“ಶಾಸಕಿ ನಯನಾ ಮೋಟಮ್ಮ ವಿರುದ್ಧ ಭುಗಿಲೆದ್ದ ಭಿನ್ನಮತ : ಮೂಡಿಗೆರೆ ಕಾಂಗ್ರೆಸ್ ಹಿರಿಯ ಮುಖಂಡರಿಂದ ಕೆ.ಪಿ.ಸಿ.ಸಿ.ಅಧ್ಯಕ್ಷರಿಗೆ ದೂರು.”
1 min read
ಮೂಡಿಗೆರೆ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಹಲವು ಹಿರಿಯ ನಾಯಕರು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಶಾಸಕಿ ನಯನಾ ಮೋಟಮ್ಮ ಅವರ ಕಾರ್ಯವೈಖರಿ ವಿರುದ್ಧ ದೂರು ಸಲ್ಲಿಸಿದ್ದಾರೆ.ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಿರುವ ದೂರಿನಲ್ಲಿ ಶಾಸಕಿ ನಯನಾ ಮೋಟಮ್ಮ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.

2023 ರ ಮೂಡಿಗೆರೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಶ್ರೀಮತಿ ನಯನ ಮೋಟಮ್ಮನವರನ್ನು ಕಣಕ್ಕಿಳಿಸಿದ್ದು, ಕಾರ್ಯಕರ್ತರು ಮತ್ತು ಮುಖಂಡರುಗಳ ಅವಿರತ ಶ್ರಮದಿಂದಾಗಿ 722 ಮತಗಳ ಅಲ್ಪ ಅಂತರದಿಂದ ಶಾಸಕಿಯಾಗಿ ಆಯ್ಕೆಯಾಗಿರುತ್ತಾರೆ. ಅವರು ಆಯ್ಕೆಯಾಗಿ 3 ವರ್ಷಗಳು ಕಳೆದಿದ್ದು, ಯಾವುದೇ ಗುರುತರವಾದ ಅಭಿವೃದ್ಧಿ ಕೆಲಸ ಮಾಡದೇ ಇದ್ದು, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತ ಬಂದಿರುತ್ತಾರೆ. ಅವರ ಈ ವ್ಯತಿರಿಕ್ತ ನಡವಳಿಕೆಯಿಂದಾಗಿ ಪಕ್ಷದ ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರುಗಳು ತೀವ್ರ ಬೇಸರಗೊಂಡಿದ್ದು, ಮುಂದಿನ ಯಾವುದೇ ಚುನಾವಣೆಯಲ್ಲಿ ಪಕ್ಷದ ಗೆಲ್ಲಲಾರದಂತಹ ಪರಿಸ್ಥಿತಿ ನಿರ್ಮಾಣಗೊಂಡಿರುತ್ತದೆ.
ಪಕ್ಷದ ಅಧಿಕೃತ ಕಛೇರಿ ಇದ್ದರೂ ಶಾಸಕರಾಗಿ ಆಯ್ಕೆಯಾದ ನಂತರ ಇದುವರೆಗೂ ಪಕ್ಷದ ಕಛೇರಿಗೆ ಒಮ್ಮೆಯೂ ಭೇಟಿಕೊಟ್ಟಿರುವುದಿಲ್ಲ ಹಾಗೂ ಅಧ್ಯಕ್ಷರ ಸೂಚನೆಯ ಮೇರೆಗೆ ನಡೆಯುವ ಯಾವುದೇ ಸಭೆಗಳಲ್ಲಿ ಭಾಗವಹಿಸಿರುವುದಿಲ್ಲ. ಪಕ್ಷದ ಕಛೇರಿಯಲ್ಲಿ ಆಚರಿಸುವ ರಾಷ್ಟ್ರೀಯ ಹಬ್ಬ, ಸಂತಾಪ ಸೂಚಕ ಸಭೆ ಅಥವಾ ಇತರೆ ಯಾವುದೇ ಸಭೆಗಳಲ್ಲಿ ಭಾಗವಹಿಸುವುದಿಲ್ಲ.
