ಅಂಗನವಾಡಿ ಸಿಬ್ಬಂದಿಗಳ ಸೇವೆಗೆ ಬೆಲೆಕಟ್ಟಲಾಗದು : ನಯನ ಮೋಟಮ್ಮ…
1 min read
ಅಂಗನವಾಡಿ ಸಿಬ್ಬಂದಿಗಳ ಸೇವೆಗೆ ಬೆಲೆಕಟ್ಟಲಾಗದು : ನಯನ ಮೋಟಮ್ಮ
ಚಿಕ್ಕಮಗಳೂರು: ಸರ್ಕಾರಗಳ ಬಹುತೇಕ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕಾರ್ಯ ಅಂಗನವಾಡಿ ಸಿಬ್ಬಂದಿಗಳು ಮಾಡುತ್ತಿದ್ದಾರೆ. ಈ ಸಮಾಜಮುಖಿ ಕೆಲಸಕ್ಕೆ ಎಂದಿಗೂ ಬೆಲೆ ಕಟ್ಟಲು ಸಾದ್ಯವಿಲ್ಲ ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹೇಳಿದರು.
ನಗರದ ಕಲಾಮಂದಿರದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರ ಬೀಳ್ಕೊಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಅನೇಕ ತಾಲ್ಲೂಕುಗಳಲ್ಲಿ ಅಂಗನವಾಡಿ ಸಿಬ್ಬಂದಿಗಳು ಮಕ್ಕಳ ಆರೋಗ್ಯದ ದೃಷ್ಟಿಯಿಂದ ತಮ್ಮ ಕನಿಷ್ಟ ವೇತನದಲ್ಲೂ ಮಕ್ಕಳಿಗೆ ಸ್ವಂತ ಖರ್ಚಿನಿಂದ ಮೊಟ್ಟೆ ಕೊಡಿಸುತ್ತಿದ್ದಾರೆ. ಈ ರೀತಿ ಶ್ರಮವಿಟ್ಟು ನಿಸ್ವಾರ್ಥದಿಂದ ಕೆಲಸ ಮಾಡುವವರಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ಸಹಕಾರ ಸದಾ ಇರಲಿದೆ ಎಂದರು.
ಕಾರ್ಯಕರ್ತೆಯರಿಗೆ ಸರ್ಕಾರದಿಂದ ಲಭಿಸುವ ಸೀರೆ, ಮೊಬೈಲ್‌ಗಳನ್ನು ಮೊದಲ ಹಂತದಲ್ಲೇ ಕೊಡಿಸುವ ಕಾರ್ಯ ತಾವು ಮಾಡಿದ್ದೇವೆ. ಅಲ್ಪಸ್ವಲ್ಪ ವೇತನದಲ್ಲೇ ಮಕ್ಕಳ ಆರೈಕೆ ಮಾಡುವ ಮೂಲಕ ಸರ್ಕಾರಿ ನೌಕರರಿಗಿಂತ ಅತಿಹೆಚ್ಚು ಕೆಲಸವನ್ನು ನಿಭಾಯಿಸುತ್ತಿರುವ ಶ್ರೇಷ್ಟರು ಎಂದು ಬಣ್ಣಿಸಿದರು.
ಕುಟುಂಬದಲ್ಲಿ ಎಷ್ಟೇ ತೊಂದರೆಗಳು ಎದುರಿಸಿದರೂ, ವೃತ್ತಿಯಲ್ಲಿ ನಗುಮುಖದಲ್ಲಿ ಕಾಣಿಸಿಕೊಳ್ಳುವ ಸಹಾಯಕಿಯರು ಸಮಾಜಕ್ಕೆ ಸ್ಫೂರ್ತಿದಾಯಕ
ಹೀಗಾಗಿ ಶಾಸಕರಿಗೆ ಆನೇಕ ಇಲಾಖೆಯ ಸಮಸ್ಯೆಗಿಂತ, ಅಂಗನವಾಡಿಯವರ ಲೋಪ ದೋಷಗಳಿಗೆ ಮೊದಲ ಆದ್ಯತೆ ನೀಡಿ ಪರಿಹರಿಸುವುದು ಮೂಲ ಕರ್ತವ್ಯ ಎಂದರು.
ಮಕ್ಕಳ ಸ್ವಾಸ್ಥ್ಯ ಆರೋಗ್ಯ ಕಾಪಾಡುವ ಅಂಗನವಾಡಿಯವರ ಕಾರ್ಯ ಶ್ಲಾಘನೀಯ, ಅಲ್ಲದೇ ಎಲ್ ಕೆಜಿ ಮತ್ತು ಯುಜಿಕೆ ಅನುಮತಿ ನೀಡಿದ್ದಲ್ಲಿ ನಿಭಾಯಿಸುವ ಶಕ್ತಿ ತೋರುತ್ತಿರುವುದು ಒಳ್ಳೆಯ ಬೆಳವಣಿಗೆ ಈ ಬಗ್ಗೆ ಸರ್ಕಾರ ಸದ್ಯದಲ್ಲೇ ಜಿಲ್ಲೆಗೆ ಎಲ್ ಕೆಜಿ, ಯುಕೆಜಿ ವ್ಯವಸ್ಥೆ ಕಲ್ಪಿಸುವ ಮೂಲಕ ಕಾರ್ಯಕರ್ತೆಯರ ವೃತ್ತಿಗೆ ಆಸರೆಯಾಗಲಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಅಂಗನವಾಡಿ ವೃತ್ತಿ ಬಾಂಧವರಲ್ಲಿ ಕೆಲವು ಆತಂಕ ಮನೆಮಾಡಿದೆ. ಆನರ್ಹ ಅಂಗನವಾಡಿ ಕೇಂದ್ರ ಮುಚ್ಚಲಿದೆ ಎಂಬ ಗೊಂದಲವಿದೆ. ಈ ಬಗ್ಗೆ ಅಂಗನವಾಡಿ ಕಾರ್ಯ ಕರ್ತೆಯರು ತಲೆಕೆಡಿಸಿಕೊಳ್ಳಬೇಡಿ.
