लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
02/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಕ್ಕ, ತಮ್ಮನ ಕೈ ಹಿಡಿದುಕೊಂಡು ರಸ್ತೆ ದಾಟುತ್ತಾ ಇರುವಾಗ ತಮ್ಮ ಕೈ ಹಿಡಿದೇ ಅಕ್ಕನ ಹಿಂದೆ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಕಾ… ಕಾ… ಕಾ.. ಎಂದು ಆಕೆಯನ್ನು ಹಿಂಬಾಲಿಸುತ್ತಾ ಬರುವುದು,…

1 min read

ಮಾನವೀಯ ಸಂಬಂಧಗಳ ಹುಡುಕುತ್ತಾ………

ಅಕ್ಕ, ತಮ್ಮನ ಕೈ ಹಿಡಿದುಕೊಂಡು ರಸ್ತೆ ದಾಟುತ್ತಾ ಇರುವಾಗ ತಮ್ಮ ಕೈ ಹಿಡಿದೇ ಅಕ್ಕನ ಹಿಂದೆ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಕಾ… ಕಾ… ಕಾ.. ಎಂದು ಆಕೆಯನ್ನು ಹಿಂಬಾಲಿಸುತ್ತಾ ಬರುವುದು, ಅಲ್ಲಿ ಪಾದಚಾರಿ ಮಾರ್ಗದ ಸಣ್ಣ ಮೆಟ್ಟಿಲು ದಾಟಲು ತಮ್ಮನನ್ನು ಹಿಡಿದೆತ್ತಿ ಅವನನ್ನು ದಾಟಿಸುವುದು, ಅತ್ಯಂತ ಕಾಳಜಿಯಿಂದ ಅಂಗಡಿಯಿಂದ ತಂದಿದ್ದ ಲಾಲಿ ಪಪ್ಪಿನ ಪ್ಲಾಸ್ಟಿಕ್ ಕವರನ್ನು ನಿಧಾನವಾಗಿ ಬಿಡಿಸಿಕೊಟ್ಟು ತಮ್ಮನಿಗೆ ನೀಡಿ ಮತ್ತೆ ಆತನ ಕೈಹಿಡಿದು ಕರೆದುಕೊಂಡು ಹೋಗುವ ದೃಶ್ಯ…….

ಅಣ್ಣ, ತಂಗಿಯ ಕೈಹಿಡಿದು ತಾನು ಶಾಲೆಯ ದೊಡ್ಡ ಬ್ಯಾಗನ್ನು ಹೊತ್ತು ತಂಗಿಯ ಬ್ಯಾಗನ್ನೂ ಇನ್ನೊಂದು ಹೆಗಲಗೆ ಹಾಕಿಕೊಂಡು, ಆಕೆಯನ್ನು ಕೈಹಿಡಿದು ಕರೆದುಕೊಂಡು ಹೋಗುತ್ತಾ ಆಕೆ ಕೇಳುವ ಪ್ರಶ್ನೆಗಳಿಗೆ ತನ್ನದೇ ಭಾಷೆಯಲ್ಲಿ ಉತ್ತರಿಸುತ್ತಾ ಇಬ್ಬರೂ ಚಿಕ್ಕ ಮಕ್ಕಳು ಶಾಲಾ ಸಮವಸ್ತ್ರ ಧರಿಸಿ ಶಾಲೆಗೆ ಹೋಗುವ ದೃಶ್ಯ…..

