लाइव कैलेंडर

February 2025
M T W T F S S
 12
3456789
10111213141516
17181920212223
2425262728  
21/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇಂದಿನ ಬೆಳಗು ಎಂದಿನಂತೆ ಇಲ್ಲ, ಏನೋ ಉತ್ಸಾಹ ಏನೋ ಉಲ್ಲಾಸ……

ಅಲಾರಾಂ ಶಬ್ದವೇ ತುಂಬಾ ತುಂಬಾ ನಾದಮಯವಾಗಿದೆ. ಹೊರಗಿನ ಹಕ್ಕಿಗಳ ಚಿಲಿಪಿಲಿ ಗಾನ, ಕೋಳಿಯ ಕೂಗು ಸಹ ಚೇತೋಹಾರಿಯಾಗಿದೆ. ದೇವಸ್ಥಾನದ ಸುಪ್ರಭಾತ, ಮಸೀದಿಯ ಅಜಾನ್, ಚರ್ಚಿನ ಪ್ರಾರ್ಥನೆ ಇಂದು ವಿಶೇಷ ಭಾವನೆಗಳನ್ನು ಉಕ್ಕಿಸುತ್ತಿದೆ. ದೇಹ ಮನಸ್ಸು ಹಗುರಾದಂತೆ ಅನಿಸುತ್ತಿದೆ. ಇಷ್ಟು ವರ್ಷಗಳ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಈ ಅನುಭವ, ಈ ಭಾವ. ಅದಕ್ಕೆ ಕಾರಣವೂ ಇದೆ…

ನನಗೆ ಅಪ್ಪ ಅಮ್ಮ ಎಂದರೆ ಪ್ರತ್ಯಕ್ಷ ದೇವರಿದ್ದಂತೆ. ಅವರ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದೇನೆ.

ಆದರೆ ಇತ್ತೀಚೆಗೆ ಆ ಒಂದು ದಿನ ” ಆ ಹುಡುಗಿ ” ಯನ್ನು ನೋಡಿದ ತಕ್ಷಣ ನನಗರಿವಿಲ್ಲದೇ ಏನೋ ವಿಚಿತ್ರ ಅನುಭವವಾಯಿತು. ಅದನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ. ಇದೊಂದು ಹೊಸ ತಳಮಳ.

ಅಂದಿನಿಂದ ಊಟ ಸರಿಯಾಗಿ ಸೇರುತ್ತಿಲ್ಲ,
ನನ್ನ ಅಚ್ಚುಮೆಚ್ಚಿನ ಹಣ್ಣು ಸಹ ರುಚಿಸುತ್ತಿಲ್ಲ,
ಕಾಫಿ ಟೀ ಮಾತ್ರ ಅತ್ಯಂತ ರುಚಿಕರವಾಗಿದೆ,
ಅಪರೂಪಕ್ಕೆ ಕಾಫಿ ಕುಡಿಯುತ್ತಿದ್ದವನು ಈಗ ದಿನಕ್ಕೆ ಹಲವಾರು ಬಾರಿ ಕುಡಿಯುತ್ತಿದ್ದೇನೆ,
ಕುಂಬ ಕರ್ಣನಂತೆ ನಿದ್ದೆ ಮಾಡುತ್ತಿದ್ದ ನನಗೆ ಈಗ ಕೋಳಿ ನಿದ್ದೆ ಸಾಕಾಗುತ್ತಿದೆ…..

ಕಪಾಟಿನಲ್ಲಿ ಕೈಗೆ ಸಿಕ್ಕಿದ ಬಟ್ಟೆ ತೊಡುತ್ತಿದ್ದ ನಾನು ಈಗ ಮ್ಯಾಚಿಂಗ್ ಡ್ರೆಸ್ ಹುಡುಕುತ್ತಿದ್ದೇನೆ,
ಮುಖಕ್ಕೆ ಸ್ವಲ್ಪ ಕ್ರೀಮ್ – ಪೌಡರ್ ಹಚ್ಚುತ್ತಿದ್ದೇನೆ,
ಹೌದು, ಈಗಷ್ಟೇ ಜಿಮ್ ಗೆ ಸೇರಿದ್ದೇನೆ. ಅಪ್ಪ, ಅಮ್ಮ, ತಂಗಿಯ ಮೇಲೆ ಸಿಡುಕುತ್ತಿದ್ದ ನಾನು ಈಗ ಸ್ವಲ್ಪ ಮೆತ್ತಗಾಗಿದ್ದೇನೆ,…..

