लाइव कैलेंडर

February 2025
M T W T F S S
 12
3456789
10111213141516
17181920212223
2425262728  
06/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇದೊಂದು ಬಹಳ ವಿಚಿತ್ರ..!

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ‘ಮೌನಿಸಿಂಗ್’, ‘ಮೂಕ ಗೊಂಬೆ’, ‘ಹೈಕಮಾಂಡ್ ಕೈಗೊಂಬೆ’ – ಎಂದೆಲ್ಲ ಜರಿದವರು ಈಗ ‘ಜ್ಞಾನಿ ಸಿಂಗ್’, ‘ಸಿಂಗ್ ಇಸ್ ಕಿಂಗ್’, ‘ಮಿತಭಾಷಿ-ಕೃತಿಶ್ರೇಷ್ಠ’, ‘ವಿಶ್ವಶ್ರೇಷ್ಠ ಅರ್ಥತಜ್ಞ’, ‘ಸರಳ, ಸೌಮ್ಯ, ಸಜ್ಜನ, ನಿಗರ್ವಿ, ‘ಪ್ರಾಮಾಣಿಕ ನಾಯಕ’ ‘ನವಭಾರತ ನಿರ್ಮಾಣದ ಹರಿಕಾರ…’ ಎಂಬೆಲ್ಲ ಪದಪುಂಜಗಳಿಂದ ಹಾಡಿ ಹೊಗಳುತ್ತಿದ್ದಾರೆ. ಡಾ. ಸಿಂಗ್ ಅವರ ಆತ್ಮವೂ ನಾಚಿ ನೀರಾಗುವಂತೆ!

ಬದುಕಿದ್ದಾಗ ನಿಂದನೆಯ ಶೂಲಕ್ಕೆರಿಸಿ, ಸತ್ತಾಗ ಶ್ಲಾಘಿಸುವವರನ್ನು ನೋಡಿ ಸೋಜಿಗ ಮತ್ತು ರೇಜಿಗೆ ಎರಡೂ ಏಕಕಾಲಕ್ಕೆ ಆಗುತ್ತದೆ.

ಸತ್ತವರು ಯಾರೇ ಆಗಿರಲಿ, ಅವರು ಯಾವುದೇ ಕ್ಷೇತ್ರ, ಪಕ್ಷಕ್ಕೆ ಸೇರಿರಲಿ ಈ ವೈಪರೀತ್ಯ ಆಬಾಧಿತ.

ಒಂದೋ ಅವರು ಬದುಕಿದ್ದಾಗ ಟೀಕಿಸಿದ್ದು ಸುಳ್ಳಾಗಿರಬೇಕು. ಇಲ್ಲವೇ ಅವರು ಸತ್ತಾಗ ಹೊಗಳಿದ್ದು ನಿಜವಾಗಿರಬೇಕು. ಒಂದೊಮ್ಮೆ ಇದು ಉಲ್ಟಾ ಆದರೂ ಅಪರಾಧಿ ಸ್ಥಾನದಲ್ಲಿ ನಿಲ್ಲುವವರು ಮತ್ತದೇ ಅಭಿಪ್ರಾಯ ಶೂರರೇ..!

ಬಹುಷಃ ಆಗ ಮಾಡಿದ ತಪ್ಪಿಗೆ ಈಗಿನದು ಪಶ್ಚಾತಾಪವೇ..? ಅವರ ಅಂತಾರಾತ್ಮಕ್ಕೇ ಗೊತ್ತು. ಏಕೆಂದರೆ ತೋರಿಕೆಯ ನಡೆ, ನುಡಿ ಆತ್ಮವಂಚನೆಗೆ ಸವಾಲಾಗಬಹುದು!

ಈ ಜಗತ್ತಿನಲ್ಲಿ ಎಷ್ಟೋ ಮಂದಿ ಯೋಗ್ಯತೆ ಮೀರಿ ಮೆರೆದಿದ್ದಾರೆ. ಅರ್ಹರು ಹೊಗಳಿಕೆಗೆ ಕದಮುಚ್ಚಿ, ಚಿಪ್ಪಿನೊಳಗಿನ ಮುತ್ತಿನಂತೆ ಹೊಳೆದಿದ್ದಾರೆ.

ಅದೇನೇ ಇರಲಿ, “ಹೋದೋರೆಲ್ಲ ಒಳ್ಳೆಯವರು.. ಹರಸೋ ಹಿರಿಯರೂ…” ಎಂಬ ಸಾಲುಗಳಲ್ಲಿ ಮನಮೋಹನ್ ಸಿಂಗ್ ಅಗಲಿಕೆಯಲ್ಲಿ ಇರುವಿಕೆ ಅನವರತ.

