लाइव कैलेंडर

February 2025
M T W T F S S
 12
3456789
10111213141516
17181920212223
2425262728  
06/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಹಾ ಕುಂಭಮೇಳ……

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಗಂಗಾ ಯಮುನಾ ಸರಸ್ವತಿ ಎಂಬ ತ್ರಿವಳಿ ನದಿಗಳ ಸಂಗಮದಲ್ಲಿ ಮಿಂದು ಮೀಯುವ ಉತ್ಸವ, ನಾನಾ ಕಾರಣಗಳಿಗಾಗಿ ಇಡೀ ರಾಷ್ಟ್ರದಾದ್ಯಂತ ಗಮನ ಸೆಳೆದಿದೆ.

ಮಹಾ ಕುಂಭಮೇಳ ಒಂದು ಸಾಂಸ್ಕೃತಿಕ ಉತ್ಸವವೇ ಅಥವಾ
ಧಾರ್ಮಿಕ ಆಚರಣೆಯೇ ಅಥವಾ
ನಂಬಿಕೆಯ ಸಂಪ್ರದಾಯವೇ ಅಥವಾ
ದೈವಭಕ್ತಿಯ ಉತ್ತುಂಗವೇ ಅಥವಾ
ಮೌಢ್ಯವೇ
ಅಥವಾ
ಪುಣ್ಯ ಸ್ನಾನವೇ
ಅಥವಾ
ದೇಹ ಮತ್ತು ಮನಸ್ಸುಗಳ ಶುದ್ಧೀಕರಣವೇ
ಅಥವಾ
ವೈಚಾರಿಕ ಪ್ರಜ್ಞೆಯೇ
ಅಥವಾ
ವೈಜ್ಞಾನಿಕ ಅರ್ಥವೇ
ಅಥವಾ ಪ್ರಾಕೃತಿಕ ಸಹಜತೆಯೇ
ಅಥವಾ
ಶೋಷಣೆಯ ಮೂಲವೇ ಅಥವಾ
ಗುಲಾಮಗಿರಿಯ ಸಂಕೇತವೇ ಅಥವಾ
ಸಾಮಾನ್ಯ ಜನರ ಸಹಜ ಜೀವನ ಶೈಲಿಯೇ……

ಈ ಪ್ರಶ್ನೆಗಳಿಗೆ ಆಂತರಿಕವಾಗಿ ಒಂದಷ್ಟು ಉತ್ತರಗಳನ್ನು ಕಂಡುಕೊಳ್ಳಬೇಕಾಗಿದೆ.

ಮೂಲಭೂತವಾಗಿ ಈ ಮೂರು ಬೃಹತ್ ನದಿಗಳ ಸಂಗಮ ಒಂದು ಪ್ರಾಕೃತಿಕ ವಿಸ್ಮಯ. ಆ ದೃಶ್ಯ ನಯನ ಮನೋಹರ, ಸೌಂದರ್ಯ ಲಹರಿಯ ಅದ್ಭುತ ನೋಟ. ತೀರಾ ಅಪರೂಪಕ್ಕೆ ಏರ್ಪಟ್ಟಿರುವ ನೈಸರ್ಗಿಕ ವಿಶೇಷತೆ. ಅಂತಹ ಪರಿಸರವನ್ನು ಕಣ್ತುಂಬಿಕೊಳ್ಳುವುದೇ ಒಂದು ಅತ್ಯಂತ ರೋಮಾಂಚನಕಾರಿ, ಸಂತೋಷದ, ಆಹ್ಲಾದಕರ ಮನಸ್ಥಿತಿ.

ಅಲ್ಲಿ ಅವಕಾಶವಾದರೆ, ಆಸಕ್ತಿ ಇದ್ದರೆ ಈಜುವುದು, ಸ್ನಾನ ಮಾಡುವುದು, ಆ ನೀರಿನಲ್ಲಿ ಸುರಕ್ಷಿತವಾಗಿ ಆಟವಾಡುವುದು ಮನಸ್ಸಿಗೆ ಮತ್ತು ದೇಹಕ್ಕೆ ತುಂಬಾ ಉಲ್ಲಾಸ ನೀಡುತ್ತದೆ ಮತ್ತು ಆರೋಗ್ಯಕರ ಭಾವನೆ ಉಂಟುಮಾಡುತ್ತದೆ. ಇದನ್ನು ಮೀರಿ ಹೆಚ್ಚಿನದು ಏನಿದೆ ಎಂಬ ಪ್ರಶ್ನೆಗೆ ನಾವು ಮುಕ್ತವಾಗಿ ತೆರೆದುಕೊಳ್ಳಬೇಕಾಗುತ್ತದೆ.

