लाइव कैलेंडर

September 2026
M T W T F S S
 123456
78910111213
14151617181920
21222324252627
282930  
07/09/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶಿಕ್ಷಕರ ದಿನಾಚರಣೆ ಮತ್ತು
ಶ್ರಮದಾನ – 5

ಮೊದಲೇ ತಿಳಿಸಿದಂತೆ ದಿನಾಂಕ 05/09/2026ರ ಶನಿವಾರ ಶ್ರಮದಾನದ ಪರಿಕಲ್ಪನೆಯ ಭಾಗವಾಗಿ ರಾಯಚೂರು ಜಿಲ್ಲೆಯ, ದೇವದುರ್ಗ ತಾಲೂಕು, ಗಬ್ಬೂರಿನ ನನ್ನ ಆತ್ಮೀಯ ಮಿತ್ರರು ಹಾಗೂ ಹಿತೈಷಿಗಳಾದ ಶ್ರೀ ಚನ್ನಪ್ಪ ಬೂದಿಹಾಳ ಅವರ
ವಿದ್ಯಾ ಜ್ಯೋತಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಶ್ರಮದಾನದ ಪ್ರಯುಕ್ತ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ, ಸದಾಚಾರ, ಸಂಭಾಷಣೆ, ಸಂವಹನ, ಸಮನ್ವಯ, ಸದ್ವಿನಿಯೋಗ ಎಂಬ ವಿಚಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.

4ನೇ ತಾರೀಖು ಸಂಜೆ ರೈಲಿನಲ್ಲಿ ಬೆಂಗಳೂರಿನಿಂದ ರಾಯಚೂರಿಗೆ ಹೊರಟೆನು. ಮರುದಿನ ಬೆಳಗ್ಗೆ ಸುಮಾರು 10 ಗಂಟೆಯ ಹೊತ್ತಿಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಪ್ರಾರಂಭವಾಯಿತು.

ಮೊದಲಿಗೆ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ, ಭಾರತದ ರಾಷ್ಟ್ರಪತಿಗಳಾಗಿದ್ದ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಅಕ್ಷರದವ್ವ ಶ್ರೀಮತಿ ಸಾವಿತ್ರಿಬಾಯಿ ಪುಲೆ ಅವರನ್ನು ಸ್ಮರಿಸುತ್ತಾ, ಮಕ್ಕಳೊಂದಿಗೆ ಅನೇಕ ರೀತಿಯ ಪ್ರಶ್ನೆಗಳನ್ನು ಕೇಳುತ್ತಾ ಸಂವಾದ ಪ್ರಾರಂಭಿಸಿದೆವು.

ಇದೊಂದು ಸವಾಲಿನ ವಿಷಯವೂ ಆಗಿತ್ತು. ಏಕೆಂದರೆ ಅಲ್ಲಿ ನೆರೆದಿದ್ದ ಮಕ್ಕಳು ಆರನೆಯ ತರಗತಿಯಿಂದ ಹತ್ತನೇ ತರಗತಿಯವರೆಗೆ ಅಂದರೆ ಅವರ ವಯಸ್ಸು ಸುಮಾರು ಹತ್ತರಿಂದ ಹದಿನೈದು ವರ್ಷಗಳ ಮಧ್ಯದಲ್ಲಿರುತ್ತದೆ. ತುಂಬಾ ಪುಟ್ಟ ಮಕ್ಕಳು ಅಥವಾ ಇಪ್ಪತ್ತರ ಆಸುಪಾಸಿನ ಯುವಕರೊಂದಿಗೆ ಮಾತನಾಡುವುದು ಸುಲಭ. ಆದರೆ ಈ ವಯಸ್ಸಿನ ಮಕ್ಕಳೊಂದಿಗೆ ಸಂಪರ್ಕ ಸಾಧಿಸುವುದು ತುಸು ಕಷ್ಟ. ಅವರೊಂದಿಗೆ ಯಾವ ರೀತಿ ಸಂವಹನ ಮಾಡಬೇಕು, ಸಂಪರ್ಕ ಸಾಧಿಸಬೇಕು, ಅವರ ಏಕಾಗ್ರತೆಯನ್ನು ಹಿಡಿದಿಡಬೇಕು, ಅವರಿಗೆ ಯಾವ ವಿಷಯ ಮನವರಿಕೆ ಮಾಡಿಕೊಡಬೇಕು, ಹೇಗೆ ಅರ್ಥ ಮಾಡಿಸಬೇಕು, ನಾವು ಯಾವ ಹಂತದಲ್ಲಿ ನಿಂತು ಮಾತನಾಡಬೇಕು ಎಂಬ ಬಹಳ ಕ್ಲಿಷ್ಟಕರ ಸವಾಲು ನಮ್ಮ ಮುಂದಿರುತ್ತದೆ.

