day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಸುಂದರ ಬಂಗೇರನೆಂಬ ತಮಾಷೆಯ ಮನುಷ್ಯ – AVIN TV

लाइव कैलेंडर

September 2024
M T W T F S S
 1
2345678
9101112131415
16171819202122
23242526272829
30  

AVIN TV

Latest Online Breaking News

ಸುಂದರ ಬಂಗೇರನೆಂಬ ತಮಾಷೆಯ ಮನುಷ್ಯ

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಸುಂದರ ಬಂಗೇರನೆಂಬ ತಮಾಷೆಯ ಮನುಷ್ಯ
****
ಮೂಡಿಗೆರೆಯಲ್ಲಿ ಪತ್ರಕರ್ತರ ಒಡನಾಟ ನನಗೆ ಅನಿವಾರ್ಯವೋ ಆಕಸ್ಮಿಕ ಸಂದರ್ಭದಲ್ಲೋ ಬಹುತೇಕ ಎಲ್ಲಾ ಹಿರಿಯ ಹಾಗೂ ನನ್ನ ಸಮ ವಯೋಮಾನದವರೊಂದಿಗೆ ಇದ್ದೇ ಇದೆ. ಹೀಗೆ ಪರಿಚಯ ಆದವರು ‘ಈಗಲ್’ ಎಂಬ ಪತ್ರಿಕೆಯ ಸಂಪಾದಕರಾಗಿದ್ದ ಸುಂದರ ಬಂಗೇರ. ‘ಅಣ್ಣಾ, ನೀವು ಬಹುತೇಕ ಎಲ್ಲಾ ಪತ್ರಿಕೆಗಳಲ್ಲೂ ಬರೀತೀರಿ. ನೋಡಿದ್ದೇನೆ. ಓದಿದ್ದೇನೆ. ನಮ್ಮ ಪತ್ರಿಕೆಗೆ ಏಕೆ ಬರೆಯಲ್ಲ!?’ ಎಂಬ ಅವರ ಪ್ರಶ್ನೆಗೆ ನಾನು ಹಾಗೇ ಸುಮ್ಮನೆ ಮುಗುಳ್ನಗೆ ತೋರಿದ್ದು ಇನ್ನೂ ನೆನಪಿದೆ. ಒಂದೆರಡು ವಾರಗಳ ನಂತರ ಮಗದೊಮ್ಮೆ ಸಿಕ್ಕಿ ‘ಅಲ್ಲಾ ಅಣ್ಣ, ನೀವು ನಮ್ಮಂತವರ ಪತ್ರಿಕೆಗೆ ಎಲ್ಲಿ ಬರೀತೀರಾ? ಅದೇ ಅವರ ಪತ್ರಿಕೆಯಲ್ಲಿ ನಿಮ್ಮ ಲೇಖನ ಓದಿದೆ. ಹೋಗಲಿ ಒಂದು ಕವನ ಆದ್ರೂ ಕಳುಹಿಸಿ!’ ಎಂದಿದ್ದರು. ಈ ನಡುವೆ ನಾನು ಅತಿಥಿ ಉಪನ್ಯಾಸಕರಾದ ನಮ್ಮ ಸಂಕಟವನ್ನು ಕುರಿತಂತೆ ಬರೆದಿದ್ದ ವಾರ್ತಾಭಾರತಿ ಪತ್ರಿಕೆಯಲ್ಲಿನ ಲೇಖನವನ್ನು ತಾವೇ ಸ್ವತಃ ಗಮನಿಸಿ ಯಥಾವತ್ ತಮ್ಮ ಈಗಲ್ ಪತ್ರಿಕೆಯಲ್ಲಿ ಮುದ್ರಿಸಿ ‘ಇಲ್ಲಿ ನೋಡಿ ಅಣ್ಣ ನಿಮ್ಮ ಬರಹ ನನ್ನ ಪತ್ರಿಕೆಯಲ್ಲಿ!’ ಎಂದು ನಗಾಡಿದ್ದರು. ನನಗಿಂತ ಎರಡುವರೆ ಪಟ್ಟು ವಯಸ್ಸಿನಲ್ಲಿ ಹಿರಿಯರಾಗಿದ್ದರೂ ನನ್ನನ್ನು ಮಲೆನಾಡಿನ ಗೌರವಭಾವದ ‘ಅಣ್ಣಾ’ ಎಂಬ ಗೌರವ ಸೂಚಕ ಪದದಿಂದ ಬಾಯಿತುಂಬಾ ಕರೆಯುತ್ತಿದ್ದುದು ವಿಶೇಷ.

