ಚಿಕ್ಕಮಗಳೂರಿನಲ್ಲಿ ನವಮಾಧ್ಯಮಗಳ ತರಬೇತಿ ಶಿಬಿರ ಇಂದಿನಿಂದ ಆರಂಭ….
1 min read
ಅವಿನ್ ಟಿವಿ ಸುದ್ದಿಜಾಲ ✍️: ಚಿಕ್ಕಮಗಳೂರಿನಲ್ಲಿ ನವಮಾಧ್ಯಮಗಳ ತರಬೇತಿ ಶಿಬಿರ ಇಂದಿನಿಂದ ಆರಂಭ.
ಚಿಕ್ಕಮಗಳೂರು ಮಾ ೧೪: ಇದು ಯುದ್ಧದ ಸಮಯ, ಸಮರದ ಜ್ವರ ಇಡೀ ಜಗತ್ತನ್ನು ಸೋಂಕಿನಂತೆ ಬಾಧಿಸುತ್ತಿದೆ, ದ್ವೇಷದಿಂದ ದೇಶ ಗೆಲ್ಲಲು ಸಾಧ್ಯವಿಲ್ಲ , ಬಾಂಬು ಬಂದೂಕನ್ನು ಬದಿಗೊತ್ತಿ ಪ್ರೀತಿ ಕಾರುಣ್ಯದ ಮೂಲಕ ನಿಮ್ಮ ನಿಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿ ಎಂದು AI ಅಂದರೆ ಕೃತಕ ಬುದ್ಧಿಮತ್ತೆ ಜಗತ್ತಿಗೆ ತಿಳಿ ಹೇಳುತ್ತಿದೆಯಂತೆ ಎಂದರೆ ಯಾರು ಹುಬ್ಬೇರಿಸಬೇಡಿ.
ಮನುಷ್ಯನಂತೆಯೇ ಚಿಂತಿಸುವ ಪ್ರತಿಕ್ರಿಸುವ ಸಾಮರ್ಥ್ಯವುಳ್ಳ ತಂತ್ರಜ್ಞಾನವೇ ಕೃತಕ ಬುದ್ಧಿಮತ್ತೆ.
ಇಂತಹ ಕೃತಕ ಬುದ್ಧಿಮತ್ತೆಯು ಯಾವುದೇ ವೇತನವಿಲ್ಲದೆ, ಬಡ್ತಿ ಇಲ್ಲದೆ, ರಜೆ ಹಾಕದೆ, ಮೈಗಳ್ಳತನ ಮಾಡದೆ, ಸದಾ ಚುರುಕಾಗಿ ಹೇಳಿದ ಕೆಲಸಗಳನ್ನು ಕ್ಷಣಾರ್ಧದಲ್ಲಿ ಮಾಡಿ ಮುಗಿಸುವ ಮಹಾ ಮೇಧಾವಿಯಾದ ಈ ಕೃತಕ ಬುದ್ಧಿಮತ್ತೆಯು ಇಂದು ಇದು ಇಂತಹ ಅನೇಕ ಹೊಗಳಿಕೆಗೆ ಪಾತ್ರವಾಗಿಬಿಟ್ಟಿದೆ.
ದಿನದ 24 ಗಂಟೆಯೂ ಆದೇಶಕ್ಕಾಗಿ ಕಾಯುತ್ತಾ ದಣಿವರಿಯದೆ ದುಡಿಯುವ AI ಎಂಬ ಈ ಆಪ್ತ ಸೇವಕನಿಂದ ಜೀವಂತ ಮನುಷ್ಯ ತನ್ನ ಸೃಜನಶೀಲತೆಯನ್ನು ಕಳೆದುಕೊಂಡು, ಸಮಾಜದಲ್ಲಿ ನಿರುದ್ಯೋಗ ಸಮಸ್ಯೆ ಉದ್ಭವಿಸಿ, ಅನೇಕ ಆತಂಕಗಳಿಗೆ ಕಾರಣವಾಗಲಿದೆ ಎಂಬ ಮಾತು ಇನ್ನೊಂದೆಡೆ ಜಗತ್ತಿನ ತುಂಬಾ ಚರ್ಚೆಗೆ ಗ್ರಾಸವಾಗಿದೆ.