ಬಹುತೇಕ ಉಪನ್ಯಾಸ, ಪ್ರವಚನ, ಭಾಷಣಕಾರರ ಬಹುದೊಡ್ಡ ಕೊರತೆ ಎಂದರೆ ಅದನ್ನು ಮಾಡುವವರು ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ, ತಮ್ಮ ಬುದ್ಧಿವಂತಿಕೆ ಪ್ರದರ್ಶನಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ ಅಥವಾ ತಮಗೆ ತಿಳಿದಿರುವುದನ್ನು ಆಕರ್ಷಕವಾಗಿ ಹೇಳುತ್ತಾರೆ ಅಥವಾ ಕಾರ್ಯಕ್ರಮವನ್ನು ಹೆಚ್ಚು ಔಪಚಾರಿಕಗೊಳಿಸುತ್ತಾರೆ. ಆದರೆ ತಮ್ಮ ಮಾತುಗಳಿಂದ ಕೇಳುಗರ ಮನಸ್ಥಿತಿಯಲ್ಲಿ ಏನಾದರೂ ಸ್ವಲ್ಪ ಒಳ್ಳೆಯ ಪರಿವರ್ತನೆ ಸಾಧ್ಯವಾಗುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಮಾಡುವುದು ಉತ್ತಮ. ಅದು ಹೇಳಿದಷ್ಟು ಸುಲಭವಲ್ಲ, ಆದರೆ ಆ ನಿಟ್ಟಿನಲ್ಲಿ ಪ್ರಯತ್ನಗಳಂತು ಆಗಲೇಬೇಕು.

ಇದನ್ನು ಪ್ರಜ್ಞಾಪೂರ್ವಕವಾಗಿ ಆಲೋಚಿಸಿಯೇ ನಾನು ಆ ಮಕ್ಕಳಿಗೆ ಅರ್ಥ ಮಾಡಿಸಲು ಅವರದೇ ಆದ ಶೈಲಿಯಲ್ಲಿ, ಅವರಿಗೆ ಸಂಬಂಧಪಟ್ಟ ವಿಷಯಗಳನ್ನು, ಅವರ ಬಾಯಿಂದಲೇ ಹೇಳಿಸುತ್ತಾ, ಅವರಿಂದಲೇ ಪ್ರತಿಜ್ಞೆ, ಮಾಡಿಸುತ್ತಾ ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು
ಹೋಗಲು ಪ್ರಯತ್ನಿಸಿದೆನು.

ಅದಕ್ಕೆ ಮೊದಲು ಈ ವಿಷಯದ ಬಗ್ಗೆ ಶಾಲೆಯ ಸಂಸ್ಥಾಪಕ ಅಧ್ಯಕ್ಷರು ಮತ್ತು ಶಾಲೆಯ ಕಾರ್ಯದರ್ಶಿಗಳಾದ ಅವರ ಶ್ರೀಮತಿಯವರೊಂದಿಗೆ ಸ್ವಲ್ಪ ಹೊತ್ತು ಮಾತುಕತೆ ನೆಡೆಸಿ ಒಂದಷ್ಟು ಚರ್ಚಿಸಿದ್ದೆವು. ಅದರಂತೆ ಮಕ್ಕಳಿಗೆ ಈ ಕ್ಷಣದಲ್ಲಿ ಅವರನ್ನು ಕಾಡುತ್ತಿರುವ ಸಮಸ್ಯೆಗಳು, ಅವರು ದಾರಿ ತಪ್ಪುತ್ತಿರುವ ವಿಷಯಗಳು, ಅದರಿಂದಾಗಿ ಸಮಾಜದ ಮೇಲಾಗುತ್ತಿರುವ ಪರಿಣಾಮಗಳು ಈ ವಿಷಯವನ್ನೇ ಹೆಚ್ಚು ಕೇಂದ್ರೀಕರಿಸಿದೆವು.

