AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಕೇಂದ್ರ ಸರ್ಕಾರದ ವಿರುದ್ಧ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕ್ಯಾಂಡಲ್ ಮೆರವಣಿಗೆ.”

1 min read

oplus_136314880

ಆಲ್ದೂರು:ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಕೆಂಪೇಗೌಡ ವೃತ್ತದವರೆಗೆ ಕ್ಯಾಂಡಲ್ ಹಿಡಿದು ಮೆರವಣಿಗೆ ನಡೆಸಿದ ಆಲ್ದೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಾಬಿರ್ ಮಾತನಾಡಿ, ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದು, ಅವರ ಧ್ವನಿಯನ್ನು ಹತ್ತಿಕ್ಕುವ ಕೇಂದ್ರ ಸರ್ಕಾರದ ಧೋರಣೆ ಖಂಡನೀಯವಾಗಿದೆ ಎಂದರು. ಈ ಸರ್ಕಾರದ ಆಡಳಿತದಲ್ಲಿ ರೈತರಿಗೆ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಪ್ರತಿಭಟಿಸಿದರೆ ಅವರ ಮೇಲೆ ಅಮಾನವೀಯವಾಗಿ ಲಾಠಿಚಾರ್ಜ್ ನಡೆಸಿ ಹತ್ತಿಕ್ಕಲು ಮುಂದಾಗಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಆರೋಪಿಸಿದರು.

ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ತೇಜಸ್ ಗೌಡ ಮಾತನಾಡಿ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ನರೇಂದ್ರ ಮೋದಿ ಸರ್ಕಾರ ದೇಶದ ಲಕ್ಷಾಂತರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು. ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸಿದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಂಧಿಸಿದ್ದು ಮಾತ್ರವಲ್ಲದೆ, ರಾಹುಲ್ ಗಾಂಧಿ ಅವರ ಮೇಲೆ ಪೊಲೀಸರ ಮೂಲಕ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಇದುವರೆಗೂ ಸುದ್ದಿಗೋಷ್ಠಿ ನಡೆಸದಿರುವುದನ್ನೂ ಅವರು ಟೀಕಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಎಚ್.ಎಸ್. ಕೃಷ್ಣೇಗೌಡ ಮಾತನಾಡಿ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಿಂದ 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗ ನಡೆಸಿರುವುದು ಪ್ರಜಾಪ್ರಭುತ್ವದ ದೌರ್ಭಾಗ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡನೀಯವಾಗಿದ್ದು, ದೇಶಾದ್ಯಂತ ಪ್ರತಿಭಟನೆಗಳು ನಡೆದರೂ ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಕೈಬಿಟ್ಟಿಲ್ಲ.ನೀಟ್ ಸೇರಿದಂತೆ ಪರೀಕ್ಷಾ ಅಕ್ರಮಗಳಿಗೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಬಿಜೆಪಿ ಸರ್ಕಾರ ದೇಶದ ಯುವಜನರ ಭವಿಷ್ಯದ ಕನಸುಗಳನ್ನು ನಾಶಪಡಿಸುತ್ತಿದ್ದು, ಜನರು ಮುಂಬರುವ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಹಾಲಪ್ಪ ಗೌಡ,ಸಿ.ಸುರೇಶ್ ಗೌಡ,ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಮರ್ ಡಿಸೋಜಾ,ಪ್ರಧಾನ ಕಾರ್ಯದರ್ಶಿ ಸುರೇಶ್ ಎಚ್.ಎಸ್.,ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಶ್ರಫ್,ಕೆ.ಪಿ.ಟಿ.ಸಿ.ಎಲ್ ಸಲಹಾ ಸಮಿತಿ ಸದಸ್ಯ ಉಮೇಶ್ ದೇವರಹಳ್ಳಿ,ಹೋಬಳಿ ಅಧ್ಯಕ್ಷರಾದ ಕೆಳಗೂರು ಪೂರ್ಣೇಶ್,ಸಿದ್ಧಾಂತ್,ಆವತಿ ದಿಣ್ಣೆಕೆರೆ ಪೂರ್ಣೇಶ್, ಹೋಬಳಿ ಉಪಾಧ್ಯಕ್ಷ ಕಿರಣ್,ಕಾರ್ಯದರ್ಶಿ ರವಿಚಂದ್ರ, ಮುಖಂಡರಾದ ಮುಳ್ಳುಂಡೆ ಮಂಜುನಾಥ್,ಮಮತಾ ಗುರುಮೂರ್ತಿ,ಎ.ಯು.ಇಬ್ರಾಹಿಂ,ರಮೇಶ್ ಆಚಾರ್ಯ,ಈರೇಗೌಡ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಸ್ಥಾನಿಕ ಸಂಪಾದಕರು.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

About Author

Leave a Reply

Your email address will not be published. Required fields are marked *

You may have missed