ಆಗಾಗ ಬದುಕು ಬೇಸರವೆನಿಸುತ್ತಿತ್ತು. ಈಗ ಬದುಕು ಎಷ್ಟೊಂದು ಸುಂದರ ಎಂದು ಪ್ರತಿ ಕ್ಷಣ ಅನಿಸುತ್ತಿದೆ.
ಓದುವ ಪ್ರತಿ ಅಕ್ಷರದಲ್ಲೂ ಬೇರೇನೋ ಕಾಣುತ್ತಿದೆ,
ಮೊಬೈಲ್ ನ ಪ್ರತಿ ಒಳ ಬರುವ ಕರೆಗಳು ಏನನ್ನೋ ಕಾತರಿಸುತ್ತದೆ. ಪ್ರತಿ ನಿಮಿಷಕ್ಕೊಮ್ಮೆ ವಾಟ್ಸಾಪ್ ಸಂದೇಶ ನೋಡಬೇಕೆನ್ನುವ ಗೀಳು ಪ್ರಾರಂಭವಾಗಿದೆ,….

ಆಗೆಲ್ಲಾ ಒಂಟಿತನ ಎಂದರೆ ಹಿಂಸೆಯಾಗುತ್ತಿತ್ತು. ಎಲ್ಲಿಗೆ ಹೋದರೂ ಸ್ನೇಹಿತರು ಜೊತೆಯಲ್ಲಿ ಇರಲೇಬೇಕಿತ್ತು.
ಈಗ ಗೆಳೆಯರೆಂದರೆ ಕಿರಿಕಿರಿಯಾಗುತ್ತಿದೆ, ಮನಸ್ಸು ಏಕಾಂತ ಬಯಸುತ್ತದೆ. ಆ ಮೌನದಲ್ಲಿ ಸಿಹಿಗನಸು ಕಾಣುವ ಆಸೆಯಾಗುತ್ತಿದೆ….

ಇಷ್ಟು ಚಿಕ್ಕ ವಯಸ್ಸಿಗೇ ಏನೋ ದೊಡ್ಡ ಖಾಯಿಲೆ ಬಂದಿರಬೇಕು ಎಂದು ಭಯವಾಗುತ್ತಿದೆ….

ಮೊದಲೆಲ್ಲಾ ಹೀಗಿರಲಿಲ್ಲ,
ಆರಾಮಾಗಿದ್ದೆ, ಈ ಬದಲಾವಣೆಗೆ ಯಾವ ವೈರಸ್‌ ಕಾರಣವೋ ತಿಳಿಯುತ್ತಿಲ್ಲ.
ಡಾಕ್ಟರ್ ಬಳಿ ಹೋಗುವಂತ ಯಾವ ತೊಂದರೆಯೂ ಇಲ್ಲ….

ಬಹುಶಃ ಏಳೆಂಟು ತಿಂಗಳ ಹಿಂದೆ ಒಂದು ಸಮಾರಂಭದಲ್ಲಿ ಆಕೆಯನ್ನು ನೋಡಿದ್ದೆ. ನಿಜ ಹೇಳಬೇಕೆಂದರೆ ಆ ಸಮಾರಂಭಕ್ಕೂ ನನಗೂ ಸಂಬಂಧವೇ ಇರಲಿಲ್ಲ. ಗೆಳೆಯರ ಒತ್ತಾಯದ ಮೇರೆಗೆ ಹೋಗಿದ್ದೆ. ಆಗ ಆಕಸ್ಮಿಕವಾಗಿ ಆಕೆಯನ್ನು ನೋಡಿದ್ದೆ. ಮೊದಲ ನೋಟಕ್ಕೆ ಶಾಕ್ ಹೊಡೆದಂತಾಯಿತು. ನೇರ ನನ್ನ ಹೃದಯದೊಳಗೆ ಪ್ರವೇಶಿಸಿದಳು ಅನಿಸುತ್ತದೆ…

ಅವಳ ಸೌಂದರ್ಯವನ್ನು ಬಹಿರಂಗವಾಗಿ ವರ್ಣಿಸಲಾರೆ. ಅದಕ್ಕೆ ಅಕ್ಷರ ರೂಪ ನೀಡಿ ಮಿತಿ ಗೊಳಿಸಲು ನನಗೆ ಇಷ್ಟವಿಲ್ಲ….

