ಇಂದು ಗುಡ್ ಫ್ರೈಡೆ. ಅಂದರೆ ಶುಭ ಶುಕ್ರವಾರ. ಇಂದು ಭಗವಾನ್ ಯೇಸು ಕ್ರಿಸ್ತರು, ಕ್ರೈಸ್ತರು ನಂಬುವ ಆರಾಧ್ಯದೈವಪುತ್ರ ಯೇಸು ಮೃತರಾದ ದಿನ….
1 min read
ಇಂದು ಗುಡ್ ಫ್ರೈಡೆ. ಅಂದರೆ ಶುಭ ಶುಕ್ರವಾರ. ಇಂದು ಭಗವಾನ್ ಯೇಸು ಕ್ರಿಸ್ತರು, ಕ್ರೈಸ್ತರು ನಂಬುವ ಆರಾಧ್ಯದೈವಪುತ್ರ ಯೇಸು ಮೃತರಾದ ದಿನ. ದೇವರ ಪುತ್ರ ಮೃತರಾದ ದಿನವನ್ನು ಗುಡ್ ಎಂದು ಕರೆಯುವುದಾದರು ಏಕೆ? ಅದು ಶುಭವಾದದ್ದು ಹೇಗೆ? ಪ್ರಭು ಯೇಸು ಕ್ರಿಸ್ತರ ಜೀವನವನ್ನು ಅರ್ಥೈಸಿಕೊಂಡರೆ ನಮಗೆ ತಿಳಿಯುವಂತಹ ಸತ್ಯ ಸಂಗತಿ ಇದು; ಕ್ರಿಸ್ತರು ತಮಗಾಗಿ ಹುಟ್ಟಲಿಲ್ಲ, ತಮಗಾಗಿ ಈ ಲೋಕದಲ್ಲಿ ಬದುಕಲಿಲ್ಲ, ಅಂತೆಯೇ ಅವರು ತಮಗಾಗಿ ಸಾಯಲು ಇಲ್ಲ. ಹಾಗಾದರೆ ಅವರು ಮೃತಹೊಂದಿದ್ದು ಯಾರಿಗಾಗಿ? ಹೌದು, ಈ ಲೋಕದಲ್ಲಿ ಪಾಪಮಾಡಿದ ಪ್ರತಿ ಮನುಷ್ಯನಿಗಾಗಿ ಅವರು ಸತ್ತರು. ಪಾಪದ ಕೂಪದಿಂದ ಹೊರಬರಲಾಗದೆ ಪಾಪದ ಕೆಸರಿನಲ್ಲಿ ಒದ್ದಾಡುತ್ತಿದ್ದ ಮನುಷ್ಯನಿಗಾಗಿ ಅವರು ಸತ್ತರು. ಮನುಷ್ಯನನ್ನು ನರಕದಂಡನೆಯಿಂದ ಕಾಪಾಡಲು ಅವರು ತಮ್ಮ ಪ್ರಾಣವನ್ನೇ ಅರ್ಪಿಸಿದರು. ಪ್ರಭು ಯೇಸು ಕ್ರಿಸ್ತರು, ತನ್ನ ಗೆಳೆಯನಿಗಾಗಿ ಪ್ರಾಣಕೊಡುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಮತ್ತೊಂದಿಲ್ಲವೆಂದು ಬೋಧಿಸಿದ್ದರು. ಅಂತೆಯೇ ಈ ಲೋಕದ ಜನರೆಲ್ಲರನ್ನು ತನ್ನ ಗೆಳೆಯರೆಂದು ಪರಿಗಣಿಸಿ, ಅವರ ಪಾಪದ ಪರಿಣಾಮವಾದ ಮರಣವನ್ನು ಪ್ರಭು ಕ್ರಿಸ್ತರು ತಮ್ಮದಾಗಿಸಿಕೊಂಡರು. ಈ ಲೋಕವನ್ನು ಉಳಿಸಲು ಶತ್ರುವಶವಾಗಿ ಕ್ರೂರ ಶಿಲುಬೆ ಮರಣಕ್ಕೆ ಒಳಗಾದರು. ಕ್ರಿಸ್ತರಿಗೆ ಅದೊಂದು ಕರಾಳ ದಿನ. ಆದರೆ ಇದೇ ದಿನ ಪ್ರಭು ಕ್ರಿಸ್ತರು ಲೋಕವನ್ನು ಕಾಪಾಡಿದರು. ಈ ಕಾರಣ ಕ್ರಿಸ್ತರು ಮೃತರಾದ ದಿನವನ್ನು ಗುಡ್ ಫ್ರೈಡೆ ಎನ್ನುತ್ತೇವೆ.
