ಶಾಸಕ ಸ್ಥಾನಕ್ಕೆ ನಯನ ಮೋಟಮ್ಮ ರಾಜೀನಾಮೆ….
1 min read
ಶಾಸಕ ಸ್ಥಾನಕ್ಕೆ ನಯನ ಮೋಟಮ್ಮ ರಾಜೀನಾಮೆ
ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಕಾಡಾನೆಗಳನ್ನು ಮೂಡಿಗೆರೆ ಕಡೆಗೆ ಓಡಿಸುವ ಕಾರ್ಯಾಚರಣೆಯನ್ನು ನಿಲ್ಲಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಭಾನುವಾರ ಘೋಷಿಸಿದ್ದ ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಸೋಮವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಸೋಮವಾರ ಬೆಂಗಳೂರಿಗೆ ತೆರಳಿದ ಅವರು ವಿಧಾನಸಭೆ ಸ್ಪೀಕರ್ ಅವರನ್ನು ಭೇಟಿಯಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಬೇಲೂರಿನಿಂದ ಮೂಡಿಗೆರೆ ಭಾಗಕ್ಕೆ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ನಯನ ಮೋಟಮ್ಮ, ಜನರ ಹಿತಾಸಕ್ತಿಯೇ ತಮಗೆ ಮುಖ್ಯ ಎಂದು ಸ್ಪಷ್ಟಪಡಿಸಿದ್ದರು.
’ನಾನು ಸರ್ಕಾರಕ್ಕೆ ಉತ್ತರ ಕೊಡುವ ಅಗತ್ಯವಿಲ್ಲ. ಮೊದಲು ಜನರಿಗೆ ಉತ್ತರ ಕೊಡಬೇಕಿದೆ. ಜನ ನಮ್ಮನ್ನು ಗೆಲ್ಲಿಸಿದ್ದರಿಂದಲೇ ಸರ್ಕಾರ ಅಧಿಕಾರಕ್ಕೆ ಬಂದಿದೆ’ ಎಂದು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು.
ಭಾನುವಾರ ರಾತ್ರಿ ಕಾಡಾನೆಗಳನ್ನು ವಾಪಸ್ ಓಡಿಸದಿದ್ದರೆ ಸೋಮವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದರು. “ಆದರೆ, ಆನೆಗಳ ಸ್ಥಳಾಂತರ ಕಾರ್ಯಾಚರಣೆ ಮುಂದುವರಿದ ಹಿನ್ನೆಲೆಯಲ್ಲಿ ತಮ್ಮ ಮಾತಿನಂತೆ ಸೋಮವಾರ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