ಅಲ್ಲಿಂದ ಆಕೆಯ ಬಗ್ಗೆ ಮಾಹಿತಿ ಪಡೆದು, ಪರಿಚಯ ಮಾಡಿಕೊಂಡು ಒಂದು ಹಂತಕ್ಕೆ ತರಲು ಸುಮಾರು ತಿಂಗಳುಗಳಾಯಿತು. ಈಗ ಆಕೆ ನನ್ನ ಅಚ್ಚುಮೆಚ್ಚಿನ ಗರ್ಲ್ ಫ್ರೆಂಡ್. ದಿನವೂ ಮೊಬೈಲ್ ಮಾತುಕತೆ ನಡೆಯುತ್ತಲೇ ಇದೆ….

ಇಂದು ಫೆಬ್ರವರಿ 14,
ಪ್ರೇಮಿಗಳ ದಿನವಂತೆ…..

ಅಂದು ಆಕೆಯ ಬಳಿ ರೋಸ್ ಕೊಟ್ಟು ಪ್ರೇಮ ನಿವೇದನೆ ಮಾಡಲು ಮನಸ್ಸು ಹಂಬಲಿಸುತ್ತಿದೆ. ಹಾಗೆಯೇ ತುಂಬಾ ಭಯವಾಗುತ್ತಿದೆ. ಆಕೆ ಕೋಪಗೊಂಡರೆ ಅಥವಾ ನಿರಕಾರಿಸಿದರೆ…

ಅಯ್ಯಯ್ಯೋ, ಅದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆಕೆ ಇಲ್ಲದ ಬದುಕು ಬೇಡವೇ ಬೇಡ……

ಆಕೆ ನಿರಾಕರಿಸಲಾಗದಂತೆ ಏನಾದರೂ ‌ವಿಶಿಷ್ಠ ರೀತಿಯಲ್ಲಿ ಪ್ರಪೋಸ್ ಮಾಡುವ ಹಂಬಲ.
ಎಷ್ಟೊಂದು ಸಿನಿಮಾ ನೋಡಿದ್ದೇನೆ. ಯಾಕೋ ಈಗ ಯಾವುದೂ ನೆನಪಾಗುತ್ತಿಲ್ಲ. ಪ್ರೀತಿಯ ಹುಚ್ಚು ಇಷ್ಟೊಂದು ಅತಿರೇಕಕ್ಕೆ ಹೋಗುತ್ತದೆ ಎಂದು ಭಾವಿಸಿರಲೇ ಇಲ್ಲ. ಈಗ ಏನು ಮಾಡಲಿ. ನಾಳೆ ಸಿಕ್ಕಿರುವ ಅವಕಾಶ ಕಳೆದು ಕೊಳ್ಳಬಾರದು…

ಮನಸ್ಸು ಚಡಪಡಿಸುತ್ತಿದೆ. ಪ್ರೀತಿ ಎಂದರೆ ಇದೇನಾ !!!!!!!

ಅದರಿಂದಾಗಿಯೇ ಇಂದು ಮನಸ್ಸಿಗೆ ವಿಶೇಷ ಬೆಳಗು. ಆದರೆ ಮರು ಕ್ಷಣವೇ ಅಪ್ಪ – ಅಮ್ಮ ನೆನಪಾಗುತ್ತಿದ್ದಾರೆ. ಇನ್ನೂ ಹಾಸಿಗೆಯಲ್ಲಿ ಇರುವಾಗಲೇ ನನ್ನ ಮೂಡು ಮತ್ತೆ ಬದಲಾಗುತ್ತಿದೆ….