ಅವರ ಅಂತ್ಯ ಸಂಭವಿಸಿದ್ದು ನಂಬಿಕೆಗೆ ದ್ರೋಹದಿಂದ. ಅವರ ಶಿಷ್ಯರಲ್ಲಿ ಒಬ್ಬನಾದ ಯೂದ ಇಸ್ಕರಿಯೋತನೇ ತನ್ನ ಗುರುವಿಗೆ ಹಣದ ಆಸೆಗೆ ದ್ರೋಹ ಬಗೆಯುತ್ತಾನೆ. ಮೂವತ್ತು ಬೆಳ್ಳಿನಾಣ್ಯಗಳ ಆಸೆಯಿಂದ ತನ್ನ ಗುರುವಿಗೆ ಮುತ್ತಿಟ್ಟು ಅವರನ್ನು ಯೆಹೂದ್ಯ ಸೈನಿಕರಿಗೆ ತೋರಿಸಿಕೊಡುತ್ತಾನೆ. ಅದೇ ರೀತಿ ಯೇಸುವಿನ ಶಿಷ್ಯರಲ್ಲಿ ಒಬ್ಬನಾದ ಪೇತ್ರ, ಮೂರು ವರ್ಷಗಳ ಕಾಲ ಆತ ಯಾರೊಂದಿಗಿದ್ದನೋ, ಯಾರಿಂದ ಎಲ್ಲವನ್ನು ಕಲಿತನೋ ಅವರನ್ನೇ ಇವನಾರೋ ನಾನರಿಯೇ ಎಂದು ತನ್ನ ಗುರುವನ್ನೇ, ನ್ಯಾಯಸಭೆಯಲ್ಲಿ ಪರಾಧೀನ ಮಾಡಿದನು. ಮನುಷ್ಯನ ಸಹಜ ಗುಣವೇ ತಪ್ಪುಮಾಡುವುದು. ಪೇತ್ರ, ಯೂದ ಇಬ್ಬರೂ ತಪ್ಪು ಮಾಡಿದರು. ಆದರೆ ಪೇತ್ರ ತಾನು ಮಾಡಿದ ದ್ರೋಹಕ್ಕಾಗಿ ಪಶ್ಚಾತ್ತಾಪಪಟ್ಟನು. ಆದರೆ ಯೂದ ತಾನು ಮಾಡಿದ ತಪ್ಪಿಗೆ ಕ್ಷಮೆಯಿಲ್ಲವೆಂದು ಹತಾಶೆಯಿಂದ ತನ್ನನ್ನೇ ಹತ್ಯೆಮಾಡಿಕೊಂಡನು.
ಈ ಶುಭಶುಕ್ರವಾರ ಕ್ರೈಸ್ತರಿಗೆ ಒಂದು ಮಹತ್ವದ ದಿನ. ಈ ದಿನದಂದು ಎಲ್ಲಾ ಕ್ರೈಸ್ತಭಕ್ತರು ಯೇಸುವನ್ನು ಯಾವ ರೀತಿ ಹಿಂಸಿಸಿದರೋ, ಯಾವ ರೀತಿ ಅವರನ್ನು ಶಿಲುಬೆ ಏರಿಸಿದರೋ, ಆ ದಾರುಣ ಘಟನೆಯನ್ನು ಇಂದು ಧ್ಯಾನಿಸುತ್ತಾರೆ. ಇಂದು ಕ್ರೈಸ್ತರು ಉಪವಾಸವಿದ್ದು, ಕ್ರಿಸ್ತರು ಅವರಿಗಾಗಿ ಮೃತಹೊಂದಿದ ಈ ಘಟನೆಯನ್ನು ಸ್ಮರಿಸುತ್ತಾರೆ. ಕ್ರೈಸ್ತ ಧರ್ಮದ ಮತ್ತೊಂದು ಮುಖ್ಯ ಅಂಶವನ್ನು ನಾವು ಇಲ್ಲಿ ತಿಳಿದುಕೊಳ್ಳಬೇಕು. ಯೇಸು ಕ್ರಿಸ್ತರು ಸತ್ತು ಸಮಾಧಿ ಸೇರಿದರು. ಆದರೆ ಅವರು ಮತ್ತೆ ಜೀವಂತರಾಗಿ, ಮೃತ್ಯುಂಜರಾಗಿ, ಪುನರುತ್ಥಾನಿಯಾಗಿ ಮೂರನೆಯ ದಿನ ಸಮಾಧಿಯಿಂದ ಹೊರಬಂದರು. ಹಾಗಾಗೀ ಕ್ರೈಸ್ತರು ತಮ್ಮ ಧರ್ಮದಲ್ಲಿ ಭರವಸೆಗೆ ಕೇಂದ್ರ ಸ್ಥಾನವನ್ನು ನೀಡಿದ್ದಾರೆ. ಕ್ರಿಸ್ತರ ಸಾವು ಕ್ಷಣಿಕ ಆದರೆ ಅವರ ಪುನರುತ್ಥಾನ ನಿಶ್ಚಿತ, ಶಾಶ್ವತ ಎಂಬ ಸತ್ಯವನ್ನು ಗುಡ್‌ಫ್ರೈಡೆ ನಮ್ಮ ಮುಂದೆ ಇಡುತ್ತಿದೆ.
ಡಾ|| ಟಿ. ಅಂತೋಣಿ ಸ್ವಾಮಿ, ಚಿಕ್ಕಮಗಳೂರಿನ ಧರ್ಮಾಧ್ಯಕ್ಷರು