ಬಹುತೇಕ ಅಕ್ಷರ ಬಂಧುಗಳು ಒಳಗೊಂಡಂತೆ ಹಲವಾರು ಸನ್ಮಿತ್ರರು “ಸುಂದರ ಬಂಗೇರ ಅವರ ಸಹವಾಸವೇ ಅಲ್ಲ! ಯಾವ ಟೈಮಿಗೆ ಹೇಗೆ ಬದಲಾಗುತ್ತಾರೋ ಗೊತ್ತಾಗೊಲ್ಲ! ಎಚ್ಚರಿಕೆ ವಹಿಸುವುದು ಅಗತ್ಯ. ಎಂಥೆಂಥ ಅತಿರಥ ಮಹಾರಥರ ಬಗ್ಗೆ ಏನೇನೋ ಬರೆದು ಪೇಚಿಗೆ ಸಿಲುಕಿಸಿದ್ದಾರೆ. ಜೊತೆಗೆ ಎಲ್ಲರು ಅದನ್ನು ಓದಿ ಮುಗಿಸಿದ ಮೇಲೆ ಏನು ಹೇಳೋದು? ಈ ಮನುಷ್ಯನೇ ಮತ್ತೆ ಮುಜುಗರದಿಂದ ನೊಂದು ‘ಹಾಗಲ್ಲ.. ಹಾಗಲ್ಲ!’ ಎಂದುಕೊಂಡು ಓಡಾಡಿದ್ದಿದೆ. ಮುಂದಿನ ಸಂಚಿಕೆಗಳಲ್ಲಿ ಹೀಗೆ ಹಿಂದೆ ದೂರಿದವರನ್ನೇ ಹೊಗಳಿ ಅಥವಾ ಹೊಗಳಿದವರನ್ನೇ ತೆಗಳಿ ಕೆರಳಿದ್ದೂ ಇದೆ. ಸುಂದರ ಬಂಗೇರ ಅಂದರೆ ಎಚ್ಚರ!” ಎಂದು ಎಚ್ಚರಿಸಿದವರ ಮಾತುಗಳೂ ಅನೇಕ. ಅದೇ ರೀತಿಯಲ್ಲಿ ಸುಂದರ ಬಂಗೇರ ಅವರ ಕೆಲವು ಅವರದೇ ಪತ್ರಿಕೆಯಲ್ಲಿನ ಬರಹ – ವರದಿಗಳನ್ನು ನಾನೇ ಗಮನಿಸಿದ್ದಾಗ ಕೂಡ ಸ್ಟಾರ್ಟಿಂಗ್ ಪ್ಯಾರಾಗಳು ಕೊನೆಯ ಭಾಗಕ್ಕೆ ತಾಳೆಯಾಗದ ರೀತಿಯಲ್ಲಿ ಹಳಿ ತಪ್ಪಿರುತ್ತಿದ್ದವು. ಇದರೊಟ್ಟಿಗೆಯೇ ತಮ್ಮ ಕೆಲವು ಕನ್ನಡ – ತುಳು ಕವನಗಳನ್ನು ಹಾಕಿರುತ್ತಿದ್ದ ಬಂಗೇರ ‘ಹೌದಲ್ವ ಎಷ್ಟು ಚೆನ್ನಾಗಿ ಬರೆದಿದ್ದಾರಲ್ವ!’ ಎಂಬ ಮನದಾಳದ ಪ್ರಶಂಸೆಗೂ ಕಾರಣವಾಗಿ ತೋರಿದ್ದು ವಿಶೇಷವೇ. ಇಂತಹ ಸಮಯದಲ್ಲಿಯೇ ‘ಶೂದ್ರ – ರುದ್ರ’ ಎಂಬ ಕವನ ಸಂಕಲನವನ್ನು ಪ್ರಕಟಿಸುವುದರ ಮೂಲಕ ಮೂಡಿಗೆರೆಯ ಸಾಹಿತ್ಯಾಸಕ್ತರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರೂ ಕೂಡ. ಈ ಸಂದರ್ಭದಲ್ಲಿ ಸುಮತೀಂದ್ರ ನಾಡಿಗರೆಂಬ ಹಿರಿಯ ಕವಿಯವರ ಹತ್ರ ಹೋಗಿ ತನ್ನ ಕವನಗಳನ್ನು ಓದಿ ಅನಿಸಿಕೆ ರೂಪದ ಮುನ್ನುಡಿ ಬರೆಯಿರಿ ಎಂದು ಕೋರಿಕೊಂಡಿದ್ದಾಗ ಅವರು ನನಗೀಗ ಟೈಮ್ ಇಲ್ಲ ಕಣ್ರೀ ಎಂದಿದ್ದರಂತೆ. ಆಗ ‘ಅಣ್ಣ, ಇದಕ್ಕೊಂದು ನೀವೇ ಏನಾದ್ರೂ ಬರೆಯಿರಿ ಪ್ಲೀಸ್!’ ಎಂದು ನನ್ನನ್ನು ಕೋರಿಕೊಂಡಿದ್ದರು. ನಾನಾಗ ಕವನಗಳನ್ನು ಅವಲೋಕನ ಮಾಡಿ ‘ಎಂಥ ಬದುಕು ಸುಂದರ!’ ಎಂಬ ಶೀರ್ಷಿಕೆ ಕೊಡುವ ಮೂಲಕ ಅವರ ಕವಿತ್ವ ಹೃದಯಕ್ಕೆ ಪ್ರತಿಸ್ಪಂದನ ತೋರಿದ್ದೆ. ಅದನ್ನೇ ಮತ್ತೆ ನಾಡಿಗರಿಗೆ ತೋರಿಸಿ ಅವರನ್ನು ಹೇಗೋ ಒಪ್ಪಿಸಿ ಮುನ್ನುಡಿ ಬರೆಸಿಕೊಂಡು ಬಂದು ಹಿರಿ ಹಿರಿ ಹಿಗ್ಗಿದ್ದರು ಇದೇ ಬಂಗೇರ. ಅದರ ಜೊತೆಗೆ ನಾನು ಮಾಡಿದ್ದ ಆ ಅವಲೋಕನ ಬರಹವನ್ನು ಅದರೊಟ್ಟಿಗೆ ಹಾಕಿ “ನೋಡಿ ಅಣ್ಣ, ನಿಮ್ಮ ಅವಲೋಕನ ಬರಹವನ್ನು ಅವರ ಮುನ್ನುಡಿ ಬರಹದ ಜೊತೆಗೆ ಹಾಕುವುದರ ಮೂಲಕ ನಿಮ್ಮನ್ನೂ ಬೆಳಸಿದ್ದೇನೆ!” ಎಂದು ಒಂಥರಾ ವಿಚಿತ್ರ ರೀತಿಯಲ್ಲಿ ಹೇಳಿದ್ದು ನನಗೆ ಆಶ್ಚರ್ಯ ಉಂಟಾಗಲು ಕಾರಣವಾಗಿತ್ತು. ನಾಡಿಗರು ಆಗಲ್ಲ, ನನಗೆ ಈಗ ಟೈಮಿಲ್ಲ ಎಂದಿದ್ದಾಗ ನನ್ನ ಬಳಿ ಬಂದು ನೀವಾದರೂ ಅವಲೋಕನ ಮಾಡಿಕೊಡಿ ಎಂದಿದ್ದ ಇದೇ ಬಂಗೇರ ಈಗ ಹೇಗೆ ಹೀಗೆ? ಅಬ್ಬಾ! ಎಂಬ ದಿವ್ಯಾಚ್ಚರಿ ಅದು. ಆಗ ನಾನು “ಆಕ್ಚುವಲಿ ನಿಮಗೆ ಬೆಂಬಲ ಸೂಚಿಸಿ ನಾನು ಬರೆಯದೆ ಹೋಗಿರದಿದ್ದರೆ ನಾಡಿಗರು ಮುನ್ನುಡಿ ಬರೆಯುವುದು ಇರಲಿ, ಮತ್ತೊಮ್ಮೆ ಬೈದು ಕಳುಹಿಸುತ್ತಿದ್ದರೇನೋ! ಎಂಥೆಂಥ ಮಾತಾಡ್ತಿರಲ್ಲ!” ಎಂದು ಹೇಳಿದ್ದೆ. ಜೊತೆಗೆ ಕೃತಜ್ಞತೆ ಇರಲಿ, ಅಹಂ ಬೇಡ ಎಂದು ಹೇಳಿದ್ದಾಗ “ಹೋಗಲಿ ಬಿಡಿ ಅಣ್ಣ, ಯಾವುದೋ ಮೂಡ್ ನಲ್ಲಿ ಏನೇನೋ ಮಾತಾಡಿದೆ. ಸ್ವಾರಿ ಮೂಡಿಗೆರೆ ರೇಣುಕಾ ಹೋಟೆಲ್ ನಲ್ಲಿ ಒಂದು ಪುಟ್ಟ ಪಾರ್ಟಿ ಕೊಡಿಸ್ತೀನಿ!” ಎಂದು ಹಲ್ಲುಕಿರಿದಿದ್ದರು. ನಾನಾಗ “ಸರಿಯಾದ ಸುಂದರ ಬಂಗಾರ! ” ಎಂದು ಛೇಡಿಸಿದಾಗ “ಅಯ್ಯೋ! ಅಣ್ಣ ‘ಸುಂದರ ಬಂಗಾರ’ ಅಂತ ನಿಮ್ಮ ಬದಲು ಯಾರಾದರೂ ಒಂದು ಹುಡುಗಿ ಹೇಳಿದಿದ್ದರೆ ನನ್ನ ಬರಿದಾದ ಬಿರುಕು ಬಿಟ್ಟ ಹೃದಯಕ್ಕೆ ಕೊಬ್ಬರಿ ಎಣ್ಣೆಯನ್ನು ಸವರಿದಂತಾಗುತಿತ್ತು!” ಎಂದೆಲ್ಲ ಒಂದಷ್ಟು ಹೊತ್ತು ತುಂಬಾ ಮನದುಂಬಿ ನಕ್ಕಿದ್ದರು.