ಏಕೆ ಕಾಡುತ್ತಿರುವೆ ಪ್ರೀತಿ, ಕಳ್ಳಿಯಂತೆ, ಮಳ್ಳಿಯಂತೆ,
ಬಿಟ್ಟು ಬಿಡು ಪ್ರೀತಿ ನನ್ನನ್ನು ಸತಾಯಿಸದೆ,.‌.

ನಾನಿನ್ನೂ ಪದವಿ ಓದುತ್ತಿದ್ದೇನೆ, ಐಎಎಸ್‌ ಮಾಡುವ ಕನಸಿದೆ,
ಬಡತನದಲ್ಲೇ ನೊಂದು ಬೆಂದ ಅಪ್ಪ ಅಮ್ಮನನ್ನು ಸಾಕಿ ಸಲುಹಬೇಕಿದೆ,
ನನ್ನನ್ನೇ ನಂಬಿರುವ ಒಬ್ಬಳೇ ತಂಗಿಯ ಮದುವೆ ಮಾಡಬೇಕಿದೆ,…

ಕಾಡಬೇಡ ಪ್ರೀತಿ ನನ್ನನ್ನು ಮತ್ತೆ ಮತ್ತೆ, ನಿನ್ನ ನೋಟ, ನಿನ್ನ ನಗು, ನಿನ್ನ ನೆನಪು ಕ್ಷಣ ಕ್ಷಣ ಕೊಲ್ಲುತ್ತಿದೆ,…

ಎಲ್ಲರೂ ಹೇಳುತ್ತಾರೆ ಪ್ರೀತಿ ವಿಷವೆಂದು, ಯಾಕೋ ಭಯವಾಗುತ್ತಿದೆ,
ಕಥೆಗಳನ್ನು ಹೇಳುತ್ತಾರೆ ಪ್ರೀತಿಯಿ ಹಿಂದೆ ಹೋದವರ ಪಡಿಪಾಟಲ ಬಾಳು – ಗೋಳು,
ಪ್ರೀತಿ ಮಾಯೆ ಹುಷಾರು ಎನ್ನುತ್ತಾರೆ, ಅದಕ್ಕೆ ಬೇಡ ಪ್ರೀತಿ ಈ ಸೆಳೆತ ಗಿಳಿತ,….

ಆದರೂ ಇರಲಾಗುತ್ತಿಲ್ಲ ನಿನ್ನ ನೆನಯದೇ, ನೀ ಯಾರೋ, ಏನೋ ಒಂದೂ ಗೊತ್ತಿಲ್ಲ ಆದರೆ, ಆಗಲೇ ನನ್ನ ಮನ ನಿನ್ನೊಂದಿಗೆ ಬಾಳು ನಡೆಸುತ್ತಿದೆ, ನಮ್ಮ ಮಕ್ಕಳು ಮರಿಗಳೊಂದಿಗೆ ಸುತ್ತಾಡುತ್ತಿದೆ,….

ನೀನಿಲ್ಲದೆ ನಾನಿಲ್ಲ ಎಂದು ಒದ್ದಾಡುತ್ತಿದೆ, ಅದಕ್ಕೆ ಕೇಳಿಕೊಳ್ಳುತ್ತಿದ್ದೇನೆ ಕಾಡಬೇಡ ಪ್ರೀತಿ ನನ್ನನ್ನು,
ಜವಾಬ್ದಾರಿಯಿದೆ, ಬದುಕಿದೆ, ಭವಿಷ್ಯವಿದೆ, ಕನಸಿದೆ,…

ನೀನು ಅದನ್ನೆಲ್ಲಾ ಕೊಲ್ಲುತ್ತಿರುವೆ, ಅದು ನನಗೂ ಗೊತ್ತು, ಆದರೂ ನಾನೇನು ಮಾಡಲಾಗುತ್ತಿಲ್ಲ, ಮರೆಯಲಾಗುತ್ತಿಲ್ಲ,

