ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ೦೧ರ ಸಂಭ್ರಮವಾಗದೆ ಅದು ವರ್ಷದ ೩೬೫ ದಿನಗಳ ಅಸ್ಮಿತೆಯಾಗಬೇಕು…..
1 min read
ಅವಿನ್ ಟಿವಿ ಸುದ್ದಿಜಾಲ ✍️: ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ೦೧ರ ಸಂಭ್ರಮವಾಗದೆ ಅದು ವರ್ಷದ ೩೬೫ ದಿನಗಳ ಅಸ್ಮಿತೆಯಾಗಬೇಕು.
ಚಿಕ್ಕಮಗಳೂರು ನ ೦೧: ಕನ್ನಡ ರಾಜ್ಯೋತ್ಸವಕ್ಕೆ ಹಿರಿದಾದ ಒಂದು ಕಥನವಿದೆ, ಆಗಿ ಹೋದ ಘಟಿಸಿ ನಿಂತ ಕನ್ನಡದ ಕಥನಕ್ಕೆ ಸಾಗರದಂತೆ ಸಾಹಿತ್ಯದ ಸಮೃದ್ಧತೆಯು ಸಾವಿರಾರು ವರ್ಷಗಳ ಹಿಂದೆಯೇ ಇತ್ತು, ಹತ್ತು ಹಲವು ರಾಜ ಮನೆತನಗಳು, ಕೆತ್ತಿ ಹೋದ ಶಾಸನಗಳು, ಬಿಟ್ಟು ಹೋದ ಇತಿಹಾಸಗಳು, ಕಟ್ಟಿಹೋದ ಕೋಟೆ ಕೊತ್ತಲು ಗುಡಿಗೋಪುರಗಳ ಹಿರಿಮೆ ಗರಿಮೆಗಳನ್ನು ಬರೆಯುತ್ತಾ ಹೋದರೆ ಪುಟಗಳು ಸಾಲದು, ಕನ್ನಡ ಕೇವಲ ಭಾಷೆಯಲ್ಲ ಅದು ಈ ನೆಲದ ಜೀವ ಧ್ವನಿಯಾಗಿ ಸಂಸ್ಕೃತಿ ಮತ್ತು ನಾಗರೀಕತೆಯನ್ನು ಹೊತ್ತು ನಿಂತಿದೆ, ಇಂತಹ ಕನ್ನಡದ ಕಥನಕ್ಕೆ
೭೧ನೇ ಕನ್ನಡ ರಾಜ್ಯೋತ್ಸವ ಕಿವಿಯಾಗಬೇಕಿದೆ.
ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷರ ನಡುವೆ 1799 ಮೇ ೦೪ರಂದು ನೆಡೆದ ಐತಿಹಾಸಿಕ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧವನ್ನು ನವಾಬರು ಮತ್ತು ಮರಾಠರ ಸಹಾಯದಿಂದ ಬ್ರಿಟಿಷರು ಯುದ್ಧವನ್ನು ಗೆದ್ದ ನಂತರ ಆರು ಭಾಗಗಳಾಗಿ ಕನ್ನಡ ನಾಡು ಹಂಚಿ ಹರಿದುಹೋಗಿತ್ತು,ಸಾಹಿತಿಗಳು ಚಿಂತಕರು ಹೋರಾಟಗಾರರ ತ್ಯಾಗ ಬಲಿದಾನಗಳ ಮೂಲಕ ಮತ್ತೆ ಈ ಕನ್ನಡ ನಾಡು ಒಂದಾದದ್ದು ಸುಮಾರು ೧೫೭ ವರ್ಷಗಳ ನಂತರ, ಇದು ಕನ್ನಡದ ಇತಿಹಾಸ,ಅಂದರೆ ೧೯೫೬ ನವೆಂಬರ್ ೦೧ರಂದು ಹರಿದು ಹಂಚಿ ಹೋಗಿದ್ದ ಆರು ಪ್ರಾಂತ್ಯಗಳು ಮೈಸೂರು ರಾಜ್ಯದ ಹೆಸರಿನಲ್ಲಿ ಏಕೀಕರಣದ ಹೋರಾಟದೊಂದಿಗೆ ಉದಯವಾಯಿತು, ತದನಂತರ ೧೯೭೩ ನವಂಬರ್ ೦೧ರಂದು ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಅಧಿಕಾರಾವಧಿಯಲ್ಲಿ ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣಗೊಂಡಿತು, ಕನ್ನಡ ನಾಡು ಒಂದು ಜಾಗೃತಿ ಮತ್ತು ಜವಾಬ್ದಾರಿಯೊಂದಿಗೆ ಏಕೀಕರಣಗೊಂಡು ೭೦ ವರ್ಷ ಕಾಲ ಗರ್ಭದೊಳಗೆ ಸರಿದು ಹೋಗಿದೆ, ಇಂದು ಈ ನವಂಬರ್ ೦೧ರಂದು ಇಡೀ ಸಮಗ್ರ ಕರ್ನಾಟಕವು ೭೧ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದೆ, ಈ ಹೊತ್ತಿನಲ್ಲಿ ರಾಜ್ಯೋತ್ಸವದ ಸಂಭ್ರಮದೊಂದಿಗೆ ಈ ನೆಲ ಜಲ ಬದುಕು ಬವಣೆಯ ಜೊತೆಗೆ ಭಾಷಾ ಸಂಕಟವನ್ನು ಕೂಡ ಅರಿಯಬೇಕಾಗಿದೆ.
