*ಕನ್ನಡದ ನುಡಿ ಜಾತ್ರೆಗಿಂತ ರಾಜಕಾರಣದ ಕಿಡಿ ಸಂತೆಯೇ ಮಾಧ್ಯಮಗಳಿಗೆ ಮುಖ್ಯವೇ ?
1 min read*ಕನ್ನಡದ ನುಡಿ ಜಾತ್ರೆಗಿಂತ ರಾಜಕಾರಣದ ಕಿಡಿ ಸಂತೆಯೇ ಮಾಧ್ಯಮಗಳಿಗೆ ಮುಖ್ಯವೇ ?*
ಇಂದಿನಿಂದ ಮೂರು ದಿನಗಳ ಕಾಲ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ 110 ವರ್ಷಗಳ ಇತಿಹಾಸದಲ್ಲಿ, ಇದೇ ಮೊಟ್ಟ ಮೊದಲ ಬಾರಿಗೆ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವು ,ಶತಮಾನದಂಚಿಗೆ ಬಂದು ನಿಂತಿರುವ ನಮ್ಮ ಚಿಕ್ಕಮಗಳೂರಿನ ಹೆಮ್ಮೆಯ ಹಿರಿಯಜ್ಜ , ನಾಡೋಜ,ನಾಡಿನಾದ್ಯಂತ ಗೊರಚ ಎಂದೇ ಚಿರಪರಿಚಿತರಾಗಿರುವ 94ರ ಹಿರಿದಾದ ಜೀವ ಗೊಂಡೆದಹಳ್ಳಿ ರುದ್ರಪ್ಪ ಚನ್ನಬಸಪ್ಪ ಅವರಿಗೆ ಒಲಿದು ಬಂದಿದೆ.
ನಮ್ಮೂರಿನ ಈ ಹಿರಿಯಜ್ಜನ ಸರ್ವಾಧ್ಯಕ್ಷತೆಯಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರತಿ ಸಂದರ್ಭಗಳನ್ನು, ಮನೆಯಲ್ಲೇ ಕುಳಿತು ದೃಶ್ಯ ಮಾಧ್ಯಮಗಳ ಮೂಲಕ ಸವಿಯಲು ಈ ಜಿಲ್ಲೆ ಮಾತ್ರವಲ್ಲ, ಅಖಿಲ ಭಾರತ ಮಟ್ಟದಲ್ಲಿ ನೆಲೆಸಿರುವ ಕನ್ನಡಿಗರು, ಹೊರದೇಶಗಳಲ್ಲಿ ನೆಲೆಗೊಂಡಿರುವ ಕನ್ನಡಿಗರು ಸಮ್ಮೇಳನದ ಸುದ್ದಿಗಾಗಿ ನಿರೀಕ್ಷಿಸುತ್ತಿದ್ದರು.
ನಮ್ಮ ಚಿಕ್ಕಮಗಳೂರಿನ ಈ ಹಿರಿಯಜ್ಜನ ಸರ್ವಾಧ್ಯಕ್ಷತೆಯ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಇಂದು ಸಾಧ್ಯವಾಗಲಿಲ್ಲ. ನಮ್ಮವರೇ ನಮಗೆ ಮುಳುವಾದರೂ ಎಂದು ವಿಧಾನ ಪರಿಷತ್ತು ಸದಸ್ಯ ಸಿ. ಟಿ.ರವಿ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿ, ದೃಶ್ಯ ಮಾಧ್ಯಮಗಳಿಗೆ ಶಾಪ ಹಾಕಿದ್ದಾರೆ.
ವಿಧಾನಪರಿಷತ್ತು ಸದಸ್ಯ ಸಿ. ಟಿ.ರವಿ ಪ್ರಕರಣವನ್ನು ಮುಂದಿಟ್ಟುಕೊಂಡು, ಬಹುತೇಕ ಎಲ್ಲಾ ಎಲೆಕ್ಟ್ರಾನಿಕ್ ಮಾಧ್ಯಮಗಳು ,ದಿನವಿಡೀ ರವಿ ಪ್ರಕರಣವನ್ನೇ ವೈಭವಿಕರಿಸಿ ಬಿತ್ತುತ್ತಾ, ಸಮ್ಮೇಳನದ ಸುದ್ದಿಯನ್ನು ತಮ್ಮ ತಮ್ಮ ವಾಹಿನಿಯಲ್ಲಿ ಇಡೀ ದಿನ ಸಂಪೂರ್ಣವಾಗಿ ಗೌಣ ಮಾಡಿದ್ದಾವೆ. ಈ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮಗಳು ಮಾಧ್ಯಮದ ಮೌಲ್ಯ ಮತ್ತು ತಮ್ಮ ನೈತಿಕ ಪ್ರಜ್ಞೆಯನ್ನು ಕಳೆದುಕೊಂಡಂತೆ ವರ್ತಿಸಿವೆ.
ದೃಶ್ಯಮಾಧ್ಯಮದ ವೀಕ್ಷಕರಿಗೆಲ್ಲ ನಾಚಿಕೆಯಾಗಿ ವಾಂತಿಯಾಗುವಂತೆ ಇಡೀ ದಿನ ಸಿ. ಟಿ.ರವಿ ಪ್ರಕರಣವನ್ನೇ ಹಿಂದಿನಿಂದ ಮುಂದಕ್ಕೆ, ಮುಂದಿನಿಂದ ಹಿಂದಕ್ಕೆ ಬೃಹಸ್ಪತಿಗಳ ಮುಖಚರ್ಯೆಯೊಂದಿಗೆ ರುಬ್ಬಿದ್ದೇ ರುಬ್ಬಿದ್ದು.
