“ವೀರ ಯೋಧರ ತ್ಯಾಗ ಬಲಿದಾನಗಳನ್ನು ಸ್ಮರಿಸೋಣ : ತಾ.ಪಂ ಕಾರ್ಯ ನಿರ್ವಾಹಣಾ ಅಧಿಕಾರಿ ಡಾ.ಸಿ.ರಮೇಶ್ ಹೇಳಿಕೆ.”
1 min readದೇಶಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ವೀರ ಯೋಧರ ತ್ಯಾಗ ಬಲಿದಾನಗಳನ್ನು ಸ್ಮರಿಸುವ ಅಗತ್ಯವಿದೆ ಎಂದು ಮೂಡಿಗೆರೆ ತಾ.ಪಂ ಕಾರ್ಯ ನಿರ್ವಾಹಣಾ ಅಧಿಕಾರಿ ಡಾ.ಸಿ ರಮೇಶ್ ಹೇಳಿದರು.ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ತಾ.ಪಂ. ಹಾಗೂ ವಿವಿಧ ಇಲಾಖೆ ವತಿಯಿಂದ ದಿನಾಂಕ 19/10/2023ರ ಗುರುವಾರದಂದು ನಡೆದ ತಾಲ್ಲೂಕು ಮಟ್ಟದ ನನ್ನ ಮಣ್ಣು ನನ್ನ ದೇಶ, ಅಮೃತ ಕಳಸ ಯಾತ್ರೆ, ಮಣ್ಣಿನ ನಮನ, ವೀರರಿಗೆ ವಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದ ಗಡಿಗಳಲ್ಲಿ ದುಡಿಯುವ ಯೋಧರ ಕಾರಣದಿಂದ ದೇಶದ ಪ್ರಜೆಗಳು ಸುರಕ್ಷಿತವಾಗಿರಲು ಸಾಧ್ಯವಾಗಿದೆ. ಅವರ ಸೇವೆಯನ್ನು ಸ್ಮರಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದರು.
ನಿವೃತ್ತ ಸೇನೆ ಸಂಘದ ಅಧ್ಯಕ್ಷ ಎಂ.ಕೆ.ಚಂದ್ರೇಶ್ ಮಾತನಾಡಿ, ದೇಶ ಸೇವೆ ಮಾಡಬೇಕಾದರೆ ಗಡಿಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುವುದು ಮಾತ್ರವಲ್ಲ. ದೇಶದ ಪ್ರತಿಯೊಬ್ಬ ಪ್ರಜೆಯು ತಾವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೂ ದೇಶ ಸೇವೆ ಮಾಡಿದಂತೆ ಎಂದರು.
ದೇಶದ ಎಲ್ಲಾ ಪವಿತ್ರ ಮಂದಿರ, ಹುತಾತ್ಮರಾದ ವೀರ ಯೋಧರ ಸ್ಥಳದ ಮಣ್ಣನ್ನು ಸಂಗ್ರಹಿಸಿ ದೇಶಕ್ಕಾಗಿ ಹುತಾತ್ಮರಾದ ಹೆಸರಿನಲ್ಲಿ ಉದ್ಯಾನವನ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಚಾರ. ದೇಶಕ್ಕಾಗಿ ಭಾರತೀಯರೆಲ್ಲರೂ ಕನಿಷ್ಟ ೫ ವರ್ಷ ಸೈನಿಕರಾಗಿ ಸೇವೆ ಸಲ್ಲಿಸಬೇಕು. ದೇಶಕ್ಕೆ ಕಂಟಕ ಬಂದರೆ ತಾವು ಮತ್ತೆ ಸೈನಿಕರಾಗಿ ಕೆಲಸ ಮಾಡಲು ಸದಾ ಸಿದ್ಧವಿದ್ದೇವೆಂದು ಹೇಳಿದರು.
ನಿವೃತ್ತ ಸೇನೆ ಸಂಘದ ಉಪಾಧ್ಯಕ್ಷ ಎಂ.ಡಿ.ಉಮೇಶ್ ಮಾತನಾಡಿ ಈ ದೇಶದ ಸೈನಿಕರು ಮತ್ತು ರೈತರನ್ನು ಗೌರವಿಸುವ ಮನೋಭಾವ ಬೆಳೆಸಿಕೊಂಡರೆ ದೇಶವನ್ನೇ ಗೌರವಿಸಿದಂತೆ. ಹಿಂದೆ ನಮ್ಮ ದೇಶದಲ್ಲಿ ಮುತ್ತು, ರತ್ನ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದರು. ದೇಶ ಪ್ರೇಮ ಮರೆತ ಹಿನ್ನಲೆಯಲ್ಲಿ ಆ ಸಂಪತ್ತು ನಾಶವಾಗಿದೆ. ಮುಂದಿನ ದಿನದಲ್ಲಿ ನಾವು ಎಷ್ಟೇ ಆಸ್ತಿ ಪಾಸ್ತಿ ಹೊಂದಿದರೂ ದೇಶದ ಮೇಲೆ ಕಾಳಜಿ ವಹಿಸದಿದ್ದರೆ ಅದನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದರೂ ಬರಬಹುದು. ಹಾಗಾಗಿ ಭಾರತೀಯರೆಲ್ಲರೂ ಕೇವಲ ಮಾತಿಗಾಗಿ ಮಾತ್ರವಲ್ಲ ರಕ್ತದಲ್ಲಿಯೇ ದೇಶ ಪ್ರೇಮ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಎಂ.ಕೆ.ಚಂದ್ರೇಶ್, ಎಂ.ಡಿ.ಉಮೇಶ್, ಜಗನ್ನಾಥ್ ಸತ್ತಿಗನಹಳ್ಳಿ, ಶೇಖ್ ಆದಮ್, ದಿನೇಶ್ ಬಣಕಲ್, ಜೆ.ಡಿ.ಆನಂದ್, ಚಂದ್ರಶೇಖರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮುನ್ನ ತಾಲೂಕು ಕಚೇರಿಯಿಂದ ತಾ.ಪಂ. ವರೆಗೆ ಅಮೃತ ಕಳಸ ಯಾತ್ರೆ ಜಾಥಾ ನಡೆಯಿತು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.