ಕ್ಯಾತನಬೀಡು ಪ್ರತಿಷ್ಠಾನದ ವತಿಯಿಂದ ಮಣ್ಣು ಮತ್ತು ಮಾನವಸಂಬಂಧದ ಬಗ್ಗೆ ಚಿಂತನ ಮಂಥನ.*…
1 min read
ಅವಿನ್ ಟಿವಿ ಸುದ್ದಿಜಾಲ ✒️: *ಕ್ಯಾತನಬೀಡು ಪ್ರತಿಷ್ಠಾನದ ವತಿಯಿಂದ ಮಣ್ಣು ಮತ್ತು ಮಾನವಸಂಬಂಧದ ಬಗ್ಗೆ ಚಿಂತನ ಮಂಥನ.*
ನೀರಿನ ವಿಳಾಸ ತಿಳಿಯುವುದು ರಸ್ತೆಯಿಂದಲ್ಲ, ನಕ್ಷೆಯಿಂದಲ್ಲ ಅದು ದಾಹದಿಂದ…. ಎಂಬುದು ಕವಿಯೊಬ್ಬರ ಮಾತು.
ಹಾಗೆ,
ದುಡಿದುಣ್ಣುವ ಸಂಸ್ಕೃತಿಯನ್ನು ಪ್ರತಿಪಾದಿಸಿದ 12ನೇ ಶತಮಾನದ ವಚನಕಾರರು ಚಿನ್ನದ ಅರಮನೆಯ ಹಂಗಿಗಿಂತ ಮಣ್ಣಿನ ಮಹಾಮನೆಯ ಮಹತ್ವವನ್ನು ಜಗತ್ತಿಗೆ ಎತ್ತಿ ಹಿಡಿದರು.
ಬದಲಾದ ಕಾಲಘಟ್ಟದಲ್ಲಿ , ಬದಲಾವಣೆಯು ಜಗದ ನಿಯಮ ಎಂದು ಹೇಳುತ್ತಾ,ಈ ನೆಲ ಜಲದಿಂದ ಬದುಕನ್ನು, ನಾಗರಿಕತೆಯನ್ನು, ಸಂಸ್ಕೃತಿಯನ್ನು ರೂಪಿಸಿಕೊಂಡಿದ್ದ ಮನುಷ್ಯ,ಇಂದು ಆಧುನಿಕತೆ ಮತ್ತು ತಂತ್ರಜ್ಞಾನದ ಹೆಸರಿನಲ್ಲಿ ಸಹಜ ಮತ್ತು ಸ್ವಾಭಾವಿಕ ಕೃಷಿಗೆ ವಿಮುಖವಾಗಿ ಈ ಮಣ್ಣಿನ ಸಂಬಂಧಗಳನ್ನೆಲ್ಲ ಸಡಿಲಗೊಳಿಸಿಕೊಳ್ಳುತ್ತಾ ಸಾಗುತ್ತಿರುವ ಕಾರಣ ತನ್ನ ಸಮಾಧಿಯನ್ನು ತಾನೇ ತೋಡಿಕೊಳ್ಳುತ್ತಾ ಹೋಗುತ್ತಿದ್ದಾನೆ/ಳೆ.
ಮನುಷ್ಯರಿಗೆ ಜೀವವಿರುವಂತೆ ಮಣ್ಣಿಗೂ ಕೂಡ ಜೀವವಿದೆ, ಗಾಳಿ ಮಳೆ ಚಳಿ ಬಿಸಿಲಿಗೆ ತೆರೆದುಕೊಂಡು ಮನುಷ್ಯರಂತೆಯೇ ಈ ಮಣ್ಣು ಸಹ ಉಸಿರಾಡುತ್ತದೆ.
