ಈಗ ಎಲ್ಲೆಲ್ಲೂ “ನನ್ನ ತೇಜಸ್ವಿ” ನಾಟಕದ್ದೆ ಅಹ್ ಎಂಬ ಹವಾ….
1 min read
ಅವಿನ್ ಟಿವಿ ಸುದ್ದಿಜಾಲ ✒️: ಒಂದು ನಾಟಕ ಸಾವಿರ ಭಾವನೆಗಳು~ ಈಗ ಎಲ್ಲೆಲ್ಲೂ “ನನ್ನ ತೇಜಸ್ವಿ” ನಾಟಕದ್ದೆ ಅಹ್ ಎಂಬ ಹವಾ.
~~~~~~~~
ಇನ್ನೊಬ್ರನ್ನ ಕೊಂದು ಉಳಿಸಿಕೊಳ್ಳಬಹುದಾದ ಧರ್ಮ ಯಾವುದಾದರು ಇದೆಯೇನ್ರೀ! ಇದ್ರೆ ಅದನ್ನ ಧರ್ಮ ಅಂತ ಹೇಳ್ಲಿಕ್ಕೆ ಸಾಧ್ಯವೇನ್ರಿ ? ಸ್ವತಃ ತೇಜಸ್ವಿಯವರೇ ಮಾತನಾಡಿದ ಈ ಮೊದಲ ಮಾತಿನೊಂದಿಗೆ ನಾಟಕ ಆರಂಭವಾಗುತ್ತದೆ…
ತೇಜಸ್ವಿಯವರು ತಮ್ಮ ಬದುಕಿನ ಕೊನೆಯ ದಿನಗಳನ್ನು ಕಳೆದ ತಮ್ಮ ಮನೆಯ *”ನಿರುತ್ತರ”* ಎಂಬ ನಾಮಫಲಕ್ಕೆ ಕತ್ತಲೆಯ ಮಧ್ಯೆ ಮಿನುಗು ದೀಪಗಳನ್ನು ಹಾಕಿ ಬೆಳಗುವ ಮೂಲಕ ಒಂದು ವೇದನೆಯೊಂದಿಗೆ ನಾಟಕಕ್ಕೆ ತೆರೆ ಬೀಳುತ್ತದೆ.
ತೇಜಸ್ವಿಯವರ ಮನೆಯ ನಾಯಿಗೆ ತಾಯಿಯಾದ ರಾಜೇಶ್ವರಿಯವರು 1961ರ ಕಾಲೇಜು ದಿನಗಳಿಂದ 1966ರ ವರೆಗೆ ಮಂತ್ರ ಮಾಂಗಲ್ಯವಾಗುವ ತನಕ ಸುಮಾರು ಐದು ವರ್ಷಗಳ ಕಾಲ ನಿರುತ್ತರಕ್ಕೆ ಬರುವುದಕ್ಕಾಗಿ ನಿರಂತರವಾಗಿ ಪ್ರೇಮದ ಚಟಪಟಿಕೆಯಲ್ಲಿದ್ದವರು.
ಈ ಐದು ವರ್ಷಗಳ ಕಾಲಾವಧಿಯಲ್ಲಿ ತೇಜಸ್ವಿಯವರು ರಾಜೇಶ್ವರಿ ಅವರಿಗೆ ಸುಮಾರು 296 ಪ್ರೇಮ ಪತ್ರಗಳನ್ನು ರವಾನಿಸಿದ್ದರು ಎಂಬುದು ಒಂದು ಕೌತುಕದ ಸಂಗತಿಯನ್ನು ನಾಟಕದೊಳಗೆ ಬಿಚ್ಚಿಟ್ಟಿದ್ದಕ್ಕೆ ಪ್ರೇಕ್ಷಕರು ಅದರಲ್ಲೂ ಯುವ ಸಮೂಹ ಹುಬ್ಬೇರಿಸಿ ಚಪ್ಪಾಳೆ ತಟ್ಟಿದ್ದು ಪ್ರೇಮಕ್ಕೆ ಸೈ ಸೈ ಎನ್ನುವಂತಿತ್ತು.
