ಕಾವಲುಗಾರರಾಗಿ ಮಾತ್ರವಲ್ಲ ನವ ಸಮಾಜದ ಉತ್ಕೃಷ್ಟತೆಗಾಗಿ ಮಾಧ್ಯಮಗಳು ಮಾದರಿಯಾಗಿರಬೇಕು:..
1 min read
ಅವಿನ್ ಟಿವಿ ಸುದ್ದಿಜಾಲ ✍️: ಕಾವಲುಗಾರರಾಗಿ ಮಾತ್ರವಲ್ಲ ನವ ಸಮಾಜದ ಉತ್ಕೃಷ್ಟತೆಗಾಗಿ ಮಾಧ್ಯಮಗಳು ಮಾದರಿಯಾಗಿರಬೇಕು:
ಎ ಐ ಕೃತಕ ಬುದ್ಧಿಮತ್ತೆ, ನೂತನ ತಂತ್ರಜ್ಞಾನಗಳ ಬಳಕೆ ಕುರಿತ ತರಬೇತಿ ಶಿಬಿರದಲ್ಲಿ ಶಾಸಕ ತಮ್ಮಯ್ಯ ಸಲಹೆ.
ಚಿಕ್ಕಮಗಳೂರು ಮಾ ೧೪.
ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಡಿ. ತಮ್ಮಯ್ಯ ಸಲಹೆ ಮಾಡಿದರು.
ಹೊನ್ನ ಬಿತ್ತೇವು ಹೊಲಕೆಲ್ಲ ಬಳಗ ಮತ್ತು ನ್ಯೂಸ್ ಕಿಂಗ್ ಸುದ್ದಿವಾಹಿನಿ ವತಿಯಿಂದ ನಗರದ ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿರುವ ಎ ಐ ಕೃತಕ ಬುದ್ಧಿಮತ್ತೆ ಹಾಗೂ ನೂತನ ತಂತ್ರಜ್ಞಾನಗಳ ಬಳಕೆ ಕುರಿತ ಎರಡು ದಿನಗಳ ತರಬೇತಿ ಶಿಬಿರಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಹೊಸ ಹೊಸ ಆವಿಷ್ಕಾರಗಳು, ತಂತ್ರಜ್ಞಾ ಗಳಿಂದಾಗಿ ಮಾಧ್ಯಮ ಕ್ಷೇತ್ರ ಅತಿ ಕಡಿಮೆ ಸಮಯದಲ್ಲಿ ಬಹಳಷ್ಟು ವೇಗವಾಗಿ ಬೆಳೆದಿದೆ ಎಂದರು.
ಸುದ್ದಿಗಳನ್ನು ಜನರಿಗೆ ಶೀಘ್ರವಾಗಿ ತಲುಪಿಸುವ ಉದ್ದೇಶದಿಂದ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ ಯಾದರೂ ದೃಶ್ಯ ಮಾಧ್ಯಮಗಳಲ್ಲಿ ಕೆಲವೊಮ್ಮೆ ಸುಳ್ಳು ಸುದ್ದಿಗಳು ಬಿತ್ತ ರವಾಗುತ್ತಿರುವುದರ ಬಗ್ಗೆ ಕೆಲವರಲ್ಲಿ ಅಸಮಾಧಾನವಿದೆ ಎಂದು ಹೇಳಿದರು.
ಸುದ್ದಿಗಳನ್ನು ಜನರಿಗೆ ಶೀಘ್ರವಾಗಿ ತಲುಪಿಸುವ ಭರದಲ್ಲಿ ದೃಶ್ಯ ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಬಿತ್ತರಿಸುವ ಕೆಲಸವನ್ನು ಮಾಡಬಾರದು, ಅಪಘಾತಗಳು, ಅವಘಡಗಳು ನಡೆದ ಸಂದರ್ಭದಲ್ಲಿ ದೃಶ್ಯ ಮಾಧ್ಯಮಗಳ ವರದಿಗಾರರು ವಿಡಿಯೋ ಚಿತ್ರೀ ಕರಿಸುವುದನ್ನು ಬಿಟ್ಟು ಜೀವ ಉಳಿಸಲು ಮುಂದಾಗಬೇಕು ಎಂದು ತಿಳಿಸಿದರು.
ಸರ್ಕಾರಗಳ,ಜನಪ್ರತಿನಿಧಿಗಳ, ಅಧಿಕಾರಿಗಳ ತಪ್ಪನ್ನು ಎತ್ತಿ ತೋರಿಸಿ ಎಚ್ಚರಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಹೇಳಿದರು.
ಕೆಪಿಸಿಸಿ ವಕ್ತಾರ ಹೆಚ್.ಹೆಚ್. ದೇವರಾಜ್ ಮಾತನಾಡಿ ವಿದ್ಯಾರ್ಥಿಗಳು ಮತ್ತು ಯುವಜನತೆ ಮೊಬೈಲ್ ನಿಂದ ಸಾಧ್ಯವಾದಷ್ಟು ದೂರವಿರಬೇಕು ಎಂದು ಕಿವಿಮಾತು ಹೇಳಿದರು.