ನಾಡಿನ ಪ್ರಜ್ಞಾವಂತರು ಸೇರಿದಂತೆ ಅಕ್ಷರವಂತ ಸಮಾಜವು ಒಳಗೊಂಡಂತೆ ಈ ನೆಲದ ಕಟ್ಟಕಡೆಯ ಜನರು ಕೂಡ ಧರ್ಮ ಜಾತಿ ಮತ ಪಂಥ ಚುನಾವಣೆಗಳಿಗೆ ತಲೆಕೆಡಿಸಿಕೊಂಡಷ್ಟು ಭಾಷೆಗಳು ಅಪಾಯ ಮತ್ತು ಅತೀ ಅಪಾಯದ ಅಂಚಿನಲ್ಲಿರುವ ಬಗ್ಗೆ, ಅದರಲ್ಲೂ ಹೆಚ್ಚಾಗಿ ದೇಸಿ ಭಾಷೆಗಳು ತನ್ನ ಒಡಲೊಳಗಿದ್ದ ಸಿರಿಸಂಪದವನ್ನು ಕಳೆದುಕೊಂಡು ಕಣ್ಮರೆ ಆಗುತ್ತಿರುವ ಬಗ್ಗೆ, ಅವನತಿ ಹೊಂದುತ್ತಿರುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ, ಕೃಷಿ ಎಂಬುದು ಒಂದು ಪದ್ಧತಿಯಲ್ಲ ಅದು ಈ ನೆಲದ ಸಂಸ್ಕೃತಿ, ಇಂತಹ ಕೃಷಿ ಸಂಸ್ಕೃತಿಯಿಂದ ಕನ್ನಡದ ಭಾಷೆ ಸಮೃದ್ಧವಾಗಿ ಬೆಳೆದು ನಿಲ್ಲಲು ಸಾಧ್ಯವಾಗಿದೆ ಎಂಬ ಪ್ರಜ್ಞೆ ಬರಹಗಾರರು ಸೇರಿದಂತೆ ಹೆಚ್ಚಿನ ಜನರಿಗೆ ಅದರ ಅರಿವಿನ ಕೊರತೆ ಇದ್ದಂತೆ ಕಾಣುತ್ತಿದೆ.
ನಾಲಿಗೆಯ ಮೇಲಿರುವ ಇತರೆ ಭಾಷೆಗಳಿಗೂ ಹೃದಯದ ಗೂಡಿನಲ್ಲಿ ನೆಲೆಗೊಂಡಿರುವ ಮಾತೃಭಾಷೆಗೂ ವ್ಯತ್ಯಾಸವಿದೆ, ಮಾತೃಭಾಷೆಯನ್ನು ಮಾತ್ರ ಎದೆಯಗೂಡಿನೊಳಗಿಟ್ಟುಕೊಂಡು ಪ್ರೀತಿಸಿ ಪೋಷಿಸಬೇಕು ಎಂದರೆ ಇತರೆ ಭಾಷೆಗಳನ್ನು ದ್ವೇಷಿಸಬೇಕು ಎಂಬ ಅರ್ಥವಲ್ಲ, ಜಗತ್ತಿನ ಇತರ ಎಲ್ಲಾ ಭಾಷೆಗಳ ಮಹತ್ವ ಮೌಲ್ಯವನ್ನು ಕನ್ನಡಕ್ಕೆ ತರುವುದು, ಕನ್ನಡದ ಹಿರಿಮೆ ಗರಿಮೆಗಳನ್ನು ಇತರ ಭಾಷೆಗಳಿಗೆ ಪಸರಿಸುವುದು ಕೂಡ ನಿಜವಾದ ಕನ್ನಡ ಅಭಿಮಾನವಾಗಿದೆ.
ಭಾಷೆಯೆಂದರೆ ಕೇವಲ ಭಾವನಾತ್ಮಕ ವಿಚಾರವಲ್ಲ ಅದು ಬೌದ್ಧಿಕ ಮತ್ತು ವ್ಯವಹಾರಿಕ ಆಯ್ಕೆಯು ಹೌದು,
*ಜಗತ್ತಿನ ಅರ್ಧದಷ್ಟು ಭಾಷೆಗಳನ್ನು ಹೊಂದಿರುವ ಭಾರತಕ್ಕೊಂದು ಸಮರ್ಪಕವಾದ ಭಾಷಾ ನೀತಿಯೇ ಇಲ್ಲ*,
ಭಾರತಕ್ಕೊಂದು ಭಾಷಾ ನೀತಿ ಜಾರಿಯಾಗಲಿ,,,, ಮಾತೃ ಭಾಷೆಯ ಮಹತ್ವ ಮತ್ತು ಹಿರಿಮೆಗರಿಮೆಯನ್ನು , ಭಾಷೆಗಳು ಅನುಭವಿಸುತ್ತಿರುವ ಸಂಕಷ್ಟಗಳನ್ನು ಈ ಸಂಭ್ರಮದ ಹೊತ್ತಿನಲ್ಲಾದರೂ ಅರಿತು ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳೋಣ – ಆಚರಿಸಿಕೊಳ್ಳೋಣ.
ಅವಿನ್ ಟಿವಿ ಸುದ್ದಿಜಾಲದ ಎಲ್ಲ ಓದುಗರಿಗೂ ೭೧ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🌹🌱 “”””””””””””””””””””””””””””””””””””” ಡಿ,ಎಂ,ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