ಇಂತಹ ಮಣ್ಣಿಗೆ ಪ್ರಕೃತಿಯಲ್ಲಿ ಅಗಾಧವಾದ ಶಕ್ತಿ ಇದೆ, ಪ್ರಕೃತಿಯಲ್ಲಿ ಎಲ್ಲ ಜೀವಿಗಳು ವಿಷಕ್ಕೆ ಹೆದರುತ್ತವೆ, ಆದರೆ ಮನುಷ್ಯ ಜೀವಿ ಮಾತ್ರ ತನ್ನ ವಿಷವನ್ನು ತಾನೇ ತಯಾರಿಸಿಕೊಂಡು, ಅದನ್ನು ಈ ಮಣ್ಣಿಗೆ ಬೆರೆಸಿ, ಮಣ್ಣು ಮತ್ತು ಈ ಮಣ್ಣಿನಲ್ಲಿ ತಾನು ಬೆಳೆದು ತಿನ್ನುವ ಆಹಾರ ಈ ಎರಡನ್ನು ವಿಷಮಯ ಮಾಡುತ್ತಿದ್ದಾನೆ. ಈ ಮೂಲಕ ಮಣ್ಣಿಗೆ ಪೂರಕವಾಗಿ ದುಡಿಯುತ್ತಿರುವ ಸೂಕ್ಷ್ಮಾಣು ಜೀವಿಗಳನ್ನು ಸರ್ವನಾಶ ಮಾಡುತ್ತಾ ಸಾಗುತ್ತಿದ್ದಾನೆ. ಸೂಕ್ಷ್ಮಾಣುಗಳನ್ನು ಸರ್ವನಾಶ ಮಾಡುವುದು ಎಂದರೆ , ಮನುಷ್ಯ ತನ್ನ ಸಮಾಧಿಯನ್ನು ತಾನೇ ತೋಡಿಕೊಳ್ಳುವುದು ಎಂದರ್ಥ. ಹೀಗೆ ಹಲವು ಕಾರಣಗಳಿಗಾಗಿ ಇಂದು ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಂಡು ದಿನದಿಂದ ದಿನಕ್ಕೆ ಬರಡಾಗುತ್ತಾ ಸಾಗುತ್ತಿದೆ. ಯಾವಾಗ ಮಣ್ಣು ಬರಡಾಗಲು ಆರಂಭವಾಯಿತೋ, ಅಂದಿನಿಂದಲೇ ಮನುಷ್ಯನ ಸಂತಾನೋತ್ಪತ್ತಿಯ ಫಲವತ್ತತೆಯೂ ಸಹ ಕಡಿಮೆಯಾಗಲಾರಂಭಿಸಿದೆ, ಈ ಕಾರಣ ದೈಹಿಕವಾಗಿ ಮತ್ತು ಮಾನಸಿಕವಾಗಿ ಮನುಷ್ಯ ಕುಬ್ಜಗೊಳ್ಳುತ್ತಾ ಸಾಗುತ್ತಿದ್ದಾನೆ .
“ಇದು ನಮಗೆ ಗೊತ್ತಿರಲಿ”…
ಮಣ್ಣಿನ ಮೂಲ ಶಿಲೆಗಳು, ಈ ಶಿಲೆಗಳು ಗಾಳಿ ಮಳೆ ಚಳಿ ಬಿಸಿಲಿಗೆ ಮಯೋಡ್ಡಿಕೊಂಡು, ಮುಂದೆ ಅವು ಸಣ್ಣ ಸಣ್ಣ ಕಣಗಳಾಗಿ ಪರಿವರ್ತನೆಗೊಂಡು , ಸಸ್ಯ ಮತ್ತು ಪ್ರಾಣಿಗಳ ಅವಶೇಷಗಳೊಂದಿಗೆ ವರ್ತಿಸಿ ಮಣ್ಣಿನ ರೂಪ ಪಡೆಯುತ್ತವೆ.
ಹೀಗೆ ಶಿಲೆಯು ಮಣ್ಣಿನ ರೂಪ ಪಡೆಯಲು ಕನಿಷ್ಠ ಹತ್ತುಸಾವಿರ ವರ್ಷದಿಂದ ಲಕ್ಷ ವರ್ಷಗಳು ಬೇಕಾಗುತ್ತದೆ ಎಂದು ಮಣ್ಣಿನ ವಿಜ್ಞಾನಿಗಳು ಹೇಳುತ್ತಾರೆ. ಹತ್ತು ಸಾವಿರ ವರ್ಷಗಳ ಕಾಲದಲ್ಲಿ ಸಂರಚನೆಯಾದ ಈ ಮಣ್ಣನ್ನು, ಅಧಿಕ ಇಳುವರಿ ಪಡೆಯಲು ಹೋಗಿ , ಹತ್ತು ಸಾವಿರ ವರ್ಷಗಳಿಂದ ರಚನೆಯಾದ ಈ ಮಣ್ಣನ್ನು ಕೃಷಿಯ ಹೆಸರಿನಲ್ಲಿ ಕೇವಲ ಹತ್ತೇ ನಿಮಿಷಗಳಲ್ಲಿ ವಿಷಮಯ ಮಾಡುತ್ತಿದ್ದಾನೆ ಈ ಮನುಷ್ಯ.