ಎಂದಿನಂತೆ ಪೆಪ್ಸಿ, ಕೋಲಾ ಫಾಂಟಾಗಳ ಎದುರಿಗೆ ಎಳನೀರು, ಕಬ್ಬಿನ ಹಾಲು, ಸಿರಿಧಾನ್ಯಗಳ ಗಂಜಿಯ ಮಹತ್ವವನ್ನು, ಅವುಗಳ ಆರೋಗ್ಯ ಮತ್ತು ಅನಾರೋಗ್ಯಕಾರಿ ಅಂಶಗಳನ್ನು ಅವರನ್ನೇ ಪ್ರಶ್ನಿಸುತ್ತಲೇ ಅವರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಲಾಯಿತು. ಕ್ರೀಡಾಂಗಣದಲ್ಲಿ ಆಟವಾಡುವುದು ಮತ್ತು ಮೊಬೈಲಿನಲ್ಲಿ ಆಟ ಆಡುವುದರ ನಡುವಿನ ವ್ಯತ್ಯಾಸ, ಗ್ರಂಥಾಲಯಗಳಲ್ಲಿ ಬೆಳೆಸಿಕೊಳ್ಳುವ ಬುದ್ಧಿ ಅಥವಾ ಯೂಟ್ಯೂಬ್ ಗಳು, ಸಾಮಾಜಿಕ ಜಾಲತಾಣಗಳಿಂದ ಬೆಳೆಸಿಕೊಳ್ಳುವ ಬುದ್ಧಿಯ ನಡುವಿನ ವ್ಯತ್ಯಾಸ, ಜನಪ್ರಿಯ ವ್ಯಕ್ತಿಗಳ ಮಾದರಿ ಅಥವಾ ತಂದೆ ತಾಯಿ ಮತ್ತು ಶಿಕ್ಷಕರ ಕರುಳ ಬಳ್ಳಿಯ ಸಂಬಂಧ ಇವುಗಳನ್ನು ಭಾವನಾತ್ಮಕವಾಗಿ, ಕಿರು ಕಥೆಗಳ ಮೂಲಕ ಅವರೊಂದಿಗೆ ಸಂವಹನ ಮಾಡಲಾಯಿತು.

ಮನುಷ್ಯ ಸಂಬಂಧಗಳು, ಮಾನವೀಯ ಮೌಲ್ಯಗಳ ಸುತ್ತಲೇ ಹೆಚ್ಚು ಗಮನವನ್ನು ಕೇಂದ್ರೀಕರಿಸಲಾಯಿತು. ಮನರಂಜನಾ ಉದ್ಯಮ ಮತ್ತು ಸಮಾಜದ ಎಲ್ಲಾ ಕ್ಷೇತ್ರಗಳು ಹೇಗೆ ಈ ಸಮಾಜದಲ್ಲಿ ಗ್ರಾಹಕ ಸಂಸ್ಕೃತಿಯನ್ನು, ಕೊಳ್ಳುಬಾಕ ಸಂಸ್ಕೃತಿಯನ್ನು ಹುಟ್ಟು ಹಾಕಲಾಗುತ್ತಿವೆ, ಶಿಕ್ಷಕರು ಮತ್ತು ಪೋಷಕರು ಮಾತ್ರ ನಿಮ್ಮನ್ನು ತಮ್ಮ ಮಕ್ಕಳೆಂಬಂತೆ, ವಿದ್ಯಾರ್ಥಿಗಳೆಂಬಂತೆ ಭಾವಿಸಿ ಅನ್ನ ನೀಡುವುದು, ಅಕ್ಷರ ನೀಡುವುದು ಮಾಡುತ್ತಾರೆ. ಅವರೇ ನಿಜವಾದ ಮಾದರಿಗಳು ಎಂಬುದಾಗಿ ತುಂಬಾ ತುಂಬಾ ಸ್ಪಷ್ಟವಾಗಿ ಮಕ್ಕಳಿಗೆ ಹೇಳಿಕೊಡಲಾಯಿತು.