ಅಪ್ಪ, ಹೆಗಲ ಮೇಲೆ ಮಗನನ್ನು ಹೊತ್ತುಕೊಂಡು ಎರಡೂ ಕೈಗಳಲ್ಲಿ ಎರಡು ಬ್ಯಾಗುಗಳನ್ನು ಹೊತ್ತು, ಮೊಣಕಾಲವರೆಗೂ ಎತ್ತಿ ಕಟ್ಟಿದ ಪಂಚೆ ಮತ್ತು ಹೆಗಲ ಮೇಲೆ ಟವಲು ಹಾಕಿಕೊಂಡು ರಸ್ತೆಯಲ್ಲಿ ನಡೆದು ಹೋಗುತ್ತಿರುವ ದೃಶ್ಯ……

ಅಮ್ಮ, ತಲೆ ಮೇಲೆ ಒಂದು ಬ್ಯಾಗು, ಕೈಯಲ್ಲೊಂದು ಬ್ಯಾಗು, ಆಕೆಯ ಸೀರೆ ಹಿಡಿದು ನಡೆದು ಬರುತ್ತಿರುವ ಮಗು, ಕಂಕುಳಲ್ಲಿ ಇನ್ನೊಂದು ಮಗುವನ್ನು ಎತ್ತಿಕೊಂಡು ಬಿರಬಿರನೇ ಬಸ್ ಹತ್ತಲು ಹೋಗುತ್ತಿರುವ ದೃಶ್ಯ…..

ತಾಯಿ, ಜ್ವರ ಬಂದ ಮಗುವಿನ ತಲೆಗೆ ತಣ್ಣನೆಯ ಬಟ್ಟೆ ಸುತ್ತಿ ತದೇಕ ಚಿತ್ತದಿಂದ ಮಗುವನ್ನು ನೋಡುತ್ತಾ ತನಗೆ ಬಂದ ಜ್ವರಕ್ಕಿಂತ ಹೆಚ್ಚು ಪರಿತಪಿಸುತ್ತಾ ಇರುವ ದೃಶ್ಯ…..

ಬಿದ್ದು ಗಾಯ ಮಾಡಿಕೊಂಡ ಮಗನನ್ನು ತಂದೆ ಎರಡೂ ಕೈಯಿಂದ ಎತ್ತಿಕೊಂಡು ಬಿರಬಿರನೇ ಆಸ್ಪತ್ರೆಯ ಕಡೆ ನಡೆಯುತ್ತಾ ಮಗನನ್ನು ಸಮಾಧಾನ ಪಡಿಸುತ್ತಾ ಹೋಗುತ್ತಿರುವ ದೃಶ್ಯ……

ಪುಟ್ಟ ಹುಡುಗ ತನ್ನ ಅಜ್ಜಿಯನ್ನು ಕರೆದುಕೊಂಡು ತನಗೆ ಚಾಕಲೇಟ್ ಬೇಕೆಬೇಕೆಂದು ಪರಿಪರಿಯಾಗಿ ಬೇಡುತ್ತಾ ಆಕೆಯ ಸೆರಗಿಡಿದು ಅಂಗಡಿಯತ್ತ ಎಳೆದುಕೊಂಡು ಹೋಗುತ್ತಿರುವ ದೃಶ್ಯ…..

ಚಿಕ್ಕ ಹೆಣ್ಣು ಮಗು ತನಗೆ ಎಲ್ಲಾ ಬಹಳ ತಿಳಿದಿದೆ, ತಾತನಿಗೆ ಏನೂ ಗೊತ್ತಿಲ್ಲ ಎಂದು ಎನ್ನುವಂತೆ ತಾತನಿಗೆ ರಸ್ತೆ ದಾಟುವುದು ಹೇಗೆ ಎಂದು ಹೇಳುತ್ತಾ, ಆತನ ಕೋಲು ಹಿಡಿದು ರಸ್ತೆ ದಾಟಿಸುತ್ತಿರುವ ದೃಶ್ಯ……

ಬೆಳದಿಂಗಳ ರಾತ್ರಿಯಲ್ಲಿ, ಮಹಡಿಯ ಮೇಲೆ, ತಾಯಿ ಇಬ್ಬರು ಚಿಕ್ಕ ಮಕ್ಕಳಿಗೆ ಬಟ್ಟಲಿನಲ್ಲಿ ತುಪ್ಪ, ಅನ್ನ ಕಲಸಿ ತಿನ್ನಿಸುತ್ತಾ, ಯಾವುದೋ ಪುರಾಣ ಕಥೆಗಳನ್ನು ಹೇಳುತ್ತಾ, ಚಂದಮಾಮನನ್ನು ತೋರಿಸುತ್ತಾ, ಇಬ್ಬರಿಗೂ ಒಂದೊಂದು ತುತ್ತು ತಿನ್ನಿಸುವ ದೃಶ್ಯ…..

ಹೀಗೆ ಅನೇಕ ಮನುಷ್ಯ ಸಂಬಂಧಗಳ ದೃಶ್ಯಗಳನ್ನು ಆಗಾಗ ಕಾಣುತ್ತಲೇ ಇರುತ್ತೇವೆ. ಈ ಅದ್ಭುತ ರಕ್ತ ಸಂಬಂಧ, ಮಾನವೀಯ ಸಂಬಂಧಗಳ ಅನುಭವವೇ ವರ್ಣನಾತೀತ……

ಅದೇ ಕಾಲಘಟ್ಟದಲ್ಲಿ, ಇದೇ ಮಾಧ್ಯಮಗಳಲ್ಲಿ ತನ್ನ ಪ್ರೇಮ ವೈಫಲ್ಯಕ್ಕೆ ಅಡ್ಡಿಯಾದ ತಾಯಿಯನ್ನು ಮಗಳೇ ಕೊಲ್ಲುವುದು, ಆಸ್ತಿ ಹಂಚಿಕೆಯಲ್ಲಿ ತನಗೆ ಮೋಸ ಮಾಡಿದ ಎಂದು ಮಗನೇ ತಂದೆಯನ್ನು ಕೊಲ್ಲುವುದು, ಮಗಳು ಬೇರೆ ಜಾತಿಯವರನ್ನು ಮದುವೆಯಾದಳು ಎಂದು ಮಗಳನ್ನೇ ಕೊಲ್ಲುವ ತಂದೆ, ಆಸ್ತಿ ಜಗಳಕ್ಕಾಗಿ ಅಣ್ಣ ತಮ್ಮಂದಿರು ಹೊಡೆದಾಡಿಕೊಂಡು ಸಾಯುವ ದೃಶ್ಯ, ಅಕ್ಕ ತಂಗಿಯರು ಕೋರ್ಟ್, ಕಚೇರಿ ಅಲೆದಾಡುವ ದೃಶ್ಯ, ಪಾಗಲ್ ಪ್ರೇಮಿಯೊಬ್ಬ ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಇರಿದು ಇರಿದು ಕೊಲ್ಲುವ ದೃಶ್ಯ……
ಮುಂತಾದವುಗಳನ್ನು ನೋಡುತ್ತಿದ್ದರೆ ಅತೀವ ನೋವಾಗುತ್ತದೆ…….

ಬಾಲ್ಯದಲ್ಲಿ ಪ್ರತಿ ಸಂಬಂಧವನ್ನು ನಮ್ಮದೇ ಆತ್ಮವೆಂಬಂತೆ, ನಮ್ಮದೇ ಜೀವವೆಂಬಂತೆ ನೋಡುವ ನಾವು, ಬೆಳೆಯುತ್ತಾ ಕೊಲ್ಲುವಷ್ಟು ಬೆಳೆಸಿಕೊಳ್ಳುವ ದ್ವೇಷವನ್ನು ನೋಡುತ್ತಿದ್ದರೆ ಮನಸ್ಸು ಅಲ್ಲೋಲಕಲ್ಲೋಲವಾಗುತ್ತದೆ….

