लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಕದಡುವ ಭಾವನೆಗಳು ಮತ್ತು ವಾಸ್ತವ………
‎
‎ಬೀದಿ ಬದಿಯಲ್ಲಿ ಅನಾಥ ಶವದಂತೆ ಜೀವಂತ ವ್ಯಕ್ತಿಗಳು ಮಲಗಿರುವಾಗ ಅಪ್ಪನ ನೆನಪಾಗುತ್ತದೆ.
‎
‎ಬಸ್ ನಿಲ್ದಾಣದಲ್ಲಿ ಗಿರಾಕಿಗಳಿಗಾಗಿ ಅಲಂಕಾರ ಮಾಡಿಕೊಂಡು
‎ನಿಂತಿರುವ ಹೆಣ್ಣುಗಳನ್ನು ನೋಡಿದಾಗ ಅಮ್ಮನ ನೆನಪಾಗುತ್ತದೆ.
‎
‎ರಾತ್ರಿ ಹನ್ನೆರಡರವರೆಗೂ ಹೋಟೆಲ್ ಗಳಲ್ಲಿ ಪಾತ್ರೆ ತೊಳೆಯುವ
‎ಪುಟ್ಟ ಕಂದಮ್ಮಗಳನ್ನು ನೋಡಿದಾಗ ಮಗನ ನೆನಪಾಗುತ್ತದೆ.
‎
‎ಬೆಳ್ಳಂಬೆಳಗ್ಗೆ ತುತ್ತು ಅನ್ನಕ್ಕಾಗಿ ಭಿಕ್ಷೆ ಬೇಡುವ ವೃದ್ಧರನ್ನು
‎ನೋಡಿದಾಗ ನನ್ನ ಅಜ್ಜನ ನೆನಪಾಗುತ್ತದೆ.
‎
‎ಗಿಜಿಬಿಜಿ ಬಸ್ ಸ್ಟಾಂಡ್ ನಲ್ಲಿ ಗುಳೆಬಂದು ತಮ್ಮ ಹರಿದ ಚೀಲಗಳ ಸಮೇತ ಮಕ್ಕಳೊಂದಿಗೆ ಇರುವ ಬಡ ರೈತ ಕುಟುಂಬಗಳನ್ನು  ನೋಡಿದಾಗ ನನ್ನದೇ ಕುಟುಂಬ ನೆನಪಾಗುತ್ತದೆ.
‎
‎ಮಧ್ಯಾಹ್ನಕ್ಕೆಲ್ಲಾ ಕುಡಿದು ಚಿತ್ತಾಗಿ ಪುಟ್ ಪಾತಿನ ಮೇಲೆ ಮಲಗಿರುವ
‎ಯುವಕರನ್ನು ಕಂಡಾಗ ನನ್ನ ತಮ್ಮನ ನೆನಪಾಗುತ್ತದೆ.
‎
‎ಉರಿ ಬಿಸಿಲಿನಲ್ಲಿ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ದೊಡ್ಡ ಗಾತ್ರದ ಕಲ್ಲುಗಳನ್ನು ಸಾಗಿಸುವ ಹೆಣ್ಣನ್ನು ನೋಡಿದಾಗ ನನ್ನ ಅಕ್ಕನ ನೆನಪಾಗುತ್ತದೆ.‌
‎
‎ಆದರೆ,
‎ಟಿವಿಗಳಲ್ಲಿ, ಪತ್ರಿಕೆಗಳಲ್ಲಿ, ರಸ್ತೆ ಬದಿಯ ದೊಡ್ಡ ಬೋರ್ಡ್ ಗಳಲ್ಲಿ ಸರ್ಕಾರಗಳ ಸಾಧನೆಯ
‎ದೊಡ್ಡ ದೊಡ್ಡ ಜಾಹೀರಾತುಗಳನ್ನು ನೋಡಿದಾಗ,
‎ಕೋಪದಿಂದ ನನ್ನ ಪಾದರಕ್ಷೆಗಳ ನೆನಪಾಗುತ್ತದೆ.