ದೃಶ್ಯ ಮಾಧ್ಯಮಗಳಿಗೆ ಕನ್ನಡದ ನೆಲ ಜಲ ಭಾಷೆ ಸಾಹಿತ್ಯ ಹೋರಾಟ ಸಂಘಟನೆಗಳ ಬಗ್ಗೆ ಚರ್ಚಿಸುವ ಸಂವಾದಿಸುವ ಸುದ್ದಿಗಿಂತ, ಕ್ರಿಮಿನಲ್ ರಾಜಕೀಯ ಸುದ್ದಿಯೇ ಅತ್ಯಂತ ಪ್ರಮುಖವಾಗಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ.
ಜಾತ್ಯಾತೀತ ಪ್ರಜ್ಞೆಯ, ಬಹುತ್ವದ ಗುಣವುಳ್ಳ, ಇಡೀ ಮಾನವ ಜಾತಿ ಒಂದೇ ಕುಲ ಎಂದು ಪ್ರತಿಪಾದಿಸುವ ಕನ್ನಡದ ಶ್ರೇಷ್ಠ ಆಶಯಗಳಿಗೆ , ಬಹುತೇಕ ದೃಶ್ಯಮಾಧ್ಯಮಗಳು ಇಂದು ಸಂಪೂರ್ಣವಾಗಿ ಎಳ್ಳು ನೀರು ಬಿಟ್ಟಿರುವುದನ್ನು, ಹಲವು ಕನ್ನಡಪರ ಸಂಘಟಕರು ಉಗ್ರವಾಗಿ ಖಂಡಿಸಿದ್ದಾರೆ.
ಕನ್ನಡದ ಈ ನಾಡು-ನುಡಿ, ನೆಲ ಜಲ, ಭಾಷೆ ಸಾಹಿತ್ಯ ಸಂಸ್ಕೃತಿ ಉಳಿದರೆ ಮಾತ್ರ ಭವಿಷ್ಯದ ದಿನಗಳು ಸುಂದರವಾಗಿ ಗೋಚರಿಸಲು ಸಾಧ್ಯ.
ಇಂಥಹ ಶ್ರೇಷ್ಠ ಸಂಗತಿಗಳು ಸಮ್ಮೇಳನದಲ್ಲಿ ಎಷ್ಟರ ಮಟ್ಟಿಗೆ ಚರ್ಚೆ ಒಳಪಡುತ್ತಿವೆ, ಸಂವಾದಕ್ಕೆ ಎಡೆ ಮಾಡಿಕೊಟ್ಟಿವೆ. ಹೊರಬಂದ ಶೇಷ್ಠ ಮಾತುಗಳು ಯಾವುವು? ಕಟ್ಟಿಕೊಟ್ಟ ಮಹತ್ವದ ಕವಿತೆಗಳು ಯಾವುವು? ಸಂವಾದ ಮಾಡಿದ ಶ್ರೇಷ್ಠ ಸಂಗತಿಗಳು ಯಾವುವು? ಈ ನೆಲ ಜಲ ಭಾಷೆ ಸಂಸ್ಕೃತಿ ಕುರಿತು ಏನೆಲ್ಲಾ ಚರ್ಚೆಗೊಳ ಪಟ್ಟವು?ಚರ್ಚೆಗಳ ಪಡಬೇಕಾಗಿತ್ತು? ಮಂಡ್ಯದ ಜನರ ಆಥಿತ್ಯ , ಅಲ್ಲಿನ ರುಚಿಕರವಾದ ವಿಶಿಷ್ಟ ಬಗೆಯ ಬೋಜನ, ವಾಸ್ತವ್ಯ, ಪ್ರದರ್ಶನ ಮತ್ತು ಪುಸ್ತಕ ಮಳಿಗೆಗಳು ಸೇರಿದಂತೆ 10 ಹಲವು ಸಂಗತಿಗಳನ್ನು ತಮ್ಮ ಕ್ಯಾಮರದ ಮೂಲಕ ಸೆರೆಹಿಡಿದು ನಾಡಿನ ಜನರಿಗೆ ಉಣಬಡಿಸಬೇಕಾದ ಈ ಜವಾಬ್ದಾರಿ ದೃಶ್ಯ ಮಾಧ್ಯಮಗಳು, ಟಿಆರ್‌ಪಿ ಬೆನ್ನತ್ತಿ, ಹಣದ ವ್ಯಾಮೋಹದಿಂದ ವ್ಯವಹಾರಿಕವಾದ ತಮ್ಮ ಚತುರತನವನ್ನು ಪ್ರದರ್ಶನ ಮಾಡಿದ್ದು ಕನ್ನಡಿಗರಿಗೆ ಬಗೆದ ದ್ರೋಹ ಅನಿಸುತ್ತದೆ.
ದೃಶ್ಯ ಮಾಧ್ಯಮಗಳೇ.
ದಯಮಾಡಿ ಕನ್ನಡಿಗರ ಹಿತ ಕಾಯಿರಿ. ಮುಂದಿನ ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದ ಹತ್ತು ಹಲವು ಸುದ್ದಿಗಳನ್ನು ಹೊತ್ತು ತಂದು ಬಿತ್ತರಿಸುತ್ತ ತಮ್ಮ ಕನ್ನಡತನವನ್ನು ಎತ್ತಿ ಹಿಡಿಯಿರಿ.
••••••••••••••••••••••••••••✒️
ಡಿ.ಎಂ. ಮಂಜುನಾಥಸ್ವಾಮಿ.
ಚಿಕ್ಕಮಗಳೂರು