ಕುಂಭಮೇಳ ಸಂಕ್ರಮಣ ಕಾಲದ ಒಂದು ಹಬ್ಬ. ಈ ನೆಲದ ಸಂಸ್ಕೃತಿ ಸಂಪ್ರದಾಯಗಳ, ಆಚರಣೆ, ನಂಬಿಕೆ ಭಕ್ತಿಗಳ ಮೇಲೆ ಕಟ್ಟಿಕೊಂಡಿರುವ ಜನಜೀವನದ ಒಂದು ಭಾಗ. ಒಟ್ಟಿಗೆ ಬಹಳಷ್ಟು ಜನ ಸೇರುವ ಒಂದು ಬೃಹತ್ ಜಾತ್ರೆ. ಇದರಿಂದಾಗಿ ಪ್ರವಾಸೋದ್ಯಮ ಬೆಳೆದು ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಇದೆ, ಹಾಗೆಯೇ ದೇಶದ ಆಧ್ಯಾತ್ಮಿಕ ಶಕ್ತಿಯನ್ನು ವಿಶ್ವಕ್ಕೆ ಸಾರುವ ಸುವರ್ಣಾವಕಾಶ, ಜನರ ನಂಬಿಕೆಗಳನ್ನು ಬಲಗೊಳಿಸಿ ದೇಶ ಪ್ರೇಮ ಉದ್ದೀಪನಗೊಳಿಸುವ, ಹಿಂದುತ್ವದ ಶ್ರೇಷ್ಠತೆ ಸಾರುವ ಅವಕಾಶ
ಎಂಬ ಒಂದಷ್ಟು ವಾದ ಸರಣಿಗಳು ಸದಾ ಇರುತ್ತದೆ.

ಜೊತೆಗೆ ಇದೆಲ್ಲ ಅಸಹಜ, ಅತಿರೇಕದ ನಡವಳಿಕೆಗಳು. ಯಾವ ಸ್ನಾನವು ಪುಣ್ಯವೂ ಅಲ್ಲ ಪಾಪವೂ ಅಲ್ಲ. ಅದು ಸ್ನಾನ ಮಾತ್ರ ಮತ್ತು ಇಂಥದೇ ಸಂದರ್ಭದಲ್ಲಿ, ಸ್ಥಳ ಮಹಿಮೆ, ದಿನ ಮಹಿಮೆ ಎಂದು ಸಾರ್ವಜನಿಕರನ್ನು ವಂಚಿಸಲಾಗುತ್ತದೆ. ನದಿಯ ಸ್ಥಾನ ಯಾವಾಗಲೂ ಆಹ್ಲಾದಕರ ನಿಜ, ಅದನ್ನು ಹೊರತುಪಡಿಸಿ ಯಾವುದೇ ಪವಿತ್ರವೂ ಇಲ್ಲ. ಜೊತೆಗೆ ಆ ರೀತಿ ಒಟ್ಟಾಗಿ ವಿಪರೀತ ಜನಸಂಖ್ಯೆ ಪರಿಸರ ನಾಶಕ್ಕೆ, ಅಸ್ವಚ್ಚತೆಗೆ, ಅಸುರಕ್ಷತೆಗೆ ಮತ್ತು ಇನ್ನೊಂದಷ್ಟು ಗಲಭೆಗಳಿಗೆ ಕಾರಣವಾಗಬಹುದು. ಆದ್ದರಿಂದ ಈ ರೀತಿ ಅತಿರೇಕದ ವರ್ತನೆ ಒಳ್ಳೆಯದಲ್ಲ ಎಂಬ ಮತ್ತೊಂದು ವಾದವೂ ಇದೆ.

