ಕೊಟ್ಟಿಗೆಹಾರ ನೂತನ ಬದ್ರಿಯಾ ಜುಮ್ಮಾ ಮಸೀದಿ ಉದ್ಘಾಟನೆಗೆ ಸಜ್ಜು….
1 min read
ಕೊಟ್ಟಿಗೆಹಾರ ನೂತನ ಬದ್ರಿಯಾ ಜುಮ್ಮಾ ಮಸೀದಿ ಉದ್ಘಾಟನೆಗೆ ಸಜ್ಜು.
ಕೊಟ್ಟಿಗೆಹಾರ: ಮಲೆನಾಡಿನ ಸುಂದರ ಪರಿಸರದ ಮಧ್ಯೆ ನೆಲೆಗೊಂಡಿರುವ ಕೊಟ್ಟಿಗೆಹಾರ ತನ್ನ ನೈಸರ್ಗಿಕ ಸೌಂದರ್ಯದ ಜೊತೆಗೆ ಸರ್ವಧರ್ಮ ಸೌಹಾರ್ದತೆಗೂ ಹೆಸರಾಗಿದೆ. ವಿವಿಧ ಧರ್ಮಗಳ ಜನರು ಸಹೋದರತ್ವ ಮತ್ತು ಪರಸ್ಪರ ಗೌರವದ ಮನೋಭಾವದಿಂದ ಬದುಕು ಕಟ್ಟಿಕೊಂಡಿರುವ ಈ ಪಟ್ಟಣದಲ್ಲಿ, ಶತಮಾನಗಳ ಇತಿಹಾಸ ಹೊಂದಿರುವ ಜುಮ್ಮಾ ಮಸೀದಿ ಇದೀಗ ನೂತನ ಹಾಗೂ ಆಕರ್ಷಕ ಕಟ್ಟಡವಾಗಿ ರೂಪುಗೊಂಡಿದ್ದು, ಜೂನ್ 4.ರಂದು ಉದ್ಘಾಟನೆಗೊಳ್ಳಲು ಸಜ್ಜಾಗಿದೆ.
ಹಿಂದೆ ಚಿಕ್ಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಸೀದಿಯು ಸ್ಥಳೀಯ ಮುಸ್ಲಿಂ ಸಮುದಾಯದ ಧಾರ್ಮಿಕ ಅಗತ್ಯಗಳನ್ನು ಪೊರೈಸುತ್ತಿತ್ತು. ಆ ಕಾಲದಲ್ಲಿ ಕೊಟ್ಟಿಗೆಹಾರ ಹೊರತುಪಡಿಸಿ ಬಣಕಲ್, ಹಾಗೂ ಕೆಲವು ಪ್ರದೇಶಗಳಲ್ಲಿ ಮಾತ್ರ ಮಸೀದಿಗಳಿದ್ದ ಕಾರಣ, ದೂರದ ಊರುಗಳಿಂದ ಆಗಮಿಸುತ್ತಿದ್ದ ಮುಸ್ಲಿಂ ಭಕ್ತರು ಕೂಡ ಇಲ್ಲಿಗೆ ಬಂದು ನಮಾಜ್ ಸಲ್ಲಿಸುತ್ತಿದ್ದರು.
ಕೊಟ್ಟಿಗೆಹಾರದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಕಡಿಮೆಯಿದ್ದರೂ, ?ಒಗ್ಗಟ್ಟಿನಲ್ಲಿ ಬಲವಿದೆ? ಎಂಬ ಮಾತಿನಂತೆ ಸಮುದಾಯದ ಹಿರಿಯರು, ಧಾರ್ಮಿಕ ಮುಖಂಡರು, ದಾನಿಗಳು ಹಾಗೂ ಯುವಕರ ಸಹಕಾರದಿಂದ ಬೃಹತ್ ಮತ್ತು ಸುಸಜ್ಜಿತ ಮಸೀದಿಯ ನಿರ್ಮಾಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮಸೀದಿ ಅಧ್ಯಕ್ಷರು ಮತ್ತು ಸದಸ್ಯರ ನಿರಂತರ ಶ್ರಮದ ಫಲವಾಗಿ ಅಲ್ಪಾವಧಿಯಲ್ಲೇ ಈ ಭವ್ಯ ಕಟ್ಟಡ ನಿರ್ಮಾಣಗೊಂಡಿದೆ.
