ಡಾ. ಬಿ.ಆರ್. ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಪ್ರಭುತ್ವ ಆಚರಣೆ ಮಾಡಲು ಹೊರಟಾಗ….
1 min read
ಡಾ. ಬಿ.ಆರ್. ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಪ್ರಭುತ್ವ ಆಚರಣೆ ಮಾಡಲು ಹೊರಟಾಗ
ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ ಆಕಾಶದ ಅಗಲಕ್ಕೂ ನಿಂತ ಆಲವೆ ಎಂಬ ಸಾಲುಗಳ ಮೂಲಕ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಆಕಾಶದ ಅಗಲಕ್ಕೆ ಜನಕವಿ ಡಾ. ಸಿದ್ದಲಿಂಗಯ್ಯ ನಿಲ್ಲಿಸಿದರೆ, ಪ್ರಭುತ್ವ ಡಾ. ಬಿ.ಆರ್ ಅಂಬೇಡ್ಕರ್ ವಿಚಾರಧಾರೆಗಳನ್ನು ಪಟ್ಟಣ ಪ್ರದೇಶಕ್ಕೆ ತಂದು ಅವರ ವಿಚಾರಧಾರೆಗಳನ್ನು ಬುಡಮೇಲು ಮಾಡಿದ್ದು, ಕೆಲ ನಾಯಕರಿಗೆ ಗೊತ್ತೇ ಆಗಲಿಲ್ಲ. ದಲಿತ ಸಂಘರ್ಷ ಸಮಿತಿಯ ಪ್ರಾರಂಭದ ದಿನಗಳಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ, ಡಾ. ಬಿ ಆರ್ ಅಂಬೇಡ್ಕರ್, ಪರಿನಿಬ್ಬಣ ದಂತಹ ಅನೇಕ ವಿಚಾರಧಾರೆಗಳು ಹಳ್ಳಿ ಪ್ರದೇಶಗಳಲ್ಲಿ ಶೋಷಿತರ ಮನೆ ಜಗಲಿಯಲ್ಲಿ ಅವರ ಅಂಗಳದಲ್ಲಿ ವೈಚಾರಿಕವಾಗಿ ನಡೆಯುತ್ತಿದ್ದವು ಕಾರ್ಯಕ್ರಮ ಮುಗಿಯೋ ಹೊತ್ತಿನಲ್ಲಿ ಹಲವಾರು ಪ್ರಸ್ತುತ ಸಮಸ್ಯೆಗಳ ನಿವಾರಣೆಗಾಗಿ ಅನೇಕ ನಿರ್ಣಯಗಳನ್ನು ತೆಗೆದುಕೊಂಡು ಮುಂದಿನ ದಿನಗಳಲ್ಲಿ ಆ ಸಮಸ್ಯೆಗಳಿಗೆ ಹೋರಾಟವನ್ನು ರೂಪಿಸಿ ಶೋಷಿತರಿಗೆ ನ್ಯಾಯ ದೊರಕಿಸುತ್ತಿತ್ತು. ಅಲ್ಲಿ ಯಾವುದೇ ಆಡಂಬರಗಳಿಗೆ, ರಾಜಕೀಯ ವ್ಯಕ್ತಿಗಳಿಗೆ ಅವಕಾಶಗಳಿಲ್ಲದೆ ಡಾ. ಬಿ.ಆರ್ ಅಂಬೇಡ್ಕರ್ ಅವರ ರಾಜಕೀಯ, ಸಾಮಾಜಿಕ ,ಆರ್ಥಿಕ ,ಶೈಕ್ಷಣಿಕ, ವಿಚಾರಧಾರೆಗಳ ಸ್ಪಷ್ಟ ಅರಿವನ್ನು ಹಳ್ಳಿಯ ಮುಗ್ಧ ಜನತೆಯ ಮನಸ್ಸಿಗೆ ನಾಟುವಂತೆ ಹೋರಾಟದ ಹಾಡುಗಳ ಮುಖಾಂತರ ಇಡೀ ನಾಡಿನಾದ್ಯಂತ ಸಾರುತ್ತಿದ್ದವು. ಇದರಿಂದಾಗಿ ಹಳ್ಳಿಗಳಲ್ಲಿ ಒಂದು ರೀತಿಯ ಜಾಗೃತಿ ಮನೋಭಾವನ ಮೂಡತೊಡಗಿತು. ಮೂಢನಂಬಿಕೆ, ಕಂದಾಚಾರಗಳು