂದೆಂದಿಗೂ ಅಮರರಾಗಿರುತ್ತಾರೆ.
•••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ
ಚಿಕ್ಕಮಗಳೂರು