ಪ್ರೀತಿ,‌
ನಿನ್ನ ನೋಟ, ನಿನ್ನ ನಗುವಿಗಾಗಿ ಕಾತರಿಸುತ್ತಿದೆ ಮನ,
ಪ್ರೀತಿ,
ನಿನಗಾಗಿ ನನ್ನೆಲ್ಲಾ ಕನಸುಗಳನ್ನು ತ್ಯಾಗ ಮಾಡಲು ಸಿದ್ಧವಾಗುತ್ತಿದೆ,
ಪ್ರೀತಿ,
ನಿನ್ನ ಕಲ್ಪನೆಯಲ್ಲಿ ನನ್ನ ಜವಾಬ್ದಾರಿಗಳು ಕೊಚ್ಚಿಕೊಂಡು ಹೋಗುತ್ತಿವೆ,…

ಮೋಹದ ವಿರುದ್ಧ ಈಜಾಡು ಎಂದು ಆತ್ಮ ಹೇಳುತ್ತಿದ್ದರೂ,
ಪ್ರೀತಿಯ ಜೊತೆಯೇ ಈಜಾಡು ಎಂದು ಮನಸ್ಸು ಹೇಳುತ್ತಿದೆ,…

ಏನೂ ಮಾಡುವುದೋ ತಿಳಿಯುತ್ತಿಲ್ಲ,
ಮತ್ತೊಮ್ಮೆ ನಿನ್ನನ್ನು ಬೇಡುತ್ತೇನೆ,
ಕಾಡಬೇಡ ಪ್ರೀತಿ, ಮಳ್ಳಿಯಂತೆ, ಕಳ್ಳಿಯಂತೆ ಮತ್ತೆ ಮತ್ತೆ,…..
************************
ಪ್ರೀತಿಯ ಸೆಳೆತದ ಕೆಲವು ಉದಾಹರಣೆಗಳನ್ನು ನೋಡಿ…….

ತಾಯಿಯ ಕರುಳ ಬಳ್ಳಿಯ ಸಂಬಂಧ, ತಂದೆ ತಾಯಿ ಅಣ್ಣ ತಂಗಿ ಅಕ್ಕ ತಮ್ಮ ಅಜ್ಜ ಅಜ್ಜಿ ಮುಂತಾದ ದೀರ್ಘಕಾಲದ ರಕ್ತ ಸಂಬಂಧಗಳನ್ನು ಮೀರಿ ಕೇವಲ ಒಂದೋ ಎರಡೋ ವರ್ಷದ ಪ್ರೀತಿಗಾಗಿ, ರೈಲಿಗೆ ತಲೆ ಕೊಡಲು, ಕುತ್ತಿಗೆಗೆ ನೇಣು ಬಿಗಿದುಕೊಳ್ಳಲು, ವಿಷ ಕುಡಿಯಲು, ಬೆಂಕಿ ಹಚ್ಚಿಕೊಳ್ಳಲು, ಎತ್ತರದಿಂದ ಜಿಗಿಯಲು, ನೀರಿಗೆ ಹಾರಲು ಮನಸ್ಸನ್ನು ಪ್ರೀತಿ ಪ್ರೇರೇಪಿಸುತ್ತದೆ ಎಂದರೆ ಅದರ ತೀವ್ರತೆ ಎಷ್ಟಿರಬಹುದು……

ಈ ಪ್ರೀತಿ ಕಾಲದ ಪರಿವೆಯೇ ಇಲ್ಲದೆ ಅನಾದಿ ಕಾಲದಿಂದ ಈ ಕ್ಷಣದವರೆಗೂ ಅದೇ ಉತ್ಕಟತೆಯನ್ನು ಉಳಿಸಿಕೊಂಡಿದೆ…….

