ಡಾ.ರಾಜ್ ನೆನಪಿನಂಗಳದ ಚಿತ್ರಪಠದಲ್ಲಿ ಚಿಕ್ಕಮಗಳೂರಿನ ಪತ್ರಕರ್ತರು. ಇಂದು ಕರುನಾಡಿನಾದ್ಯಂತ ನಟಸಾರ್ವಭೌಮ ಡಾ. ರಾಜಕುಮಾರ್ ಅವರ ೯೭ನೇ ಜನ್ಮದಿನಾಚರಣೆ….
1 min read
ಅವಿನ್ ಟಿವಿ ಸುದ್ದಿಜಾಲ ✍️: ಡಾ.ರಾಜ್ ನೆನಪಿನಂಗಳದ ಚಿತ್ರಪಠದಲ್ಲಿ ಚಿಕ್ಕಮಗಳೂರಿನ ಪತ್ರಕರ್ತರು.
ಇಂದು ಕರುನಾಡಿನಾದ್ಯಂತ ನಟಸಾರ್ವಭೌಮ ಡಾ. ರಾಜಕುಮಾರ್ ಅವರ ೯೭ನೇ ಜನ್ಮದಿನಾಚರಣೆ….
ಚಿಕ್ಕಮಗಳೂರು ಏ ೨೪: ತಗ್ಗಿ ಬಗ್ಗಿ ಬಾಗಿ ನಡೆಯುವುದು ಈ ನೆಲದ ಸಂಸ್ಕಾರ, ಇಂತಹ ಸಂಸ್ಕಾರವನ್ನು ಒಂದು ಆಭರಣದಂತೆ ಧರಿಸಿಕೊಂಡು ಬಾಗಿ ನಡೆಯುತ್ತಾ , ಅಭಿಮಾನಿಗಳೇ ನನ್ನ ದೇವರೆಂದು ಕರೆಯುತ್ತಾ ತಲೆಬಾಗಿ ನಡೆಯುವ ಸಂಸ್ಕೃತಿಯನ್ನು ವೈಯಕ್ತಿಕವಾಗಿ ಹಾಗೂ ಸಿನಿಮಾದ ಮೂಲಕ ಬಿತ್ತಿ ಬೆಳೆದವರು ನಟಸಾರ್ವಭೌಮ ಡಾ.ರಾಜಕುಮಾರ್ ಅವರು.
ಒಂದರ್ಥದಲ್ಲಿ ನಿಜವಾಗಿಯೂ ಕನ್ನಡ ನಾಡಿನ ಮಣ್ಣಿನ ಮಗ ಡಾ. ರಾಜಕುಮಾರ್ ಅವರು ಎನ್ನಬಹುದು, ರೈತಾಪಿ ಜೀವನವನ್ನು ಪ್ರಧಾನ ಕಥಾ ವಸ್ತುವಾಗಿ ಇಟ್ಟುಕೊಂಡು ತೆಗೆದ ಬಂಗಾರದ ಮನುಷ್ಯ ಸಿನಿಮಾವನ್ನು ನೋಡಿ, ಈ ಸಿನಿಮಾದಿಂದ ಪ್ರಭಾವಗೊಂಡು ಕೈಗೆ ಸಿಕ್ಕಿದ್ದ ಸರ್ಕಾರಿ ನೌಕರಿಯನ್ನು ಬಿಟ್ಟು ರೈತಾಪಿ ಜೀವನವನ್ನು ಕಟ್ಟಿಕೊಂಡ ಹಲವು ಉದಾಹರಣೆಗಳು ನಮ್ಮ ನಡುವೆ ಇವೆ, ಡಾ. ರಾಜ್ ಕುಮಾರ್ ಅವರು ಬಹುಶಃ ಅವರ ಅಭಿನಯದ ಚಲನಚಿತ್ರಗಳಲ್ಲಿ ಬಹುಪಾಲು ಮಣ್ಣನ್ನು ಕುರಿತು, ಮಣ್ಣಿನ ನಡುವಿನ ರೈತಾಪಿ ಬದುಕನ್ನು ಕುರಿತು ಅಭಿನಯಿಸಿರುವ ಚಲನಚಿತ್ರಗನ್ನು ಗಮನಿಸಿದರೆ ಡಾ. ರಾಜ್ ಅವರಿಗೆ ಮಣ್ಣಿನ ಮೇಲೆ ಅದೆಷ್ಟು ಆಳವಾದ ಮಮಕಾರವಿತ್ತು ಎಂಬುದು ಅರಿವಾಗುತ್ತದೆ.
