लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
17/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿದ್ಯೆಗೆ ವಿನಯವೇ ಭೂಷಣ …………………ಅದು ನಿಜ ಕೂಡ.ಏಕೆಂದರೆ ಅರಿವು, ಜ್ಞಾನ, ತಿಳಿವಳಿಕೆಗಳಿಗೆ ಮಿತಿಯೇ ಇಲ್ಲ. ಅದು ಬದಲಾಗುತ್ತಿರುವ, ಅಂತ್ಯವಿಲ್ಲದ ಅನಂತ.ನಮ್ಮಲ್ಲಿ ಕೆಲವರು ತಮ್ಮ ಲೇಖನ, ಬರಹಗಳಲ್ಲಿ ತಮಗೆ ತಿಳಿದಿರುವುದೇ ಸತ್ಯ ಮತ್ತು ಖಚಿತ ಎಂಬಂತೆ ಬರೆಯುತ್ತಾರೆ. ವಿಷಯದ ಹಿನ್ನೆಲೆ, ನೋಡುವ ದೃಷ್ಟಿಕೋನ ತಮ್ಮ ಮೂಗಿನ ನೇರಕ್ಕೇ ಇರುತ್ತದೆ. ಬಹುಶಃ ಅಂಕಿ ಸಂಖ್ಯೆಗಳು ಬಿಟ್ಟರೆ ಉಳಿದ ವಿಷಯಗಳಲ್ಲಿ ಸ್ಪಷ್ಟತೆ ತುಂಬಾ ಕಷ್ಟ. ವಿಜ್ಞಾನ ಕೂಡ ಖಚಿತ ತೀರ್ಮಾನ ಕೊಡುವುದು ಸಾಧ್ಯವಿಲ್ಲ ಎನಿಸುತ್ತದೆ. ಆ ಕ್ಷಣದ ಖಚಿತತೆ ಮಾತ್ರ ಸಾಧ್ಯವಿರಬಹುದು.

 

ಓದುಗರು ಮತ್ತು ಗೆಳೆಯರಿಗೆ ಪ್ರಭಾವ ಬೀರಬೇಕು ಮತ್ತು ಜನಪ್ರಿಯರಾಗಬೇಕು ಎಂಬ ಹಪಾಹಪಿ ಇರುತ್ತದೆ. ಅದಕ್ಕೆ ತಕ್ಕಂತೆ ಪರಿಚಿತರ ಪ್ರೋತ್ಸಾಹದ ನುಡಿಗಳು ಅವರಲ್ಲಿ ಗೊತ್ತಿಲ್ಲದೆ ಅಕ್ಷರದ ಅಹಂ ಮೂಡಿಸುತ್ತದೆ.

ಇದು ಅವರ ಆಂತರಿಕ ಜ್ಞಾನದ ಬೆಳವಣಿಗೆಗೆ ಮಾರಕವಾಗುತ್ತದೆ. ಕಾಲದೊಂದಿಗೆ, ವಯಸ್ಸಿನೊಂದಿಗೆ, ಅನುಭವದೊಂದಿಗೆ, ಓದು, ಸುತ್ತಾಟ, ಪರಿಸರದೊಂದಿಗೆ ಬೆಳೆಯುವ ಜ್ಞಾನ, ಅದೇ ಸಮಯದಲ್ಲಿ ನಮ್ಮ ಮಿತಿಗಳನ್ನು, ಅಜ್ಞಾನವನ್ನು ತೋರಿಸುತ್ತಾ ಸಾಗುತ್ತದೆ.

ದುರಂತವೆಂದರೆ ನಾವು ಕೇವಲ ಮೊದಲಿನ ಬೆಳವಣಿಗೆಗಳನ್ನು ಮಾತ್ರ ಗಮನಿಸುತ್ತಾ ಎರಡನೇ ವ್ಯತ್ಯಾಸಗಳಿಗೆ ಮುಖವಾಡ ತೊಡಿಸಿ ಆತ್ಮವಂಚನೆಗೆ ಒಳಗಾಗುತ್ತೇವೆ. ಇದು ನಮ್ಮ ಅರಿವಿಗೆ ಬರದೇ ನಡೆಯುವ ಕ್ರಿಯೆ. ಜ್ಞಾನ ನಮ್ಮಲ್ಲಿ ಬೆಳಕನ್ನು ಮೂಡಿಸುತ್ತಿರುವಂತೆ ಕತ್ತಲನ್ನೂ ತೋರಿಸುತ್ತಿರುತ್ತದೆ. ಅದಕ್ಕೆ ನಾವು ಕುರುಡಾಗಬಾರದು.