ಪಕ್ಷದ ಅಧಿಕೃತ ಕಛೇರಿ ಇದ್ದರೂ ಪಕ್ಷದ ಕಛೇರಿಗೆ ಬರದೇ ತಮ್ಮ ನಿವಾಸದಲ್ಲಿ ಗೃಹಕಛೇರಿ ತೆರೆದು ಸಾರ್ವಜನಿಕರ ಭೇಟಿಗೆ ಅವಕಾಶ ನೀಡಿರುತ್ತಾರೆ. ಗೃಹ ಕಛೇರಿಯು ಮೂಡಿಗೆರೆ ತಾಲ್ಲೂಕು ಕೇಂದ್ರದಿಂದ ದೂರ ಇದ್ದು, ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರು ಮುಖಂಡರುಗಳು ಭೇಟಿ ನೀಡುವುದು ಕಷ್ಟಸಾಧ್ಯವಾಗಿರುತ್ತದೆ. ಇದರಿಂದ ಎಲ್ಲರಿಗೂ ಅನಾನುಕೂಲವಾಗುತ್ತಿದೆ ಎಂದು ಸಾರ್ವಜನಿಕವಾಗಿ ಆರೋಪಗಳು ಕೇಳಿಬಂದಿರುತ್ತದೆ.
ಪಕ್ಷಕ್ಕಾಗಿ ಸಾಕಷ್ಟು ವರ್ಷಗಳಿಂದ ದುಡಿದ ಹಿರಿಯ ಕಾಂಗ್ರೆಸ್ ಮುಖಂಡರುಗಳನ್ನು ಕಡೆಗಣಿಸಿದ್ದು 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಆರ್.ಎಸ್.ಎಸ್.. ಭಜರಂಗದಳ ಕಾರ್ಯಕರ್ತರ ಪಟಾಲಂ ಈಗ ಶಾಸಕರ ಅತ್ಯಾಪ್ತರಾಗಿರುತ್ತಾರೆ. ಪಕ್ಷದ ಚಟುವಟಿಕೆಗಳಿಗೆ ಇವರುಗಳಿಂದ ಸಾಕಷ್ಟು ಹಿನ್ನಡೆಯಾಗುತ್ತಿದ್ದು. ಮೂಲ ಕಾಂಗ್ರೆಸ್ ಕಾರ್ಯಕರ್ತರು ಅವಕಾಶ ವಂಚಿತರಾಗಿ ಪಕ್ಷದ ಚಟುವಟಿಕೆಗಳಿಂದ ಬಹುತೇಕ ದೂರ ಉಳಿದಿರುತ್ತಾರೆ.
ಸಮನ್ವಯ ಸಮಿತಿಯೊಂದನ್ನು ಪ್ರತಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಂತದಲ್ಲಿ ರಚಿಸುವಂತೆ ಹಿಂದಿನ ಕೆ.ಪಿ.ಸಿ.ಸಿ ಅಧ್ಯಕ್ಷರು ಸ್ಪಷ್ಟ ನಿರ್ದೇಶನ ನೀಡಿದ್ದರೂ ಶಾಸಕರು ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸದೇ ಇದುವರೆಗೂ ಯಾವುದೇ ಸಮನ್ವಯ ಸಮಿತಿ ರಚನೆ ಮಾಡಿರುವುದಿಲ್ಲ. ಸಮನ್ವಯ ಸಮಿತಿ ರಚಿಸುವ ಬಗ್ಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರಸ್ತಾಪ ಮಾಡಿದರೆ ಸಮನ್ವಯ ಸಮಿತಿಯ ಅವಶ್ಯವೇನಿದೆ? ಎಂದು ಪಕ್ಷದ ಸಲಹೆಯನ್ನು ಅಲ್ಲಗಳೆದಿರುತ್ತಾರೆ.
ಸರ್ಕಾರದ ನಾಮ ನಿರ್ದೇಶನಗಳನ್ನು ತಾವೇ ಸರ್ವಾಧಿಕಾರಿ ಧೋರಣೆಯಿಂದ ಏಕಪಕ್ಷೀಯವಾಗಿ ಪಟ್ಟಿ ತಯಾರಿಸಿಕೊಂಡು ಸರ್ಕಾರದಿಂದ ಆದೇಶ ಮಾಡಿಸಿರುತ್ತಾರೆ. ಪಕ್ಷದ ಯಾವ ಮುಖಂಡರ ಶಿಫಾರಸ್ಸನ್ನು ಕೂಡ ಪರಿಗಣಿಸಿರುವುದಿಲ್ಲ. ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡುವ ಪಕ್ಷದ ತತ್ವ ಸಿದ್ಧಾಂತಕ್ಕೆ ಬೆಲೆ ಕೊಡದೇ ಮನಸೋ ಇಚ್ಛೆ ತನ್ನ ಹಿಂಬಾಲಕರನ್ನು ನೇಮಕ ಮಾಡಿ ಮೂಲ ಕಾಂಗ್ರೆಸಿಗರನ್ನು ಕಡೆಗಣಿಸಿರುತ್ತಾರೆ.
