ನ್ಯಾಯಬೆಲೆ ಅಂಗಡಿಯಲ್ಲಿ ರಾಗಿ ವಿತರಣೆಗೆ ವಿರೋಧ ಹಿಂದಿನಂತೆ ಅಕ್ಕಿಯನ್ನೆ ವಿತರಿಸುವಂತೆ ರಾಮಯ್ಯ ಒತ್ತಾಯ….
1 min read
ನ್ಯಾಯಬೆಲೆ ಅಂಗಡಿಯಲ್ಲಿ ರಾಗಿ ವಿತರಣೆಗೆ ವಿರೋಧ
ಹಿಂದಿನಂತೆ ಅಕ್ಕಿಯನ್ನೆ ವಿತರಿಸುವಂತೆ ರಾಮಯ್ಯ ಒತ್ತಾಯ
ಮೂಡಿಗೆರೆ : ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿಯ ಬದಲಿಗೆ ರಾಗಿ ನೀಡುತ್ತಿರುವುದು ಸರಿಯಲ್ಲ.
ಮಲೆನಾಡು ಭಾಗದ ಜನರು ರಾಗಿಯನ್ನು ಬಳಸುವುದಿಲ್ಲ. ಸರ್ಕಾರ ರಾಗಿ ನೀಡುವುದನ್ನು ಕೈಬಿಟ್ಟು ಅಕ್ಕಿ ನೀಡಬೇಕು ಎಂದು ತಾಲೂಕು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತರಕ್ಷಣಾ ಒಕ್ಕೂಟದ ಕಾರ್ಯದರ್ಶಿ ಕೆ.ಕೆ.ರಾಮಯ್ಯ ಒತ್ತಾಯಿಸಿದರು.
ಕಳೆದ 15 ವರ್ಷದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಅನ್ನಭಾಗ್ಯ ಯೋಜನೆಯ ಮೂಲಕ ಬಿಪಿಎಲ್ ಪಡಿತರಚೀಟಿಯಲ್ಲಿ ಹೆಸರು ನಮೂದಾಗಿರುವ ಪ್ರತಿಯೊಬ್ಬರಿಗೂ ತಲಾ 10 ಕೇಜಿ ಅಕ್ಕಿಯನ್ನು ಉಚಿತವಾಗಿ ಪ್ರತಿ ತಿಂಗಳು ವಿತರಿಸಲಾಗುತ್ತಿತ್ತು. ಈ ತಿಂಗಳಲ್ಲಿ ಪ್ರತಿಯೊಬ್ಬರಿಗೂ ತಲಾ 7 ಕೇಜಿ ಅಕ್ಕಿ 3 ಕೇಜಿ ರಾಗಿಯನ್ನು ವಿತರಿಸಲಾಗುತ್ತಿದೆ. ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ 21 ಕೇಜಿ ರಾಗಿ, 14 ಕೇಜಿ ಅಕ್ಕಿ ವಿತರಿಸಲಾಗುತ್ತಿದೆ. ಮಲೆನಾಡು ಭಾಗದಲ್ಲಿ ಊಟಕ್ಕೆ ಅಕ್ಕಿ ಬಳಸುತ್ತಾರೆ ಹೊರತು ರಾಗಿಯನ್ನು ಬಳಸುವುದಿಲ್ಲ.
ಮಲೆನಾಡಿಗರಿಗೆ ರಾಗಿ ಪ್ರಯೋಜನಕ್ಕೆ ಬರುವುದಿಲ್ಲ. ನ್ಯಾಯಬೆಲೆ ಅಂಗಡಿಗಳಲ್ಲಿ ರಾಗಿ ನೀಡುವುದನ್ನು ಸ್ಥಗಿತಗೊಳಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ನ್ಯಾಯಬೆಲೆ ಅಂಗಡಿಗೆಯಲ್ಲಿ ಈಗ ನೀಡುತ್ತಿರುವ ರಾಗಿ ಕಳಪೆ ಗುಣಮಟ್ಟದಿಂದ ಕೂಡಿದೆ. ಇಂತಹ ರಾಗಿಯನ್ನು ಬಳಸಲು ಸಾಧ್ಯವೆ ಇಲ್ಲ. ಮಲೆನಾಡು ಭಾಗದಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿದವರು ಬಡತನ ರೇಖೆಗಿಂತ ಕೆಳಗಿನವರು ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಬಡವರ್ಗದವರು ಪ್ರತಿದಿನ ಕಾಫಿ ತೋಟದ ಕೂಲಿ ಕೆಲಸಕ್ಕೆ ಹೋಗುತ್ತಾರೆ. ರಾಗಿಯಿಂದ ತಯಾರಿಸಿದ ಅಡುಗೆಯನ್ನು ಊಟ ಮಾಡಿ ಮಲೆನಾಡಿನ ಕಾರ್ಮಿಕರಿಗೆ ಅಭ್ಯಾಸವಿಲ್ಲ. ಈಗ ನ್ಯಾಯಬೆಲೆ ಅಂಗಡಿಗಳಲ್ಲಿ ರಾಗಿ ನೀಡುತ್ತಿರುವುದರಿಂದ ಬಡವರ ಊಟಕ್ಕೆ ತೊಂದರೆಯಾಗಿದೆ. ಅಧಿಕಾರಿಗಳು ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿ ನ್ಯಾಯಬೆಲೆ ಅಂಗಡಿಗಳಲ್ಲಿ ರಾಗಿ ನೀಡುವುದನ್ನು ತಡೆಹಿಡಿದು ಹಿಂದಿನಂತೆ ಪ್ರತಿಯೊಬ್ಬರಿಗೆ ತಲಾ 10 ಕೇಜಿ ಅಕ್ಕಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ತಿಂಗಳಲ್ಲಿ ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿದ ಪ್ರತಿಯೊಬ್ಬರಿಗೂ ತಲಾ 7 ಕೇಜಿ ಅಕ್ಕಿ ಮತ್ತು 3 ಕೇಜಿ ರಾಗಿ, ಅಂತ್ಯೋದಯ ಪಡಿತರ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ 14 ಕೇಜಿ ಅಕ್ಕಿ 21 ಕೇಜಿ ರಾಗಿ ವಿತರಿಸಲಾಗುತ್ತಿದೆ. ತಾಲೂಕಿನ ಒಂದೆರಡು ನ್ಯಾಯಬೆಲೆ ಅಂಗಡಿಗಳಿಂದ ರಾಗಿಯ ಬೇಡಿಕೆ ಬಂದಿದ್ದರಿಂದ ರಾಗಿ ವಿತರಣೆ ನಡೆಯುತ್ತಿದೆ. ರಾಗಿ ಬೇಡವೆಂದು ಬಹುತೇಕ ಪಡಿತರ ಚೀಟಿ ಹೊಂದಿದವರು ಹೇಳುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದು: ಎಸ್.ಅಶ್ವಿನಿ, ಮೂಡಿಗೆರೆ ತಹಸಿಲ್ದಾರ್ ತಿಳಿಸಿದರು.

