ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಹಾಗೂ ಕೆಂಪು ಪಟ್ಟಿ ( Red Tape ) ಎಂದು ಕರೆಯಲ್ಪಡುವ ಕಾರ್ಯಾಂಗದ ನೌಕರಶಾಹಿಯ ಕರ್ತವ್ಯ ಪ್ರಜ್ಞೆ ಅಥವಾ ಗುಲಾಮಿತನ ಅಥವಾ ನಿಸ್ತೇಜ, ನಿರುತ್ಸಾಹ ಪ್ರತಿಕ್ರಿಯಾತ್ಮಕ ಕೆಲಸದ ಬಗ್ಗೆ ಒಂದು ಸಾಂಕೇತಿಕ ಉದಾಹರಣೆ…….
1 min read
ಆಡು ಮಾತಿನ ಬಾಯಿಮಾತು ಕಥೆ…….
ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಹಾಗೂ ಕೆಂಪು ಪಟ್ಟಿ ( Red Tape ) ಎಂದು ಕರೆಯಲ್ಪಡುವ ಕಾರ್ಯಾಂಗದ ನೌಕರಶಾಹಿಯ ಕರ್ತವ್ಯ ಪ್ರಜ್ಞೆ ಅಥವಾ ಗುಲಾಮಿತನ ಅಥವಾ ನಿಸ್ತೇಜ, ನಿರುತ್ಸಾಹ ಪ್ರತಿಕ್ರಿಯಾತ್ಮಕ ಕೆಲಸದ ಬಗ್ಗೆ ಒಂದು ಸಾಂಕೇತಿಕ ಉದಾಹರಣೆ…….

ಇದನ್ನು ತೀರಾ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಾಂಗದ ಅಧಿಕಾರಿಗಳ ಬಗ್ಗೆ ಈಗಲೂ ಅಷ್ಟೇ ಗೌರವವಿದೆ. ಭ್ರಷ್ಟಾಚಾರ ಹೊರತುಪಡಿಸಿ ಸರ್ಕಾರಿ ಅಧಿಕಾರಿಗಳೂ ಇವತ್ತು ಈ ದೇಶದ ಕ್ರಮಬದ್ಧ ಮುಂದುವರಿಕೆಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಸಂಬಳದ ಜೊತೆಗೆ ಅವರಿಗೆ ನಿಶ್ಚಿತ ಉದ್ಯೋಗ ಭದ್ರತೆ ಎಂಬ ಸುಖಾಸನ ಇದ್ದರು ಕೆಲವರನ್ನು ಹೊರತುಪಡಿಸಿ ಅನೇಕ ಉದ್ಯೋಗಿಗಳು ಒತ್ತಡದಲ್ಲಿಯೇ ಕೆಲಸ ಮಾಡುತ್ತಾರೆ, ಸಾರ್ವಜನಿಕ ಸೇವೆ ಮಾಡುತ್ತಾರೆ, ಕೆಲವೊಮ್ಮೆ ನಿಂದನೆಗೂ ಒಳಗಾಗುತ್ತಾರೆ. ಅವರುಗಳು ಸಹ ತುಂಬಾ ಶ್ರಮಪಟ್ಟು, ಅರ್ಹತೆ ಪಡೆದು ಈ ಉದ್ಯೋಗದಲ್ಲಿ ಇರುತ್ತಾರೆ. ಜೊತೆಗೆ ಆ ಉದ್ಯೋಗಿಗಳು ಕೂಡ ನಮ್ಮವರೇ, ನಮ್ಮ ಸಂಬಂಧಿಕರೇ ಆದ್ದರಿಂದ ಇದು ನಮಗೂ ಅನ್ವಯಿಸುತ್ತದೆ. ಅಧಿಕಾರಿಗಳ ಕೆಲಸವನ್ನು ಗೌರವಿಸುತ್ತಾ…..