ಮಕ್ಕಳು ಅವರ ತಂದೆ ತಾಯಿಗಳ ದೇಹದ ಮುಂದುವರಿದ ಭಾಗ, ಹಾಗೆಯೇ ಮಕ್ಕಳ ಅರಿವು ಶಿಕ್ಷಕರ ಜ್ಞಾನದ ಮುಂದುವರಿದ ಭಾಗ, ನಮ್ಮ ಅರಿವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಶಿಕ್ಷಕರೇ. ಬಹುತೇಕ 20/25 ವರ್ಷದವರೆಗೆ ನಮ್ಮೆಲ್ಲಾ ಅರಿವಿನ ಮೂಲ ಕುಟುಂಬದ ನಂತರ ಶಿಕ್ಷಕರೇ ಆಗಿರುತ್ತಾರೆ. ಆದ್ದರಿಂದ ಶಿಕ್ಷಕರು ಮತ್ತು ಪೋಷಕರು ಈ ಸಮಾಜದ ಎರಡು ಕಣ್ಣುಗಳಿದ್ದಂತೆ. ತದನಂತರವೇ ಇತರ ಎಲ್ಲಾ ಕ್ಷೇತ್ರಗಳು. ಈ ಎಲ್ಲಾ ಕ್ಷೇತ್ರಗಳ ಮೂಲಬೇರುಗಳು ಅಡಗಿರುವುದೇ ಕುಟುಂಬ ಮತ್ತು ಶಾಲೆಯಲ್ಲಿ ಎಂಬುದನ್ನು ಮಕ್ಕಳಲ್ಲಿ ಅರಿವು ಮೂಡಿಸಲಾಯಿತು.

ಅದೇ ರೀತಿ ಮಕ್ಕಳ ಪ್ರಶ್ನೆಗಳು ಸಹ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಷ್ಟು ಆಶ್ಚರ್ಯಕರವಾಗಿತ್ತು. ನಾವು ನಿರೀಕ್ಷಿಸಿದ್ದಕ್ಕಿಂತ ಉತ್ತಮ ಗುಣಮಟ್ಟದ ಪ್ರಶ್ನೆಗಳನ್ನು ಕೇಳಿದರು. ಕಾರ್ಯಕ್ರಮದ ಬಗ್ಗೆ ಅವರು ನೀಡಿದ ಪ್ರತಿಕ್ರಿಯೆಗಳು, ಎಲ್ಲಾ ಮಾತುಗಳ ನಂತರ ಅವರು ಮಾಡಿದ ಕೆಲವು ಪ್ರತಿಜ್ಞೆಗಳು ಸದಾ ಕಾಲ ಈ ಶ್ರಮದಾನ ಪರಿಕಲ್ಪನೆಯ ಅಭಿಯಾನದಲ್ಲಿ ನೆನಪಿನಲ್ಲಿ ಉಳಿಯುವಂತದ್ದು.

ಹಾಗೆಯೇ ಮಧ್ಯಾಹ್ನ ಊಟದ ನಂತರ ಅದೇ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗಗಳಿಗಾಗಿ ಇದೇ ರೀತಿಯ ಸಂವಾದ, ಸಂವಹನ ನಡೆಸಲಾಯಿತು. ಬಹುತೇಕ ಶಿಕ್ಷಕ ಶಿಕ್ಷಕಿಯರು ಸಮ ಪ್ರಮಾಣದಲ್ಲಿಯೇ ಭಾಗವಹಿಸಿದ್ದರು.