ಮೊಬೈಲೇ ಜೀವನವಲ್ಲ, ಅದಿಲ್ಲದಿದ್ದರೂ ನಮ್ಮ ಬದುಕು ನಡೆಯುತ್ತದೆ ಎಂಬುದನ್ನು ಯುವ ಜನತೆ ಅರ್ಥಮಾಡಿಕೊಂಡು ಮೊಬೈಲನ್ನು ಮಿತವಾಗಿ ಬಳಸಬೇಕು ಎಂದು ಸಲಹೆ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಮಾತನಾಡಿ ನೂತನ ತಂತ್ರಜ್ಞಾನವನ್ನು ಯುವಜನತೆ ಸದುಪಯೋಗಪಡಿಸಿಕೊಳ್ಳಬೇಕು, ಸಮಾಜಕ್ಕೆ, ದೇಶಕ್ಕೆ ಒಳಿತಾಗುವ ರೀತಿ ತಂತ್ರಜ್ಞಾನವನ್ನು ಬಳಕೆ ಮಾಡಬೇಕು ಎಂದು ಮನವಿ ಮಾಡಿದರು.
ಸಿಪಿಐ ಕಾರ್ಯದರ್ಶಿ ಜಿ.ರಘು ಮಾತನಾಡಿ ಮೊಬೈಲ್ ಸೇರಿದಂತೆ ಎಲ್ಲಾ ತಂತ್ರಜ್ಞಾನಗಳು ಒಳ್ಳೆಯದಕ್ಕೆ ಮಾತ್ರ ಬಳಕೆಯಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ರಾಜ್ಯಾಧ್ಯಕ್ಷ ಎನ್.ರಾಜು ತಂತ್ರಜ್ಞಾನವನ್ನು ಸಮಾಜದ, ದೇಶದ ಒಳಿತಿಗೆ ಬಳಸಬೇಕು, ವಿದ್ಯಾರ್ಥಿಗಳು ಮತ್ತು ಯುವಜನತೆ ಈ ಶಿಬಿರದಲ್ಲಿ ಪಾಲ್ಗೊಂಡು ನೂತನ ತಂತ್ರಜ್ಞಾನಗಳ ಕುರಿತು ತಮ್ಮ ಅರಿವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರೈತ ಸಂಘದ ಮುಖಂಡ ಗುರುಶಾಂತಪ್ಪ ಎ ಐ ತಂತ್ರಜ್ಞಾನ ಸೇರಿದಂತೆ ನೂತನ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಬಗೆಯನ್ನು ತಿಳಿಸುವ ನಿಟ್ಟಿನಲ್ಲಿ ಈ ತರಬೇತಿ ಶಿಬಿರವನ್ನು ಸಂಪೂರ್ಣ ಉಚಿತವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ನಂತರ ನಡೆದ ತರಬೇತಿ ಶಿಬಿರದಲ್ಲಿ ಎ ಐ ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ ಕಡಿತದ ಸಾಧಕ ಬಾದಕ ಮತ್ತು ಪರಿಹಾರೋಪಾಯಗಳ ಕುರಿತು ಐ ಐ ಪಿ ಸಂಸ್ಥಾಪಕ ನಂಜೇಶ್ ಬೆಣ್ಣೂರು, ಜೆನ್ ಜಿ ಹೊಸ ತಲೆಮಾರಿನ ಪಲ್ಲಟಗಳು, ಅಂತರ್ಜಾಲದ ದುರುಪಯೋಗ ಹಾಗೂ ಪರಿಹಾರ ಕುರಿತು ಹಾಸನ ನವ್ಕಿನ್ ಇಂಜಿನಿಯರಿಂಗ್ ಕಾಲೇಜಿನ ಎ ಐ ವಿಭಾಗದ ಮುಖ್ಯಸ್ಥ ಪ್ರೊ ವಿವೇಕಾನಂದ ಹಾಗೂ ದೈನಂದಿನ ಬದುಕಿನಲ್ಲಿ ಎ ಐ ತಂತ್ರಜ್ಞಾನ ಬಳಕೆ ಕುರಿತು ನಂಜೇಶ್ ಬೆಣ್ಣೂರು ತರಬೇತಿ ನೀಡಿದರು.
ವಿದ್ಯಾರ್ಥಿ ಯುವಜನರು, ರೈತಪರ ದಲಿತಪರ ಕನ್ನಡಪರ ಸಂಘಟನೆಗಳ ಪ್ರಮುಖರು, ವಿವಿಧ ರಾಜಕೀಯ ಪಕ್ಷದ ಮುಖಂಡರು,ಬರಹಗಾರರು, ಸಾಹಿತಿಗಳು, ಶಿಕ್ಷಕರು, ಉಪನ್ಯಾಸಕರು, ಮಾಧ್ಯಮದ ಮಿತ್ರರು ಸೇರಿದಂತೆ ನೂರಕ್ಕೂ ಹೆಚ್ಚು ಜನ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವೀಶ್ ಕ್ಯಾತನಬೀಡು, ಪಿಳ್ಳೆನಹಳ್ಳಿ ವಿಜಯಕುಮಾರ್. ಜೆಡಿಎಸ್ ಮುಖಂಡ ಹೆಚ್.ಎಸ್. ಮಂಜಪ್ಪ, ನಟರಾಜ್ ಎಸ್ ಕೊಪ್ಪಲು. ರವಿ ಜಾನ್ಸಾಲೆ , ಆರದವಳ್ಳಿ ವೀರಭದ್ರಚಾರ್, ಡಿ ಎಂ ಮಂಜುನಾಥಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
•••••••••••••••••••
ಡಿ.ಎಂ.ಮಂಜುನಾಥಸ್ವಾಮಿಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