ಗೆಳೆಯರೆ,

ನೀವು ಏನನ್ನಾದರೂ ಬರೆಯಿರಿ, ಹೇಗಾದರೂ ಬರೆಯಿರಿ, ಎಷ್ಟಾದರೂ ಬರೆಯಿರಿ ಆದರೆ ಅಕ್ಷರದ ಅಹಂಕಾರಕ್ಕೆ ಒಳಗಾಗಬೇಡಿ. ನಾವು ಎಲ್ಲಕ್ಕಿಂತ ಮೊದಲು ಸೃಷ್ಟಿಯ ಜೀವಿಗಳು. ಉಳಿದದ್ದೆಲ್ಲಾ ಆಮೇಲೆ ಪಡೆದಿರುವುದು. ಅದಕ್ಕೆ ನಿಷ್ಠರಾಗಿರೋಣ. ಸ್ವಲ್ಪ ಹೆಸರು,ಜನಪ್ರಿಯತೆ,ಹಣ, ಅಧಿಕಾರ ಬಂದ ಮಾತ್ರಕ್ಕೆ ಜ್ಞಾನ ವೃದ್ಧಿಸುವುದಿಲ್ಲ.ಒಂದು ರೀತಿಯಲ್ಲಿ ಅವು ಅರಿವಿಗೆ ಮಿತಿಗಳೇ.ಅಜ್ಞಾತರಾಗಿದ್ದ ಮಾತ್ರಕ್ಕೆ ದಡ್ಡರೇನಲ್ಲ.ಏನಾದರೂ ಆಗು ಆದರೆ ಮೊದಲು ಮಾನವನಾಗು.ನನ್ನನ್ನೂ ಸೇರಿದಂತೆ ಇದು ಕೇವಲ ಪದಗಳ ಸಾಮಾನ್ಯ ಜ್ಞಾನವಾಗದೆ ನಮ್ಮ ದಿನನಿತ್ಯದ ನಡವಳಿಕೆಯಾಗಲಿ ……

ಏಕೆಂದರೆ,ಎಷ್ಟೇ ಕಾನೂನುಗಳು ಬಂದರೂ ಕೊಲೆಗಳು ಕಡಿಮೆಯಾಗುತ್ತಿಲ್ಲ.ಎಷ್ಟೇ ಕಠಿಣ ಶಿಕ್ಷೆ ವಿಧಿಸಿದರೂ ಅತ್ಯಾಚಾರಗಳು ನಿಂತಿಲ್ಲ.ಎಷ್ಟೇ ತನಿಖಾ ಸಂಸ್ಥೆಗಳನ್ನು ಸ್ಥಾಪಿಸಿದರೂ ಭ್ರಷ್ಟಾಚಾರ ನಿಲ್ಲುತ್ತಿಲ್ಲ.ಎಷ್ಟೇ ಪೋಲೀಸ್ ಬಂದೋಬಸ್ತ್ ಇದ್ದರೂ ಕಳ್ಳತನ ನಡೆಯುತ್ತಲೇ ಇದೆ.ಎಷ್ಟೇ ಸರ್ಕಾರಿ ಅಧಿಕಾರಿಗಳನ್ನು ನೇಮಿಸಿಕೊಂಡು ಆಡಳಿತ ನಡೆಸಿದರೂ ಸಾಮಾನ್ಯರಿಗೆ ಹೆಚ್ಚಿನ ಯೋಜನೆಗಳು ತಲುಪುತ್ತಿಲ್ಲ.ಹೆಚ್ಚು ಹೆಚ್ಚು ರಸ್ತೆಗಳ ಅಭಿವೃದ್ಧಿ ಆದಂತೆಲ್ಲಾ ಅಪಘಾತಗಳು ಹೆಚ್ಚಾಗುತ್ತಿವೆ.ಸಂಪೂರ್ಣ ಮಾನಸಿಕ ಮತ್ತು ದೈಹಿಕ ಆರೋಗ್ಯವಂತರನ್ನು ಹುಡುಕಬೇಕಿದೆ.