ಎಷ್ಟು ಕಷ್ಟಪಟ್ಟು, ಎಲ್ಲಾ ತ್ಯಾಗ ಮಾಡಿ, ತಮ್ಮೆಲ್ಲಾ ಹಣ, ಸಮಯ ಜೊತೆಗೆ ಆಸೆ ಕನಸುಗಳನ್ನು ಹೊತ್ತುಕೊಂಡು ಮಕ್ಕಳಿಗೆ ಸರ್ವಸ್ವವನ್ನೂ ನೀಡುವ ತಂದೆ ತಾಯಿಗಳಿಗೆ, ವಯಸ್ಸಾದ ನಂತರ ಇದೇ ಮಕ್ಕಳು ನೀಡುವ ಚಿತ್ರ ಹಿಂಸೆ ಅಥವಾ ಅವರಿಗೆ ಬೇಕಾದ ಸಂದರ್ಭದಲ್ಲಿ, ಬೇಕಾದ ವಸ್ತುಗಳನ್ನು ಕೊಡಿಸದಿರುವುದು, ಆಸ್ಪತ್ರೆ ಇತ್ಯಾದಿ ವಿಷಯಗಳಿಗೆ ಜೊತೆಯಾಗದೆ ತಂದೆ-ತಾಯಿ ಸಾಯುವುದನ್ನೇ ಕಾಯುವ ಮಕ್ಕಳು, ಚಿತ್ರ ವಿಚಿತ್ರವಾಗಿ ಬೈಗುಳ, ಹೊಡೆತ, ಹಿಂದಿನ ಯಾವುದೋ ಕಹಿ ಘಟನೆಗಳನ್ನು ನೆನಪಿಸಿಕೊಳ್ಳುವುದನ್ನು ನೋಡಿದರೆ ಕರುಳು ಕಿವಿಚಿದಂತಾಗುತ್ತದೆ…..

ನಮ್ಮ ಸಮಾಜದಲ್ಲಿ……

ಒಳ್ಳೆಯ ಕೆಲಸದಲ್ಲಿ ಕೆಟ್ಟದ್ದನ್ನು,
ಕೆಟ್ಟ ಕೆಲಸಗಳಲ್ಲಿ ಒಳ್ಳೆಯದನ್ನು ಹುಡುಕುವ ಗುಣ ಜನರಿಂದ ರಾಜಕಾರಣಿಗಳಿಗೆ, ರಾಜಕಾರಣಿಗಳಿಂದ ಮಾಧ್ಯಮಗಳಿಗೆ ವರ್ಗಾಯಿಸಲ್ಪಟ್ಟಿದೆ……

ಪ್ರೀತಿಯಲ್ಲಿ ದ್ವೇಷವನ್ನು,
ದ್ವೇಷದಲ್ಲಿ ಪ್ರೀತಿಯನ್ನು ಹುಡುಕುವ ಮನೋಭಾವ ಧಾರವಾಹಿ, ಸಿನಿಮಾ, ಕಥೆ, ಕಾದಂಬರಿಗಳಿಂದ ಜನರಿಗೆ ವರ್ಗಾಯಿಸಲ್ಪಟ್ಟಿದೆ……

ನಾಜೂಕಿನ ವಂಚನೆಯನ್ನು,
ಕಾನೂನಿನ ನೆರಳಲ್ಲಿ ಅಪರಾಧವನ್ನು, ಅಮಾಯಕರಿಗೆ ಹಿಂಸೆಯನ್ನು ಕೊಡುವ ಉಪಾಯಗಳನ್ನು ನ್ಯಾಯಾಲಯಗಳು ಜನರಿಗೆ ವರ್ಗಾಯಿಸಿವೆ……

ಕಲೆಗಳಿಂದ ಜನಪ್ರಿಯತೆಯನ್ನು,
ಜನಪ್ರಿಯತೆಯಿಂದ ಸನ್ಮಾನಗಳನ್ನು,
ಸನ್ಮಾನಗಳಿಂದ ಪ್ರಶಸ್ತಿಗಳನ್ನು,
ಪ್ರಶಸ್ತಿಗಳಿಂದ ಅಧಿಕಾರವನ್ನು,
ಅಧಿಕಾರದಿಂದ ಹಣವನ್ನು ಪಡೆಯುವ ಮಾರ್ಗಗಳನ್ನು ಅಕ್ಷರ ಜ್ಞಾನ ಜನರಿಗೆ ವರ್ಗಾಯಿಸಿದೆ…..