ಶಿಕ್ಷಕರು ಸಹ ಶಿಕ್ಷಣದ ಸವಾಲುಗಳು, ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯ, ಗ್ರಹಿಕೆಯ ವ್ಯತ್ಯಾಸ, ಸಮಾಜ ಮುನ್ನಡೆಯುತ್ತಿರುವ ದಿಕ್ಕು, ಭವಿಷ್ಯದ ಭಾರತ ಇವುಗಳ ಬಗ್ಗೆ ಹೆಚ್ಚು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಪ್ರಯತ್ನ ಮಾಡುತ್ತಿದ್ದರು. ನಾನು ಮೊದಲೇ ಅವರಿಗೆ ಮನವರಿಕೆ ಮಾಡಿಕೊಟ್ಟಿದೆ. ನಾನು ಇತರ ಯಾವುದೋ ಸ್ವಾಮೀಜಿ ಅಥವಾ ಪ್ರಖಾಂಡ ಪಂಡಿತರ ರೀತಿ ನಿಮ್ಮ ಎಲ್ಲಾ ಪ್ರಶ್ನೆಗೂ ಉತ್ತರಿಸುವ ಸಾಮರ್ಥ್ಯ ಹೊಂದಿಲ್ಲ. ಹಾಗೆ ಯಾರು ಹೊಂದಿರುವುದೂ ಸಾಧ್ಯವಿಲ್ಲ. ಅನೇಕ ಬಗೆಹರಿಯದ ಸಮಸ್ಯೆಗಳು ನಿಮ್ಮಂತೆ ನಮಗೂ ಕಾಡುತ್ತಿರುತ್ತದೆ.ಮುಂದಿನ ಕಾಲಘಟ್ಟದಲ್ಲಿ ಅದಕ್ಕೆ ಉತ್ತರ ಸಿಗಬಹುದು. ಆದರೆ ನಮ್ಮೊಳಗಿನ ಆತ್ಮಾವಲೋಕನಕ್ಕೆ, ಪರಿವರ್ತನೆಗೆ ಈ ಸಂವಾದ ಒಂದು ವೇದಿಕೆಯಾಗಲಿ. ಪ್ರಕ್ಷ್ಯುದ್ಧ ಮತ್ತು ಧ್ಯಾನಸ್ಥ ಮನಸ್ಥಿತಿಯ ಮಧ್ಯೆ ಒಂದು ಸಮಾಧಾನಕರ ಮನಸ್ಥಿತಿ ಎಂಬುದಿರುತ್ತದೆ. ಈ ಕ್ಷಣದಲ್ಲಿ ಅದನ್ನು ನಾವು ಸಾಧಿಸುವ ದಿಕ್ಕಿನತ್ತ ಹೆಚ್ಚು ಪ್ರಯತ್ನಿಶೀಲರಾಗೋಣ. ಮೊದಲು ನಮ್ಮನ್ನು ನಾವು ನಿಯಂತ್ರಿಸಿ ಕೊಂಡಲ್ಲಿ ನಮ್ಮ ಸುತ್ತಮುತ್ತಲಿನ ಇತರ ಪಾತ್ರಗಳನ್ನು ಕೆಲಮಟ್ಟಿಗಾದರೂ ನಿಯಂತ್ರಿಸಲು ಸಾಧ್ಯವಾಗಬಹುದು ಎಂಬುದನ್ನು ಹೆಚ್ಚು ಒತ್ತುಕೊಟ್ಟು ಮಾತನಾಡಿದೆವು.

ಸಂಜೆ ಈ ಕಾರ್ಯಕ್ರಮಗಳೆಲ್ಲಾ ಮುಗಿದ ನಂತರ ಶ್ರೀ ಚೆನ್ನಪ್ಪ ಬೂದಿನಾಳ ಅವರ ಸ್ನೇಹಿತರು ಮತ್ತು ನಮ್ಮ ಕೆಲವು ಓದುಗ ಗೆಳೆಯರು ಅವರ ಮನೆಯಲ್ಲಿಯೇ ಕುಳಿತು ವಿವಿಧ ವಿಷಯಗಳ ಬಗ್ಗೆ ಮಾತುಕತೆ ಮಾಡಿನಾಡಿದೆವು.

ಒಟ್ಟಿನಲ್ಲಿ ಇಡೀ ದಿನದ ಶಿಕ್ಷಣ, ಸಮಾಜ ಮತ್ತು ಮೌಲ್ಯಗಳ ಕುರಿತ ಚರ್ಚೆ, ಸಂವಾದಗಳು ಸಾಕಷ್ಟು ಮನ: ಪರಿವರ್ತನೆಗೆ ದಾರಿಯಾದವು.

