ಕಸ್ತೂರಿ ರಂಗನ್ ವರದಿ ವಿರೋಧಿಸಿ ಸರ್ವ ಪಕ್ಷ ಹಾಗೂ ಸಂಘಟನೆಗಳಿಂದ ಪ್ರತಿಭಟನೆ…..
1 min read
ಕಸ್ತೂರಿರಂಗನ್ ವರದಿ ವಿರೋಧಿ ಸಮಿತಿ, ಮೂಡಿಗರ
ಹೋರಾಟ ಮತ್ತು ಪ್ರತಿಭಟನೆ
ಕಸ್ತೂರಿ ರಂಗನ್ ವರದಿ ವಿರೋಧಿಸಿ ಸರ್ವ
ಪಕ್ಷ ಹಾಗೂ ಸಂಘಟನೆಗಳಿಂದ ಪ್ರತಿಭಟನೆ
ಮೂಡಿಗೆರೆ: ಯಾವುದೇ ಸರಕಾರ ಆಡಳಿತಕ್ಕೆ ಬಂದರೂ ಜನರ ಬದುಕಿಗೆ ಕಂಟಕವಾಗುವಂತಹ ಯಾವುದೇ ಯೋಜನೆ ಅಥವಾ ಕಾಯಿದೆ ಜಾರಿ ಮಾಡಬಾರದೆಂದು ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಮ್ ಗೌಡ ಹೇಳಿದರು.
ಅವರು ಶುಕ್ರವಾರ ಕಸ್ತೂರಿ ರಂಗನ್ ವಿರೋಧಿ ಸಮಿತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಸುಮಾರು 137 ಗ್ರಾಮಗಳನ್ನು ಉಪಗ್ರಹ ಸಮೀಕ್ಷೆ ಮೂಲಕ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಗುರುತಿಸಲಾಗಿದೆ. ಈ ಹಿಂದೆ ಪ್ರಕಟವಾಗಿದ್ದ 6ನೇ ಕರಡು ಅಧಿಸೂಚನೆಗೂ ಸಲ್ಲಿಸಿದ್ದ ಆಕ್ಷೇಪಣೆಯನ್ನು ಪರಿಗಣಿಸದೇ 7ನೇ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಇದರ ನಡುವೆ ಜಿಲ್ಲೆಯಲ್ಲಿ ಈಗಾಗಲೇ ಶೇ.42ರಷ್ಟು ಅಧಿಕೃತ ಅರಣ್ಯ ಪ್ರದೇಶವಿದ್ದು, ಸುಮಾರು 56,200 ಹೆಕ್ಟೇರ್ ಡೀಮ್ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದ ಸಮಸ್ಯೆಗಳಿವೆ. ಅಲ್ಲದೆ ಸುಮಾರು 1.ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಸೆಕ್ಷನ್ 4(1) ಮೀಸಲು ಅರಣ್ಯ ಅಧಿಸೂಚನೆ ಪ್ರಕ್ರಿಯೆ ನಡೆಯುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ಘೋಷಣೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಲೀಸಾ ಪೌಂಡೇಶನ್ ಸಂಸ್ಥಾಪಕಿ ಸಂಗೀತಾ ಪ್ರಸಾದ್ ಮಾತನಾಡಿ, ಕೇರಳ ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಪ್ರಸ್ತಾಪ ಆಗುವ ಸಂದರ್ಭದಲ್ಲೇ ಸಮಿತಿ ರಚಿಸಿ, ಜನ-ರಿಗೆ ಅನುಕೂಲವಾಗುವಂತೆ ಮಾಡಲಾಗಿದೆ. ಆದರೆ ನಮ್ಮದೇ ನಿರ್ಲಕ್ಷ್ಯದಿಂದ ಇಂದು 7ನೇ ಅಧಿಸೂಚನೆ ಆಗುವವರೆಗೆ ತಲುಪಿರುವುದು ದೊಡ್ಡ ದುರಂತ. ಈಗ ಸರಕಾರ ವಿಶೇಷವಾದ ಅಧಿವೇಶನ ನಡೆಸಿ ಪಕ್ಷಾತೀತವಾಗಿ ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹ. ಆದರೆ ಶೀಘ್ರದಲ್ಲೇ ಸಮಿತಿ ರಚಿಸಿ ಕಂದಾಯ ಮತ್ತು ಅರಣ್ಯ ಜಂಟಿ ಸರ್ವೆ ನಡೆಸಿ, ಸರಕಾರಕ್ಕೆ ವರದಿ ಸಲ್ಲಿಸುವ ಪ್ರಕ್ರಿಯೆ ನಡೆಸಬೇಕು. ಈ ವರದಿ ಜಾರಯಾಗುವ ಮುನ್ನ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕರಡು ಅಧಿಸೂಚನೆ ಮರು ಪರಿಶೀಲಿಸಬೇಕು. ಸ್ಥಳೀಯರ ಅಹವಾಲು ಪರಿಗಣಿಸಿ ಅಗತ್ಯ ತಿದ್ದುಪಡಿ ಮಾಡಬೇಕು. 94ಸಿ, 50, 53 ಅರ್ಜಿ ವಿಲೆ ಮುಗಿಸಬೇಕೆಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣೆಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ತಹಸೀಲ್ದಾರ್ ಎಸ್.ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು.
ತಾ.ಪಂ. ಮಾಜಿ ಅಧ್ಯಕ್ಷ ಕೆ.ಸಿ.ರತನ್, ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರತೀಶ್, ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್‌ಗೌಡ, ಕರವೆ ಅಧ್ಯಕ್ಷ ವಿನೋದ್, ಮುಖಂಡರಾದ ದಿವಾಕರ್, ಎಂ.ಸಿ.ಹೂವಪ್ಪ, ವಾಸುದೇವ, ಚಂದ್ರೇಗೌಡ, ಮಂಜುನಾಥ್ ಬೆಟ್ಟಗೆರೆ, ಲೋಹಿತ್ ಬಿದರಹಳ್ಳಿ, ಅಕ್ಷತ್ ಪಟ್ಟದೂರು, ವಿಜೇಂದ್ರ, ಗೋಪಾಲ್‌ಗೌಡ, ರಘು ಹಂಡುಗುಳಿ ಮತ್ತಿತರರಿದ್ದರು.