ಕೃಷಿಯನ್ನು ನಾವು ಆಳ್ವಿಕೆ ಮಾಡಲು ಹೋಗಬಾರದು, ಸುಮ್ಮನೆ ಅದರ ಜೊತೆ ಸಾಗಬೇಕು, ಕಾರಣ, ವಿಜ್ಞಾನ ತಂತ್ರಜ್ಞಾನ ಎಷ್ಟೇ ದೈತ್ಯವಾಗಿ ಬೆಳೆದಿದ್ದರೂ ಕೂಡ, ಏನೆಲ್ಲವನ್ನು ಕಂಡುಹಿಡಿದಿದ್ದರೂ ಸಹ ಒಂದು ಸಣ್ಣ ಗಾತ್ರದ ಸಾಸಿವೆಯನ್ನು ಅಥವಾ ಕಡಲೆ ಬೀಜವನ್ನು ತಯಾರು ಮಾಡಲು ಇದುವರೆಗೂ ಯಾವ ವಿಜ್ಞಾನಿಗೂ ಸಾಧ್ಯವಾಗಿಲ್ಲ.
ಎಲ್ಲ ವಿಜ್ಞಾನಕ್ಕೂ , ಎಲ್ಲ ಸಂಸ್ಕೃತಿಗೂ ಕೃಷಿ ಸಂಸ್ಕೃತಿಯೇ ತಾಯಿಯಾಗಿರುವುದರಿಂದ, ಇಂತಹ ತಾಯಿ ಬೇರಿಗೆ ಅಪಾಯ ಬಂದೊದಗಿದೆ, ಈ ಸತ್ಯವನ್ನು ಅರಿತು ಈಗ ನಾವು ಎಚ್ಚೆತ್ತುಕೊಳ್ಳದಿದ್ದರೆ , ಭವಿಷ್ಯದ ಜನಾಂಗದ ಮುಂದೆ ಈ ತಲೆಮಾರಿನವರಾದ ನಾವು ಶಾಪಗ್ರಸ್ತರಾಗಿ ಕಾಣುತ್ತೇವೆ.
ಈ ನಿಟ್ಟಿನಲ್ಲಿ , ಆಧುನಿಕತ ಕೃಷಿ ಪದ್ಧತಿಯೊಂದಿಗೆ, ಪಾರಂಪರಿಕ ಕೃಷಿ ಜ್ಞಾನವೂ ಎಷ್ಟು ಮುಖ್ಯ. ಈ ಎರಡನ್ನು ಸಂಯುಕ್ತವಾಗಿ ಒಟ್ಟೊಟ್ಟಿಗೆ ಯಾವ ನಿಟ್ಟಿನಲ್ಲಿ ಕೊಂಡಯ್ಯಬಹುದು, ಈ ಎರಡರ ಸಾಧಕ ಬಾಧಕಗಳೇನು ಎಂಬ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಕ್ಯಾತನಬೀಡು ಪ್ರತಿಷ್ಠಾನವು, ಯಶಸ್ವಿಯಾಗಿ ಕೃಷಿ ಮಾಡುತ್ತಿರುವ ಸ್ನೇಹಿತರ ಬಳಗದ ಸಹಕಾರ ಮತ್ತು ಭಾಗವಹಿಸುವಿಕೆಯೊಂದಿಗೆ , ಹಲವು ವಿಚಾರಗಳ ಮೂಲಕ, ರೈತಾಪಿ ಸಮುದಾಯದೊಡನೆ ಮುಖಾಮುಖಿಯಾಗಲು ಅಣಿಯಾಗಿದೆ.
ಇದೇ 2025ರ ಜುಲೈ 10ರಂದು, ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಲಕ್ಷಾಧಿಕೆರೆ ತಟದಲ್ಲಿರುವ ಜಾನ್ಸಾಲೆ ಎಸ್ಟೇಟ್ ನ ಯಶಸ್ವಿ ಯುವ ಕೃಷಿಕರಾದ ಸಿ. ಹೆಚ್. ರವೀಶ್ ಅವರ ಮನೆಯಂಗಳದಲ್ಲಿ, ಸಂಜೆ 4~00 ಘಂಟೆಗೆ, *ಹೊನ್ನಬಿತ್ತೇವು ಹೊಲಕೆಲ್ಲ* ಎಂಬ ಹೆಸರಿನೊಂದಿಗೆ ಈ ನೆಲ ಜಲ ಬದುಕು ಬವಣೆ ಕುರಿತು ರೈತರೊಂದಿಗೆ ಮಾತುಕತೆಯನ್ನು ಹಮ್ಮಿಕೊಂಡಿದೆ.
ಆಸಕ್ತರು ಈ ಮೇಲ್ಕಂಡ ಕಾರ್ಯಕ್ರಮದಲ್ಲಿ, ಬಿಡುವು ಮಾಡಿಕೊಂಡು ಭಾಗವಹಿಸಬೇಕೆಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ .
•••••••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ
✒️
ಚಿಕ್ಕಮಗಳೂರು

