लाइव कैलेंडर

October 2026
M T W T F S S
 1234
567891011
12131415161718
19202122232425
262728293031  
26/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜನಸಂಖ್ಯೆಯ ಆಧಾರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದರೆ ಆ ದೇಶ ಇನ್ನೂ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿಲ್ಲಾ ಎಂದೇ ಹೇಳಬೇಕು…..

1 min read

ಇದು ನಿಜವಲ್ಲವೇ…….

ಜನಸಂಖ್ಯೆಯ ಆಧಾರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದರೆ ಆ ದೇಶ ಇನ್ನೂ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿಲ್ಲಾ ಎಂದೇ ಹೇಳಬೇಕು.

ಆಧುನಿಕತೆ ಬೆಳೆದಂತೆ ಅಪರಾಧಗಳು ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿಯ ದಾರಿ ತಪ್ಪಾಗಿದೆ ಎಂದೇ ಭಾವಿಸಬೇಕು.

ಅಕ್ಷರಸ್ಥರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಮೋಸ, ವಂಚನೆ, ಭ್ರಷ್ಟಾಚಾರ ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿ ಅನುಮಾನಾಸ್ಪದವಾಗಿದೆ ಎಂದು ಊಹಿಸಬಹುದು.

ಆಸ್ಪತ್ರೆ, ಸಿಸಿ ಟಿವಿ, ಮೆಡಿಕಲ್ ಲ್ಯಾಬೋರೇಟರಿಗಳು, ಪೋಲೀಸ್ ಸ್ಟೇಷನ್ನುಗಳು ಹೆಚ್ಚಳವಾದಷ್ಟು ದೇಶದ ಅಭಿವೃದ್ಧಿ ಹಿಮ್ಮುಖವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು.

ಆಹಾರದ ಉತ್ಪಾದನೆ ಹೆಚ್ಚಾಗಿದ್ದರೂ ಅದರಲ್ಲಿ ಪೌಷ್ಟಿಕಾಂಶಕ್ಕೆ ಬದಲಾಗಿ ರಾಸಾಯನಿಕಗಳು, ಗಾಳಿಯಲ್ಲಿ ವಿಷಯುಕ್ತ ಅಂಶ, ನೀರಿನಲ್ಲಿ ಸಾಂಕ್ರಾಮಿಕ ರೋಗಗಳ ವೈರಸ್ ಗಳು ಹೆಚ್ಚಾಗಿದ್ದರೆ ಅದು ಅಪಾಯಕಾರಿ ಅಭಿವೃದ್ಧಿ ಎಂದೇ ಪರಿಗಣಿಸಬೇಕು.

ಅತ್ಯುತ್ತಮ ತಂತ್ರಜ್ಞಾನ, ಸಮೂಹ ಸಂಪರ್ಕ ಮಾಧ್ಯಮ, ರಸ್ತೆಗಳು, ಕಟ್ಟಡಗಳು, ವಾಹನಗಳು, ಶಿಕ್ಷಣ ಸಂಸ್ಥೆಗಳು ಇದ್ದರೂ ಮಾನವೀಯ ಮೌಲ್ಯಗಳು ಕುಸಿತ ಕಂಡು ಸಾಮಾಜಿಕ ಸ್ವಾಸ್ಥ್ಯ ಅಸಹನೆಯಿಂದ ಕೂಡಿದ್ದರೆ ಅದನ್ನು ತಪ್ಪಾಗಿ ಅರ್ಥೈಸಿದ ಕೆಟ್ಟ ಅಭಿವೃದ್ಧಿ ಎಂದೇ ತಿಳಿಯಬೇಕು.

ಅನ್ನ ಭಾಗ್ಯ, ಕ್ಷೀರ ಭಾಗ್ಯ, ಸಾಲ ಮನ್ನಾ, ಉಚಿತ ಗ್ಯಾಸ್ ಸಿಲಿಂಡರ್, ಚುನಾವಣೆಯಲ್ಲಿ ಹಣ, ಹೆಂಡ, ಸೀರೆ, ಪಂಚೆ, ಜಾತಿಗಳ ಅವಶ್ಯಕತೆ ಇನ್ನೂ ಇದೆ ಎಂದರೆ ನಾವು ತೀರಾ ಹಿಂದುಳಿದಿದ್ದೇವೇ ಎಂದೇ ಗ್ರಹಿಸಬೇಕು.

