ಪತ್ರಕರ್ತರು ಕ್ರಿಯಾಶೀಲತೆಯೊಂದಿಗೆ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಿ: ಬಿ.ವಿ ಮಲ್ಲಿಕಾರ್ಜುನಯ್ಯ…
1 min read
ಪತ್ರಕರ್ತರು ಕ್ರಿಯಾಶೀಲತೆಯೊಂದಿಗೆ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಿ: ಬಿ.ವಿ ಮಲ್ಲಿಕಾರ್ಜುನಯ್ಯ
ಬೇಲೂರು, ಅ. 12-ಪತ್ರಕರ್ತರು ಕೇವಲ ಭಾಷಣಗಳನ್ನು ಆಲಿಸಿ ವರದಿ ಮಾಡುವುದಕ್ಕೆ ಸೀಮಿತವಾಗದೆ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಸಂಬಂಧಪಟ್ಟವರನ್ನು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಭಾರತೀಯ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಹೇಳಿದರು.
ಬೇಲೂರು ತಾಲ್ಲೂಕು ಪತ್ರಕರ್ತರ ಸಂಘ(ರಿ)




ಪಟ್ಟಣದ ಪತ್ರಕರ್ತರ ಸಂಘದ ವತಿಯಿಂದ ಕರ್ನಾಟಕ ನಾಟಕ ಅಕಾಡೆಮಿಯ ಅತ್ಯುತ್ತಮ ರಂಗಕರ್ಮಿ ಪ್ರಶಸ್ತಿಗೆ ಭಾಜನರಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪತ್ರಕರ್ತರು ವೃತ್ತಿಯಲ್ಲಿ ಸೃಜನಶೀಲತೆ, ಕ್ರಿಯಾಶೀಲತೆ ಹಾಗೂ ವೃತ್ತಿಪರ ಬದ್ಧತೆಯನ್ನು ರೂಢಿಸಿಕೊಂಡಾಗ ಮಾತ್ರ ಪತ್ರಿಕಾರಂಗದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲು ಸಾಧ್ಯ. ಪತ್ರಕರ್ತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಪತ್ರಕರ್ತರ ಸಂಘ ದಶಕಗಳಿಂದ ಹೋರಾಟ ನಡೆಸುತ್ತಿದೆ. ಪತ್ರಕರ್ತರಿಗೆ ಬಸ್ಪಾಸ್ ಸೌಲಭ್ಯ ಕಲ್ಪಿಸುವ ಹೋರಾಟವೂ ಕಳೆದ 25 ವರ್ಷಗಳಿಂದ ನಡೆದಿದ್ದು, ನಿರಂತರ ಪ್ರಯತ್ನಗಳ ಫಲವಾಗಿ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ ದೊರೆತಿದೆ. ಪತ್ರಿಕಾರಂಗದ ಜೊತೆಗೆ ಸಾಹಿತ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಶಿವಾನಂದ ತಗಡೂರು ಅವರು ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವುದು ಸಂತಸದ ಸಂಗತಿ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸತತ ಹೋರಾಟದ ಫಲವಾಗಿ ಗ್ರಾಮೀಣ ಪತ್ರಕರ್ತರಿಗೆ ಬಸ್ಪಾಸ್ ಸೌಲಭ್ಯ ಜಾರಿಯಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿನ ಷರತ್ತುಗಳನ್ನು ಸಡಿಲಗೊಳಿಸಲಾಗಿದ್ದು, ಪತ್ರಕರ್ತರಿಗೆ ನಿವೃತ್ತಿ ವೇತನ ದೊರೆಯುವ ಪ್ರಕ್ರಿಯೆಯನ್ನು ಸರಳೀಕರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಪ್ರತಿ ಪತ್ರಕರ್ತರಿಗೂ 25 ಲಕ್ಷದ ಉಚಿತ ಆರೋಗ್ಯ ತಪಾಸಣೆ ಸೌಲಭ್ಯ ಹಾಗೂ ಆರೋಗ್ಯ ಕಾರ್ಡ್ ವಿತರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಪತ್ರಕರ್ತರು ಸೌಲಭ್ಯಗಳನ್ನು ಪಡೆಯುವುದಕ್ಕಷ್ಟೇ ಸೀಮಿತವಾಗದೆ, ತಮ್ಮ ವ್ಯಕ್ತಿತ್ವ, ಜ್ಞಾನ ಹಾಗೂ ವೃತ್ತಿಪರ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್.ಬಿ. ಮದನಗೌಡ ಮಾತನಾಡಿ, ಸಾಮಾನ್ಯ ಕುಟುಂಬದಿಂದ ಬಂದ ಶಿವಾನಂದ ತಗಡೂರು ಅವರು ಪತ್ರಿಕಾರಂಗದ ಜೊತೆಗೆ ಸಾಹಿತ್ಯ, ನಾಟಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ. ಪತ್ರಕರ್ತರ ಸಂಘದ ಬಲವರ್ಧನೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಬೇಲೂರು ಪತ್ರಕರ್ತರ ಸಂಘದ ದಾನಿಗಳ ಸಹಕಾರದಿಂದ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ 10 ಲಕ್ಷ ನಿಧಿ ಸಂಗ್ರಹಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇಮಾಭಿವೃದ್ಧಿ ಟ್ರಸ್ಟ್ ಉದ್ಘಾಟಿಸಲಾಗುವುದು ಎಂದು ಸಂಘದ ಅಧ್ಯಕ್ಷ ಬಿ.ಬಿ. ಶಿವರಾಜ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್, ರಾಜ್ಯ ನಿರ್ದೇಶಕ ದೇವರಾಜ್, ತಾಲ್ಲೂಕು ಅಧ್ಯಕ್ಷ ಬಿ.ಬಿ. ಶಿವರಾಜ್, ಜಿಲ್ಲಾ ನಿರ್ದೇಶಕ ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಬಿ.ಎಲ್. ಲಕ್ಷ್ಮಣ್, ಖಜಾಂಚಿ ಬಿ.ಆರ್. ಲೋಹಿತ್, ಕಾರ್ಯದರ್ಶಿ ಗಣೇಶ್,ಅನಂತರಾಜೇ ಅರಸು,
ಬೇ.ನಾ. ತಾರಾನಾಥ, ರಾಘವೇಂದ್ರ ಹೊಳ್ಳ, ಹೆಬ್ಬಾಳು ಹಾಲಪ್ಪ, ಭಾರತಿಗೌಡ, ಎಸ್. ರವಿ ಹಾಗೂ ಮಹೇಶಗೌಡ ಮಾತನಾಡಿದರು. ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