ಪ್ರೀತಿಗಾಗಿ ಎಷ್ಟೋ ರಾಜ್ಯಗಳೂ ಉರುಳಿವೆ, ಹಾಗೆ ಪ್ರೀತಿಗಾಗಿ ಎಷ್ಟೋ ಅಧಿಕಾರ ತ್ಯಾಗಗಳೂ ಆಗಿವೆ……

ಒಮ್ಮೆ ಪ್ರೇಮಿಗಳಲ್ಲಿ ಪ್ರೀತಿಯ ಭಾವ ಮೊಳಕೆ ಒಡೆದು ಹೆಮ್ಮರವಾದರೆ ಮುಗಿಯುತು. ಯಾವ ಅಡ್ಡಿ ಆತಂಕಗಳೂ ಅವರನ್ನು ಬೇರ್ಪಡಿಸುವುದು ಸಾಧ್ಯವಿಲ್ಲ. ಅದಕ್ಕೆ ಅಡ್ಡಿಯಾದವರನ್ನು ಕೊಲ್ಲುತ್ತಾರೆ ಅಥವಾ ಸ್ವತಃ ತಾವೇ ಸಾವಿಗೆ ಶರಣಾಗುತ್ತಾರೆ……..

ಪ್ರೀತಿಗೆ ಜಾತಿ ವಯಸ್ಸು ಲಿಂಗ ಭಾಷೆ ಪ್ರದೇಶಗಳ ಹಂಗು ಇರುವುದಿಲ್ಲ. ಅಷ್ಟೇ ಏಕೆ ನೈತಿಕತೆಯ ಮೂಗುದಾರವೂ ಇರುವುದಿಲ್ಲ
( ಕಾಮ ಪ್ರೀತಿಯ ಒಂದು ಭಾಗವೇ ಹೊರತು ಕಾಮವೇ ಪ್ರಧಾನವಾದಾಗ ಅದನ್ನು ಪ್ರೀತಿ ಎಂದು ಪರಿಗಣಿಸಲು ಸಾಧ್ಯವಿಲ್ಲ. )
ನಾನು ಹೇಳುತ್ತಿರುವುದು ನಿಜ ಪ್ರೀತಿಯ ಬಗ್ಗೆ ಮಾತ್ರ……

ಪ್ರೀತಿಯ ಇನ್ನೊಂದು ಅತಿರೇಕವೆಂದರೆ, ಪ್ರೀತಿಗೆ ಯಾವುದೇ ಕಾರಣದಿಂದ ಧಕ್ಕೆಯಾದರೆ ಅದರ ರೂಪ ವೈರಾಗ್ಯ ಅಥವಾ ದ್ವೇಷದ ರೂಪ ತಾಳುತ್ತದೆ. ಅದರಲ್ಲೂ ಹದಿಹರೆಯದಲ್ಲಿ ಅದು ತೀವ್ರ ದ್ವೇಷಕ್ಕೆ ತಿರುಗುತ್ತದೆ. ನನಗೆ ಸಿಕ್ಕದ ಆ ಪ್ರೇಮಿ ಯಾರಿಗೂ ಸಿಗಬಾರದು ಎಂಬ ಭಾವನೆ ಬಲವಾಗಿ ಅದು ಬರ್ಬರ ಕೊಲೆ ಮಾಡಿಸುತ್ತದೆ. ಹೆಣ್ಣು ಗಂಡು ಇಬ್ಬರಲ್ಲೂ ಈ ದ್ವೇಷ ಸಮ ಪ್ರಮಾಣದಲ್ಲಿ ಇದ್ದರೂ ನಮ್ಮ ಸಾಮಾಜಿಕ ವ್ಯವಸ್ಥೆಯ ಕಾರಣಕ್ಕಾಗಿ ಯುವಕರೇ ಅತಿಹೆಚ್ಚು ನೇರ ಕೊಲೆಯಂತ ಕ್ರಮಕ್ಕೆ ಮುಂದಾಗುತ್ತಾರೆ……….

ಪ್ರೀತಿ ಬದುಕಿಗೆ ಅಮೃತದಷ್ಟೇ ಮಹತ್ವ ಹೊಂದಿದೆ. ಹಾಗೆಯೇ ಅದು ಬಹಳಷ್ಟು ಸಲ ಅಫೀಮಿನ ಅಮಲಿನಂತೆ ನಮ್ಮಿಂದ ತಪ್ಪು ಮಾಡಿಸುತ್ತದೆ……..

