ನಮ್ಮ ನಡಿಗೆ ವಿಜ್ಞಾನದೆಡೆಗೆ
1 min readನಮ್ಮ ನಡಿಗೆ ವಿಜ್ಞಾನದೆಡೆಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ನಾಟಕಕಾರ ಹಾಸನದ ಗ್ಯಾರೆಂಟಿ ರಾಮಣ್ಣನವರೊಂದಿಗೆ ಮಾತನಾಡುವದೆಂದರೆ ಅದೊಂದು ಬಿಸೀ ಜೋನಿ ಬೆಲ್ಲ ತಿಂದು ತಣ್ಣನೆಯ ನೀರು ಕುಡಿದಂತೆ ಹಿತವಾಗಿರುತ್ತದೆ.
ಇಂತಹ ಗ್ಯಾರೆಂಟಿ ರಾಮಣ್ಣನವರ ಬಗ್ಗೆ ಒಂದಿಷ್ಟು ನನ್ನೊಳಗಿರುವ ಬೆಚ್ಚಗಿನ ಮಾತು…..
*ಉತ್ತಮ ಬದುಕಿನಾಸೆಯೇ ಮನುಕುಲದ ಮುನ್ನೆಡೆಯ ಚಾಲನಾಶಕ್ತಿ*.
ಈ ಚಾಲನಾಶಕ್ತಿಗೆ ಸ್ಪೂರ್ತಿದಾಯಕ ವಾದ ಅಂಶಗಳೇ ಕಲೆ ಸಾಹಿತ್ಯ ಸಂಗೀತ ಹಾಡು ನಾಟಕ ಮುಂತಾದ ಪ್ರಖರತೆಯ ಅಂಶಗಳು. ಇಂತಹ ಪ್ರಖರತೆಯೊಂದಿಗೆ ಆಸೆಗಳ ಹೊರೆಯನ್ನು ಹೊತ್ತು, ರಂಗಲೋಕದಲ್ಲಿ ಸದಾ ಹೊಸದನ್ನು ಹುಡುಕುತ್ತಾ, ಹುಡುಕಾಟದಲ್ಲಿ ತಾನು ಕಂಡುಕೊಂಡ ಈ ನೆಲದ ಬದುಕು ಬವಣೆಗಳನ್ನು ಅಕ್ಷರದಲ್ಲಿ ಹಿಡಿದಿಟ್ಟು, ಅದನ್ನು ಹಾಡಾಗಿ ರಚಿಸಿ, ನಾಟಕವಾಗಿ ಕಟ್ಟಿ, ಹೀಗೆ ರಚಿಸಿದ್ದನ್ನು ಕಟ್ಟಿದ್ದನ್ನು ನಾಡಿನಾದ್ಯಂತ ಹಂಚುಂಡವರು ನಮ್ಮ ಗ್ಯಾರೆಂಟಿ ರಾಮಣ್ಣನವರು.
ಈ ಗ್ಯಾರೆಂಟಿ ರಾಮಣ್ಣನವರಿಗೂ ನನಗೂ ಸುಮಾರು ಮೂರು ದಶಕಗಳ ಸಂಬಂಧದ ಹಿನ್ನೆಲೆ ಇದೆ. ನಮ್ಮಿಬ್ಬರದು ನಾಟಕಗಳ ಸಂಬಂಧ. ಅದು ಕಳೆದ ಶತಮಾನದ 90ರ ದಶಕದ ದಿನಮಾನಗಳು. ಕನ್ನಡ ನಾಡು ಸಾಕ್ಷರ ನಾಡು ಹೆಸರಿನಲ್ಲಿ ನಾವು ಪರಿಚಯವಾದವರು,ಗ್ಯಾರೆಂಟಿ ಅಂದ ತಕ್ಷಣ ಇದು ನಮ್ಮ ಸರ್ಕಾರದ ಗ್ಯಾರೆಂಟಿಯ ಯೋಜನೆಯ ಕ್ರೆಡಿಟ್ ಅಲ್ಲ.
