ಸಂಗೀತ ಆಸ್ವಾದಕರು ಹೆಚ್ಚಬೇಕು: ಗಣೇಶ್ ದೇಸಾಯಿ
1 min readಸಂಗೀತ ಆಸ್ವಾದಕರು ಹೆಚ್ಚಬೇಕು: ಗಣೇಶ್ ದೇಸಾಯಿ
ಶೃಂಗೇರಿ: ‘ಜನರ ಹೃದಯ, ಮನಸ್ಸನ್ನು ಗೆಲ್ಲುವ, ಅವರ ಅತ್ಮವಿಶ್ವಾಸವನ್ನು ಹೆಚ್ಚಿಸುವ ಶಕ್ತಿ ಸಂಗೀತಕ್ಕಿದೆ. ಸಂಗೀತವನ್ನು ಆಸ್ವಾದಿಸುವ ಮನಸ್ಸುಗಳು ಹೆಚ್ಚಬೇಕು’ ಎಂದು ಬೆಂಗಳೂರಿನ ಸುಗಮ ಸಂಗೀತ ಕಲಾವಿದ ಗಣೇಶ್ ದೇಸಾಯಿ ಹೇಳಿದರು.
ಶೃಂಗೇರಿ ತಾಲ್ಲೂಕು ನಾದಸಿರಿ ಸುಗಮ ಸಂಗೀತ ವೃಂದದಿಂದ ಉಳುವೆಬೈಲು ಸ್ವಯಂಪ್ರಕಾಶ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದ ನಾದವರ್ಷಿಣಿ ಕಾರ್ಯಕ್ರಮದಲ್ಲಿ ‘ನಾದಸಿರಿ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್‌ನ ಕೊಪ್ಪ ಘಟಕದ ಅಧ್ಯಕ್ಷ ಜಿ.ಎಂ. ಹರ್ಷ ಮಾತನಾಡಿ, ‘ಸುಗಮ ಸಂಗೀತ ಕ್ಷೇತ್ರವನ್ನು ಬೆಳೆಸುವಲ್ಲಿ ಮೈಸೂರು ಅನಂತಸ್ವಾಮಿ, ಸಿ. ಅಶ್ವತ್, ರತ್ನಮಾಲಾ ಪ್ರಕಾಶ್, ಎಂ.ಡಿ. ಪಲ್ಲವಿ ಮುಂತಾದವರ ಕೊಡುಗೆ ಅನನ್ಯ’ ಎಂದರು.
ಅಡ್ಡಗದ್ದೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಘವೇಂದ್ರ ಹಂಚಲಿ ಮಾತನಾಡಿ, ‘ಭಾವನೆಗೆ ಮೌನ ಕೂಡ ಭಾಷೆ. ಈ ಭಾಷೆ ಅಂತರಂಗದಿಂದ ಹೊಮ್ಮಿದಾಗ ಕವಿತೆ ಹುಟ್ಟುತ್ತದೆ’ ಎಂದರು.
ಗಣೇಶ್ ದೇಸಾಯಿ ಹಾಡಿಗೆ ಜನರು ತಲೆದೂಗಿದರು. ರಾಘವೇಂದ್ರ ಭಟ್, ನಾದಸಿರಿ ಸುಗಮ ಸಂಗೀತ ತಂಡದ ಮುಖ್ಯಸ್ಥ ಗೋಪಾಲಕೃಷ್ಣ, ಮೋಹನ್ ರಾಜಣ್ಣ, ಮಾಕೋಡು ಗಣಪತಿ, ಹರೀಶ್ ಭಟ್, ಜನಾರ್ಧನ ಮಡಂಗಾರು, ಕಲಾವಿದ ದಿಲೀಪ್ ಇದ್ದರು.