ಯಾವುದೇ ಕಾರಣಕ್ಕೂ ವೃತ್ತಿ ಕಸಿದುಕೊಳ್ಳುವುದಿಲ್ಲ ಹಾಗೂ ಆಂಗನವಾಡಿ ಕೇಂದ್ರವು ಮುಚ್ಚುವುದಿಲ್ಲ ಎಂದು ಭರವಸೆ ನೀಡಿದರು.
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ತಾಯಿ-ಮಕ್ಕಳ ಆರೋಗ್ಯ, ಬಾಣಂತಿ ಮಹಿಳೆಯರಿ ಆರೋಗ್ಯ ಸಮೀಕ್ಷೆ, ಚುನಾವಣೆ ಮತದಾನದಲ್ಲಿ ಕೆಲಸ ಸೇರಿದಂತೆ ಶಕ್ತಿಮೀರಿ ಅಂಗನವಾಡಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಆರಂಭದಲ್ಲಿ ಅಂಗನವಾಡಿ ಶಿಕ್ಷಕಿಯರು.250. ರೂಗಳಿಗೂ ಸಿಬಂದಿಗಳು 180.ರೂಗಳಿಗೆ ವೃತ್ತಿಗೆ ಸೇರ್ಪಡೆ ಗೊಂಡಿದ್ದರು. ಅನೇಕ ವರ್ಷಗಳ ಕೆಲಸ, ಬೇಡಿಕೆಗೆ ಅನುಗುಣ ಹಾಗೂ ಹೋರಾಟದ ಪ್ರತಿಫಲ ಶಿಕ್ಷಕಿಯರಿ ಗೆ 12 ಸಾವಿರ, ಸಹಾಯಕಿಯರಿಗೆ 7500 ರೂ. ವೇತನ ಹೆಚ್ಚಿಸಲಾಗಿದೆ. ಮುಂದಿನ ನಿವೃತ್ತಿ ಜೀವನವನ್ನು ಹೊಸ ಶಿಕ್ಷಕಿಯರಿಗೆ ಮಾರ್ಗದರ್ಶನ ಮೂಲಕ ಖುಷಿಯಿಂದ ಕಾಲ ಕಳೆಯಬೇಕು ಎಂದರು.
ಹೆಚ್.ಎಸ್.ಕೀರ್ತನಾ ಮಾತನಾಡಿ ಕುಟುಂಬದಲ್ಲಿ ಒಂದು ಮಗು ಸುಧಾರಿಸುವುದು ಬಹಳ ಕಷ್ಟವಿದೆ. ಆದರೆ ಒಂದೊಂದು ಕೇಂದ್ರದಲ್ಲೂ ಹತ್ತಾರು ಮಕ್ಕಳನ್ನು ಸುಧಾರಿಸುತ್ತಿರುವ ಅಂಗನವಾಡಿ ಸಿಬ್ಬಂದಿಗಳ ಕೆಲಸ ಸುಲಭದ ಮಾತಲ್ಲ. ಅಲ್ಲದೇ ಒಂದು ಮಗುವಿಗೆ ಜನ್ಮವಿತ್ತ ತಾಯಿ ಮೊದಲಾದರೆ, ಎರಡನೇ ತಾಯಿ ಅಂಗನವಾಡಿ ಸಿಬ್ಬಂದಿಗಳು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್.ಡಿ.ತಮ್ಮಯ್ಯ ಅಂಗನವಾಡಿ ವೃತ್ತಿಬಾಂಧವರು ಗೌರವ ಧನದಡಿ ಪ್ರಾಮಾಣಿಕ ದುಡಿಯುತ್ತಿರುವ ಸಿಬ್ಬಂದಿಗಳು, ಮಹಿಳೆಯರು ಸಮಾಜದಲ್ಲಿ ಪುರುಷ ಸರಿ ಸಮಾನಾಗಿದ್ದು, ಅವರಿಗೆ ಮೂಲಸೌಕರ್ಯ ಕಲ್ಪಿಸಲು ರಾಜ್ಯಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಗೊಳಿಸಿ ಹೆಚ್ಚು ಆದ್ಯತೆ ಮಹಿಳೆಯರಿಗೆ ನೀಡಲಾಗಿದೆ ಎಂದರು.
ಇದೇ ವೇಳೆ ಸುಮಾರು 29 ಅಂಗನವಾಡಿ ಶಿಕ್ಷಕಿಯರು. ಕಾರ್ಯಕರ್ತೆಯರು ನಿವೃತ್ತಿಗೊಂಡ ಹಿನ್ನೆಲೆ ಅಭಿನಂದಿಸುವ ಮೂಲಕ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ ಉಪನಿರ್ದೇಶಕ ಡಿ.ಸಂತೋಷ್, ತಹಶೀಲ್ದಾರ್ ರೇಷ್ಮಾ, ಎ.ಐ.ಟಿ.ಯು.ಸಿ. ಜಿಲ್ಲಾಧ್ಯಕ್ಷೆ ಗ್ರೇಟಾ ಬಸವರಾಜ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ರಂಗನಾಥ್, ತಾ.ಪಂ. ಇ ವಿಜಯ್ ಕುಮಾರ್, ಎ.ಐ.ಟಿ.ಯು.ಸಿ. . ಧರ್ಮೇಗೌಡ, ತಾಲ್ಲೂಕು ಖಜಾಂಚಿ ಸುಕನ್ಯಾ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