ಪ್ರಮೋದ್ ಮುತಾಲಿಕ್ ಎಂಬ ಕೋಮುವಾದಿಗೆ ರಾಜ್ಯದೆಲ್ಲೆಡೆ ನಿಷೇಧ ಹೇರಿದ್ದರೂ ಶ್ರೀಮತಿ ನಯನ ಮೋಟಮ್ಮ, ತನ್ನ ಜೊತೆ ಇರುವ ಆರ್.ಎಸ್.ಎಸ್. ಭಜರಂಗದಳ ಪಟಾಲಂಗಳ ಸಲಹೆಯಂತೆ 2025ರ ಮೂಡಿಗೆರೆ ಹಿಂದೂ ಮಹಾಗಣಪತಿ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್ಗೆ ಆದ್ದೂರಿ ಸ್ವಾಗತ ನೀಡುವುದರೊಂದಿಗೆ ಶಾಸಕರು ವೇದಿಕೆ ಹಂಚಿಕೊಂಡಿರುತ್ತಾರೆ. ಇದರಿಂದಾಗಿ ಕಾಂಗ್ರೆಸ್ ಪಕ್ಷವನ್ನು ಸದಾ ಬೆಂಬಲಿಸಿಕೊಂಡು ಬಂದಿರುವ ಮುಸ್ಲೀಂ ಸಮುದಾಯದ ಭಾವನೆಗಳಿಗೆ ನೋವುಂಟಾಗಿರುತ್ತದೆ.ಈ ಬಗ್ಗೆ ಶಾಸಕರ ಬಳಿ ಮುಸ್ಲಿಂ ಸಮುದಾಯದ ಮುಖಂಡರು ತಮ್ಮ ಅಳಲು ಹೇಳಿಕೊಂಡಾಗ ಶಾಸಕರು ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ.
ಪಕ್ಷದ ಶ್ರೇಣಿಕೃತ ವ್ಯವಸ್ಥೆ ಇರುವಂತೆ ಎ.ಐ.ಸಿ.ಸಿ, ಕೆ.ಪಿ.ಸಿ. ಡಿಸಿಸಿ ಬಿಸಿ, ಘಟಕ ಮತ್ತು ಬೂತ್ ಮಟ್ಟದ ಸಮಿತಿಗಳ ಹೊರತಾಗಿ ಶಾಸಕರು ಪ್ರತ್ಯೇಕವಾಗಿ ತನ್ನ ಹಿಂಬಾಲಕರುಗಳನ್ನು ಹೋಬಳಿ ಅಧ್ಯಕ್ಷರನ್ನು ನೇಮಕ ಮಾಡಿ ಅವರುಗಳ ಮೂಲಕವೇ ಅನುದಾನ ಹಂಚಿಕೆ. ವರ್ಗಾವಣೆ, ವ್ಯವಹಾರ ನಡೆಸುತ್ತಿದ್ದಾರೆ. ಪಕ್ಷದ ಮುಂಚೂಣಿ ಘಟಕಗಳಿಗೆ ಕವಡೆ ಕಿಮ್ಮತ್ತಿನ ಬೆಲೆಯೂ ಶಾಸಕರಿಂದ ಸಿಗುತ್ತಿಲ್ಲ. ಕಾಂಟ್ರಾಕ್ಟ್ ಲಾಭಿ ಮತ್ತು ಟ್ರಾನ್ಸಫರ್ ಲಾಭಿ ಬಿಟ್ಟರೆ ಬೇರೆ ಯಾವುದೇ ಪಕ್ಷ ಸಂಘಟಿಸುವ ಕಾರ್ಯಕ್ರಮಗಳು ಶಾಸಕರಿಂದ ನಡೆಯುತ್ತಿಲ್ಲ.
ಚುನಾವಣಾ ಆಯೋಗಕ್ಕೆ ಬಿ.ಎಲ್.ಎ.2 ಗಳ ನೇಮಕಾತಿ ಪಟ್ಟಿಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಅನುಮೋದನೆ ಪಡೆದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕಾಗಿರುತ್ತದೆ. ಆದರೆ, ಶಾಸಕಿ ಶ್ರೀಮತಿ ನಯನ ಮೋಟಮ್ಮನವರು ತಮ್ಮದೇ ಪಟಾಲಂನ ಬಿ.ಎಲ್.ಎ.2 ಪಟ್ಟಿ ತಯಾರಿಸಿ ಪರ್ಯಾಯ ತಂಡ ರಚಿಸಿಕೊಳ್ಳುವ ಹುನ್ನಾರ ನಡೆಸಿರುತ್ತಾರೆ.