ಶ್ರೀ ಚನ್ನಪ್ಪ ಬೂದಿನಾಳ, ಅವರ ಕುಟುಂಬದವರು ಮತ್ತು ಸಿಬ್ಬಂದಿ ವರ್ಗ ನೀಡಿದ ಆತಿಥ್ಯ, ತೋರಿದ ಪ್ರೀತಿ, ಅಭಿಮಾನವನ್ನು ನೆನಪಿಸಿಕೊಳ್ಳುತ್ತಾ ಅಂದೇ ರಾತ್ರಿ ರೈಲಿನಲ್ಲಿ ಪ್ರಯಾಣಿಸಿ ಬೆಂಗಳೂರು ತಲುಪಿದೆನು.

ಎಲ್ಲರಿಗೂ ಕೃತಜ್ಞತೆಯನ್ನು ಹೇಳುತ್ತಾ, ಮುಂದಿನ ನಮ್ಮ ಶ್ರಮದಾನ ರಾಷ್ಟ್ರೀಯ ಅಂದರ ಒಕ್ಕೂಟದ ಬೆಂಗಳೂರಿನ ಶಾಖೆಯಲ್ಲಿ ” ಧ್ವನಿ ಪುಸ್ತಕ ” (ಆಡಿಯೋ ಬುಕ್ ) ಒಂದರ ನಿರ್ಮಾಣಕ್ಕಾಗಿ ಪುಸ್ತಕವೊಂದನ್ನು ಓದಲಿದ್ದೇನೆ. ಬೆಳಗ್ಗೆ 9:30ರಿಂದ ಸಂಜೆ 5:30ರ ವರೆಗೆ ಕಣ್ಣು ಕಾಣದ ಅಂದ ವಿಶೇಷ ಚೇತನರಿಗಾಗಿ ಒಂದು ನಿರ್ದಿಷ್ಟ ಪುಸ್ತಕವನ್ನು ತಯಾರಿಸಿಕೊಡುವುದು.

ರಾಷ್ಟ್ರೀಯ ಅಂದರ ಒಕ್ಕೂಟ ಕರ್ನಾಟಕ ಶಾಖೆ [National federation of the blind Karnataka branch] ಸುಮಾರು 22 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಇದರ ರಾಜ್ಯ ಪ್ರಧಾನ ಕಚೇರಿ ಬೆಂಗಳೂರಿನಲ್ಲಿ ಮತ್ತು ರಾಷ್ಟ್ರೀಯ ಪ್ರಧಾನ ಕಚೇರಿ ದೆಹಲಿಯಲ್ಲಿದೆ. ರಾಷ್ಟ್ರೀಯ ಮಟ್ಟದಲ್ಲಿ ಸುಮಾರು 53 ವರ್ಷದಿಂದ ನಡೆದುಕೊಂಡು ಬರುತ್ತಿದೆ. ಈ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಂತೋಷ್ ಕುಮಾರ್ ರುಂಗ್ಟ ರವರು ಸ್ವತಃ ದೃಷ್ಟಿ ವಿಶೇಷ ಚೇತನರಾಗಿದ್ದು ಭಾರತ ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿಯ ಅಡ್ವೋಕೇಟ್ ಮತ್ತು ವಿಶ್ವ ಅಂಧರ [World blind union] ಸಂಸ್ಥೆಯ ಈಗಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಶಾಖೆಯ ಅದರ ಪ್ರಮುಖ ಸಂಘಟಕರು ಮತ್ತು ಪದಾಧಿಕಾರಿಯಾದ, ನನ್ನ ಆತ್ಮೀಯ ಮಿತ್ರರೂ ಆದ ಶ್ರೀ ವಿಕ್ಟರಿ ವೀರೇಶ ಅವರ ಸಹಕಾರದೊಂದಿಗೆ ಈ ಶ್ರಮದಾನ ನಡೆಯಲಿದೆ.

ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….

About Author

More Stories

Leave a Reply

Your email address will not be published. Required fields are marked *

You may have missed