ತೇಜಸ್ವಿ ~ರಾಜೇಶ್ವರಿ ಅವರ ಪ್ರೇಮಕಥನ,ದಾಂಪತ್ಯ ಜೀವನದ ನಿಜಘಟನೆಗಳು ನಾಟಕಕ್ಕಾಗಿ ನಾಟಿಕೀಕರಣಗೊಂಡಿದ್ದರೂ ಕೂಡ ಅದು ಒಂದು ಸಾವಯುವದಂತೆ ಸಹಜವಾಗಿ ಮೂಡಿ ಬಂದಿತು.
ಒಂದು ನಿರೂಪಣೆಯ ಮೂಲಕ ಸಾಗುವ ನಾಟಕದ ಮಧ್ಯದಲ್ಲಿ ಬರುವ ಪಾತ್ರಗಳು,ತೇಜಸ್ವಿ ರಾಜೇಶ್ವರಿ ಅವರ ಬದುಕು, ಪ್ರೇಮದ ಚಟಪಟಿಕೆ, ದಾಂಪತ್ಯದ ಸೊಗಡು, ಸಿಟ್ಟು ಸಡವಿನ ಮಧ್ಯೆಯೂ ಅವರಿಬ್ಬರು ಆಲಂಗಿಸಿಕೊಳ್ಳುವ ದಾಂಪತ್ಯ ಬದುಕಿನ ಪರಿ, ಪ್ರೇಮದ ಪಥ್ಯ, ತಮ್ಮ ಸಾಮಾಜಿಕ ಮತ್ತು ಕೌಟುಂಬಿಕ ನಡವಳಿಕೆಯ ನೆರವಂತಿಕೆ ಮತ್ತು ನಿಷ್ಟುರತೆಯನ್ನು ನನ್ನ ತೇಜಸ್ವಿ ನಾಟಕ ಎಲ್ಲಿಯೂ ಲಯ ತಪ್ಪದೇ ಹೇಳುತ್ತಾ ಹೋಗುತ್ತದೆ. ಆ ಮಟ್ಟಿಗೆ ಎಲ್ಲ ಕಲಾವಿದರನ್ನು ನಿರ್ದೇಶಕ ಗಿರಿರಾಜ ದುಡಿಸಿಕೊಂಡಿದ್ದಾರೆ ಎಂಬುದಕ್ಕೆ ಸುಮಾರು 100 ನಿಮಿಷಗಳ ನಾಟಕದ ಉದ್ದಕ್ಕೂ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಲೇ ಕಲಾವಿದರಿಗೆ ಗೌರವಿಸುತ್ತಿದ್ದ ಭಾವ ಮತ್ತು ಬುದ್ಧಿಗೆ ಸಾಕ್ಷಿಯಾಯಿತು.
ಇನ್ನು, ತೇಜಸ್ವಿ ಮತ್ತು ರಾಜೇಶ್ವರಿ ದಂಪತಿಗಳ ಪಾತ್ರಧಾರಿಗಳಾಗಿ ಅಭಿನಯಿಸಿದ ಪರಂ ಮತ್ತು ಸವಿತಾಪರಂ ದಂಪತಿಗಳು ಒಂದರ್ಥದಲ್ಲಿ ಇವರಿಬ್ಬರು ಅಭಿನಯಿಸಲಿಲ್ಲ, ತೇಜಸ್ವಿ ಮತ್ತು ರಾಜೇಶ್ವರಿ ದಂಪತಿಗಳಾಗಿ ಅನುಭವಿಸಿ ಅವರಿಬ್ಬರನ್ನು ವೇದಿಕೆಯ ಮೇಲೆ ತಂದರು.
ಅಂದಿನ ಕಾಲದ ಆಟೋ ಬಯೋಗ್ರಫಿಯನ್ನು ನಾಟಕ ರೂಪಕ್ಕೆ ತರುವುದು ಕಷ್ಟದ ಕೆಲಸ, ಒಂದು ಬಯೋಗ್ರಫಿಯನ್ನು ನಾಟಕ ಮಾಡುವಲ್ಲಿ ಹಲವರು ವಿಫಲರಾಗಿದ್ದಾರೆ,ಆದರೆ ರಾಜೇಶ್ವರಿ ತೇಜಸ್ವಿ ಅವರ ಈ ಆಟೋಬಯೋಗ್ರಫಿಯನ್ನು ನಿರ್ದೇಶಕ ಗಿರಿರಾಜ ಅವರು ಒಂದು ಜತನದಿಂದ ಎಚ್ಚರಿಕೆಯೊಂದಿಗೆ ತೇಜಸ್ವಿ ಅಂತಹ ತಾಜಾತನದೊಂದಿಗೆ ಚೇತೋಹಾರಿಯಾಗಿ ಕಟ್ಟಿಕೊಟ್ಟಿದ್ದಾರೆ.