ಒಂದಾನೊಂದು ಕಾಲಘಟ್ಟದಲ್ಲಿ ಟೈಲರ್ ವೃತ್ತಿ ನಿರ್ವಹಣೆ ಮಾಡುತ್ತಿದ್ದ ತಾನು ಜೀವನದ ಅನಿವಾರ್ಯ ಸಂದರ್ಭಗಳಲ್ಲಿ ಎಲ್ಲೋ ಎಡವಿ ಬಿದ್ದರೂ ಭರವಸೆಯನ್ನು ಮೂಡಿಸಿದ್ದು ಓದು ಮತ್ತು ಬರವಣಿಗೆ ಹೀಗಾಗಿ ‘ಹದ್ದಿನ ಕಣ್ಣು’ ಎಂಬ ಪತ್ರಿಕೆಯ ಸಂಪಾದಕನಾದೆ. ಅಲ್ಲೂ ಸುಖಾಸುಮ್ಮನೆ ಏನೇನೋ ಆಗಿ ಅದನ್ನು ‘ಈಗಲ್’ ಅಂತ ಬದಲಾಯಿಸಿದೆ. ಇರಲಿ ಒಂದಲ್ಲ ಒಂದು ದಿನ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷನಾಗಿ ಈ ಸುಂದರ ಬಂಗೇರ ಯಾರು ಅಂತ ಎಲ್ಲರಿಗೂ ತೋರಿಸ್ತೀನಿ ನೋಡ್ತಾ ಇರಿ! ಇದೊಂದು ಸಲ ವೋಟ್ ಹಾಕಿ ಅಂತ ಎರಡೆರಡು ಸಲ ಪರಿಷತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಸೋತ ಮೇಲೆ ‘ನೀವೆಲ್ಲ ನಂಗೆಲ್ಲಿ ವೋಟ್ ಹಾಕ್ತೀರಾ?’ ಅಂತ ಸಿಟ್ಟು ಬಂದ ಮುಖಭಾವ ತೋರಿ ಬೈಕ್ ಹತ್ತಿ ಇಳಿದು ಹೋಗಿ “ಅದಕ್ಕೆ ಅವನು ನಂಗೆ ವೋಟ್ ಹಾಕಿಲ್ಲ, ಇವನು ನನ್ನ ಹಿತೈಸಿ!” ಅಂತೆಲ್ಲ ತನ್ನದೇ ಈಗಲ್ ಕಣ್ಣಿನಲ್ಲಿ ಕೊರೆದು ನಿರ್ಮಿಸಿದ ವಿಶೇಷ ಸಂಚಿಕೆಯನ್ನು ಪೇಪರ್ ಅಂಗಡಿಯಲ್ಲಿ ಇಟ್ಟು ಅದನ್ನೊಮ್ಮೆ ತಾನೇ ನೋಡಿ ನಿಟ್ಟುಸಿರು ಬಿಡುತ್ತ ಅಲ್ಲೆ ಕಂಡುಬರುವ ಪರಿಚಿತರನ್ನು ಕಂಡು ‘ಹೆಂಗೆ ಅಣ್ಣ ನಾನು, ಬಿಡ್ತೀನಾ!? ತಗೊಳ್ಳಿ ಓದಿ ಹತ್ತು ರೂಪಾಯಿ ಕೊಡಿ. ಪುಗ್ಸಟ್ಟೆಯಲ್ಲ ಕೊಡಲ್ಲ!’ ಅಂತ ಗದರಿಕೊಳ್ಳುತ್ತಿದ್ದುದು ಸುಳ್ಳಲ್ಲ. ಇದೇ 2024 ರಲ್ಲಿ ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದ ಆವರಣದಲ್ಲಿ ನಡೆದಿದ್ದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರೊಂದಗಿನ ಸಂವಾದದಲ್ಲಿ ಭಾಗವಹಿಸಿ ನಾನು ನಿಮ್ಮ ಮನೆಯಲ್ಲಿದ್ದ ದುಡಿಮೆಗಾರರ ಕನಸಿನಕೂಸು. ನಿಮ್ಮ ಕುಟುಂಬದ ಮಾನಸ ಪುತ್ರ ಇದ್ದಂಗೆ! ಎಂದೆಲ್ಲ ಹೇಳುತ್ತ ಭಾವುಕರಾಗಿದ್ದರು. ಆಗ ಆ ಸಮ್ಮೇಳನದ ಅಧ್ಯಕ್ಷರು ಅವರ ಮೂಲ ಊರಿನವರಾಗಿ ಸುಂದರ ಎಂಬ ಈ ವ್ಯಕ್ತಿತ್ವದ ಗುಣಸ್ವಭಾವವನ್ನು ಬಲ್ಲವರೂ ಆದುದರಿಂದ ಮುಜುಗರಕ್ಕೆ ಒಳಗಾದರೂ ಬೇಜರಾಗಿರಲಿಲ್ಲ!