ರಾಮಣ್ಣನ ಹೆಸರಿನ ಹಿಂದೆ ಅಂಟಿಕೊಂಡಿರುವ ಗ್ಯಾರೆಂಟಿ ಎಂಬ ಪದಕ್ಕೆ ಒಂದು ದೊಡ್ಡ ಹಿನ್ನೆಲೆ ಇದೆ.
ಎಪ್ಪತ್ತೊಂದರ ವಯೋಮಾನದ ಗ್ಯಾರೆಂಟಿ ರಾಮಣ್ಣನ ಊರು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಗಣಸಿ ಹತ್ತಿರದ ಬಾಗಿನಾಳು. ಇವರ ಮೂಲ ಹೆಸರು ರಾಮೇಗೌಡ ಎಂದು.
*ಊರ ಬಿಟ್ಟ್ ಹೊರಟ ರಾಮಣ್ಣ ಕೆಲಸವಾ ಹುಡುಕುತಾ ರಾಮಣ್ಣ ಎಂಬ ಹಾಡಿನಂತೆ…..*
ತನ್ನ ಹುಟ್ಟಿದ ಊರನ್ನು ಬಿಟ್ಟು, ಕಲೆಯನ್ನು ಅರಸುತ್ತಾ ರಾಮಣ್ಣ ನೆಲೆ ನಿಂತಿರುವುದು ಹಾಸನದಲ್ಲಿ. ಈ ಹಾಸನದಲ್ಲಿ ನೆಲೆ ನಿಂತು ಸುಮಾರು 40 ವರ್ಷಗಳೇ ಕಳೆದಿವೆ. ಸುಮಾರು 50 ವರ್ಷಗಳಿಂದ, ಅಂದರೆ ತನ್ನ ಬದುಕಿನ ಅರ್ಧ ಶತಮಾನಗಳ ಕಾಲ ರಾಮಣ್ಣ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವುದು ಕಲೆ ಸಂಗೀತ ನಾಟಕಕ್ಕಾಗಿ. ಇದೇ ಇವರ ಉಸಿರು ಮತ್ತು ಅಂತಿಮ ಗುರಿ. ಹೀಗಿದ್ದೂ ಕೊಡ ರಾಮಣ್ಣನವರ ಒಳಗಿರುವ ಪ್ರತಿಭೆಗೆ ತಕ್ಕಂತೆ ಹೆಚ್ಚಿನ ಸ್ಥಾನಮಾನಗಳು ದೊರತದ್ದು ಕಡಿಮೆಯೇ ಅನ್ನಬಹುದು, ಈ ಸಮಾಜ ಅವರ ಪ್ರತಿಭೆಯನ್ನು ಸರಿಯಾಗಿ ಗುರುತು ಮಾಡಲು ಸೋತಿತೋ ಅಥವಾ ಪ್ರತಿಭೆಗೆ ತಕ್ಕ ಸ್ಥಾನಮಾನವನ್ನು ಧಕ್ಕಿಸಿಕೊಳ್ಳಲು ರಾಮಣ್ಣನವರು ಸೋತರು ಗೊತ್ತಿಲ್ಲ !!!
ಸರ್ಕಾರದ ಅಡಿಯಲ್ಲಿರುವ ರಂಗಭೂಮಿಯ ಆಯಕಟ್ಟಿನ ಜಾಗದಲ್ಲಿ ರಾಮಣ್ಣನವರು ಅನೇಕ ಸ್ಥಾನಮಾನಗಳೊಂದಿಗೆ ಎಂದೂ ಕೂರಬೇಕಾಗಿತ್ತು, ಈ ಅವಕಾಶ ಇವರಿಗೆ ದೊರೆತಿಲ್ಲ ಎಂಬ ಕೂಗು ಹಲವರದು.