ಕಡಿಮೆಯಾಗುತ್ತಾ, ಹೋರಾಟದ ಕಿಚ್ಚು ಮೂಡತೊಡಗಿತು. ಹಳ್ಳಿಯ ಜನ ಜಾಗೃತರಾದರು. ಅಲ್ಲಿಯ ಮುಗ್ಧ ಜನರು ಬುಗಿಲೆದ್ದ ಬೆಂಕಿಯ ಉಂಡೆಗಳಂತೆ ಹೋರಾಟವನ್ನು ರೂಪಿಸತೊಡಗಿದರು. ಅದಕ್ಕಾಗಿ ಎಲ್ಲಿದ್ದರೂ ಇವರು ಹೇಗಿದ್ದರೂ ಇವರು ಎಚ್ಚೆತ್ತ ಸಿಂಹಗಳು ನನ್ನ ಜನಗಳ ಎತ್ತಾಲೋಕದ ಕನಸ ಕಾಣುತ್ತಿದ್ದರು ಇವರೆತ್ತ ಬಿರುಗಾಳಿಗಳೋ ನನ್ನ ಜನಗಳು ಎಂದು ಜನಕವಿ ಡಾ. ಸಿದ್ದಲಿಂಗಯ್ಯ ನವರು ಬರೆದರು. ಜಾಗೃತಿ ಆದಂತಹ ಸಮುದಾಯವನ್ನು ಪ್ರಭುತ್ವ ನಿಧಾನವಾಗಿ ಹತ್ತಿಕ್ಕುವ ಪ್ರಯತ್ನ ಮಾಡಿತು. ಹಿಂದೆ ನಡೆಯುತ್ತಿದ್ದಂತಹ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂತಹ ಕಾರ್ಯಕ್ರಮಗಳನ್ನು ಹೈಜೆಕ್ಟ್ ಮಾಡಲು ಪ್ರಾರಂಭಿಸಿತು. ಹಳ್ಳಿಯಲ್ಲಿ ನಡೆಯುತ್ತಿದ್ದಂತಹ ಅಂಬೇಡ್ಕರ್ ವಿಚಾರಧಾರೆಗಳೊಂದಿಗೆ, ಅಂಬೇಡ್ಕರ್ ಭಾವಚಿತ್ರವನ್ನು ಹೈಜೆಕ್ ಮಾಡಿ ಪಟ್ಟಣ ಪ್ರದೇಶದಲ್ಲಿ ಇಟ್ಟು ಗಂಧದಕಡ್ಡಿ, ಕರ್ಪೂರ ಕಚ್ಚಿ ವಿಜ್ರಂಭಣೆಯಿಂದ ಡೋಲು-ಡಿಜೆ ಗಳ ಅಬ್ಬರದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ದೊಡ್ಡ ದೊಡ್ಡ ವಾಹನಗಳಲ್ಲಿ ಬೀದಿಯಲ್ಲಿ ಮೆರವಣಿಗೆ ಮಾಡಲು ಪ್ರಾರಂಭಿಸಿತು. ಸಂತೋಷಗೊಂಡ ಹಳ್ಳಿಯ ಜನ ತಮ್ಮ ಊರನ್ನು ಬಿಟ್ಟು ಪಟ್ಟಣ ಪ್ರದೇಶದಲ್ಲಿ ಬೀದಿಯಲ್ಲಿ ಕುಣಿಯ ತೊಡಗಿದರು. ಪಟ್ಟಣದ ಕಾರ್ಯಕ್ರಮದ ವೇದಿಕೆಯಲ್ಲಿ ಮತ್ತದೆ ಪ್ರಭುತ್ವವೇ ಉದ್ಘಾಟನೆ, ಪ್ರಾಸ್ತವಿಕ ವಿಚಾರ ಮಂಡನೆ ಮಾಡತೊಡಗಿತ್ತು. ಕಾರ್ಯಕ್ರಮಕ್ಕೆ ಬಂದಂತಹ ಹಳ್ಳಿಯ ಜನ ಪಟ್ಟಣದ ಬೀದಿ ಬೀದಿಯಲ್ಲಿ ಕುಣಿದು ಸುಸ್ತಾಗಿ ಏನು ಹೇಳಿದರೂ ಕೇಳದೆ ತಮ್ಮ ತಮ್ಮಲ್ಲಿ ಚರ್ಚೆ ಮಾಡಿಕೊಳ್ಳುತ್ತಾ, ಒಂದಷ್ಟು ಜನ ಕಾಫಿ ಟೀ ಗೆ ಹೋದರೆ ಒಂದಷ್ಟು ಜನ ವೈನ್ ಶಾಪ್ ಕಡೆಗೆ ತನ್ನ ಹೆಗಲ ಮೇಲೆ ಧರಿಸಿರುವ ನೀಲಿ ಸಾಲಿನ ಸಮೇತ ಹೋಗಿದ್ದು ಅವರ ಅರಿವಿಗೆ ಬರುವುದಿಲ್ಲ. ವಿಚಾರ ಮಂಡನೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವಿಚಾರಧಾರೆಗಳಿಗೆ ಜಾಗವೇ ಇಲ್ಲದ ಹಾಗೆ ಅಂಬೇಡ್ಕರ್ ಅವರ ಆಶಯಗಳನ್ನು ಬುಡಮೇಲು ಮಾಡಿ ಅಂಬೇಡ್ಕರ್ ಅವರನ್ನು ವೈಭವೀಕರಿಸಿ ಮಾತನಾಡಲಾಗುತ್ತದೆ. ಮುಗ್ಧ ಜನರು ಅದನ್ನೇ ಸತ್ಯವೆಂದುಕೊಂಡು ಪ್ರತಿವರ್ಷ ಅಬ್ಬರದ ಕಾರ್ಯಕ್ರಮಕ್ಕೆ ಹೊಂದಿಕೊಂಡರು. ಪ್ರಭುತ್ವದ ಒಳಸಂಚು ಶೋಷಿತ ಸಮುದಾಯಕ್ಕೆ ಅರ್ಥವಾಗಲೇ ಇಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತ ವಿಚಾರಧಾರೆಗಳನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದ ರೀತಿಯಲ್ಲಿ ತನ್ನ ಉಳಿವಿಗಾಗಿ ತನ್ನ ಸ್ಥಾನಮಾನಗಳ ಭದ್ರತೆಗಾಗಿ ಪ್ರಚಾರಕ್ಕಾಗಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಹೇಳುತ್ತಿರುವುದು ಈ ದಿನಮಾನಗಳಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತದೆ. ಶೋಷಿತರು ಸಮುದಾಯ ಇನ್ನಾದರೂ ಪ್ರಭುತ್ವದ ಉನ್ನಾರಗಳನ್ನು ಅರ್ಥಮಾಡಿಕೊಂಡು ಡಾ. ಬಿ.ಆರ್ ಅಂಬೇಡ್ಕರ್ ಅವರ ಚಿಂತನೆಗಳನ್ನು ವೈಭವಿಕರಿಸದೆ ಡಿಜೆ,ತಮಟೆ, ಡೋಲು, ಕೀಲುಗೊಂಬೆಗಳಲ್ಲಿ ಮೆರವಣಿಗೆ ಮುಖಾಂತರ ಅಂಬೇಡ್ಕರ್ ಭಾವಚಿತ್ರವನ್ನು ಮೆರವಣಿಗೆ ಮುಖಾಂತರ ತಂದು ಕುಣಿದು ಕುಪ್ಪಳಿ ಕುಪ್ಪಳಿಸದೆ ಈ ಹೊತ್ತಿನಲ್ಲಿ ದೇಶದ ಸಂವಿಧಾನದ ಮೇಲೆ ಆಗುತ್ತಿರುವ ದಾಳಿಯ ಬಗ್ಗೆ ಹಾಗೂ ಮೀಸಲಾತಿ ಹೆಸರಿನಲ್ಲಿ ಶೋಷಿತ ಸಮುದಾಯಗಳ ಒಗ್ಗಟ್ಟನ್ನು ಒಡೆಯುತ್ತಿರುವ ಅಪಾಯಗಳನ್ನು ಅರ್ಥ ಮಾಡಿಕೊಂಡು ಎಲ್ಲರೂ ಒಂದಾಗಿ ಜಾತಿ,ಮತ,ಲಿಂಗ,ತಾರತಮ್ಯ ಮರೆತು ದೇಶದ ಹಲವಾರು ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅದರ ಪರಿಹಾರಕ್ಕಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ವೈಚಾರಿಕವಾಗಿ ಆಚರಿಸಬೇಕಾಗಿದೆ. ಶೋಷಿತರು ಒಂದಾಗದಿದ್ದರೆ ಉಳಿಗಾಲವಿಲ್ಲ. ಈ ಹೊತ್ತಿನಲ್ಲಿ ಎಲ್ಲಾ ಸಾಧಕ ಬಾದಗಳನ್ನು ಅರ್ಥ ಮಾಡಿಕೊಂಡು