ಅದೇ ರೀತಿ ಆಗಾಗ್ಗೆ ಮೂಡಿಗೆರೆಯಲ್ಲಿ ನಡೆಯುತ್ತಿದ್ದ ಸಣ್ಣ ದೊಡ್ಡ ಕಾರ್ಯಕ್ರಮಗಳಲ್ಲಿ ಯಾರಾದರೂ ಗಣ್ಯರು ಮಾತನಾಡುತ್ತಿದ್ದ ಸಂದರ್ಭ ಅವರ ಮುಖದ ಹತ್ತಿರತ್ತಿರ ಹೋಗಿ ಸ್ಟೈಲಾಗಿ ಕ್ಯಾಮೆರಾ ಹಿಡಿದು ನಿಂತು ಫೋಟೋ ಕ್ಲಿಕ್ಕಿಸಿ ತಾನೊಬ್ಬ ಸ್ಪೆಷಲ್ ಜರ್ನಲಿಸ್ಟ್ ಎಂದು ತೋರಿಸಿಕೊಳ್ಳಲು ಮುಂದಾಗುವ ಆತ್ಮರತಿಯೂ ಅವರೊಳಗೊಳಗೆ ಕೆಲಸಮಾಡುತ್ತಿರುವಂತೆ ಕಂಡುಬರುತಿತ್ತು. ಒಂದ್ಸಲ ಹೀಗೆ ಪೇಟೆಯಲ್ಲಿ ಎದುರುಬದರು‍ ಸಿಕ್ಕಾಗ “ಯಾರೋ ಹುಡುಗಿಯೊಬ್ಬಳು. ಕವನವೊಂದನ್ನ ಬರೆದು ಪತ್ರಿಕೆಯಲ್ಲಿ ಪ್ರಕಟಿಸಿ ಎಂದು ಕಳುಹಿಸಿದ್ದಳು. ಅವಳಿಗೆ ‘ಮೊನಾಲಿಸ’ ಅಂತ ಕಾವ್ಯನಾಮ ಕೊಟ್ಟು ಹಾಕಿದ್ದೆ! ಆಮೇಲೆ ಅವಳು ಕವನಾನೇ ಕಳುಹಿಸಲಿಲ್ಲ.. ಯಾಕೋ ಗೊತ್ತಿಲ್ಲ! ನಿಮಗೇನಾದರು ಹೊಳೆದರೆ ಹೇಳಿ!” ಎಂದು ಸಂಕಟದ ನಗೆಯ ಚೆಲ್ಲಿದ್ದರು. ಅದಕ್ಕೆ ನಾನು ” ಹೀಗಾಗಿಯೇ ನಿಮ್ಮ ಪತ್ರಿಕೆಗೆ ನಾನು ಬರೆಯೋದಿಲ್ಲ! ನಮ್ಮ ಹೆಸರು ಕೂಡ ಹೀಗೆ ಎಕ್ಕುಟ್ಟಿ ಹೋಗಬಹುದೆಂದು!” ಎಂದಿದ್ದಾಗ “ನಮ್ಮಣ್ಣ ನೀವು ತುಂಬಾ ಜಾಣ! ಮಾತಿನಲ್ಲೇ ಮಾರ್ಮಿಕವಾಗಿ ತೀವಿಯುತ್ತೀರ!” ಎಂದು