ಅಧಿಕಾರದಿಂದ ನಿರ್ಗಮಿಸುವ ವೇಳೆ ಅವರು ಹೇಳಿದ ಕೊನೇ ಮಾತು: “History will be kinder to me..” ಅವರ ಆಶಯ, ಅಭೀಪ್ಸೆ ಶ್ರದ್ಧಾಂಜಲಿ ಪದದರ್ಪಣವಾಗಿದೆ! ಅವರ ಆತ್ಮಕ್ಕೆ ಶಾಂತಿ ಸಿಗಲಿ.

(ಚಿತ್ರ: 2018 ಮೇ ತಿಂಗಳು ಬೆಂಗಳೂರಲ್ಲಿ ಏರ್ಪಡಿಸಿದ್ದ ಅನೌಪಚಾರಿಕ ಸಂವಾದ ಸಂದರ್ಭ. ಅಲ್ಲಿ ಅವರ ಮಾತುಗಳಲ್ಲಿ ಭೋರ್ಗರೆದ ಜ್ಞಾನಸಾಗರದಲ್ಲಿ ವಿರೋಧಿಗಳ ಟೀಕೆಗಳು ಕೊಚ್ಚಿ ಹೋಗಿದ್ದವು.)

ನಿರ್ಗವಿಯಾಗಿಯೇ ಉಳಿದು ಅತಿ ದೊಡ್ಡ ನಿರ್ಗಮನ ತೆಗೆದುಕೊಂಡು, ತನ್ನ ಆರ್ಥಿಕ ಕ್ಷೇತ್ರದ ಲೆಕ್ಕಾಚಾರ ಮುಗಿಸಿ, ಬದುಕಿನ ಲೆಕ್ಕಾಚಾರವನ್ನು ಚುಪ್ತಾ ಮಾಡಿ ಇಹ ಬದುಕಿಗೆ ಶಾಶ್ವತವಾಗಿ ಕೈಬೀಸಿ ಹೊರಟು ಹೋಗಿರುವ ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ ಅವರು ಅಧಿಕಾರದಲ್ಲಿದ್ದಾಗ ಅವರನ್ನು ಭಾರತದ ಜನತೆ ಅರ್ಥ ಮಾಡಿದ್ದುಕೊಂಡಿದ್ದು ಕಡಿಮೆ, ಹೆಚ್ಚು ಅರ್ಥೈಸಿಕೊಂಡಿದ್ದು ವಿದೇಶಗಳ ಆರ್ಥಿಕ ಕ್ಷೇತ್ರ ಮತ್ತು ಅಲ್ಲಿನ ರಾಜಕೀಯ ಮುಖಂಡರು.

ಒಬ್ಬ ಅರ್ಥಶಾಸ್ತ್ರದ ಉಪನ್ಯಾಸಕನಾಗಿ, ಆರ್ಥಿಕ ಕ್ಷೇತ್ರದ ಎಲ್ಲ ಮಗ್ಗಲುಗಳ ಆಯಾ ಕಟ್ಟಿನ ಪ್ರಮುಖ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡಿ, ಪ್ರಧಾನಮಂತ್ರಿಯಂಥಹ ಹುದ್ದೆಯು ಒಲಿದು ಬಂದಿದ್ದು ಸುಖಾ ಸುಮ್ಮನೆ ಅಲ್ಲ,

ಲೋಕಸಭಾ ಚುನಾವಣೆಯಲ್ಲಿ ಒಮ್ಮೆಯೂ ಗೆಲುವು ಸಾಧಿಸದೆ ಇರುವಂತಹ ಈ ಸಿಂಗ್ ಅವರಿಗೆ ಪ್ರಧಾನಿ ಪಟ್ಟ ದೊರೆತಿದ್ದು ಅವರ ನಿಜ ಪ್ರತಿಭೆಗೆ ಸಾಕ್ಷಿಯಾಗಿತ್ತು.

ಹೀಗಿದ್ದು ಕೂಡ ಭಾರತದ ವಿರೋಧ ಪಕ್ಷಗಳು ಮನಮೋಹನ್ ಸಿಂಗ್ ಒಬ್ಬ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್, ಮೌನಿ ಬಾಬಾ ಇತ್ಯಾದಿ ಕೆಳಮಟ್ಟದ ಟೀಕೆ ಟಿಪ್ಪಣಿ ಜೊತೆಗೆ ಅವರ ಬಗ್ಗೆ ಅವಹೇಳನದ ಮಾತುಗಳೊಂದಿಗೆ ಲೇವಡಿ ಮಾಡಿದ್ದನ್ನು ಈಗ ನೆನಪಿಸಿಕೊಳ್ಳಬಹುದು.