ತನಗೆ ಅದೆಂತಹ ವೈಯಕ್ತಿಕ ತೊಂದರೆ ತಾಪತ್ರಯಗಳಿದ್ದರೂ ಕೂಡ, ಆರೋಗ್ಯ ಕೈತಪ್ಪಿ ಹೋಗಿದ್ದರು ಸಹ,ಒಪ್ಪಿಕೊಂಡ ಕಾರ್ಯಕ್ರಮಗಳಿಗೆ ಯಾವತ್ತೂ ತಪ್ಪದೇ ಗ್ಯಾರೆಂಟಿಯಾಗಿ ಹಾಜರಾಗುತ್ತಿದ್ದ ಕಾರಣ, 1992 ರಲ್ಲಿ ಧಾರವಾಡದ ಗೆಳೆಯರು ಈ ರಾಮೇಗೌಡರಿಗೆ ಕೊಟ್ಟಿದ್ದು *ಗ್ಯಾರೆಂಟಿ ರಾಮಣ್ಣ* ನೆಂಬ ಬಿರುದು. ಆ ನಂತರದಲ್ಲಿ ರಾಮೇಗೌಡರ ಪೂರ್ತಿ ವ್ಯವಹಾರವು ಗ್ಯಾರೆಂಟಿ ರಾಮಣ್ಣನೆಂಬ ಹೆಸರಿನಲ್ಲಿ ನಡೆಯುತ್ತಿದೆ.
ಇಂತಹ ಗ್ಯಾರಂಟಿ ರಾಮಣ್ಣ ಇದುವರೆಗೆ ರಚಿಸಿರುವ ಹಾಡುಗಳು ಬರೋಬರಿ 1600ಕ್ಕೂ ಹೆಚ್ಚು, ಇಷ್ಟು ಮಾತ್ರವಲ್ಲ 70ಕ್ಕೂ ಬೀದಿ ನಾಟಕ,ರಂಗ ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ಅಭಿನಯಿಸಿದ್ದಾರೆ. ಹಿರಿಯ ನಾಗರೀಕರ ಬದುಕು ಬವಣೆಯನ್ನು ಕುರಿತ ಇವರ ಬಾಡಿದ ಬದುಕು ನಾಟಕ 160ಕ್ಕೂ ಹೆಚ್ಚು ಕಡೆ ಪ್ರದರ್ಶನ ಕಂಡಿದೆ. ಎಂಟಕ್ಕೂ ಹೆಚ್ಚು ಪುಸ್ತಕಗಳನ್ನು ಹೊರ ತಂದಿದ್ದಾರೆ.
ಪಿಯುಸಿ ವಿದ್ಯಾಭ್ಯಾಸವನಸ್ಟೆ ಮುಗಿಸಿರುವ ಗ್ಯಾರಂಟಿ ರಾಮಣ್ಣನವರು ಹಾಡು ನಾಟಕ ಕುರಿತಂತೆ ಯಾವ ವಿಶ್ವವಿದ್ಯಾಲಯದ ಸಂಶೋಧಕರಿಗೂ ಕಡಿಮೆ ಇಲ್ಲ. ಆ ಮಟ್ಟದ ಈ ನೆಲದ ಆಳವಾದ ಜ್ಞಾನ ಇವರೊಳಗೆ ಅಡಗಿ ಕುಳಿತಿದೆ.
1992 ರಲ್ಲಿ ನಾವು ಗ್ಯಾರೆಂಟಿ ರಾಮಣ್ಣ ಸೇರಿಕೊಂಡು ಬೆಳಗಾಂ ಜಿಲ್ಲೆ ಕಿತ್ತೂರಿನಲ್ಲಿ ರಂಗ ತರಬೇತಿ ನಡೆಸುತ್ತಿದ್ದೆವು. ಆ ಸಮಯದಲ್ಲಿ ರಾಣಿ ಚೆನ್ನಮ್ಮನ ಕಿತ್ತೂರು ಕೋಟೆ ನೋಡೋಣ ಎಂದು ಎಲ್ಲರೂ ಹೋಗಿದ್ದೆವು. ಆ ಕೋಟೆಯ ಮುಂಭಾಗದಲ್ಲಿ ಆಡೊ ವಯಸ್ಸಿನ ಸಣ್ಣ ಹುಡುಗಿಯೊಂದು ಸೀರೆ ಉಟ್ಟಿಕೊಂಡಿತ್ತು, ಸೀರೆ ಮಾತ್ರ ಉಟ್ಟುಕೊಂಡಿರಲಿಲ್ಲ, ಆ ಸಣ್ಣ ಹುಡುಗಿಯ ಕೊರಳಲ್ಲಿ ತಾಳಿಯೂ ಇತ್ತು, ಇದನ್ನು ನೋಡಿದ ತಕ್ಷಣ, *ಇಷ್ಟು ಬೇಗ ಮದುವೆ ಯಾಕವ್ವಾ, ಈ ಪುಟ್ಟ ಹುಡುಗಿಗೆ ಸೀರೆ ಯಾಕೆ ಲಂಗ ಹಾಕವ್ವ* ಎಂಬ ಹಾಡನ್ನು ಕಟ್ಟಿ ಅಲ್ಲಿಯೇ ಹಾಡಿಬಿಟ್ಟರು ಈ ಗ್ಯಾರಂಟಿ ರಾಮಣ್ಣ. ಇದು ಅವರ ನಿಜ ಪ್ರತಿಭೆಗೆ ಸಾಕ್ಷಿ. ಇಂತಹ ಸಾವಿರಾರು ನಿದರ್ಶನಗಳು ಗ್ಯಾರೆಂಟಿ ರಾಮಣ್ಣನವರ ಬದುಕಿನಲ್ಲಿ ದಾಖಲಾಗಿವೆ.
