ಚಿಕ್ಕಮಗಳೂರು ಜಿಲ್ಲಾದ್ಯಂತ ನಾಳೆಯಿಂದ “ಮನೆಗೊಂದು ಗ್ರಂಥಾಲಯ” ಅನುಷ್ಠಾನ ಕಾರ್ಯಕ್ರಮ ಆರಂಭ….
1 min read
ಅವಿನ್ ಟಿವಿ ಸುದ್ದಿಜಾಲ ✍️:
ಚಿಕ್ಕಮಗಳೂರು ಜಿಲ್ಲಾದ್ಯಂತ ನಾಳೆಯಿಂದ “ಮನೆಗೊಂದು ಗ್ರಂಥಾಲಯ” ಅನುಷ್ಠಾನ ಕಾರ್ಯಕ್ರಮ ಆರಂಭ.
ಚಿಕ್ಕಮಗಳೂರು ಮೇ ೨೧: ಓದುವ ಸಂಸ್ಕೃತಿಯನ್ನು ಮನೆಮನೆಗೂ ತಲುಪಿಸುವ ಹಾಗೂ ಪ್ರತಿಯೊಬ್ಬರ ಜೀವನದಲ್ಲಿ ಪುಸ್ತಕಗಳ ಮಹತ್ವವನ್ನು ಅರಿವು ಮೂಡಿಸುವ ಉದ್ದೇಶದಿಂದ “ಮನೆಗೊಂದು ಗ್ರಂಥಾಲಯ” ಅನುಷ್ಠಾನ ಕಾರ್ಯಕ್ರಮವನ್ನು ನಾಳೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಡಿ ಮನೆಮನೆಗಳಲ್ಲಿ ಸಣ್ಣ ಗ್ರಂಥಾಲಯಗಳನ್ನು ಸ್ಥಾಪಿಸುವ ಕುರಿತು ಜಾಗೃತಿ ಮೂಡಿಸಲಾಗುವುದು. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು, ಯುವಜನರಲ್ಲಿ ಜ್ಞಾನ ವಿಸ್ತಾರಕ್ಕೆ ಉತ್ತೇಜನ ನೀಡುವುದು ಹಾಗೂ ಸಮಾಜದಲ್ಲಿ ಸಾಹಿತ್ಯ ಮತ್ತು ಪುಸ್ತಕ ಪ್ರೀತಿಯನ್ನು ವೃದ್ಧಿಸುವ ಉದ್ದೇಶವನ್ನು ಕಾರ್ಯಕ್ರಮ ಹೊಂದಿದೆ.
೨೨ ಮೇ ೨೦೨೬ ಶುಕ್ರವಾರ ಬೆಳಿಗ್ಗೆ ಘಂಟೆ ೧೦:೩೦ಕ್ಕೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಶಾಸಕರಾದ ಎಚ್ ಡಿ ತಮ್ಮಯ್ಯನವರ ಐಸಿರಿ ನಿವಾಸ, ಕಲ್ಯಾಣನಗರ ಚಿಕ್ಕಮಗಳೂರು ಇಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದ ಉದ್ಘಾಟನೆಯು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ಉದ್ಘಾಟನೆ ಮಾಡಲಿದ್ದು, ಶಾಸಕರಾದ ಹೆಚ್ ಡಿ ತಮ್ಮಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ನಂತರ ಇದೇ ದಿನ ಘಂಟೆ ೧೨:೩೦ಕ್ಕೆ ಚಿಕ್ಕಮಗಳೂರು ತಾಲೂಕು ಮಲ್ಲೇನಹಳ್ಳಿಯ ಕವಿಯತ್ರಿ ಭವ್ಯ ಮಲ್ಲಿಕ್ ಅವರ ಮನೆಯಲ್ಲಿ, ತದನಂತರ ಸಂಜೆ ಘಂಟೆ ೦೩:೩೦ ಕ್ಕೆ ತರೀಕೆರೆ ಬಿಎಂಶ್ರೀ ರಸ್ತೆಯಲ್ಲಿರುವ ದಂತ ವೈದ್ಯ ಡಾ. ಶರತ್ ಅವರ ನಿವಾಸದಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ.
ಈ ಎಲ್ಲ ಕಾರ್ಯಕ್ರಮವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಉದ್ಘಾಟನೆ ಮಾಡಿ ಮಾತನಾಡಲಿದ್ದಾರೆ, ಮಠಾಧೀಶರು, ಚಿಕ್ಕಮಗಳೂರು ಮತ್ತು ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು, ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರು, ಸಾಹಿತ್ಯಾಸಕ್ತರು, ಶಿಕ್ಷಕರು, ಗ್ರಂಥಾಲಯ ಹಿತೈಷಿಗಳು, ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಪುಸ್ತಕಗಳ ಮಹತ್ವ, ಓದುವ ಅಭ್ಯಾಸದ ಅಗತ್ಯತೆ ಹಾಗೂ ಗ್ರಂಥಾಲಯಗಳ ಪಾತ್ರ ಕುರಿತು ವಿಶೇಷ ಮಾತುಕತೆಗಳನ್ನು ಏರ್ಪಡಿಸಲಾಗಿವೆ.
“ಮನೆಗೊಂದು ಗ್ರಂಥಾಲಯ” ಅಭಿಯಾನವು ಜ್ಞಾನಾಧಾರಿತ ಸಮಾಜ ನಿರ್ಮಾಣದತ್ತ ಒಂದು ಮಹತ್ವದ ಹೆಜ್ಜೆಯಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕನ್ನಡ ಪುಸ್ತಕ ಪ್ರಾಧಿಕಾರದ ಚಿಕ್ಕಮಗಳೂರು ಜಿಲ್ಲಾ ಜಾಗೃತಿ ಸಮಿತಿ ಈ ಮೂಲಕ ಕೋರಿದೆ.
••••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