ಕುಂಭಮೇಳ ಮುಖ್ಯವಾಗಿ ಈ ದೇಶದ ಮೂಲ ನಿವಾಸಿಗಳಾದ ನಾಗ ಬುಡಕಟ್ಟು ಜನಾಂಗದ ನಾಗಾಸಾಧುಗಳ ಆಚರಣೆ. ಅವರು ಅಲ್ಲಿ ನಿರ್ದಿಷ್ಟ ಸಮಯದಲ್ಲಿ ಬಂದು ಸ್ನಾನ ಮಾಡುವುದು, ಪವಿತ್ರ ನದಿಯಲ್ಲಿ ಮುಳುಗೇಳುವುದು, ತಮ್ಮ ಇಷ್ಟ ಬಂದಂತೆ ಬದುಕುವುದು, ಅನೇಕ ಹಠಯೋಗಗಳನ್ನು ಮಾಡುವುದು, ವಸ್ತ್ರ ಮುಕ್ತವಾಗಿ ವಿವಸ್ತ್ರವಾಗಿ ಸಹಜವಾಗಿಯೇ ಇರುವುದು, ಏನೇನೋ ವಿಶಿಷ್ಟ ಜೀವನಶೈಲಿಯನ್ನು ರೂಪಿಸಿಕೊಳ್ಳುವುದು ಮಾಡುತ್ತಾರೆ. ಅದು ಅವರವರ ಸ್ವಾತಂತ್ರ್ಯ ಮತ್ತು ಇಚ್ಛೆ. ಅದನ್ನು ಪ್ರಶ್ನಿಸುವುದು ಸರಿಯಲ್ಲ. ಯಾರಿಗೂ ತೊಂದರೆ ಕೊಡದ, ಯಾರನ್ನೂ ಅವಮಾನಿಸದ, ಯಾರನ್ನೂ ಶೋಷಿಸದ, ಹಿಂಸಿಸದ, ಯಾರನ್ನೂ ಕೀಳಾಗಿ ಕಾಣದ, ಇಲ್ಲಿನ ಕಾನೂನಿಗೆ ಬದ್ಧವಾದ ಯಾವುದೇ ಆಚರಣೆ ಸ್ವೀಕಾರಾರ್ಹ.

ಆದರೆ ಆ ಹೆಸರಿನಲ್ಲಿ ನಡೆಯುವ ಎಲ್ಲಾ ರೀತಿಯ ಅನ್ಯಾಯ, ಶೋಷಣೆ, ದೌರ್ಜನ್ಯ, ವ್ಯಾಪಾರ ಮುಂತಾದುವುಗಳನ್ನು ಖಂಡಿಸಲೇಬೇಕು ಮತ್ತು ನಿಷೇಧಿಸಬೇಕು ಅಥವಾ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ರಾಜಕೀಯ ಕಾರಣಕ್ಕಾಗಿ
ಈ ಕುಂಭಮೇಳವನ್ನು ವಿಜೃಂಭಿಸುವುದು ಅಥವಾ ಟೀಕಿಸುವುದು ಎರಡೂ ಉತ್ತಮ ನಡೆಯಲ್ಲ. ಅವರವರ ಇಷ್ಟದಂತೆ ನದಿಯ ಸ್ನಾನ ಮಾಡಿಕೊಂಡು ಸಂಭ್ರಮಿಸುವವರು ಸಂಭ್ರಮಿಸಲಿ. ಆರೋಗ್ಯ, ಸುರಕ್ಷತೆ ಸದಾ ಜಾಗೃತವಾಗಿರಲಿ.
ಮೌಢ್ಯತೆ ಮೀರಿ ವೈಚಾರಿಕ ಪ್ರಜ್ಞೆ ಇದ್ದಲ್ಲಿ ಈ ದೇಶದ ಒಟ್ಟು ಅಭಿವೃದ್ಧಿ ಮತ್ತು ಭವಿಷ್ಯದ ದೃಷ್ಟಿಯಿಂದ ಅದು ಉತ್ತಮ ಬೆಳವಣಿಗೆ.