ಇತರ ಹೊಗಳಿಕೆ ಮತ್ತು ತೆಗಳಿಕೆಗಳು ವಿದ್ಯಾರ್ಥಿ ಯುವ ಸಮುದಾಯವನ್ನು ಸೇರಿದಂತೆ ನಾಡಿನ ಪ್ರಜ್ಞಾವಂತರನ್ನು ಕೂಡ ದ್ವಂದ್ವಕ್ಕೆ ದೂಡಿದೆ.
ಇನ್ನೂ,
ಯಾವುದೇ ರಾಜಕೀಯ ಪಕ್ಷಗಳ ಸೋಂಕು ಇಲ್ಲದೆ, ಪೂರ್ವಗ್ರಹ ಪೀಡಿತದಿಂದ ಮುಕ್ತವಾಗಿ ನಿಷ್ಪಕ್ಷಪಾತದಿಂದ ಸಮಾಜದ ಕಣ್ಣಾಗಿ ಕೆಲಸ ಮಾಡಬೇಕಾಗಿದ್ದ ಮಾಧ್ಯಮ ರಂಗ ಉದ್ಯಮವಾದ ಕಾರಣ ಇಂದು ಏನೆಲ್ಲವನ್ನು ಈ ಮಾಧ್ಯಮ ರಂಗ ದಿನದಿಂದ ದಿನಕ್ಕೆ ಕಳೆದುಕೊಳ್ಳುತ್ತಾ ಹೋಗುತ್ತಿದೆ ಎಂಬ ಆತಂಕದ ಅವಲೋಕನಕ್ಕೆ ಈ ಶಿಬಿರ ಮುಖಾಮುಖಿಯಾಗಲಿದೆ.
ಯಾವುದೇ ಶುಲ್ಕವಿಲ್ಲದೆ ಉಚಿತ ವಸತಿ ಮತ್ತು ಊಟ ದೊಂದಿಗೆ ತರಬೇತಿಯನ್ನು ಹಮ್ಮಿಕೊಂಡಿರುವ ಹೊನ್ನ ಬಿತ್ತೇವು ಹೊಲಕೆಲ್ಲ ತಂಡ ಮತ್ತು ನ್ಯೂಸ್ ಕಿಂಗ್ ಸುದ್ದಿ ವಾಹಿನಿಯು ಈ ಎರಡು ದಿನದ ಶಿಬಿರದಲ್ಲಿ ವಿಷಯ ತಜ್ಞರು,ಪರಿಣಿತರನ್ನು ಕರೆಸಿ ಸಂವಾದ ಏರ್ಪಡಿಸಿದೆ.
ವಿದ್ಯಾರ್ಥಿ ಯುವಜನರು, ಲೇಖಕ ಲೇಖಕಿಯರು , ರೈತಾಪಿ ವರ್ಗ, ಶಿಕ್ಷಕರು, ಉಪನ್ಯಾಸಕರು, ಮಾಧ್ಯಮದ ಮಿತ್ರರು, ಚಳುವಳಿಗಾರರು, ಸಂಘಟಕರು , ಕನ್ನಡಪರ ದಲಿತಪರ ರೈತಪರ ಹೋರಾಟಗಾರರು,ಕವಿ ಕಲಾವಿದರು ಸಾಹಿತಿಗಳು ಸೇರಿದಂತೆ ವಿಭಿನ್ನ ವರ್ಗದವರು ಪಾಲ್ಗೊಂಡು ಹಲವು ಸಂಗತಿಗಳಿಗೆ ಈ ಶಿಬಿರ ಮುಖಾಮುಖಿಯಾಗಲಿದೆ.
•••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