ಒಮ್ಮೆ ಒಂದು ಕೃಷಿ, ಅರಣ್ಯ, ತೋಟಗಾರಿಕೆ ಅಥವಾ ಬೇರೆ ಒಂದು ಯಾವುದೋ ಇಲಾಖೆಯಲ್ಲಿ ಹೊಸ ಯೋಜನೆಯೊಂದು ಜಾರಿಯಾಗುತ್ತದೆ. ಒಂದಷ್ಟು ಸರ್ಕಾರಿ ಜಾಗದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮವದು. ಮೇಲಾಧಿಕಾರಿಯೊಬ್ಬರು ಉದ್ಯೋಗಿಗಳನ್ನು ಕರೆದು ಇಬ್ಬಿಬ್ಬರ(2) ಮೂರು ಗುಂಪುಗಳಾಗಿ ವಿಂಗಡಿಸುತ್ತಾರೆ. ದಿನದ ಕೆಲಸ ಮಾಡುವ ಒಟ್ಟು 8 ಗಂಟೆಯ ಅವಧಿಯನ್ನು ಮೂರು ಭಾಗವಾಗಿ ವಿಂಗಡಿಸಿ ಮೊದಲ ಅವಧಿಯಲ್ಲಿ ಇಬ್ಬರು ನೆಲದ ಗುಂಡಿ ತೋಡಿ ಸಸಿ ನೆಡಲು ಪೂರ್ವ ಸಿದ್ಧತೆ ಮಾಡಬೇಕು. ಇದಕ್ಕೆ ಒಂದಷ್ಟು ಸಮಯ ನಿಗದಿಗೊಳಿಸಲಾಗುತ್ತದೆ. ತದನಂತರ 30 ನಿಮಿಷದ ವಿರಾಮದ ನಂತರ ಮತ್ತಿಬ್ಬರು ಗುಂಡಿ ತೋಡಿದ ಸ್ಥಳದಲ್ಲಿ ಗಿಡಗಳನ್ನು ತಂದು ನೆಡಬೇಕು ಮತ್ತು ಸ್ವಲ್ಪ ನೀರೆರಯಬೇಕು. ತದನಂತರ ಅರ್ಧಗಂಟೆ ವಿರಾಮ ಆದ ಆಮೇಲೆ ಮೂರನೆಯ ಅಧಿಕಾರಿಗಳ ಇಬ್ಬರ ತಂಡ ಆ ಗುಂಡಿಗಳನ್ನು ಕ್ರಮಬದ್ಧವಾಗಿ ಮುಚ್ಚಬೇಕು. ಅಂದರೆ ಆ ಅಗೆದ ಮಣ್ಣನಿಂದಲೇ ಗುಂಡಿ ತುಂಬಿ ಗಿಡ ನೇರವಾಗಿ ಬೆಳೆಯಲು ಅನುಕೂಲವಾಗುವಂತೆ ಮಣ್ಣು ಮುಚ್ಚಬೇಕು.
ಇದು ಸುಮಾರು ಒಂದು ತಿಂಗಳು ಸತತವಾಗಿ ಮಾಡ ಬೇಕಾದ ಕೆಲಸ. ಹೀಗೆ ಸ್ವಲ್ಪ ದಿನ ನಡೆಯುತ್ತಿರುತ್ತದೆ. ಒಮ್ಮೆ ಒಂದು ದಿನ ಮೊದಲನೆಯ ತಂಡ ಹಳ್ಳ ತೋಡಿರುತ್ತದೆ. ಆದರೆ ಯಾವುದೋ ಅನಿವಾರ್ಯ ಕಾರಣದಿಂದ ಎರಡನೆಯ ತಂಡದ ಇಬ್ಬರೂ ಒಟ್ಟಿಗೆ ರಜೆ ಹಾಕಿ ಗಿಡ ನೆಡಲು ಸಾಧ್ಯವಾಗಿರುವುದಿಲ್ಲ. ಆಗ ತಮ್ಮ ಸಮಯಕ್ಕೆ ಕಾದು ಕೆಲಸಕ್ಕೆ ಬರುವ ಮೂರನೆಯ ತಂಡ ಇದನ್ನು ಗಮನಿಸದೆ ಅಥವಾ ಗಮನಿಸಿದರೂ ತಮಗೆ ಇದು ಸಂಬಂಧಪಟ್ಟಿಲ್ಲ ಎಂಬಂತೆ ತಮ್ಮ ಮಣ್ಣು ಮುಚ್ಚುವ ಕೆಲಸವನ್ನು ಮಾಡಿ ಗುಂಡಿಗಳನ್ನು ಮುಚ್ಚಿ ಹೋಗುತ್ತಾರೆ. ಗಿಡ ನೆಡದೆಯೂ ಮಣ್ಣು ಮುಚ್ಚಿ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮೆರೆಯುತ್ತಾರೆ……. ಅಅಅಹಾ…
ಮುಂದೆ ಈ ವಿಷಯ ಒಬ್ಬರಿಂದ ಒಬ್ಬರಿಗೆ ಬಾಯಿ ಮಾತಿನಲ್ಲಿ ಹರಡಿ ಅನೇಕರ ಅಪಹಾಸ್ಯಕ್ಕೆ ಗುರಿಯಾಗಿ ಇದು ವೈರಲ್ ಸುದ್ದಿಯಾಗುತ್ತದೆ. ಕೊನೆಗೆ ಇದನ್ನು ಗಮನಿಸಿ ಸರ್ಕಾರ ಈ ಅಚಾತುರ್ಯವನ್ನು ತನಿಖೆ ಮಾಡಲು ಮೇಲಾಧಿಕಾರಿಗಳ ಒಃದು ತನಿಖಾ ತಂಡವನ್ನು ನೇಮಿಸುತ್ತಾರೆ.