ಬುಲೆಟ್ ಟ್ರೈನ್, ಸ್ಮಾರ್ಟ್ ಸಿಟಿ, ಡಿಜಿಟಲ್‌ ವ್ಯವಹಾರ, ಅಂತರರಾಷ್ಟ್ರೀಯ ನಾಯಕತ್ವ ಮುಂತಾದ ವಿಷಯಗಳನ್ನು ನಾವು ಈ ಕ್ಷಣದಲ್ಲಿ ಸಂಭ್ರಮಿಸುತ್ತಿದ್ದೇವೆ ಎಂದರೆ ನಾವು ಆತ್ಮವಂಚನೆ ಮಾಡಿಕೊಂಡು ಅಭಿವೃದ್ಧಿಯ ಭ್ರಮೆಯಲ್ಲಿ ತೇಲುತ್ತಿದ್ದೇವೆ ಎಂದೇ ಮನವರಿಕೆ ಮಾಡಿಕೊಳ್ಳಬೇಕು.

ವ್ಯಾವಹಾರಿಕವಾಗಿ ಸೇವಾ ಕ್ಷೇತ್ರ ( Service Sector ) ಹೆಚ್ಚು ಅಭಿವೃದ್ಧಿ ಹೊಂದಿ, ಉತ್ಪಾದಕಾ ಕ್ಷೇತ್ರ ( Production Sector ) ಕುಸಿತ ಕಂಡರೆ ಭಾರತದಂತ ಬೃಹತ್ ದೇಶದ ಭವಿಷ್ಯ ಕಷ್ಟವಾಗುತ್ತದೆ ಎಂದು ಅರಿತುಕೊಳ್ಳಬೇಕು….

ಅಭಿವೃದ್ಧಿಯನ್ನು ಸಮಷ್ಟಿ ದೃಷ್ಟಿಕೋನದಿಂದ , ಎಲ್ಲಾ ವಿಭಾಗಗಳನ್ನು ಅಂದರೆ ವಸ್ತು ಮತ್ತು ವ್ಯಕ್ತಿತ್ವಗಳ ಬೆಳವಣಿಗೆಯನ್ನು ಒಟ್ಟಿಗೆ ಮತ್ತು ಸಮಾನಾಂತರವಾಗಿ ತೆಗೆದುಕೊಂಡು ಹೋದರೆ ಮಾತ್ರ ನಿಜದ ಅಭಿವೃದ್ಧಿ ಸಾಧ್ಯ. ಕೃಷಿ ಆಧಾರಿತ ಭಾರತದ ಅಭಿವೃದ್ಧಿ ಯಾವುದೋ ಒಂದು ಕ್ಷೇತ್ರದ ಬೆಳವಣಿಗೆಯಿಂದ ಸಾಧ್ಯವೇ ಇಲ್ಲ.

ನಮ್ಮಲ್ಲಿ ಪ್ರಸಾರವಾಗುವ ಧಾರವಾಹಿಗಳ ಕುತಂತ್ರ ಕಥೆಗಳನ್ನು ನೋಡಿ, ನಾವೆಷ್ಟು ಸುಸಂಸ್ಕೃತರು ಎಂದು ತಿಳಿಯುತ್ತದೆ.

ನಮ್ಮ ರಸ್ತೆಗಳಲ್ಲಿ ವಾಹನಗಳು ಓಡಾಡುವ ಅಶಿಸ್ತನ್ನು, ಅಡ್ಡಾದಿಡ್ಡಿ ಚಾಲನೆಯನ್ನು ನೋಡಿ ತಿಳಿಯುತ್ತದೆ ನಾವೆಷ್ಟು ಸಭ್ಯರು ಎಂದು.

ಬಸ್ಸು, ರೈಲು ನಿಲ್ದಾಣಗಳಲ್ಲಿ ಜನಜಂಗುಳಿ ಇರುವಾಗ ಸೀಟು ಹಿಡಿಯಲು ಜನ ನುಗ್ಗುವುದನ್ನು ನೋಡಿ ನಾವೆಷ್ಟು ನಾಗರಿಕರು ಎಂದು ಅರಿವಾಗುತ್ತದೆ.

ಉಚಿತ ಊಟ, ಸೀರೆ, ಪಂಚೆ ಹಂಚುವಾಗ ನೋಡಿ ಜನರ ನೂಕಾಟ, ಗೊಂದಲ ಹೇಗಿರುತ್ತದೆ ಎಂದು. ಆಗ ತಿಳಿಯುತ್ತದೆ ನಮ್ಮ ಜನರ ಮಾನಸಿಕ ಸ್ಥಿತಿ.