ಅಂದು ಲೇವಡಿ ಮಾಡಿದ ಬಾಯಿಗಳೇ ಇಂದು ಸಿಂಗ್ ಅವರ ಕಾರ್ಯಯೋಜನೆಗಳನ್ನು, ಅವರ ಪ್ರಾಮಾಣಿಕ ರಾಜಕಾರಣವನ್ನು, ನೆಲಕಚ್ಚಿದ್ದ ಭಾರತದ ಆರ್ಥಿಕ ಕ್ಷೇತ್ರಕ್ಕೆ ಅವರು ಅಡಪಾಯ ಹಾಕಿ ಕಳಸಪ್ರಾಯರಾದ ಅವರ ಮುಂದಾಲೋಚನೆಯನ್ನು ಇಂದು ವಿರೋಧ ಪಕ್ಷಗಳು ಕೂಡ ಸ್ಮರಿಸುತ್ತಿದ್ದಾವೆ.

ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಧ್ಯಮಗಳು ಕೂಡ ಅವರ ಮಾತು ಮತ್ತು ಅವರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಿ, ಬರೆದು ಮಾತನಾಡಿದ್ದಕ್ಕಿಂತ ಹೆಚ್ಚಾಗಿ ವಿರೋಧ ಪಕ್ಷಗಳು ಸಿಂಗ್ ಅವರ ಮೇಲೆ ಮಾಡಿದ ಲೇವಡಿ ಮತ್ತು ಅಪಮಾನದ ಮಾತುಗಳನ್ನೇ ಬ್ರೇಕಿಂಗ್ ನ್ಯೂಸ್ ತರಹ ಮುಂದೆ ಮಾಡಿ ಜನರಿಗೆ ತಲುಪಿಸಿ ಕೈಬಾಯಿ ತೊಳೆದುಕೊಂಡುದ್ದನ್ನು ಕಾಣಬಹುದು.

ಒಂದು ಸಾಧಾರಣ ಕುಟುಂಬದಲ್ಲಿ ಹುಟ್ಟಿ, ಯಾವ ರಾಜಕೀಯ ಹಿನ್ನೆಲೆಯೂ ಇಲ್ಲದೆ, ಹತ್ತು ವರ್ಷಗಳ ಕಾಲ ಎರಡು ಅವಧಿಗೆ ಭಾರತದಂತಹ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿ, ಭ್ರಷ್ಟಾಚಾರವನ್ನು ತೊಡೆದು ಹಾಕುವಂತಹ ಮಾಹಿತಿ ಹಕ್ಕು ಕಾಯ್ದೆ ಹಾಗೂ ಈ ದೇಶದ ಕಟ್ಟಕಡೆಯ ಜನರು ಕೂಡ ಹಸಿವಿನಿಂದ ಬಳಲಬಾರದು ಎಂದು ವರ್ಷದಲ್ಲಿ ಕನಿಷ್ಠ ನೂರು ದಿನದ ಕೂಲಿಯನ್ನು ನೀಡುವ ನರೇಗಾ ಯೋಜನೆಯೂ ಸೇರಿದಂತೆ, ಹತ್ತು ಹಲವು ಶಾಶ್ವತ ಗ್ಯಾರಂಟಿ ಯೋಜನೆಗಳನ್ನು ದೇಶಕ್ಕೆ ಕೊಟ್ಟ ಮನಮೋಹನ್ ಸಿಂಗ್ ಅವರು ಪ್ರಶಂಸನಿಯರಾಗಿದ್ದಾರೆ. ಹಾಗೆ ಜಾಗತೀಕರಣ ಖಾಸಗಿಕರಣ ಉದಾರೀಕರಣದ ವಿಷಯವಾಗಿ ವಿಮರ್ಶೆಗೂ ಒಳಗೊಂಡಿದ್ದಾರೆ.

ಟೀಕೆ ಟಿಪ್ಪಣಿಗಳು ಪ್ರಶಂಸೆ ವಿಮರ್ಶೆಗಳು ಏನೇ ಇರಲಿ, ಇಂದಿನ ಭಾರತದ ರಾಜಕೀಯ ಕ್ಷೇತ್ರದಲ್ಲಿ ಭ್ರಷ್ಟಾಚಾರ ಹೊಲಸು ಕೊಳಕು ತುಂಬಿ ತುಳುಕುತ್ತಿರುವ ಹೊತ್ತಿನಲ್ಲಿಯೂ,ಸ್ವಚ್ಛವಾದ ಬಾಯುಳ್ಳವರಾಗಿ, ಶುದ್ಧವಾದ ಕೈ ಉಳ್ಳವರಾಗಿ, ಯಾವುದೇ ಭ್ರಷ್ಟಾಚಾರಕ್ಕೆ ಒಳಗಾಗದೆ, ಘನ ಅಧಿಕಾರ ಇದ್ದಾಗಲೂ ಕೂಡ ವಿರೋಧ ಪಕ್ಷಗಳನ್ನು ಕೀಳು ಮಟ್ಟದಲ್ಲಿ ಯಾವತ್ತೂ ಟೇಕಿಸದೆ ಹತ್ತು ವರ್ಷಗಳ ಕಾಲ ಈ ದೇಶದ ಪ್ರಧಾನಿಯಾಗಿ ಆಡಳಿತ ನೀಡಿದ್ದು ಈಗ ಇತಿಹಾಸವಾಗಿದೆ.