ಆಗ ಇದಕ್ಕೆ ಕಾರಣರಾದವರನ್ನು ತನಿಖಾ ತಂಡ ನೋಟಿಸ್ ನೀಡಿ ವಿಚಾರಣೆಗೆ ಕರೆದು ವಿವರಣೆ ಕೇಳುತ್ತದೆ. ಎರಡನೆಯ ತಂಡ ಆ ದಿನ ತಮ್ಮ ರಜೆಗೆ ಇರುವ ಕಾರಣಗಳನ್ನು ವಿವರಿಸಿ ಅದು ತಮ್ಮ ಹಕ್ಕು, ಹತ್ತಿರದವರ ಮದುವೆ, ಅನಾರೋಗ್ಯ ಇತ್ಯಾದಿಗಳಿಗಾಗಿ ಅನುಮತಿ ಪಡೆದೇ ಹೋಗಿದ್ದಾಗಿ ಹೇಳುತ್ತಾರೆ. ಆಗ ಮೂರನೇ ತಂಡವನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ.
ಮೂರನೇ ತಂಡದ ಸದಸ್ಯರು,
” ಸ್ವಾಮಿ ನಮಗೆ ವಹಿಸಿರುವ ಕೆಲಸ ಗುಂಡಿ ಮುಚ್ಚುವುದು. ಆ ಕೆಲಸವನ್ನು ನಾವು ಮಾಡಿದ್ದೇವೆ. ಒಂದು ವೇಳೆ ಗುಂಡಿ ಮುಚ್ಚದಿದ್ದರೆ ಮೇಲಾಧಿಕಾರಿ ನಮಗೆ ನೋಟಿಸ್ ನೀಡುತ್ತಾರೆ ಅಥವಾ ಸಸ್ಪೆಂಡ್ ಮಾಡುತ್ತಾರೆ. ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸಿದ್ದೇವೆ. ನಮ್ಮದೇನು ತಪ್ಪಿಲ್ಲ. ಗಿಡ ನೆಡಬೇಕಾಗಿದ್ದ ಜವಾಬ್ದಾರಿ ಎರಡನೆಯ ತಂಡದ್ದು. ಆದ್ದರಿಂದ ಕರ್ತವ್ಯ ಲೋಪ ಮಾಡಿರುವವರನ್ನು ನೀವು ಶಿಕ್ಷಿಸಬೇಕು “ಎಂದು ಹೇಳಿಕೆ ನೀಡುತ್ತಾರೆ.
ತನಿಖಾ ತಂಡ ಗೊಂದಲಕ್ಕೆ ಬೀಳುತ್ತದೆ. ಎಲ್ಲರೂ ತಮ್ಮ ತಮ್ಮ ಕಾನೂನಾತ್ಮಕ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಈಗ ಯಾರ ಮೇಲೆ ಕ್ರಮ ಕೈಗೊಳ್ಳುವುದು. ಇಲ್ಲಿ ಎಲ್ಲವೂ ಸರಿಯಾಗಿದೆ. ಆದರೆ ಮರೆಯಾಗಿರುವುದು
” ವಿವೇಚನೆ ” ಎಂಬ ಸಾಮಾನ್ಯ ಪ್ರಜ್ಞೆ ಅಥವಾ ಜ್ಞಾನ. ಸರ್ಕಾರದಲ್ಲಿ ಸಾಮಾನ್ಯ ಪ್ರಜ್ಞೆಯ ಕೊರತೆ ಸದಾ ಕಾಡುತ್ತದೆ. ಕೆಲವೊಮ್ಮೆ ಆ ಪ್ರಜ್ಞೆ ಇದ್ದರೂ ಅದನ್ನು ಅನುಷ್ಠಾನಗೊಳಿಸಲು ಕಾನೂನಿನ ಕಠಿಣ ನೀತಿ ನಿಯಮಗಳು ಅಥವಾ ಮೇಲಾಧಿಕಾರಿಗಳು ಬಿಡುವುದಿಲ್ಲ.