ಪ್ರಚಾರದ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿಗಳು ನಡೆಯದೆ, ವಿಚಾರದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಗಳು ನಡೆಯಲಿ. ಸ್ನೇಹಿತರೆ, ನಮ್ಮ ಕಿಡ್ನಿಯಲ್ಲಿ 20% ಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಲ್ಲು ಇರುತ್ತದೆ ಎಂದು ಭಾವಿಸಿಕೊಳ್ಳಿ ಅದನ್ನು ಆಪರೇಷನ್ ಮೂಲಕ ಹೊರ ತೆಗೆಯಬೇಕೆಂದು ವೈದ್ಯರು ತಿಳಿಸಿರುತ್ತಾರೆ. ಆದರೆ ನಾವು ಕೇವಾಲ ಮಾತ್ರೆಯನ್ನು ಸೇವಿಸಿ ಅದನ್ನು ಗುಣಪಡಿಸಲು ಸಾಧ್ಯವಿಲ್ಲ. ಹಾಗೆಯೇ ಜನವರಿ ಒಂದರಂದು ಒಂದು ಮಾತ್ರೆ, ಏಪ್ರಿಲ್ 14 ರಂದು ಮತ್ತೊಂದು ಮಾತ್ರೆ, ಡಿಸೆಂಬರ್ 06 ಮಗದೊಂದು ಮಾತ್ರೆಯನ್ನು ತೆಗೆದುಕೊಳ್ಳುತ್ತಾ, ನಮ್ಮ ಕಿಡ್ನಿಯಲ್ಲಿರುವ ಕಲ್ಲನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದ್ದೇವೆ. ವೈದ್ಯರು ಹೇಳಿದಂತೆ ನಮ್ಮ ಕಿಡ್ನಿಯಲ್ಲಿರುವ ಕಲ್ಲನ್ನು ಆಪರೇಷನ್ ಮೂಲಕ ಹೊರಗಡೆ ತೆಗೆಯಬೇಕೆ ಹೊರತು ಮಾತ್ರೆಯಿಂದ ಗುಣಪಡಿಸಲು ಸಾಧ್ಯವಾಗುವುದಿಲ್ಲ. ಆದರೆ ಕಳೆದ ದಿನಗಳಿಂದ ಚರ್ಚೆಯಾಗುತ್ತಿರುವ ಬಹುಮುಖ್ಯ ವಿಷಯವೆಂದರೆ ಜನವರಿ ಒಂದರಂದು ಎಷ್ಟು ಮಾತ್ರೆಯನ್ನು ತೆಗೆದುಕೊಳ್ಳಬೇಕೆಂದು ಒಂದು ಗುಂಪು ಶ್ವೇತ ಮೆಡಿಕಲ್ ನಲ್ಲಿ ಮಾತ್ರೆಯನ್ನು ತೆಗೆದುಕೊಂಡರೆ ವಾಸಿ ಆಗಬಹುದೆಂದರೆ ಮತ್ತೊಂದು ಗುಂಪು ಕಲ್ಪನ ಮೆಡಿಕಲ್ ನಲ್ಲಿ ಮಾತ್ರೆಯನ್ನು ತೆಗೆದುಕೊಳ್ಳಬೇಕೆಂದು ವಾದವನ್ನು ಮಂಡಿಸುತ್ತಿದ್ದಾರೆ. ಆದರೆ ಆ ಮಾತ್ರೆಯನ್ನು ಅಗಿದು ಅಗಿದು ನುಂಗಬೇಕೆಂಬ ವಾದವನ್ನು ಮಂಡಿಸುತ್ತಿದ್ದಾರೆ. ಆದರೇ ನಮ್ಮ ದೇಹಕ್ಕೆ ಬಂದಿರುವ ರೋಗಕ್ಕೆ ಮಾತ್ರೆಯಿಂದ ಪರಿಹಾರ ಸಾಧ್ಯವೇ? ನಮ್ಮ ಕಿಡ್ನಿಯಲ್ಲಿ ಕಲ್ಲನ್ನು ಆಪರೇಷನ್ ಮುಖಾಂತರವೇ ತೆಗೆಯಬೇಕು.ಅಲ್ಲವೇ
!! ಪ್ರಭುತ್ವದ ಅಂಬೇಡ್ಕರ್ ಆಚರಣೆಗಳನ್ನುಕಡಿಮೆ ಮಾಡೋಣ ಏನಂತೀರಾ?
ಇಂತಿ
ಡಾ. ಹರೀಶ್ ನಲ್ಕೆ
ಸಂಶೋಧನಾ ಬರಹಗಾರರು
9731493209
08.04.2026