ಹಸಿರು ಪ್ರಕೃತಿಯ ಮಡಿಲಿನಲ್ಲಿ ಎತ್ತರಕ್ಕೆ ತಲೆ ಎತ್ತಿರುವ ಮಸೀದಿಯ ಗೋಪುರಗಳು ದೂರದಿಂದಲೇ ಗಮನ ಸೆಳೆಯುತ್ತವೆ. ಕಳಸ ಮಾರ್ಗದ ಪಕ್ಕದಲ್ಲಿರುವ ಈ ಮಸೀದಿಯ ಸಮೀಪದಲ್ಲೇ ಶ್ರೀರಾಮ ದೇವಸ್ಥಾನ ಹಾಗೂ ಯೇಸುವಿನ ಪವಿತ್ರ ಹೃದಯದ ದೇವಾಲಯವೂ ಇರುವುದರಿಂದ, ಈ ಪ್ರದೇಶವು ಧಾರ್ಮಿಕ ಸಾಮರಸ್ಯದ ಪ್ರತೀಕವಾಗಿ ಗುರುತಿಸಿಕೊಂಡಿದೆ.
ಮೂರು ಧರ್ಮಗಳ ಹಬ್ಬಗಳ ಸಂದರ್ಭಗಳಲ್ಲಿ ದೇವಾಲಯ, ಚರ್ಚ್ ಮತ್ತು ಮಸೀದಿ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುವುದರ ಜೊತೆಗೆ ಭಜನೆ, ಪ್ರಾರ್ಥನೆ ಹಾಗೂ ಧಾರ್ಮಿಕ ಗಾಯನಗಳ ನಿನಾದಗಳು ಸರ್ವಧರ್ಮಿಯರನ್ನು ಭಕ್ತಿಯ ವಾತಾವರಣದಲ್ಲಿ ಒಂದಾಗಿಸುತ್ತವೆ. ಪರಸ್ಪರ ಸಹಕಾರ, ಗೌರವ ಮತ್ತು ಬಾಂಧವ್ಯದ ಮೌಲ್ಯಗಳು ಇಲ್ಲಿ ಜೀವಂತವಾಗಿವೆ.
ಜೂನ್ 4ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಧರ್ಮಗಳ ಗುರುಗಳು ಹಾಗೂ ಗಣ್ಯರು ಭಾಗವಹಿಸಲಿದ್ದು, ಸೌಹಾರ್ದ ಸಂಗಮ ಕಾರ್ಯಕ್ರಮವೂ ಆಯೋಜಿಸಲಾಗಿದೆ.ಎಲ್ಲ ಧರ್ಮಗಳ ಗುರುಗಳನ್ನು ಆಹ್ವಾನಿಸಿ, ಸೌಹಾರ್ದತೆಯ ಸಂದೇಶ ಸಾರುವ ರೀತಿಯಲ್ಲಿ ಮಸೀದಿ ಉದ್ಘಾಟನೆ ನಡೆಸಲಿದ್ದೇವೆ. ಇದು ಕೇವಲ ಮಸೀದಿಯ ಉದ್ಘಾಟನೆಯಲ್ಲ, ಸಮಾಜದಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಬಲಪಡಿಸುವ ಕಾರ್ಯಕ್ರಮವಾಗಿದೆ,? ಎಂದು “ಕೊಟ್ಟಿಗೆಹಾರ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಮುನೀರ್ ತಿಳಿಸಿದ್ದಾರೆ.
ಮಲೆನಾಡಿನ ಮಡಿಲಿನಲ್ಲಿ ತಲೆ ಎತ್ತಿರುವ ಈ ನೂತನ ಮಸೀದಿ, ಕೇವಲ ಧಾರ್ಮಿಕ ಕೇಂದ್ರವಾಗಿಯೇ ಅಲ್ಲದೆ ಸರ್ವಧರ್ಮ ಸೌಹಾರ್ದತೆ ಮತ್ತು ಸಹಬಾಳೆಯ ಜೀವಂತ ಸಂಕೇತವಾಗಿಯೂ ಹೊರಹೊಮ್ಮಿದೆ.