ಇದು ಕೇವಲ ಒಂದು ವಿಡಂಬನೆಯಾದರು ಸರ್ಕಾರದ ಅನೇಕ ನಡವಳಿಕೆಗಳಲ್ಲಿ ಇದು ದಿನನಿತ್ಯದ ಒಂದು ಸಮಸ್ಯೆ. ವಿವೇಚನೆ ಬಳಸಬೇಕು ಎಂಬುದು ನಿಜ. ಆದರೆ ಆ ವಿವೇಚನಾ ಸ್ವಾತಂತ್ರ್ಯವನ್ನು ಅನೇಕ ಸಾರಿ ನೀತಿ ನಿಯಮಗಳು ಕಿತ್ತುಕೊಂಡಿರುತ್ತದೆ. ಇದೇ ರೀತಿಯ ಆದರೆ ಬೇರೆ ರೂಪದ ಅನೇಕ ಘಟನೆಗಳು ಈ ಕೆಂಪು ಪಟ್ಟಿ ಎಂಬ ನೌಕರಶಾಹಿಯ ಕಡೆಯಿಂದ ನಡೆಯುತ್ತಲೇ ಇರುತ್ತದೆ. ಅಂತಿಮವಾಗಿ ತೊಂದರೆ ಅನುಭವಿಸುವುದು, ನಷ್ಟ ಅನುಭವಿಸುವುದು ಇಡೀ ವ್ಯವಸ್ಥೆ,
ಭಾರತದಂತಹ ಬೃಹತ್ ದೇಶದಲ್ಲಿ ಇದನ್ನು ಸರಿಪಡಿಸುವುದು ಸಹ ಅಷ್ಟು ಸುಲಭವಲ್ಲ. ಒಂದು ಕಡೆ ರಾಜಕಾರಣಿಗಳ ಅನಾವಶ್ಯಕ ಮೂಗು ತೂರಿಸುವಿಕೆ, ಬ್ರಹ್ಮಾಂಡ ಭ್ರಷ್ಟಾಚಾರ, ಇನ್ನೊಂದು ಕಡೆ ಕೆಲವು ನಿಷ್ಠಾವಂತ ಅಧಿಕಾರಿಗಳ ಅಸಹಾಯಕತೆ, ಅನೇಕ ಅಧಿಕಾರಿಗಳ ಲಂಚಾವತಾರ, ಸೋಮಾರಿತನ, ದುರಹಂಕಾರ, ಮತ್ತೊಂದು ಕಡೆ ಸಾಮಾನ್ಯ ಜನರ ಅಜ್ಞಾನ ಮತ್ತು ಸ್ವಾರ್ಥ, ಮುಗ್ಧತೆ ಹಾಗೂ ಅಸಹಾಯಕತೆ, ಮತ್ತೊಂದು ಕಡೆ ದೌರ್ಜನ್ಯ ಈ ಎಲ್ಲವೂ ಒಟ್ಟಾಗಿ ಸೇರಿಕೊಂಡು ವ್ಯವಸ್ಥೆಯಲ್ಲಿ ಲೋಪ ದೋಷಗಳು ಹಾಗೆ ಉಳಿದಿವೆ.
ಇದನ್ನು ಸರಿಪಡಿಸಲು ಆಡಳಿತ ಸುಧಾರಣಾ ಆಯೋಗವಿದೆ. ಅದು ಕಾಲ ಕಾಲಕ್ಕೆ ಆಡಳಿತದಲ್ಲಿ ಆಗುವ ಲೋಪಗಳನ್ನು ಪಟ್ಟಿಮಾಡಿ, ಸರ್ಕಾರಕ್ಕೆ ಸಲ್ಲಿಸಿ, ಅಲ್ಲಲ್ಲಿಯೇ ಸರಿಪಡಿಸಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ಆಡಳಿತ ಮಾಡುವವರಿಗೆ ಈ ವಿಷಯದಲ್ಲಿ ತಲೆಕೆಡಿಸಿಕೊಳ್ಳಲು ಸಮಯವೂ ಇಲ್ಲ. ಹೇಗೋ ನೀರ ಮೇಲಿನ ಗುಳ್ಳೆಯಂತೆ ವ್ಯವಸ್ಥೆ ಮುನ್ನಡೆದುಕೊಂಡು ಹೋಗುತ್ತಿದೆ.
ಆ ಗುಳ್ಳೆ ಒಡೆಯುವವರೆಗೂ ನಾವು, ನೀವು ಕ್ಷೇಮ. ಮುಂದೆ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….