ಆದರೆ,……….ಬಡಾಯಿ ಕೊಚ್ಚಿಕೊಳ್ಳುವುದು ಮಾತ್ರ………ನಮ್ಮ ದೇಶ ವಿಶ್ವಗುರು….ನಮ್ಮ ನೆಲ ಪವಿತ್ರ ಭೂಮಿ…ನಮ್ಮದು ಆಧ್ಯಾತ್ಮದ ತವರೂರು…..ನಮ್ಮದು ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ……..ಇಸ್ಲಾಂ ಧರ್ಮ ಸಾಮರಸ್ಯವನ್ನು ಭೋದಿಸುತ್ತದೆ……ಕ್ರಿಶ್ಚಿಯನ್ ಧರ್ಮ ಶಾಂತಿಯನ್ನು ಹೇಳುತ್ತದೆ……ಹಿಂದೂ ಧರ್ಮ ಸೌಹಾರ್ದತೆಯನ್ನು ಸಾರುತ್ತದೆ…….ಆದರೂ,ಯಾಕೋ ನಿಮ್ಮ ಧರ್ಮಗಳಿಗೆ ಈ ಅನಾಚಾರಗಳನ್ನು ತಡೆಯಲಾಗಿಲ್ಲ.ನಿಮ್ಮ ದೇವರುಗಳಗೆ ಈ ದುರುಳರನ್ನು ಶಿಕ್ಷಿಸಲಾಗುತ್ತಿಲ್ಲ.ಅಷ್ಟು ಇಷ್ಟು ಕಾನೂನು ಪರವಾಗಿಲ್ಲ. ಆದರೆ ಅದೂ ಕೂಡ ಈ ಕಿರಾತಕರ ಕೈಯಲ್ಲಿ ಸಿಕ್ಕಿ ನರಳುತ್ತಿದೆ.ದೇಶ ಇರುವುದೇ ಹೀಗೇ. ಇದನ್ನೇ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಇದೇ ವಿಧಿಯ ಲೀಲೆ ಎನ್ನುವವರಿಗೆ ನಮ್ಮ ಅಭ್ಯಂತರವೇನೂ ಇಲ್ಲ.

ಆದರೆ,ಈ ರೀತಿಯ ಅಸಹಜ ನಡವಳಿಕೆಯ ಸಮಾಜ ಅನಾಗರಿಕವಾದುದು. ಇದಕ್ಕಿಂತ ಉತ್ತಮ ಸಮಾಜ ನಮಗೆ ಬೇಕಿದೆ. ಅದಕ್ಕಾಗಿ ನಾವೆಲ್ಲರೂ ಒಂದಷ್ಟು ಶ್ರಮ ಪಡಬೇಕಿದೆ ಎಂದು ಭಾವಿಸುವುದಾದರೆ, ವ್ಯವಸ್ಥೆಯ ಅಮೂಲಾಗ್ರಬದಲಾವಣೆಯ ಬಗ್ಗೆ ಯೋಚಿಸೋಣ.ಕಣ್ಣ ಮುಂದೆಯೇ ನಡೆಯುವ ಅನಾಗರಿಕ ವರ್ತನೆಗಳನ್ನು ಖಂಡಿಸುತ್ತಾ ಹೊಸ ನಾಗರಿಕ ಬದುಕಿನತ್ತ ಮುನ್ನಡೆಯೋಣ…