‎
‎ಆಗ ಅದನ್ನು ತೆಗೆದುಕೊಂಡು ನನ್ನನ್ನು ನಾನೇ ಹೊಡೆದುಕೊಂಡು,
‎ಕಣ್ಣೀರಾಗುತ್ತೇನೆ, ಸಮಾಧಾನ ಮಾಡಿಕೊಳ್ಳುತ್ತೇನೆ.
‎ನನ್ನದೇ ಜನಗಳ ಧಾರುಣ ಸ್ಥಿತಿಗೆ, ಅಸಹಾಯಕತೆಗೆ,
‎ಪರಿಹಾರ ಹುಡುಕುವ ಅರೆ ಹುಚ್ಚನಾಗುತ್ತೇನೆ.
‎
‎ಏಕೆಂದರೆ,
‎
‎ಅದ್ಭುತ ಸಿನಿಮಾವನ್ನು ನೋಡಿದಾಗ ಮನಸ್ಸು ಅರಳುತ್ತದೆ,
‎ಭಾವನೆಗಳು ಕೆರಳುತ್ತವೆ, ಹೃದಯ ಕಲಕುತ್ತದೆ,
‎
‎ಅತ್ಯುತ್ತಮ ಕಾದಂಬರಿಯನ್ನು ಓದಿದಾಗ ಆ ಪಾತ್ರಗಳೇ ನಾವಾಗುತ್ತೇವೆ, ಇಡೀ ವಾತಾವರಣದಲ್ಲಿ ನಾವಿರುವ ಹಾಗೆ ಕಲ್ಪಿಸಿಕೊಳ್ಳುತ್ತೇವೆ.
‎
‎ಅತ್ಯಾಕರ್ಷಕ ಪ್ರಾಕೃತಿಕ ಸೌಂದರ್ಯದ ದೃಶ್ಯಗಳನ್ನು ನೋಡಿದಾಗ ನಾವೇ ಮ್ಯೆಮರೆಯುತ್ತೇವೆ. ಮನ ಉಲ್ಲಾಸದಾಯಕವಾಗುತ್ತದೆ,
‎
‎ಉತ್ಕೃಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿದಾಗ ಸಂತೋಷ ಉಕ್ಕಿ ಹರಿಯುತ್ತದೆ. ನಾವೇ ಅದರಲ್ಲಿ ಭಾಗಿಯಾದ ಹಾಗೆ ಅನಿಸುತ್ತದೆ.
‎
‎ಅಮೋಘ ಸಂಗೀತ ಕೇಳಿದಾಗ ನಾವು ಅದರಲ್ಲಿ ಲೀನವಾಗುತ್ತೇವೆ,
‎ಹೊಸ ಕಲ್ಪನಾ ಪ್ರಪಂಚದಲ್ಲಿ ಮುಳುಗೇಳುತ್ತೇವೆ….
‎
‎ಅದಕ್ಕೆ ವಿರುದ್ಧವಾಗಿ,
‎ಆತ್ಮೀಯರ ಸಾವು, ಅಪಘಾತ, ಆತ್ಮಹತ್ಯೆ ನಮ್ಮನ್ನು ಗಾಢವಾಗಿ ಕಾಡುತ್ತದೆ.
‎
‎ಸುತ್ತಮುತ್ತಲ ಕೊಳಕು ಪರಿಸರ ಅಸಹ್ಯ ಹುಟ್ಟಿಸುತ್ತದೆ.
‎
‎ದಿನನಿತ್ಯದ ಭ್ರಷ್ಟತೆಯ ವಿಷಯಗಳು ಕೋಪ ತರಿಸುತ್ತವೆ.