ತಪ್ಪುಗಳನ್ನು ಸರಿ ಎಂದು,
ಸರಿಯನ್ನು ತಪ್ಪೆಂದು,
ನಿಜವನ್ನು ಸುಳ್ಳೆಂದು,
ಸುಳ್ಳನ್ನು ನಿಜವೆಂದು,
ವಾಸ್ತವವನ್ನು ಭ್ರಮೆ ಎಂದು
ಭ್ರಮೆಯನ್ನು ವಾಸ್ತವ ಎಂದು ನಿರೂಪಿಸುವ ಕಲೆಗಾರಿಕೆ, ಸಮೂಹ ಸಂಪರ್ಕ ಮಾಧ್ಯಮಗಳಿಂದ, ಸಾಮಾಜಿಕ ಜಾಲತಾಣಗಳಿಂದ ಜನರಿಗೆ ವರ್ಗಾಯಿಸಲ್ಪಟ್ಟಿದೆ……

ಕಪಟ ಭಕ್ತಿಯಿಂದ, ಆಡಂಬರ ಪ್ರದರ್ಶನದ ಪೂಜೆಗಳಿಂದ ದೇವರನ್ನೇ ವಂಚಿಸುವ, ದೇವರಿಗೆ ಲಂಚ ಕೊಡುವ ಮನೋಭಾವ ಮಂದಿರ, ಮಸೀದಿ, ಚರ್ಚುಗಳ ಮುಖ್ಯಸ್ಥರಿಂದ ಜನರಿಗೆ ವರ್ಗಾಯಿಸಲ್ಪಟ್ಟಿದೆ.

ಪಾಶ್ಚಾತ್ಯ ಸಂಸ್ಕೃತಿಗಳ ನಾಗರಿಕ ಪ್ರಜ್ಞೆಯನ್ನು ಮರೆಮಾಚಿ, ಅವರ ಊಟ, ಬಟ್ಟೆ, ಕುಡಿತ, ಜೂಜು, ಮೋಜು, ಅನೈತಿಕ ಸಂಬಂಧಗಳು, ದುಂದು ವೆಚ್ಚ ಮುಂತಾದ ಬಾಹ್ಯ ನಡವಳಿಕೆಗಳು ಮಾತ್ರ ಮಾಧ್ಯಮಗಳ ಮುಖಾಂತರ ಜನರಿಗೆ ವರ್ಗಾಯಿಸಲ್ಪಟ್ಟಿದೆ…….

ಹೀಗೆ ವರ್ಗಾಯಿಸಲ್ಪಟ್ಟ ಮನಸ್ಥಿತಿ ಇಡೀ ವ್ಯವಸ್ಥೆಯ ಮೂಲದ್ರವ್ಯವನ್ನೇ ನುಂಗಿ ಮೌಲ್ಯಗಳ ಅಧಃಪತನ ಹೊಂದಿ ಕೇವಲ ಮುಖವಾಡಗಳ ವ್ಯಾವಹಾರಿಕ ಜೀವನವೇ ನಮ್ಮ ಸಮಾಜವಾಗಿದೆ……

ಇದನ್ನು ಬದಲಿಸುವುದೇ – ಪರಿವರ್ತಿಸುವುದೇ ನಮ್ಮೆಲ್ಲರ ಮೊದಲ ಆದ್ಯತೆಯಾಗಿರಲಿ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….

About Author

Leave a Reply

Your email address will not be published. Required fields are marked *

You may have missed