ಬ್ಯಾರವಳ್ಳಿ ಗ್ರಾಪಂ ಗ್ರಾಮಸಭೆ ಮುಂದೂಡಿಕೆ….
1 min read
ಬ್ಯಾರವಳ್ಳಿ ಗ್ರಾಪಂ ಗ್ರಾಮಸಭೆ ಮುಂದೂಡಿಕೆ
ಚಿಕ್ಕಮಗಳೂರು: ಗ್ರಾಮಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರಿಂದಾಗಿ ಚಿಕ್ಕಮಗಳೂರು ತಾಲೂಕು ಬ್ಯಾರವಳ್ಳಿ ಗ್ರಾಪಂನಲ್ಲಿ ಆಯೋಜಿಸಲಾಗಿದ್ದ ಗ್ರಾಮಸಭೆ ರದ್ದಾಗಿದೆ.
ತಾಲೂಕಿನ ಬ್ಯಾರವಳ್ಳಿ ಗ್ರಾಪಂನಲ್ಲಿ ಸೋಮವಾರ ಬೆಳಗ್ಗೆ ಗ್ರಾಮಸಭೆ ಆರಂಭಗೊಳ್ಳುತ್ತಿದ್ದಂತೆ ಸ್ಥಳೀಯರು ಎಲ್ಲ ಇಲಾಖೆ ಅಧಿಕಾರಿಗಳು ಹಾಜರಾಗುವವರೆಗೆ ಗ್ರಾಮಸಭೆ ನಡೆಸಬಾರದು ಎಂದು ಪಟ್ಟು ಹಿಡಿದರು. ಗ್ರಾಮಸಭೆಗೆ ೨೭ ಇಲಾಖೆ ಅಧಿಕಾರಿಗಳು ಹಾಜರಾಗಬೇಕು. ಆದರೆ ನಾಲ್ಕೆದು ಇಲಾಖೆ ಅಧಿಕಾರಿಗಳು ಮಾತ್ರ ಆಗಮಿಸಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಗ್ರಾಮಸಭೆ ನಡೆಸಬಾರದು ಎಂದು ಪಟ್ಟು ಹಿಡಿದಿದ್ದರಿಂದಾಗಿ ಗ್ರಾಮಸಭೆ ರದ್ದುಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಸ್ಥಳೀಯರಾದ ಹೊಲದಗದ್ದೆ ಗಿರೀಶ್, ಗ್ರಾಮ ಸಭೆಯಲ್ಲಿ ಸರ್ಕಾರದಿಂದ ಬರುವ ಸವಲತ್ತುಗಳ ಬಗ್ಗೆ ಸಹಾಯಧನದ ಬಗ್ಗೆ ಗ್ರಾಮಸ್ಥರಿಗೆ ಯಾವುದೇ ಮಾಹಿತಿಯನ್ನು ನೀಡದ ಬೇಜವಾಬ್ದಾರಿ ಅಧಿಕಾರಿಗಳು ಸಭೆಗೆ ಹಾಜರಾಗುವವರೆಗೂ ಸಭೆಯನ್ನು ಮುಂದೂಡಬೇಕು. ಗ್ರಾಮಸಭೆ ನಡೆಸಬೇಕಾದ ಆಡಳಿತಾಧಿಕಾರಿಯೇ ಸಭೆಗೆ ಗೈರಾಗಿದ್ದಾರೆ. ಗ್ರಾಮಸಭೆಯಂತಹ ಪ್ರಮುಖ ಸಭೆಗಳಿಗೆ ಅಧಿಕಾರಿಗಳು ಗೈರಾಗುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಗಳ ನೈರ್ಮಲ್ಯ ಮತ್ತು ಸ್ವಚ್ಛತೆಯ ಕೊರತೆ ಎಲ್ಲಡೆ ಎದ್ದು ಕಾಣುತ್ತಿದೆ. ಮಲ್ಲಂದೂರು ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡದಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಚರಂಡಿ ನೈರ್ಮಲ್ಯ, ತ್ಯಾಜ್ಯ ವಿಲೇವಾರಿ ಹಾಗೂ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಗ್ರಾಮ ಪಂಚಾಯಿತಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಮತ್ತು ನೈರ್ಮಲ್ಯ ಕಾರ್ಯಗಳನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರಾಮದ ಅಭಿವೃದ್ಧಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಮಲ್ಲಂದೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತಾ ಕಾರ್ಯಗಳನ್ನು ತಕ್ಷಣವೇ ಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾವ ಹಳ್ಳಿಗಳಿಗೂ ಸೇರಿದಂತೆ ಜಿಲ್ಲೆಯಾದ್ಯಂತ ಕೇಂದ್ರ ಸರ್ಕಾರದ ಯೋಜನೆ ಜಲಜೀವನ್ ಮಿಷನ್ ಅಡಿ ನೀರು ಬಂದಿಲ್ಲ. ಈ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿದೆ. ನೀರಿನ ಮೂಲವೇ ಇಲ್ಲದೆ ಪೈಪ್‌ಲೈನ್ ಅಳವಡಿಕೆ ಮಾಡಲಾಗಿದೆ. ಗುತ್ತಿಗೆದಾರರ ಜೊತೆ ಇಂಜಿನಿಯರ್‌ಗಳು ಕೂಡ ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಇವರುಗಳ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವುದಕ್ಕೆ ಈ ಸಭೆಗೆ ಬಂದರೆ ಇಲ್ಲಿ ಸಂಬಂ
ಧಪಟ್ಟ ಇಲಾಖೆಯವರೇ ಗೈರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಸಿ.ಎಸ್.ಶಶಿಧರ್, ರೂಪೇಶ್, ನಾರಾಯಣಗೌಡ, ಅಹಮದ್ ಮತ್ತಿತರರಿದ್ದರು.