ನಾಟಕದ ಪ್ರತಿ ಪ್ರದರ್ಶನವ ಒಂದು ಪ್ರಯೋಗವಿದ್ದಂತೆ, ಅದು ತನ್ನ ಪ್ರತಿ ಪ್ರದರ್ಶನವನ್ನು ಒಂದು ಸವಾಲಿನಂತೆ ಸ್ವೀಕರಿಸಬೇಕಾಗುತ್ತದೆ ಮತ್ತು ಮುರಿದು ಕಟ್ಟುತ್ತಾ ಸಾಗಬೇಕಾಗುತ್ತದೆ. ತೇಜಸ್ವಿ ಅವರನ್ನು ನೋಡಿದ, ಅವರನ್ನು ಓದಿದ, ಅವರ ಒಡನಾಡಿಗಳಿಗೆ ಇನ್ನಷ್ಟು ಬೇಕಿತ್ತು, ಮತ್ತೊಂದಿಷ್ಟು ಹೇಳಬೇಕಿತ್ತು, ಧ್ವನಿಗಳ ಏರಿಳಿತದಲ್ಲಿ, ದೇಹದ ಹಾವಭಾವಗಳ ಎತ್ತರ ಮತ್ತು ಆಳಕ್ಕೆ ಒಂದಷ್ಟು ಕೊಂಚ ಇಳಿಯಬೇಕಿತ್ತು ಅನಿಸಿತು.
ಅಚ್ಚರಿ ಮತ್ತೆ ಅಸಡ್ಡೆ ಎರಡು ಆಗಿದ್ದ ತೇಜಸ್ವಿಯವರು ನಾನಾ ಕಾರಣಗಳಿಗಾಗಿ ಈ ದುರಿತಕಾಲದ ಈ ವರ್ತಮಾನದಲ್ಲಿ ಅವರ ಧ್ವನಿ ಬೇಕಾಗಿತ್ತು ಎಂದು ಹಲವರಿಗೆ ಅನಿಸಿದ್ದುಂಟು, ಆದರೆ, ತೇಜಸ್ವಿ ಇನ್ನೂ ಜೀವಂತವಾಗಿ ಓಡಾಡುತ್ತಿದ್ದಾರೆ ಅಂತ ನಾಟಕದ ಮೂಲಕ ಅನಿಸಿದ್ದು ಪರಂ ಅವರ ಅಭಿನಯದ ಪರಮ ಸತ್ಯವಾಗಿತ್ತು.
ತೇಜಸ್ವಿ ರಾಜೇಶ್ವರಿಯವರನ್ನು ಇಷ್ಟಪಡುವವರು ಎಂದಿಗೂ ಈ ನಾಟಕವನ್ನು ನೋಡುವುದನ್ನು ಮರೆಯಬೇಡಿ ಎಂದು
ರಂಗ ನನ್ನಿಗಳನ್ನು ಮಾಡಿಕೊಳ್ಳುತ್ತಾ….
ನನ್ನ ಆತ್ಮೀಯರು, ತೇಜಸ್ವಿ ಪ್ರತಿಷ್ಠಾನದ ಸದಸ್ಯರು ಆದ ಉಪನ್ಯಾಸಕಿ ದೀಪಾ ಹಿರೇಗುತ್ತಿಯವರು ನಮ್ಮೊಟ್ಟಿಗೆ ನಾಟಕವನ್ನು ವೀಕ್ಷಿಸಿ ನಾಟಕದ ಬಗ್ಗೆ ಅವರು ಹಂಚಿಕೊಂಡ ಈ ಕೆಳಕಂಡ ದೀಪಾ ಅವರ ಅಭಿಪ್ರಾಯವನ್ನು ಕೂಡ ಅವಿನ್ ಟಿವಿ ಸುದ್ದಿಜಾಲ ತನ ಓದುಗರಿಗಾಗಿ ಕೊಡ ಮಾಡುತ್ತಿದೆ.