ಸಾಮಾಜಿಕ ಜಾಲತಾಣ ಮತ್ತು ಟಿವಿ ಮಾಧ್ಯಮಗಳಲ್ಲಿ ನಡೆಯುವ ಅಸಂಬದ್ಧ ಚರ್ಚೆಗಳನ್ನು ನೋಡಿ ನಾವೆಷ್ಟು ಬುದ್ದಿವಂತರು ಎಂದು ತಿಳಿಯುತ್ತದೆ.

ಜ್ಯೋತಿಷಿಗಳು ಹೇಳುವ ಮೂರ್ಖ, ಸುಳ್ಳು ಭವಿಷ್ಯವನ್ನು ಕುರುಡಾಗಿ ನಂಬಿ ಅದರಂತೆ ಬದುಕುತ್ತಿರುವ ಜನರನ್ನು ನೋಡಿ ತಿಳಿಯುತ್ತದೆ ನಾವೆಷ್ಟು ಮುಂದುವರಿದಿದ್ದೇವೆ ಎಂದು.

ಸ್ವಂತ ರಕ್ತ ಸಂಬಂಧಿಗಳ ನಡುವೆ ಆಸ್ತಿ ಹಂಚುವಾಗ ದುರಾಸೆಯಿಂದ ನಡೆಯುವ ವರ್ತನೆಗಳನ್ನು ಗಮನಿಸಿ, ಆಗ ಗೊತ್ತಾಗುತ್ತದೆ ನಮ್ಮ ಸಂಸ್ಕೃತಿ ಏನೆಂದು.

ಚುನಾವಣೆ ಗೆಲ್ಲಲು ನಮ್ಮ ಅಭ್ಯರ್ಥಿಗಳು ಮಾಡುವ ಮೂರನೇ ದರ್ಜೆಯ ತಂತ್ರಗಳನ್ನು ನೋಡಿ ಅರಿವಾಗುತ್ತದೆ ನಾವೆಂತಹ ವ್ಯವಸ್ಥೆಯಲ್ಲಿದ್ದೇವೆಂದು.

ಇದು ನಮ್ಮ ಸಮಾಜದ ಮೂಲಭೂತ ಗುಣವೇನು ಅಲ್ಲ. ಆಧುನಿಕತೆಯ, ಜಾಗತೀಕರಣದ ಭರದಲ್ಲಿ ಬದುಕನ್ನು, ಅಭಿವೃದ್ಧಿಯನ್ನು ತಪ್ಪಾಗಿ ಅರ್ಥ್ಯೆಸಿಕೊಂಡಿದ್ದರ ಪರಿಣಾಮ ಇದು.
.
” Success at any cost ”
” ಹಣವೇ ನಿನ್ನಯ ಗುಣ ” ಎಂದು ಯಶಸ್ವಿ ಜನಗಳನ್ನು, ಅವರ ಹಿನ್ನೆಲೆ ಗಮನಿಸದೆ ಜನ ಸಮೂಹ ಗೌರವಿಸಲು ಪ್ರಾರಂಭವಾದಾಗ ಇದು ಮುನ್ನಲೆಗೆ ಬಂದು ಜನರ ವರ್ತನೆ ನಿಯಂತ್ರಿಸಲಾರಂಬಿಸಿತು.
ಜನರಲ್ಲಿ ಆಂತರಿಕವಾಗಿದ್ದ ಅಶಿಸ್ತು, ಅಜ್ಞಾನ, ದುಷ್ಟತನ ಇದರಿಂದಾಗಿ ಪ್ರಲೋಭನೆಗೆ ಒಳಗಾಗಿದೆ.

ಇದನ್ನು ಮೀರುವುದು, ಮುಖವಾಡ ಕಿತ್ತೆಸೆಯುವುದು, ಸಭ್ಯತೆಯನ್ನು ಮೈಗೂಡಿಸಿಕೊಂಡು
ಒಳ್ಳೆಯ ನಾಗರೀಕ ನಡತೆಯನ್ನು ರೂಪಿಸಿಕೊಂಡು ಬದುಕುವುದೇ ಇಂದಿನ ಬಹುದೊಡ್ಡ ಸವಾಲು.

ಆ ಸವಾಲನ್ನು ಯಶಸ್ವಿಯಾಗಿ ಜಯಿಸುವ ಆಶಯದಲ್ಲಿ…….

ಆದಷ್ಟು ಬೇಗ ನಾವು ಸರ್ವತೋಮುಖ ಅಭಿವೃದ್ಧಿಯ ದಾರಿಯನ್ನು ಹಿಡಿಯೋಣ ಎಂದು ಆಶಿಸುತ್ತಾ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….

About Author

Leave a Reply

Your email address will not be published. Required fields are marked *

You may have missed