ಪರಿಸರ ಮತ್ತು ಅಭಿವೃದ್ಧಿ ನಡುವಿನ ತಿಕ್ಕಾಟ ಕಡಿಮೆಮಾಡಿ ಬಾಂಧವ್ಯ ಬೆಸೆಯಬೇಕು: *ಪ್ರಕಾಶ್ ಕಮ್ಮರಡಿ*
1 min readಪರಿಸರ ಮತ್ತು ಅಭಿವೃದ್ಧಿ ನಡುವಿನ ತಿಕ್ಕಾಟ ಕಡಿಮೆಮಾಡಿ ಬಾಂಧವ್ಯ ಬೆಸೆಯಬೇಕು: *ಪ್ರಕಾಶ್ ಕಮ್ಮರಡಿ*
ಚಿಕ್ಕಮಗಳೂರು: ಪ್ರತಿಯೊಬ್ಬ ರೈತರು ಈ ದೇಶಕ್ಕೆ ಅನ್ನ ಆಹಾರವನ್ನು ಮಾತ್ರ ಕೊಡುತ್ತಿಲ್ಲ, ಜಾಗತಿಕ ಮಟ್ಟದಲ್ಲಿ ಕಾಡುತ್ತಿರುವ ಪ್ರಪಂಚದ ತಾಪಮಾನದ ಸಮಸ್ಯೆಗೆ ಕೃಷಿಯ ಮೂಲಕ ರೈತರು ತನ್ನದೇ ಆದ ಪರಿಹಾರವನ್ನು ನಿತ್ಯ ನೀಡುತ್ತಾ ಬರುತ್ತಿದ್ದಾರೆ. ನೆಲ ಜಲ ಅರಣ್ಯ ಕುರಿತಂತೆ ಪರಿಸರದ ಸಂರಕ್ಷಣೆಯಲ್ಲಿ ರೈತರ ಪಾಲು ಗುರುತರವಾದುದು. ಹೀಗಿದ್ದೂ ಕೂಡ ರೈತ ಇಂದು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾನೆ. ರೈತರ ಆತ್ಮಹತ್ಯೆ ಅಂಕಿ ಅಂಶಗಳ ವರದಿಗಳನ್ನು ದಾಖಲಿಸುತ್ತಿದ್ದೇವೆಯೇ ಹೊರತು, ದೇಶಕ್ಕೆ ಅನ್ನ ಕೊಡುವ ರೈತಾಪಿ ವರ್ಗದ ಜೀವನಮಟ್ಟ ಯಾವ ಸ್ಥಿತಿಯಲ್ಲಿದೆ ಎಂದು ಆಳುವ ಸರ್ಕಾರಗಳು ಚಿಂತಿಸಿ ಇದಕ್ಕೆ ಸಂಬಂಧಪಟ್ಟಂತೆ ಪ್ರಖರ ಬೆಳಕನ್ನು ಬೀರದಿರುವುದು ವಿಷಾದನೀಯ ಎಂದು ಕೃಷಿಬೆಲೆ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಕೃಷಿ ಆರ್ಥಿಕ ತಜ್ಞ ಡಾ, ಟಿ. ಎನ್. ಪ್ರಕಾಶ್ ಕಮ್ಮರಡಿ ಅಭಿಪ್ರಾಯ ಪಟ್ಟರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಅಡಿಕೆ ಬೆಳೆಗಾರರ ಸಂಕಷ್ಟವನ್ನು ಕುರಿತು ಪತ್ರಿಕಾಗೋಷ್ಠಿ ನಡೆಸಿ, ನಂತರ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ರೈತಪರ ದಲಿತಪರ ಜನಪರ ಹೋರಾಟ ಸಂಘಟನೆಗಳ ಮುಖಂಡರ ಜೊತೆ ಸಂವಾದ ನಡೆಸಿ, ಪರಿಸರ ಮತ್ತು ಕೃಷಿಗೆ ಸಂಬಂಧಪಟ್ಟ ವರ್ತಮಾನದ ಅನೇಕ ಸಮಸ್ಯೆಗಳಿಗೆ, ಮುಂದಿನ ದಿನಮಾನಗಳಲ್ಲಿ ಎದುರಾಗಬಹುದಾದ ಭವಿಷ್ಯದ ಆತಂಕಗಳನ್ನು ಕುರಿತು ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.