ಇಂತಹ ಡಾ. ರಾಜಕುಮಾರ್ ಅವರ ಬಗ್ಗೆ ಹಿಂದಿ ಚಲನಚಿತ್ರ ಜಗತ್ತಿನ ಮೇರು ನಟ ಅಮಿತಾ ಬಚ್ಚನ್ ಅವರು ಆಡಿರುವ ಮಾತು ಈ ಸಂದರ್ಭದಲ್ಲಿ ಮತ್ತೊಮ್ಮೆ ನೆನಪಾಗುತ್ತಿದೆ.
ನಟ ಸಾರ್ವಭೌಮ ಡಾ. ರಾಜ್ ಹಾಗೂ ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರೊಂದಿಗಿರುವ ಛಾಯಾಚಿತ್ರ ಕಂಡಾಗ ಕನ್ನಡ ಚಿತ್ರರಸಿಕರ ಪಾಲಿಗೆ ರೋಮಾಂಚನದ ಸಿಂಚನವಾಗದೆ ಇರದು.
ಡಾ ರಾಜ್ ಅವರು ಚಿತ್ರರಂಗದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದಾಗ ಅವರ ಬಗ್ಗೆ ನಿಮಗೇನನ್ನಿಸುತ್ತೆ ಅಂತ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನು ಮಾಧ್ಯಮದವರು ಕೆಲವು ವರುಷಗಳ ಹಿಂದೆ ಪ್ರಶ್ನೆ ಮಾಡಿದಾಗ “ಕನ್ನಡ ಚಿತ್ರರಂಗದ ಡಾ ರಾಜ್ ಅವರು ಹಿಂದಿ ಚಿತ್ರರಂಗಕ್ಕೆ ಬಂದಿದ್ದರೆ ನಾವು ಯಾರೂ ಚಿತ್ರ ನಟರಾಗಿ ಮುಂದೆ ಬರುತ್ತಿರಲಿಲ್ಲ “ಎಂದು ಉದ್ಗಾರ ತೆಗೆದದ್ದು ಸಾಮಾನ್ಯವಲ್ಲ. ಅವರ ಮಾತಿನಿಂದಲೇ ಡಾ ರಾಜ್ ಅವರ ಅಭಿನಯ ಕಲೆ ಎಂಥಾದ್ದು ಎಂಬುದು ವೇದ್ಯವಾಗುತ್ತದೆ.
ಸುಮಾರು 35 ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಪತ್ರಕರ್ತರು ಬೀರೂರಿನಲ್ಲಿ ಡಾ. ರಾಜ್ ಅವರನ್ನು ಭೇಟಿ ಮಾಡಿ ಅಭಿನಂದಿಸಿದ ಚಿತ್ರಪಟವನ್ನು ನ್ಯೂಸ್ ಕಿಂಗ್ ಡಾ ರಾಜ್ ಕುಮಾರ್ ಅವರ ಜನ್ಮದಿನಾಚರಣೆಯ ಈ ಸಂದರ್ಭದಲ್ಲಿ ತಮ್ಮೆಲ್ಲರಿಗೂ ಪರಿಚಯಿಸುತ್ತಿದೆ.
ಕನ್ನಡ ಚಲನಚಿತ್ರರಂಗಕ್ಕೆ ಸಾಕ್ಷಿಪ್ರಜ್ಞೆಯಂತಿರುವ ನಟ ಸಾರ್ವಭೌಮ ಡಾ ರಾಜ್ ಅವರಿಗೆ ಜನ್ಮದಿನದ ಈ ಸಂದರ್ಭದಲ್ಲಿ ಇಂದಿನ ಚಲನಚಿತ್ರ ನಿರ್ದೇಶಕರು ನಿರ್ಮಾಪಕರು ನಟರು ಹೆಣ್ಣಿನ ವಾಸನೆ ಇರುವ ಇಂದಿನ ಬಹುಪಾಲು ಚಲನಚಿತ್ರ ಗೀತೆಗಳಿಗೂ ಮಣ್ಣಿನ ವಾಸನೆ ಇದ್ದ ಅಂದಿನ ಚಲನಚಿತ್ರ ಗೀತೆಗಳಿಗೂ ಇರುವ ವ್ಯತ್ಯಾಸವನ್ನು ಅರಿತುಕೊಂಡು ಸಾಮಾಜಿಕ ಜವಾಬ್ದಾರಿಯನ್ನು ಚಲನಚಿತ್ರ ಕ್ಷೇತ್ರವು ಸಾಬೀತು ಮಾಡಬೇಕಾಗಿದೆ.
ಫೋಟೋ ಕೃಪೆ : ಕಂ.ಕ ಮೂರ್ತಿ. ಹಿರಿಯ ಪತ್ರಕರ್ತರು.
••••••••••••••
ಡಿ.ಎಂ.ಮಂಜುನಾಥಸ್ವಾಮಿ ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