ಪ್ರೀತಿಯ ಮಡಿಲಿನಲ್ಲಿ ಭೂಮಿಯೇ ಸ್ವರ್ಗ, ವಿರಹದ ತಾಪದಲ್ಲಿ ಈ ನಿಂತ ನೆಲವೇ ನರಕ……

ಯಾವ ತತ್ವಜ್ಞಾನವೂ, ಯಾವ ವೇದಾಂತವೂ, ಯಾವ ಹಿತನುಡಿಗಳೂ ಪ್ರೀತಿಗೆ ಸರಸಾಟಿಯಲ್ಲ……

ನಮ್ಮ ದೇಹಕ್ಕಿಂತ ಪ್ರೀತಿಸಿದವರ ದೇಹ ಮನಸ್ಸುಗಳು ಮೇಲೆಯೇ ಹೆಚ್ಚಿನ ಅಭಿಮಾನ, ಮೋಹ, ನನ್ನದೆಂಬ ಸ್ವಾರ್ಥ ಮತ್ತು ನಿಯಂತ್ರಣ ಹೊಂದಲು ಪ್ರೀತಿ ತಹತಹಿಸುತ್ತದೆ. ಅದರ ಪರಿಣಾಮವೇ ಹಿಂಸೆ…..

ಪ್ರೀತಿಯ ಆಳಕ್ಕೆ ಇಳಿದವರಿಗೆ ಮಾತ್ರ ಇದು ಅನ್ವಯಿಸುತ್ತದೆ. ಪ್ರೀತಿಯ ದಾರಿಯಲ್ಲಿ ಸ್ವಲ್ಪ ದೂರ ಸಾಗಿ ಅದರಿಂದ ವಿಮುಖರಾದವರಿಗೆ ಇದು ಅಷ್ಟಾಗಿ ಅರ್ಥವಾಗುವುದಿಲ್ಲ.
ತಾಯಿ – ಮಗುವಿನ, ಅಣ್ಣ – ತಂಗಿಯ, ಅಕ್ಕ – ತಮ್ಮನ, ಗಂಡ – ಹೆಂಡತಿಯ ಪ್ರೀತಿಯನ್ನು ಇದಕ್ಕೆ ಹೋಲಿಸಲಾಗುವುದಿಲ್ಲ. ಏಕೆಂದರೆ ಇಲ್ಲಿ ಸ್ವಾರ್ಥ, ಅವಲಂಬನೆ, ಅವಕಾಶ, ಜವಾಬ್ದಾರಿ, ಸಾಮಾಜಿಕ ಕಟ್ಟಳೆ ಇರುತ್ತದೆ……

ಆದರೆ, ಬಿನ್ನ ಲಿಂಗದ
ಪ್ರೇಮ – ಪ್ರೀತಿಯ ಉತ್ಕಟತೆ…..

ಪ್ರೀತಿ ನಿರಂತರತೆಯನ್ನು ಬೇಡುತ್ತದೆ.
ಪ್ರೀತಿ ಏರಿಕೆಯ ರೂಪದ ಸ್ಪಂದನೆಯನ್ನು ಬಯಸುತ್ತದೆ.
ಪ್ರೀತಿ ಮುಖವಾಡವನ್ನು ಬಯಲು ಮಾಡಿ ಸಹಜತೆಯನ್ನು ತೋರಿಸುತ್ತದೆ…..

ಸಿಕ್ಕರೆ ಅಮೃತ,
ಸಿಗದಿದ್ದರೆ ವಿಷ,
ಯಶಸ್ವಿಯಾದರೆ ಸ್ವರ್ಗ,
ವಿಫಲವಾದರೆ ನರಕ….

ಹೇಳಿದಷ್ಟು ಇನ್ನೂ ಉದ್ದವಾಗುವ ಮುಗಿಯದ ಅಕ್ಷಯ ಪಾತ್ರೆ ಈ ಪ್ರೀತಿ‌……………..

ಮನಸ್ಸು ಗೊಂದಲದ ಗೂಡು.
ಉತ್ತರ ಸಿಗುತ್ತಿಲ್ಲ. ಏನು ಮಾಡಲಿ ನಾನು……

ಕಾಲದ ನಿರ್ಣಯಕ್ಕೆ ಕಾಯುತ್ತಾ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…….

About Author

Leave a Reply

Your email address will not be published. Required fields are marked *