“ಕಾಡು ಪ್ರಾಣಿ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು: ಬಿ.ಸಿ.ದಯಾನಂದ್.”
1 min read![](https://avintv.com/wp-content/uploads/2023/09/8mdg1A-Dayakar.jpg)
ಕಾಡು ಪ್ರಾಣಿ ಹಾವಳಿ ಮತ್ತು ಅನಾವೃಷ್ಟಿಯಿಂದ ರೈತರ ತೋಟಗಳು ಸರ್ವ ನಾಶವಾಗುತ್ತಿದೆ. ಈ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಚಿಂತನೆ ನಡೆಸುವ ಮೂಲಕ ರೈತರ ನೆರವಿಗೆ ಬರಬೇಕೆಂದು ಕರ್ನಾಟಕ ರಾಜ್ಯ ರೈತ ಹಾಗೂ ಗ್ರೀನ್ ಆರ್ಮಿ ಇಂಡಿಯಾದ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್ ಒತ್ತಾಯಿಸಿದರು.
![](https://avintv.com/wp-content/uploads/2023/09/IMG_20230908_185253.jpg)
ದಿನಾಂಕ 08/09/2023ರ ಶುಕ್ರವಾರದಂದು ವಾಹಿನಿಯೊಂದಿಗೆ ಮಾತನಾಡಿದ ಅವರು, ಕಾಡು ಪ್ರಾಣಿಗಳಿಂದ ರೈತರು ಮತ್ತು ಸಾರ್ವಜನಿಕರು ಜೀವ ಭಯದಿಂದ ಬದುಕುವಂತಾಗಿದೆ. ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಯಲ್ಲಿ ಅಮಾಯಕರು ಹಾಗೂ ಅರಣ್ಯ ಸಿಬ್ಬಂದಿ ಬಲಿಯಾಗುತ್ತಿದ್ದಾರೆ. ಇದಕ್ಕೆ ರಾಜ್ಯ ಸರಕಾರ ಶಾಶ್ವತ ಪರಿಹಾರ ಕಂಡುಕೊಳ್ಳದಿರುವುದು ಖಂಡನೀಯ. ಕಾಡಿನಲ್ಲಿ ಅರಣ್ಯ ಇಲಾಖೆ ಅವೈಜ್ಞಾನಿಕವಾಗಿ ಸಾಗುವಾನಿ, ಅಕೇಶಿಯಾ, ನೀಲಗಿರಿ ಮರಗಳನ್ನು ಬೆಳೆಸಿದ್ದಾರೆ. ಇದರಿಂದ ಕಾಡು ನಾಶವಾಗುವ ಜತೆಗೆ ಕಾಡು ಪ್ರಾಣಿಗಳಿಗೆ ಆಹಾರ ದೊರಕುವುದಿಲ್ಲ. ಹಾಗಾಗಿ ರೈತರ ತೋಟಗಳಿಗೆ ಕಾಡುಪ್ರಾಣಿಗಳು ದಾಂಧಲೆ ಮಾಡುತ್ತಿವೆ. ರಾಜ್ಯ ಸರಕಾರ ಈ ಬಗ್ಗೆ ತಜ್ಞರ ಸಭೆ ನಡೆಸಿ 1 ತಿಂಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಲು ಸಜ್ಜಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕಾಡಾನೆ ಹಾವಳಿ ಸಮಸ್ಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಣ್ಯ ಒತ್ತುವರಿ ಖುಲ್ಲಾ ಮಾಡಿಸಿ, ರೈಲ್ವೇ ಬ್ಯಾರಿಕೇಡ್‌ಗೆ 100 ಕೋಟಿ ನೀಡುತ್ತೇನೆಂದು ಹೇಳಿದ್ದಾರೆ. ಆದರೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಈ ಹಣ 50 ಕಿ.ಮೀ.ಗೂ ಸಾಲುವುದಿಲ್ಲವೆಂದು ಹೇಳಿದ್ದಾರೆ. ಜನರ ಸಂಕಷ್ಟ ನಿವಾರಣೆ ಮಾಡಲು ಹಣವಿಲ್ಲದ ಗ್ಯಾರಂಟಿ ಯೋಜನೆ ಯಾಕೆ ಬೇಕಿತ್ತು ಎಂದು ಪ್ರಶ್ನಿಸಿದ ಅವರು, ರೈತರ ಸಾಲ ಮನ್ನಾ ಮಾಡಬೇಕು. ಭತ್ತ ಬೆಳೆಯಲು ಎಕರೆಗೆ 20 ಸಾವಿರ ರೂ, ಸಾವಯವ ಕೃಷಿ ಹಾಗೂ ಹೈನುಗಾರಿಕೆಗೆ 15 ಸಾವಿರ ರೂ ಪ್ರೋತ್ಸಾಹ ಧನ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಡಿ.ಎಸ್.ರಮೇಶ್, ಎಸ್.ಪಿ.ಪ್ರಕಾಶ್ ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.
![](http://avintv.com/wp-content/uploads/2023/09/poster_2023-05-05-124951-5-731x1024-2.png)
![](http://avintv.com/wp-content/uploads/2023/09/IMG-20230503-WA0021-3-576x1024-2.jpg)
![](http://avintv.com/wp-content/uploads/2023/09/IMG-20230607-WA0063-1.jpg)
![](http://avintv.com/wp-content/uploads/2023/09/IMG-20230702-WA0104-2-731x1024-3-1-2-1.jpg)
![](http://avintv.com/wp-content/uploads/2023/09/IMG-20230321-WA0017-edited-1-1024x729-2.jpg)