ಸಾಮಾಜಿಕ ಜಾಲತಾಣಗಳ ಕ್ರಾಂತಿಯ ಈ ಸಂದರ್ಭದಲ್ಲಿ….. ಇಲ್ಲಿ ನಾನು ಯಾರೋ,ನೀವು ಯಾರೋ,ಇನ್ಯಾರೋ,ಮತ್ಯಾರೋ……ಒಬ್ಬರ ಹಿನ್ನೆಲೆ, ವಯಸ್ಸು, ಅಂತಸ್ತು, ಜಾತಿ, ಧರ್ಮ, ಭಾಷೆ ಇದ್ಯಾವುದೂ ಇನ್ನೊಬ್ಬರಿಗೆ ಗೊತ್ತಿರುವುದಿಲ್ಲ. (ಕೆಲವು ಸ್ನೇಹಿತರನ್ನು ಹೊರತುಪಡಿಸಿ) ಆದರೂ ನಾವೆಲ್ಲಾ ನಮ್ಮ ಭಾವನೆ, ಅನಿಸಿಕೆಗಳನ್ನು ಅಕ್ಷರಗಳಲ್ಲಿ ಹಂಚಿಕೊಳ್ಳುತ್ತೇವೆ. ಹಲವಾರು ವಿಷಯಗಳನ್ನು ಚರ್ಚಿಸುತ್ತೇವೆ.

ವಾಸ್ತವ ಬದುಕಿನಲ್ಲಿ ಇದನ್ನು ಯೋಚಿಸಿದಾಗ ಎಷ್ಟೊಂದು ಆಶ್ಚರ್ಯವಾಗುತ್ತದೆಯಲ್ಲವೇ.?ಮೊದಮೊದಲು ಟಿವಿ ಬಂದಾಗ ಆಸ್ಟ್ರೇಲಿಯಾದಲ್ಲಿ ನಡೆಯುವ ಕ್ರಿಕೆಟ್ ಮ್ಯಾಚ್ ಅನ್ನು ನೇರವಾಗಿ ಅದೇ ಸಮಯದಲ್ಲಿ ಮನೆಯಲ್ಲಿ ಕುಳಿತೇ ನೋಡಬಹುದು ಎಂದಾಗ ಅಥವಾ ಮನೆ, ಊರು, ನಗರ, ವಿಶ್ವದ ಯಾವುದೇ ಭಾಗದಲ್ಲಿದ್ದರೂ ಮೊಬೈಲ್ ಮುಖಾಂತರ ನಾವು ನಮ್ಮವರೊಡನೆ ಸಂಪರ್ಕದಲ್ಲಿ ಇರಬಹುದು ಎಂದು ತಿಳಿದಾಗ ಆದ ಆಶ್ಚರ್ಯದಂತೆ ಈ ಅಜ್ಞಾತ ಮನಸುಗಳ ಸಂಬಂಧಗಳು ನಮ್ಮಲ್ಲಿ ಕೌತುಕ ಉಂಟು ಮಾಡುತ್ತವೆ.ಇಂತಹ ಅದ್ಭುತ, ಆಧುನಿಕ, ಅತ್ಯುತ್ತಮ ತಂತ್ರಜ್ಞಾನದ ಸಂದರ್ಭದಲ್ಲಿ ಜೀವಿಸಿರುವ ನಾವು ಇದನ್ನು ಸದುಪಯೋಗಪಡಿಸಿಕೊಳ್ಳೋಣ.

ಈಗಾಗಲೇ ದ್ವೇಷ,ಅಸೂಯೆ,ಸಣ್ಣತನಗಳಿಂದ ಆವರಿಸಿರುವ,ಜಾತಿ,ಧರ್ಮ,ಭಾಷೆಗಳ ಆಧಾರದಲ್ಲಿ ಬಂಧಿಗಳಾಗಿರುವ ನಾವು ಅದನ್ನು ಮೀರಲು ಈ ಮಾಧ್ಯಮ ತಂತ್ರಜ್ಙಾನ ಬಳಸಿಕೊಳ್ಳೋಣ.

ಮರೆಯಾಗುತ್ತಿರುವ ಪ್ರೀತಿ,ವಿಶ್ವಾಸ,ಸ್ನೇಹ,ಮಾನವೀಯ ಗುಣಗಳ ಸಂಬಂಧಗಳನ್ನು ಮರುಸ್ಥಾಪಿಸಿಕೊಳ್ಳೋಣ.

ಇದಕ್ಕಾಗಿ ನೀವೇನು ಹಣ ಖರ್ಚುಮಾಡಬೇಕಾಗಿಲ್ಲ, ಪದವಿ ಪಡೆಯಬೇಕಾಗಿಲ್ಲ.ಬೆವರು ಸುರಿಸಬೇಕಾಗಿಲ್ಲ. ಕೇವಲ ನಿಮ್ಮದೇ ಮನಸ್ಸುಗಳನ್ನು,ವ್ಯಕ್ತಿತ್ವಗಳನ್ನು ಒಂದಷ್ಟು ವಿಶಾಲ ಮಾಡಿಕೊಂಡು,ಮೇಲ್ದರ್ಜೆಗೆ ಏರಿಸಿಕೊಳ್ಳಬೇಕಿದೆ.ಮಾತು, ನಡುವಳಿಕೆಗಳಲ್ಲಿ ವಿನಯ,ವಿಶ್ವಾಸ ಬೆಳೆಸಿಕೊಳ್ಳಬೇಕಿದೆ.

ನಿಮ್ಮಲ್ಲಿರುವ ಅಕ್ಷರ ಜ್ಞಾನವನ್ನು,ನಿಮ್ಮ ಮೊಬೈಲ್ – ಕಂಪ್ಯೂಟರ್ ನ ಕೀಲಿಮಣೆಯನ್ನು ಬೆರಳುಗಳಲ್ಲಿ ಸರಿಯಾಗಿ ಒತ್ತುವ ಮುಖಾಂತರ,ಕೆಲವು ಸಂದರ್ಭಗಳಲ್ಲಿ ಮಾತನಾಡುವ ಮುಖಾಂತರ ನಿಮ್ಮ ಪ್ರತಿಭೆ ಅನಾವರಣಗೊಳಿಸಿಕೊಳ್ಳಬೇಕಿದೆ.

ದ್ವೇಷ, ಅಸೂಯೆ, ವ್ಯಂಗ್ಯ, ವಿಷಕಾರಿ ಮಾತುಗಳು ನಿಮ್ಮನ್ನು ತೊಂದರೆಗೆ ಸಿಲುಕಿಸುವುದಲ್ಲದೆ ಸಮಾಜದ ವಾತಾವರಣವನ್ನು ಕಲುಷಿತಗೊಳಿಸುತ್ತದೆ.ಅದು ಬೇಡವೇ ಬೇಡ. ಒಳ್ಳೆಯ ಆಲೋಚನೆಗೆ ಒಳ್ಳೆಯ ಅಭಿಪ್ರಾಯ – ಪ್ರತಿಕ್ರಿಯೆಗಳಿಗೆ ಸಂಕಲ್ಪ ಮಾಡೋಣ.

ಪ್ರೀತಿ, ವಿಶ್ವಾಸ, ಸಭ್ಯ ನಡವಳಿಕೆಗಳಿಂದ ಕನಿಷ್ಠ ನಮ್ಮ ರಾತ್ರಿಗಳು ಸುಖ ನಿದ್ರೆಯ ತಾಣಗಳಾಗಬಹುದು. ನಾನೂ ಕೂಡ ನಿಮ್ಮಂತೆ ಆ ಪ್ರಯತ್ನದಲ್ಲಿದ್ದೇನೆ.ಈ ಸಾಮಾಜಿಕ ಜಾಲತಾಣಗಳು ಅಜ್ಞಾತ ಮನಸುಗಳ, ಒಲವಿನ ಹೃದಯಗಳ ಒಂದು ಕುಟುಂಬ ಎಂಬ ಭಾವನೆಯೊಂದಿಗೆ, ನಿಮ್ಮ ಬರಹದ ಚಟುವಟಿಕೆಗಳು ಮತ್ತಷ್ಟು ಉತ್ಸಾಹದಿಂದ ಗರಿಗೆದರಲಿ ಎಂದು ಆಶಿಸುತ್ತಾ……..ಸ್ಚಚ್ಚ ಮನಸ್ಸಿನ ಸುಂದರ ದಿನಗಳು ನಮ್ಮದಾಗಲಿ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ.

✍🏻ಬರಹ ಕೃಪೆ.✍🏻

ವಿವೇಕಾನಂದ.ಎಚ್.ಕೆ.

9663750451.

9844013068.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಸ್ಥಾನಿಕ ಸಂಪಾದಕರು.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

About Author

Leave a Reply

Your email address will not be published. Required fields are marked *