‎
‎ಸಾರ್ವಜನಿಕ ಅಸಭ್ಯ ವರ್ತನೆಗಳು, ಕೊಲೆ ದರೋಡೆಗಳು ಜಿಗುಪ್ಸೆ ಹುಟ್ಟಿಸುತ್ತವೆ.
‎
‎ವಂಚನೆ, ದೌರ್ಜನ್ಯಗಳು ಬಹಳವಾಗಿ ಕಾಡುತ್ತವೆ.
‎
‎ಆದರೆ,
‎ಈ ಭಾವನೆಗಳು ತಾತ್ಕಾಲಿಕ ಮತ್ತು ಆ ಕ್ಷಣದ ಪ್ರತಿಕ್ರಿಯೆಗಳಾಗಿರುತ್ತವೆ.
‎
‎ವಾಸ್ತವಕ್ಕೆ, ದಿನನಿತ್ಯದ ಬದುಕಿಗೆ ಮರಳಿದಾಗ, ನಾವು ಇದೇ ವ್ಯವಸ್ಥೆಯ ಭಾಗವಾಗುತ್ತೇವೆ.
‎
‎ನಮ್ಮನ್ನು ಪುಳಕಗೊಳಿಸಿದ ಅಥವಾ,
‎ಕಾಡಿದ ವಿಷಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ.
‎
‎ತಮ್ಮನ್ನು ಪುನರ್ ರೂಪಿಸಿಕೊಳ್ಳಲು ಬಹುತೇಕರಿಗೆ ಆಗುವುದಿಲ್ಲ.
‎ಅದರಿಂದ ಪ್ರೇರಣೆಗೊಳ್ಳಲು, ಹೊಸತನ್ನು ಹುಡುಕಲು ವ್ಯವಸ್ಥೆ ಬಿಡುವುದಿಲ್ಲ.
‎
‎ಬೆರಳೆಣಿಕೆಯ ಜನ ಬಿಟ್ಟರೆ ಬೇರೆಲ್ಲರೂ ತಾತ್ಕಾಲಿಕ ಭಾವನೆ ವ್ಯಕ್ತಪಡಿಸಿ, ಆಮೇಲೆ ಎಲ್ಲಾ ಮರೆತು ಸಹಜವಾಗಿ ಬದುಕುತ್ತಾರೆ.
‎ಇವರೇ ಸಾಮಾನ್ಯರು.
‎
‎ಆದರೆ ಮನಕಲುಕಿದ ಭಾವನೆಗಳನ್ನು, ಆದರ್ಶಗಳನ್ನು, ಪ್ರೇರಣೆಗಳನ್ನು,
‎ನಿಜ ಜೀವನದಲ್ಲಿ ಅಳವಡಿಸಿಕೊಳ್ಳವವರೇ ಅಸಾಮಾನ್ಯರು.
‎
‎ಮನಸ್ಸನ್ನು ಕಾಡುವ ವಿಷಯಗಳನ್ನು ಹಾಗೇ ಮರೆತು ಬಿಡದೆ ನಿಜ ಜೀವನದಲ್ಲೂ,
‎ಅನುಸರಿಸಲು ಪ್ರಯತ್ನಿಸೋಣ. ಅಸಾಮಾನ್ಯರಾಗಲು ಸಾಮಾನ್ಯರಾದ ನಾವೆಲ್ಲರೂ ಪ್ರಯತ್ನಿಸೋಣ.
‎
‎ನಿರಾಸೆ ಬೇಡ.ಒಳ್ಳೆಯ ದಿನಗಳು ಮುಂದಿವೆ,
‎ಆ ದಿನಗಳ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ ……….
‎
‎ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
‎ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
‎ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
‎ಮನಸ್ಸುಗಳ ಅಂತರಂಗದ ಚಳವಳಿ,
‎ವಿವೇಕಾನಂದ. ಎಚ್. ಕೆ.
‎9663750451…….
‎9844013068…….

About Author

Leave a Reply

Your email address will not be published. Required fields are marked *

You may have missed