ಸುಮಾರು ಎರಡು ದಶಕಗಳ ನಂತರ, ಇತ್ತೀಚೆಗೆ ಈ ಗ್ಯಾರಂಟಿ ರಾಮಣ್ಣನನ್ನು ಭೇಟಿ ಮಾಡುವ ಅವಕಾಶ ದೊರೆಯಿತು.
ಅದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಗಾಂಧಿವಾದಿ ಶಿಕ್ಷಣ ತಜ್ಞ ಡಾ. ಹೆಚ್. ನರಸಿಂಹಯ್ಯನವರ ಶತಮಾನೋತ್ಸವದ ಅಂಗವಾಗಿ, ಬೆಂಗಳೂರಿನಿಂದ ಹೊಸುರಿನವರಿಗೆ ಐದು ದಿನಗಳ ಕಾಲ ಹಮ್ಮಿಕೊಂಡಿದ್ದ ನಮ್ಮ ನೆಡಿಗೆ ವಿಜ್ಞಾನದೆಡೆಗೆ ಪಾದಯಾತ್ರೆಯ ಸಂದರ್ಭದಲ್ಲಿ. ಕಲಾತಂಡದ ನೇತೃತ್ವವನ್ನು ವಹಿಸಿ, ಐದು ದಿನಗಳ ಕಾಲವೂ ದಾರಿಯುವುದಕ್ಕೂ ಬೀದಿ ನಾಟಕ ಮತ್ತು ಹಾಡುಗಳನ್ನು ಹಾಡುತ್ತಾ, ದಾರಿ ಮಧ್ಯದಲ್ಲಿಯೇ ಡಾ. ಹೆಚ್ ನರಸಿಂಹಯ್ಯನವರ ಕುರಿತು ಒಂದು ಹಾಡನ್ನು ರಚಿಸಿ ಹೇಳುವ ಮೂಲಕ ಜನಮನವನ್ನು ಇಂದಿಗೂ ಗೆಲ್ಲುತ್ತಾ ಸಾಗುತ್ತಿರುವ ಗ್ಯಾರಂಟಿ ರಾಮಣ್ಣನವರು ನಮ್ಮ ನಡುವೆ ಇರುವ ಒಂದು ಶ್ರೇಷ್ಠ ಕಲಾಸಂಪತ್ತು.
ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಎಷ್ಟು ಜನರಿಗೆ ಗ್ಯಾರೆಂಟಿ ರಾಮಣ್ಣನವರ ವ್ಯಕ್ತಿ ಚಿತ್ರಣ ಪರಿಚಯವಾಯಿತೊ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಜವಾರಿ ದನಿ ಅಂತು ಎಲ್ಲರನ್ನೂ ಸೆಳೆದಿಟ್ಟಿತು.
••••••••••••••••••✒️ಬರಹ
ಡಿ.ಎಂ. ಮಂಜುನಾಥಸ್ವಾಮಿ