ಇದು, ಲೇಖಕಿ ದೀಪಾ ಹಿರೇಗುತ್ತಿ ಅವರ ವಿಶ್ಲೇಷಣೆ 👇
ಮೊನ್ನೆ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ‘ನನ್ನ ತೇಜಸ್ವಿ’ ನಾಟಕ ಪ್ರದರ್ಶನವಿತ್ತು. ನಮ್ಮ ಕೊಟ್ಟಿಗೆಹಾರದ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಈ ನಾಟಕ ನೋಡಲು ಹಣಕೊಟ್ಟು ಬಂದ ಜನರಿಂದ ಕುವೆಂಪು ಕಲಾಮಂದಿರ ತುಂಬಿತ್ತು.
ನಿಜ ಹೇಳಲಾ? ತೇಜಸ್ವಿಯವರೆಂದರೆ ಅಷ್ಟು ಸುಲಭವಾಗಿ ಯಾವುದೇ ಪ್ರಕಾರಕ್ಕೆ ದಕ್ಕುವವರಲ್ಲ, ಇನ್ನು ಒಂದೂವರೆ ಗಂಟೆಯ ನಾಟಕಕ್ಕೆ ಇಡಿಯಾಗಿ ಅವರ ವ್ಯಕ್ತಿತ್ವವನ್ನು ಹಿಡಿದಿಡುವುದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ವಿಚಾರ ನಾಟಕ ನೋಡುವವರೆಗೆ ನನ್ನಲ್ಲೂ ಇತ್ತು. ಆದರೆ ಹ್ಯಾಟ್ಸ್ ಆಫ್ ಟು ನಿರ್ದೇಶಕ ಬಿ ಎಂ ಗಿರಿರಾಜ್. ಈ ನಾಟಕ ಎಕ್ಸಲೆಂಟ್ ಆಗಿ ಮೂಡಿಬಂದಿದೆ.
ಇಡೀ ಒಂದೂವರೆ ಗಂಟೆ ಜನರು ಪ್ರತೀ ದೃಶ್ಯಕ್ಕೂ ಚಪ್ಪಾಳೆ ಹಾಕುತ್ತ ನಗುತ್ತ ನೋಯುತ್ತ ಮೂಡಿಗೆರೆಯ ಪರಿಸರದವರೇ ಆಗಿಬಿಟ್ಟಿದ್ದರು. ಅಂದರೆ ಅಷ್ಟು ರಿಯಲಿಸ್ಟಿಕ್ ಆಗಿತ್ತು ನಾಟಕ. ತೇಜಸ್ವಿಯವರ ವ್ಯಕ್ತಿತ್ವವನ್ನು ಅದೆಷ್ಟು ಚೆನ್ನಾಗಿ ಹಿಡಿದಿಡಲಾಗಿದೆ ಎಂದರೆ ತೇಜಸ್ವಿಯವರ ವ್ಯಕ್ತಿತ್ವವನ್ನು ಅಚ್ಚುಕಟ್ಟಾಗಿ ಹೇಳಿದ ಅದರ subtleness ಗೆ ಸೂಕ್ಷ್ಮತೆಗೆ ನಿಜಕ್ಕೂ ದಂಗಾದೆ.
ಕೊಪ್ಪದಿಂದ ಐದು ಗಂಟೆ (ಹೋಗುತ್ತ ಬರುತ್ತ ತಲಾ ಎರಡೂವರೆ ಗಂಟೆ, ರೋಡುಗಳು ರಿಪೇರಿಯಾಗಿವೆ, ಇಲ್ಲದಿದ್ದರೆ ತಲಾ ಮೂರೂ ಕಾಲು ಗಂಟೆಯಾಗುತ್ತಿತ್ತು) ಪಯಣಿಸಿ ನಾಟಕ ನೋಡಿದ್ದೂ ಸಾರ್ಥಕವಾಯಿತು.
