“ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಿ : ಉಪ ವಿಭಾಗಾಧಿಕಾರಿ ಎಸ್. ರವಿ.”
1 min read
ಮೂಡಿಗೆರೆ:ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಪ್ರತಿಯೊಬ್ಬ ನಾಗರಿಕನ ಪ್ರಜಾಪ್ರಭುತ್ವದ ಹಕ್ಕಾಗಿದ್ದು, ಎಲ್ಲಾ ಮತದಾರರು ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಹಾಗೂ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಬೇಕು ಎಂದು ಉಪ ವಿಭಾಗಾಧಿಕಾರಿ ಎಸ್. ರವಿ ಹೇಳಿದರು. ಸೋಮವಾರ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪರಿಷ್ಕರಣೆಯ ಕರಡು ಪಟ್ಟಿ ಬಿಡುಗಡೆಗೊಳಿಸಲಾಗಿದೆ.

ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟಿದ್ದರೆ ಪುನಃ ಸೇರ್ಪಡೆಗೊಳಿಸಲು ಹಾಗೂ 18 ವರ್ಷ ಪೂರ್ಣಗೊಂಡ ಯುವಕರು ಫಾರಂ–6ರ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 23ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಇದರ ಜೊತೆಗೆ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಕೂಡ ಅವಕಾಶವಿದ್ದು, ಅರ್ಹ ಮತದಾರರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ 231 ಮತಗಟ್ಟೆಗಳಿದ್ದು, ಕೆಲವು ಮತಗಟ್ಟೆಗಳಲ್ಲಿ 1,200ಕ್ಕೂ ಹೆಚ್ಚು ಮತದಾರರು ಇರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಎರಡು ಮತಗಟ್ಟೆಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ವಿವರಿಸಿದರು. ಕಳೆದ ಸಾಲಿನಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ 1,67,299 ಮತದಾರರಿದ್ದರು. ಪ್ರಸ್ತುತ 1,53,427 ಮತದಾರರು ಅರ್ಜಿ ಸಲ್ಲಿಸಿದ್ದು, ಪರಿಶೀಲನೆ ವೇಳೆ 3,985 ಮಂದಿ ಮೃತಪಟ್ಟಿರುವುದು, 666 ಮಂದಿ ಪತ್ತೆಯಾಗದಿರುವುದು ದಾಖಲಾಗಿದೆ ಎಂದು ಹೇಳಿದರು. ಇದಲ್ಲದೆ, ಶಾಶ್ವತವಾಗಿ ಸ್ಥಳಾಂತರಗೊಂಡವರು 8,043 ಮಂದಿ, ನಕಲಿ ದಾಖಲೆಗಳಡಿ 1,134 ಮಂದಿ ಹಾಗೂ ಇತರೆ ಕಾರಣಗಳಿಂದ 44 ಮಂದಿ ಸೇರಿದಂತೆ ಒಟ್ಟು 13,872 ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಎಸ್. ರವಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಎಸ್.ಅಶ್ವಿನಿ,ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದಯಾವತಿ, ವಿವಿಧ ರಾಜಕೀಯ ಪಕ್ಷಗಳ ಏಜೆಂಟರು ಹಾಗೂ ಬಿ.ಎಲ್.ಒ.ಗಳು ಉಪಸ್ಥಿತರಿದ್ದರು.
✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.
ನ್ಯೂಸ್ ಬ್ಯೂರೋ,ಅವಿನ್ ಟಿವಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