ಕೃಷಿ ಆಯೋಗದ ಅಧ್ಯಕ್ಷರಾಗಿ ತಾವು ಕೊಟ್ಟಂತಹ ವರದಿಯನ್ನು ಸರ್ಕಾರ ಎಷ್ಟರ ಮಟ್ಟಿಗೆ ಅನುಷ್ಠಾನಗೊಳಿಸಿದೆ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಕಾಶ್ ಕಮ್ಮರಡಿ ಅವರು , ನಾನು ಅಧ್ಯಕ್ಷನಾಗಿ ವರದಿಯನ್ನು ಕಳಿಸಿಕೊಟ್ಟಿದ್ದೇನೆ, ಆದರೆ ಸರ್ಕಾರ ಅದನ್ನು ಅನುಷ್ಠಾನಗೊಳಿಸಬೇಕಾಗಿತ್ತು ಎಂದರು.
ಇಂದು, ಹಿಂದೆಂದಿಗಿಂತಲೂ ಹೆಚ್ಚಾಗಿ ರೈತರು,ದಲಿತರು, ಯುವಕರು, ವಿದ್ಯಾರ್ಥಿಗಳು,ಮಹಿಳೆಯರ ಉತ್ತಮವಾದ ಬದುಕಿಗೆ ಒಳ್ಳೆಯ ವಾತಾವರಣ ಇಲ್ಲದಂತಾಗಿದೆ, ನಮ್ಮ ಆಹಾರ ಆರೋಗ್ಯದ ಪಾರಂಪರಿಕ ಜೀವನ ಪದ್ಧತಿ ಯನ್ನು ಆಧುನಿಕತೆ ಅಪೋಷನ ಮಾಡಿಕೊಂಡಿದೆ. ಇದರ ದುಷ್ಪರಿಣಾಮ ಇಂದು ನಾವು ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ನಿತ್ಯ ಸಾಯುತ್ತಿದ್ದೇವೆ.
ಭೂಮಿ ನೀರು ಪರಿಸರ ಸಂರಕ್ಷಣೆ ಒಡತನವು ಇಂದು ಕಾರ್ಪೊರೇಟ್ ಶಕ್ತಿಗಳ ಕೈವಶವಾಗುತ್ತಿದೆ, ಪರಿಸರ ಮತ್ತು ನಮ್ಮ ಜೀವ ವೈವಿಧ್ಯತೆಗಳ ಸಂರಕ್ಷಣೆಗಾಗಿ ಕಾರ್ಪೊರೇಟ್ ಶಕ್ತಿಗಳ ಆಮಿಷಕ್ಕೆ ಬೀಳದೆ , ಈ ಕಾರ್ಪೊರೇಟ್ ಶಕ್ತಿಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ,
ಪರಿಸರ ಮತ್ತು ನಮ್ಮ ಜೈವಿಕ ವೈವಿಧ್ಯತೆಗಳು ನಮ್ಮ ಮನುಕುಲದ ತೆಕ್ಕೆಗೆ ಬರಬೇಕು, ಭೂಮಿ, ನೀರು,ಅರಣ್ಯ, ಜೀವ ವೈವಿಧ್ಯತೆಯ ಮಹತ್ವ ಮತ್ತು ಮೌಲ್ಯವನ್ನು ಮನುಕುಲ ತನ್ನ ತೆಕ್ಕೆಗೆ ತೆಗೆದುಕೊಂಡಾಗ ಮಾತ್ರ ಸಮೃದ್ಧವಾಗಿ ಬದುಕಬಹುದು ಎಂಬುದನ್ನು ಮುಂದಿನ ತಲೆಮಾರಿಗೆ, ನಿಖರವಾಗಿ,ಸ್ಪಷ್ಟವಾಗಿ,
ಆಶಾದಾಯಕವಾಗಿ ಕಟ್ಟಿಕೊಡುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದರು.
ಇಷ್ಟು ಮಾತ್ರವಲ್ಲ ಪ್ರಾಣಿ ಪಕ್ಷಿ,ಕ್ರಿಮಿ ಕೀಟ ಸೇರಿದಂತೆ ಪಶುಗಳಿಗೂ ಕೂಡ ಈ ನೆಲದಲ್ಲಿ ಬದುಕುವ ಹಕ್ಕುಗಳು ಇವೆ ಎಂಬ ಪ್ರಜ್ಞೆಯನ್ನು ವಿಸ್ತರಿಸಬೇಕಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯವೊಂದರ ವ್ಯಾಖ್ಯಾನವೇ ಭೂಮಿ. ಇಂದು ಈ ಭೂಮಿಯ ಕೃಷಿ ಪಲವತ್ತತೆ ಶೇಕಡ 36ರಷ್ಟು ಇಳಿಕೆಯಾಗಿದೆ, ಭೂಮಿಯ ಮೌಲ್ಯ ಅಧಿಕವಾಗಿದೆ, ಆದರೆ ಆ ಭೂಮಿಯಲ್ಲಿ ಬೆಳೆಯುವ ರೈತನ ಆದಾಯ ಗಣನೀಯವಾಗಿ ಕಡಿಮೆಯಾಗಿದೆ. ಬರಡು ಭೂಮಿಗೂ ಕೂಡ ಕೋಟ್ಯಾಂತರ ರೂ ಮೌಲ್ಯವಿದೆ, ಆಸ್ತಿಯ ಒಡೆತನವನ್ನು ಕಾರ್ಪೊರೇಟ್ ಶಕ್ತಿಗಳು ತಮ್ಮದಾಗಿಸಿಕೊಳ್ಳುತ್ತಿದ್ದಾವೆ. ಸರ್ಕಾರಗಳು ರೈತರಿಂದ ಭೂಮಿಯನ್ನು ಕಿತ್ತುಕೊಂಡು ಖಾಸಗಿ ಒಡೆತನದ ಕಾರ್ಪೊರೇಟರ್ ಕೈಗಳಿಗೆ ಕೊಡುವ ಹುನ್ನಾರ ನಡೆಸುತ್ತಿವೆ, ಈ ಕಾರಣದಿಂದ ಖಾಸಗಿ ಒಡೆತನದ ಶಕ್ತಿ ಮೇಲಾಗಿ, ರೈತರು ಬೆಳೆಗಾರರು ಸಂಕಷ್ಟಕ್ಕೆ ಇಡಾಗಿದ್ದಾರೆ.
ಈ ರೀತಿಯ ಹತ್ತು ಹಲವು ಸಮಸ್ಯೆಗಳು ನಮ್ಮನ್ನು ಇಂದು ಕಾಡುತ್ತಿದ್ದಾವೆ. ಈ ಕಾರಣಕ್ಕಾಗಿ, ಚಿಂತಕರು, ಚಳುವಳಿಗಾರರು, ಹೋರಾಟಗಾರರು, ಬರಹಗಾರರು, ಕಲಾವಿದರು, ಸಾಹಿತಿಗಳು ಎಲ್ಲರೂ ಸೇರಿದಂತೆ ಈ ನೆಲ ಜಲ ಅರಣ್ಯ ಪರಿಸರ ಕುರಿತಂತೆ, ಈ ತಲೆಮಾರಿಗೆ ಅಂತರ್ ತಲೆಮಾರಿನ ಸಮಾನತೆಯನ್ನು ಕಲ್ಪಿಸಬೇಕು, ಈ ನಿಟ್ಟಿನಲ್ಲಿ ಜನಪರ ಸಂಘಟನೆಗಳು ಹೋರಾಟಗಳು ಹಳ್ಳಿಗಳತ್ತ ಸಾಗಬೇಕು ಎಂದು ಹಲವು ವಿಚಾರಗಳನ್ನು ಮುನ್ನೆಲೆಗೆ ತಂದು ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಮುಖಂಡ ಮುಗುಳುವಳ್ಳಿ ಗುರುಶಾಂತಪ್ಪ. ಸಿಪಿಐ ಮುಖಂಡ ಪಿ. ವಿ. ಲೋಕೇಶ್. ನ್ಯೂಸ್ ಕಿಂಗ್ ಪ್ರಧಾನ ಸಂಪಾದಕ ಎನ್. ರಾಜು. ಕೆಪಿಸಿಸಿ ರಾಜ್ಯ ವಕ್ತಾರ ರವೀಶ್ ಕ್ಯಾತನಬೀಡು. ದಲಿತ ಸಂಘಟನೆಯ ಮುಖಂಡ ಮರ್ಲೆ ಅಣ್ಣಯ್ಯ. ನೀರಾವರಿ ಹೋರಾಟಗಾರ ಪಿಳ್ಳೆನಳ್ಳಿ ವಿಜಯ್ ಕುಮಾರ್. ಜಗದೀಶ್. ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆಸುವಿನ ಮನೆ ಬೈರೇಗೌಡ. ಕನ್ನಡ ಸಾಹಿತ್ಯ ಪರಿಷತ್ತು ಚಿಕ್ಕಮಗಳೂರು ತಾಲೂಕು ಘಟಕದ ಅಧ್ಯಕ್ಷ ಮಾವಿನಕೆರೆ ದಯಾನಂದ್. ಸಾವಯುವ ಕೃಷಿಕ ಕೆಳಗೂರು ವಿಜಯ್ ಕುಮಾರ್ . ರೈತ ಸಂಘಟನೆಯ ಈಶ್ವರ್. ಲೋಕೇಶ್. ಸೋಮಶೇಖರ್. ನಂದಿಕೆರೆ ಹೊನ್ನೇಶ್ ಮುಂತಾದವರು ಈ ಸಂವಾದದಲ್ಲಿ ಪಾಲ್ಗೊಂಡಿದ್ದರು.
••••••••••••••••••••••••••••