ಇನ್ನು ತೇಜಸ್ವಿ ಪಾತ್ರದಲ್ಲಿ ನಟಿಸಿರುವ ಕಲಾಮಾಧ್ಯಮ ಸಂಸ್ಥೆಯ ಪರಮ್ ಅಭಿನಯ ಅದ್ಭುತ. ರಾಜೇಶ್ವರಿಯವರ ಪಾತ್ರದಲ್ಲಿ ಸವಿತಾ ನಟಿಸಿಲ್ಲ, ಅವರೇ ರಾಜೇಶ್ವರಿಯವರಾಗಿಬಿಟ್ಟಿದ್ದಾರೆ ಅನ್ನುವಷ್ಟು ತಲ್ಲೀನತೆ. ನನಗೆ ಅಚ್ಚರಿಯಾಗಿದ್ದು ಅದು ಹೇಗೆ ಈ ಜೋಡಿ ಥೇಟ್ ತೇಜಸ್ವಿ ರಾಜೇಶ್ವರಿ ಜೋಡಿಯಂತೆಯೇ ಕಾಣುತ್ತೆ ಅಂತ! ಸಖತ್ ಮಾತ್ರ!
ಕಡಿದಾಳ್ ಶಾಮಣ್ಣನ ಪಾತ್ರ ಮಾಡಿದ ನಟರ ಹತ್ತಿರ ಅಷ್ಟು ದೊಡ್ಡ ಡೈಲಾಗ್ ಸಖತ್ತಾಗಿ ಡೆಲಿವರಿ ಮಾಡಿದ್ರಿ ಕಣ್ರೀ ಅಂದೆ, ಬರೀ ಎರಡೇ ಪೇಜು ಮೇಡಂ ಅಂದು ನಕ್ಕರು. ರಾಜೇಶ್ವರಿಯವರ ತಾಯಿ ಹಾಗೂ ಗೆಳತಿಯ ಪಾತ್ರ ಮಾಡಿದ ಹುಡುಗಿಯ ಅಭಿನಯ ಅದೆಷ್ಟು ಲೈವಲಿಯಾಗಿತ್ತೆಂದರೆ ಜನ ಬಹಳ ಮೆಚ್ಚಿಕೊಂಡರು. ಯಾವ ಪಾತ್ರವನ್ನೂ ಹೊಗಳದೇ ಇರುವಂತಿಲ್ಲ. ಕಾರಣ ಪ್ರತಿಯೊಂದು ಪಾತ್ರವೂ ಅಷ್ಟು ಅಚ್ಚುಕಟ್ಟು.
ನಾಟಕಕ್ಕಿಂತ ಮುಂಚೆ ನಾಟಕ ನೋಡಲು ಬಂದಿದ್ದ ಸ್ನೇಹಿತರಾದ ಮಧು ಸರ್ ಹತ್ತಿರ ನಾನೆಂದಿದ್ದೆ, ತೇಜಸ್ವಿಯವರಿದ್ದರೆ ತಮ್ಮ ಬಗ್ಗೆ ನಾಟಕ ಆಡಲು ಬಿಡುತ್ತಿರಲಿಲ್ಲ ಅಂತ . ಆದರೆ ನಾಟಕ ನೋಡಿದ ಮೇಲೆ ಹೇಳುತ್ತಿದ್ದೇನೆ, ತೇಜಸ್ವಿಯವರಿದ್ದರೆ ಖಂಡಿತ ಹೀಗನ್ನುತ್ತಿದ್ದರು, ಪರವಾಗಿಲ್ಲ ಕಣ್ರಯ್ಯಾ ಹುಡುಗ್ರು ಏನೋ ಅಂದುಕೊಂಡಿದ್ದೆ, ಚೆನ್ನಾಗಿ ಮಾಡಿದೀರಿ.
ಕೊಪ್ಪದಲ್ಲಿ ನಾಟಕ ಮಾಡಿಸಬೇಕು ಅಂತ ನಾವು ಅಂದುಕೊಂಡೆವು. ನಿಮ್ಮೂರಲ್ಲೂ ಮಾಡಿಸಿ. ನಾನು ಹೇಳಿದ್ದಕ್ಕೆ ಅಲ್ಲ. ನೀವು ಮೊದಲು ನಾಟಕ ನೋಡಿ. ನೀವೇ ನಿರ್ಧರಿಸಿ. ಅಭಿನಂದನೆಗಳು ಸಂಪೂರ್ಣ ತಂಡಕ್ಕೆ.
•••••••••••••••••••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