ಮತ್ತದೇ ಮಿಸೆಯಡಿ ಹುಳ್ಳಗೆ ನಕ್ಕಿದ್ದ ಅವರ ಭಾವಚಿತ್ರ ಕಣ್ಣಿಗೆ ಕಟ್ಟಿದಂತೆ ಹಾಗೇ ಇರುವಾಗಲೇ ಕಣ್ಣೀರಿನ ಹನಿಯಾಗಿ ಹರಿದು ಹಾಗೇ ಕರಗಿ ಕಣ್ಮರೆಯಾಗಿ ಹೋಗಿದ್ದಾರೀಗ! ಅಂದರೆ ವಿಧಿವಶದಲ್ಲಿ ಸಶೇಷ ಕಥೆಯಂತೆ.. ಮುಗಿತಾಯಕಂಡರೂ ಮರೆಯಲಾಗದ ಭಾವಭಿತ್ತಿಯಲ್ಲಿ ಮತ್ತೆ ಮತ್ತೆ ಇಣುಕಿ ನಗುವ ತಮಾಷೆಯ ಮನುಷ್ಯ ಸಂಬಂಧಗಳ ಮೂಲಕ. ಇತ್ತೀಚೆಗೆ ಸಿಕ್ಕಿ “ನಾನೊಂದು ವಿನೂತನ ಕಾದಂಬರಿ ಬರೀತ ಇದ್ದೀನಿ ಅಣ್ಣ, ಅದಕ್ಕೆ ನೀವೇ ಮುನ್ನುಡಿ ಬರೆದು ಕೊಡಬೇಕು. ಈಚೆಗೆ ಹಾರ್ಟ್ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದೆ. ಇನ್ನೂ ಬದುಕಿದರೆ ಕಂಪ್ಲಿಟ್ ಮಾಡಿ ಕೊಡ್ತೀನಿ!” ಎಂದಿದ್ದರು. ಈ ಥರದ ವಿಶೇಷ ರೀತಿಯ ಪತ್ರಕರ್ತ ಹೆಸರಿನಲ್ಲಿ ನಡೆದಾಡುತಿದ್ದ ಸುಂದರನೋ ಬಂಗಾರನೋ ಈಗ ಅಗಲಿದ್ದಾರೆ. ಉಳಿದ ನೆನಪುಗಳು ಕೆಲವಷ್ಟೇ ಹೀಗೆ ಕಂಬನಿಗರಿದಿವೆ.

– ಡಾ.ಸಂಪತ್ ಬೆಟ್ಟಗೆರೆ, ಲೇಖಕರು, ಮೂಡಿಗೆರೆ.

About Author

Leave a Reply

Your email address will not be published. Required fields are marked *