ಈ ಮಹಾ ಕುಂಭಮೇಳದಲ್ಲಿ ಇನ್ನೂ ಅನೇಕ ಇತರ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ಎಂದಿನಂತೆ ಸದ್ದು ಮಾಡುತ್ತಿದೆ. ಒಂದಷ್ಟು ವಿದೇಶಿಯರ ಆಗಮನ, ಇನ್ನೊಂದಿಷ್ಟು ಬೆತ್ತಲೆ ಸಾಧುಗಳ ವರ್ತನೆ, ಜೊತೆಗೆ ಇತ್ತೀಚೆಗೆ ಒಬ್ಬ ಮೊನಾಲಿಸಾ ಎಂಬ ಹುಡುಗಿಯ ಸೌಂದರ್ಯದ ಟ್ರೊಲ್ಗಳು ಇವು ಸಹ ಸುದ್ದಿಯಾಗುತ್ತಿದೆ.

ಸುಮಾರು 5000 ಪೌರಕಾರ್ಮಿಕರು ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿದ್ದಾರೆ, ಐವತ್ತು ಸಾವಿರಕ್ಕೂ ಹೆಚ್ಚು ಪೊಲೀಸರು, ಅರೆ ಸೈನಿಕರು ರಕ್ಷಣಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿವೆ. ಈ 45 ದಿನಗಳಲ್ಲಿ ಸುಮಾರು 45 ಕೋಟಿ ಜನ ಭಾಗವಹಿಸಬಹುದು ಎಂಬ ಅಂದಾಜಿದೆ. ಇಷ್ಟು ದೊಡ್ಡ ಜನಸಂಖ್ಯೆಯನ್ನು ಆ ಮೂರು ನದಿಗಳ ಸಂಗಮ ಮತ್ತು ಆ ಭೂ ಪ್ರದೇಶ, ಅಲ್ಲಿನ ಸರ್ಕಾರ 45 ದಿನಗಳ ಕಾಲ ಯಾವುದೇ ಅವಘಡಗಳಾಗದಂತೆ ಕಾಪಾಡಬೇಕಿದೆ. ನಿನ್ನೆ ಆಕಸ್ಮಿಕವಾಗಿ ಒಂದು ಸಿಲಿಂಡರ್ ಸ್ಫೋಟಿಗೊಂಡು ಕೆಲವು ಟೆಂಟ್ ಗಳು ಸುಟ್ಟು ಭಸ್ಮವಾಗಿದೆ.

ಕೆಲವೊಮ್ಮೆ ಈ ರೀತಿಯ ಜಾತ್ರೆಗಳ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಹಿಂದೆ ವಾಹನ ಸೌಕರ್ಯಗಳು ಇಲ್ಲದ ಸಂದರ್ಭದಲ್ಲಿ, ಜನಸಂಖ್ಯೆ ತುಂಬಾ ಕಡಿಮೆ ಇದ್ದ ಕಾಲದಲ್ಲಿ ಈ ರೀತಿಯ ಉತ್ಸವಗಳು ಒಂದು ರೀತಿ ಸಂಭ್ರಮ, ನವೋಲ್ಲಾಸ ಮತ್ತು ಸುರಕ್ಷಿತವಾಗಿದ್ದವು. ಆದರೆ ಈಗ ವಿಶ್ವದ ಜನಸಂಖ್ಯೆಯಲ್ಲಿ ಮೊದಲನೇ ಸ್ಥಾನದಲ್ಲಿರುವ ನಾವು ಈ ರೀತಿಯ ಬಹುದೊಡ್ಡ ಉತ್ಸವವನ್ನು ಪ್ರೋತ್ಸಾಹಿಸಬೇಕೆ ಎಂಬ ಪ್ರಶ್ನೆ ಏಳುತ್ತದೆ ಅಥವಾ ತೀರ ಧಾರ್ಮಿಕ ನಂಬಿಕೆ ಉಳ್ಳವರು, ನಾಗಾ ಸಾಧುಗಳು, ಸ್ವಾಮೀಜಿಗಳು ಮಾತ್ರ ಈ ಸಂದರ್ಭದಲ್ಲಿ ಭಾಗವಹಿಸಿ, ಉಳಿದವರು ಬೇರೆ ಬೇರೆ ಸಮಯದಲ್ಲಿ ಭಾಗವಹಿಸಿದರೆ ಉತ್ತಮ ಎಂಬ ಅಭಿಪ್ರಾಯವೂ ಇದೆ.

ಒಟ್ಟಾರೆ ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068……..

About Author

Leave a Reply

Your email address will not be published. Required fields are marked *