ವಿಶ್ವದ ದೊಡ್ಡಣ್ಣ ನಾನೇ ಎಂದು ಬೀಗುತ್ತಿರುವ ಅಮೇರಿಕಾದಂತಹ ಅಮೆರಿಕದ ಆರ್ಥಿಕತೆ ಕುಸಿದು ನೆಲ ಕಚ್ಚಿದಾಗ, ಆ ದೇಶಕ್ಕೆ ಆರ್ಥಿಕ ಸಲಹೆ ಕೊಟ್ಟು, ನೆಲಕಚ್ಚಿದ ಆರ್ಥಿಕತೆಯನ್ನು ಮೇಲೆತ್ತುವಂತೆ ಮಾಡಿದವರು ಇದೇ ಡಾ.ಮನಮೋಹನ್ ಸಿಂಗ್ ಅವರು. ಈ ಕಾರಣಕ್ಕಾಗಿ ಅಂದಿನ ಅಮೆರಿಕದ ಅಧ್ಯಕ್ಷ ಒಬಾಮಾ ಅವರು ಮನಮೋಹನ್ ಸಿಂಗ್ ಒಬ್ಬರು ವಿಶ್ವನಾಯಕ, ಶ್ರೇಷ್ಠ ಆರ್ಥಿಕ ತಜ್ಞ ಎಂದು ಬಣ್ಣಿಸಿದ್ದರು.

ಇಷ್ಟೆಲ್ಲಾ ಗೌರವ ಮನ್ನಣೆ ಹುದ್ದೆ ಪಡೆದಿದ್ದರೂ ಕೂಡ, ಅವರು ಬದುಕಿದ್ದು ಬದುಕುತ್ತಿದ್ದದ್ದು ಸರಳವಾಗಿ, ಅವರ ಉಡುಗೆ-ತೊಡಗೆಗಳು ಕೂಡ ತೀರ ಸಾಮಾನ್ಯವಾಗಿದ್ದವು,
ಐಷಾರಾಮಿ ಕಾರಿನಲ್ಲಿ ಓಡಾಡಲು ಬಯಸದೆ,ಒಂದು ಸಾಧಾರಣವಾದ ಮಾರುತಿ ಕಾರಿನಲ್ಲಿ ಇಂದಿಗೂ ಸಿಂಗ್ ಅವರುಓಡಾಡುತ್ತಿದ್ದರು ಎಂದರೆ ಅವರ ಸರಳ ಜೀವನ ನಮಗೆ ಅರ್ಥವಾಗುತ್ತದೆ ಮತ್ತು ಅವರ ಈ ಸರಳ ಜೀವನ ದೇಶಕ್ಕೆ ಬಂದು ಮಾದರಿಯನ್ನು ತೋರುತ್ತದೆ.

ತಮ್ಮ ಜೀವಮಾನವಿಡಿ ರಾಜಕೀಯ ಮುತ್ಸದ್ದಿತನವನ್ನು ಯಾವತ್ತು ಕಳೆದುಕೊಳ್ಳದೆ, ಹರುಕು ಬಾಯಿಯೊಂದಿಗೆ ಇತರರಿಗೆ ಹಗುರವಾಗಿ ಯಾವತ್ತೂ ಮಾತನಾಡದೆ, ಮಧುಮೇಹ ಮತ್ತು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗೆ ಒಳಗಾಗಿದ್ದರು ಕೂಡ 92 ವರ್ಷಗಳ ಕಾಲ ಬದುಕಿ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಕ್ಕೆ ಸುಧೀರ್ಘವಾದ ಸೇವೆ ಸಲ್ಲಿಸಿ ಹೊರಟು ಹೋಗಿರುವ ಡಾ. ಮನಮೋಹನ್ ಸಿಂಗ್ ಅವರಿಗೆ *ನ್ಯೂಸ್ ಕಿಂಗ್* ಓದುಗರ ಬಳಗದ ಪರವಾಗಿ ಅಂತಿಮ ನಮನಗಳು – ಭಾವಪೂರ್ಣ ವಿದಾಯಗಳು.

*ಸಂತಾಪಗಳೊಂದಿಗೆ…..*
🙏🌹🙏
ಡಿ.ಎಂ.ಮಂಜುನಾಥಸ್ವಾಮಿ
ನ್ಯೂಸ್ ಕಿಂಗ್…. ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *