ಎಸಿಎಫ್ ಮನೆ ಮೇಲೆ ಲೋಕಾಯುಕ್ತ ದಾಳಿ….
1 min read
ಎಸಿಎಫ್ ಮನೆ ಮೇಲೆ ಲೋಕಾಯುಕ್ತ ದಾಳಿ
ಚಿಕ್ಕಮಗಳೂರು: ಅಸಿಸ್ಟೆಂಟ್ ಕನ್ಸರ್ವೆಟರ್ ಆಫ್ ಫಾರೆಸ್ಟ್
(ACF) ಆಗಿ ಸೇವೆ ಸಲ್ಲಿಸುತ್ತಿರುವ ಮೋಹನ್ ಅವರಿಗೆ ಸೇರಿದ ನಿವಾಸ ಹಾಗೂ ಇತರ ಪ್ರಮುಖ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಮುಂಜಾನೆ ದಿಢೀರ್ ದಾಳಿ ನಡೆಸಿದ್ದಾರೆ.
ಅಧಿಕಾರ ದುರುಪಯೋಗಪಡಿಸಿಕೊಂಡು ಮಿತಿಮೀರಿದ ಆಸ್ತಿ ಗಳಿಕೆ ಮಾಡಿರುವ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಹಠಾತ್ ಕಾರ್ಯಾಚರಣೆ ನಡೆಸಲಾಗಿದೆ. ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಅಧಿಕಾರಿ ಮೋಹನ್ ಅವರ ಸ್ವಗೃಹ ಹಾಗೂ ಕಡೂರಿನಲ್ಲಿರುವ ಅವರ ಸಹೋದರಿಯ ಮನೆ ಮೇಲೆಯೂ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕೈಗೊಂಡಿವೆ.
ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ನೇತೃತ್ವದ ಸಿಬ್ಬಂದಿ ಈ ಬೃಹತ್ ಕಾರ್ಯಾಚರಣೆಯಲ್ಲಿ ನಿರತವಾಗಿದ್ದು, ಪ್ರಮುಖ ದಾಖಲೆ ಪತ್ರಗಳು ಮತ್ತು ಆಸ್ತಿ ವಿವರಗಳ ಪರಿಶೀಲನೆ ಮುಂದುವರಿಸಿದ್ದಾರೆ.