ಶಾಸಕಿಯಾಗಿ ಆಯ್ಕೆಯಾದ ನಂತರ ಕಳೆದ ಮೂರು ವರ್ಷಗಳಲ್ಲಿ ಯಾವುದೇ ಸ್ಥಳೀಯ ಸಂಸ್ಥೆ ಚುನಾವಣೆಗಳ ಬಗ್ಗೆ ಆಸಕ್ತಿ ತೋರಿಸದೆ ಒಂದೇ ಒಂದು ಚುನಾವಣೆಯನ್ನು ಗೆದ್ದಿರುವುದಿಲ್ಲ. ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಸ್ಥಳೀಯ ಜೆ.ಡಿ.ಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಟಿ.ಎ.ಪಿ.ಸಿ.ಎಂ.ಎಸ್. ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಸಂದರ್ಭದಲ್ಲಿ ಬೆಂಬಲಿಸದೆ ತನ್ನ ಪಟಾಲಂ ಹಿಂಬಾಲಕರ ಮೂಲಕ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿರುತ್ತಾರೆ.
ಬ್ಲಾಕ್ ಅಧ್ಯಕ್ಷರು ನಿಕಟಪೂರ್ವ ಬ್ಲಾಕ್ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರುಗಳು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾಂಗ್ರೆಸಿನ ಹಿರಿಯ ನಾಯಕರುಗಳ ಅಭಿಪ್ರಾಯಕ್ಕೆ ವಿರುದ್ಧವಾಗಿ ವರ್ತಿಸಿ ಸ್ಪಂದನೆ ನೀಡದೆ ನಿರಾಕರಣೆ ಮಾಡಿರುತ್ತಾರೆ.
ಈ ಬಾರಿಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿ ತನ್ನ ಹಿಂಬಾಲಕ ಪಟಾಲಂನ ಅಭ್ಯರ್ಥಿಯೊಬ್ಬನೇ ಆಯ್ಕೆಯಾಗುವಂತೆ ನೋಡಿಕೊಂಡಿದ್ದಾರೆ.. ಆಯ್ಕೆಯಾಗಿರುವ ಅಭ್ಯರ್ಥಿಯು ವಾಮಮಾರ್ಗದಿಂದ ಆಯ್ಕೆಯಾಗಿರುವ ಬಗ್ಗೆ ಸಾಕಷ್ಟು ಸಾಕ್ಷಾಧಾರಗಳಿದ್ದು, ಈ ಬಗ್ಗೆ ತನಿಖೆ ಮಾಡಲು ಸಮಿತಿಯೊಂದನ್ನು ರಚಿಸುವಂತೆ ಆಗ್ರಹಿಸುತ್ತೇವೆ.
ಶಾಸಕರು ಕಾರ್ಯಕರ್ತರು ಮತ್ತು ಮುಖಂಡರುಗಳನ್ನು ಕಡೆಗಣಿಸುತ್ತಿರುವ ಬಗ್ಗೆ ಹಾಗೂ ಮುಂಬರುವ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸುತ್ತೇವೆಂಬ ಆತಂಕವನ್ನು ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ವ್ಯಕ್ತಪಡಿಸಲಾಗಿತ್ತು. ಮೂಡಿಗೆರೆ ಕ್ಷೇತ್ರದ ಶಾಸಕರು ಇದುವರೆಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯು ಯಾವುದೇ ಸಭೆಗೆ ಭಾಗವಹಿಸಿರುವುದಿಲ್ಲ.
ಶಾಸಕರು ಹಾಕಿಸುವ ಯಾವುದೇ ಪ್ಲೇಕ್ಸ್ಗಳಲ್ಲಿ ಪಕ್ಷದ ನಾಯಕರ ಪೋಟೊಗಳು, ಕಾಂಗ್ರೆಸ್ ಪಕ್ಷದ ಹಸ್ತದ ಗುರುತು ಇರುವುದಿಲ್ಲ. ಶಾಸಕರು ಮತ್ತು ಅವರ ತಾಯಿ ಮಾಜಿ ಮಂತ್ರಿ ಶ್ರೀಮತಿ ಮೋಟಮ್ಮನವರ ಪೋಟೊ ಹೊರತುಪಡಿಸಿ ಯಾವುದೇ ನಾಯಕರ ಪೋಟೊ ಇರುವುದಿಲ್ಲ. ಇದರಿಂದ ಪಕ್ಷಕ್ಕೆ ಮುಜುಗರ ಉಂಟಾಗಿರುತ್ತದೆ.
ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಅಥವಾ ಮುಖಂಡರು ಮರಣ ಹೊಂದಿದರೆ ಶಾಸಕರು ಕ್ಷೇತ್ರದಲ್ಲೇ ಇದ್ದರೂ ಕೂಡ ಅಂತಿಮ ದರ್ಶನ ಪಡೆಯಲು ಇಚ್ಚಿಸುವುದಿಲ್ಲ. ಮರಣ ಹೊಂದಿದ ಒಂದು ವಾರದ ನಂತರ ನಾಮಕಾವಸ್ಥೆಗೆ ಅವರ ಮನೆಗಳಿಗೆ ಹೋಗಿ ಸಾಂತ್ವಾನ ಹೇಳುವುದನ್ನು ರೂಢಿ ಮಾಡಿಕೊಂಡಿರುತ್ತಾರೆ. ಇದು ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತದೆ.
ಶಾಸಕರು ಆಯ್ಕೆಯಾದ ನಂತರ ವಾರದಲ್ಲಿ ಎರಡು ದಿನ ಮಾತ್ರ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ, ಕಾರ್ಯಕರ್ತರಿಗೆ ಕಾಣಸಿಗುತ್ತಾರೆ. ಮಿಕ್ಕಂತೆ ಶಾಸಕರ ಅವಶ್ಯವಿದ್ದಲ್ಲಿ ಬೆಂಗಳೂರಿಗೆ ಹೋಗಿ ನೋಡಬೇಕಾದ ಪರಿಸ್ಥಿತಿ ಉಂಟಾಗಿದೆ.
ಈ ಮೇಲ್ಕಂಡ ಎಲ್ಲಾ ವಿಷಯಗಳ ಬಗ್ಗೆ ಪರಿಶೀಲಿಸಿ ಪಕ್ಷ ಸಂಘಟನೆಯ ಹಿತದೃಷ್ಟಿಯಿಂದ ಸರಿಪಡಿಸಬೇಕಾದ ಅವಶ್ಯಕತೆ ಇದೆ. ಪಕ್ಷ ಮತ್ತು ಶಾಸಕರ ಹೊಂದಾಣಿಕೆಯ ಕೊರತೆ ಹೀಗೆಯೇ ಮುಂದುವರಿದರೆ ಮುಂದಿನ ಯಾವುದೇ ಚುನಾವಣೆಗಳನ್ನು ಪಕ್ಷವು ಎದುರಿಸುವುದು ಕಷ್ಟವೆಂಬುದು ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಭಿಪ್ರಾಯವಾಗಿದೆ.
ಆದ್ದರಿಂದ, ತಾವುಗಳು ಅತೀ ಶೀಘ್ರವಾಗಿ ಕೆ.ಪಿ.ಸಿ.ಸಿ ವತಿಯಿಂದ ತಂಡವೊಂದನ್ನು ರಚಿಸಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಲು ಕ್ರಮ ಕೈಗೊಂಡು ಪರಿಶೀಲಿಸಿ ಕಾರ್ಯಕರ್ತರ ಅಭಿಪ್ರಾಯ ಪಡೆದು ವರದಿ ತರಿಸಿಕೊಳ್ಳುವಂತೆ ಮನವಿ ಮಾಡುತ್ತಾ ಪಕ್ಷಕ್ಕೆ ಆಗುತ್ತಿರುವ ಹಾನಿಯನ್ನು ತಡೆಯಲು ತುರ್ತು ಕ್ರಮ ವಹಿಸುವಂತೆ ಈ ಮೂಲಕ ಕೋರುತ್ತೇವೆ ಎಂದು ತಮ್ಮ ಪತ್ರದಲ್ಲಿ ದೂರಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಮುಖಂಡರಾದ ಎಂ.ಪಿ.ಮನು. ಬಿ.ಎಸ್.ಜಯರಾಂ. ಡಿ.ಕೆ.ಉದಯಶಂಕರ್. ಜಿ.ಹೆಚ್. ಹಾಲಪ್ಪಗೌಡ, ಯು.ಎನ್. ಚಂದ್ರೇಗೌಡ, ಅಕ್ರಂ ಹಾಜಿ, ಪ್ರಸನ್ನ ಮರಗುಂದ, ಬಿ.ಆರ್. ದಶರಥ್, ಕುಮಾರ್ ರಾಜ್ ಅರಸ್, ಯು.ಹೆಚ್. ಹೇಮಶೇಖರ್, ಸಂಪತ್ ಮುಗ್ರಹಳ್ಳಿ, ಕೇಶವ ಸುವರ್ಣ, ಉಮ್ಮರ್ ಬಣಕಲ್, ಮತ್ತಿತರರಿದ್ದರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ಬ್ಯೂರೋ ನ್ಯೂಸ್,ಅವಿನ್ ಟಿವಿ.

