ಅರಿವೆಂಬುದು ಬಿಡುಗಡೆ “
1 min read
” ಅರಿವೆಂಬುದು ಬಿಡುಗಡೆ “
ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರಿನಲ್ಲಿ ಏರ್ಪಡಿಸಿದ್ದ
ಎಂಟನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಆಶಯ ನುಡಿ…
ಅರಿವು ಮತ್ತು ಬಿಡುಗಡೆ ಕನ್ನಡ ಭಾಷೆಯ ಶಬ್ದಕೋಶದ ಎರಡು ಅತ್ಯುತ್ತಮ ಭಾವಾರ್ಥದ ಪದಗಳು. ಬದುಕು, ಸಮಾಜ, ಶೋಷಣೆ ಮತ್ತು ಮನೋವೇದನೆಯ ಅಥವಾ ಮಾನಸಿಕ ತಲ್ಲಣಗಳ ಅಂತರ್ಗತ ಭಾವ ಸ್ಥಿತಿಯ ವ್ಯಾಖ್ಯಾನ ಮತ್ತು ವರ್ಣನೆಗೆ ನಿಲುಕದಷ್ಟು ಆಯಾಮಗಳನ್ನು ಹೊಂದಿದ ಅಕ್ಷರಗಳು…
ಅರಿವೆಂಬುದು ಒಂದು ಪ್ರಜ್ಞೆ. ಆದರೆ ಆ ಅರಿವು ಎಷ್ಟು ಆಳವಾದದ್ದು, ಎಷ್ಟು ತೀವ್ರವಾದದ್ದು, ಎಷ್ಟು ವಿಶಾಲವಾದದ್ದು, ಎಷ್ಟು ಸಹಜವಾದದ್ದು, ಎಷ್ಟು ಸ್ಥಿತಿಸ್ಥಾಪಕ ಗುಣವುಳ್ಳದ್ದು, ಎಷ್ಟು ಬಾಲಿಶವಾದದ್ದು, ಎಷ್ಟು ಸತ್ಯವಾದದ್ದು, ಎಷ್ಟು ವಾಸ್ತವವಾದದ್ದು, ಎಷ್ಟು ಪ್ರಯೋಜನಕಾರಿಯಾದದ್ದು, ಎಷ್ಟು ಅಪಾಯಕಾರಿಯಾದದ್ದು, ಎಷ್ಟು ಮಾನವೀಯವಾದದ್ದು, ಎಷ್ಟು ಸಂಕುಚಿತವಾದದ್ದು ಎಂಬ ಅನೇಕ ಅಂಶಗಳನ್ನು ಒಳಗೊಂಡಿರುತ್ತದೆ…
ಅರಿವೇ ಗುರು,
ಅರಿವೇ ಜ್ಯೋತಿರ್ಲಿಂಗ, ನಾನೆಂಬುದೇ ಅರಿವಿ ನೆಂಜಲು ಮುಂತಾದ ಅರಿವಿನ ವಿಮರ್ಶೆಗಳು ಅರಿವಿನ ಅರಿವನ್ನು ತಿಳುವಳಿಕೆ, ಜ್ಞಾನಾರ್ಜನೆಯ ಮಾರ್ಗ ಮತ್ತು ಗುರಿ ಮುಂತಾದ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ. ಈ ಅರಿವು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮುಂತಾದ ಎಲ್ಲಾ ಕ್ಷೇತ್ರಗಳಿಗೆ ಅನ್ವಯಿಸಿ ಒಟ್ಟು ವ್ಯಕ್ತಿತ್ವ ಮತ್ತು ಸಾಮಾಜಿಕ ಹಾಗೂ ವೈಯಕ್ತಿಕ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತದೆ…
ಅರಿವು ಕೇವಲ ಸಕಾರಾತ್ಮಕ ಮಾತ್ರವಲ್ಲದೆ ನಕಾರಾತ್ಮಕವೂ ಆಗಿರಬಹುದು. ಆದರೆ ಸಾಮಾನ್ಯವಾಗಿ ಅರಿವನ್ನು ತಿಳುವಳಿಕೆಯ ಉತ್ಕೃಷ್ಟ ಮಟ್ಟ ಎಂದೇ ಉಪಯೋಗಿಸಲಾಗುತ್ತದೆ ಅಥವಾ ಭವಬಂಧನಗಳಿಂದ ಮುಕ್ತವಾಗುವ ಪ್ರಕ್ರಿಯೆ ಅಥವಾ ನೆಮ್ಮದಿಯಿಂದ ಸ್ವಾತಂತ್ರ್ಯದಿಂದ ಬದುಕುವ ಪ್ರಜ್ಞೆ ಎಂಬಂತೆಯೂ ಅರ್ಥೈಸಿಕೊಳ್ಳಬಹುದು…
ಈ ಅರಿವಿನ ಅರಿವೆಂಬ ಬಿಡುಗಡೆ ಉಸಿರುಗಟ್ಟಿಸುವ ವ್ಯಕ್ತಿಗತ ಮತ್ತು ಸಾಮಾಜಿಕ ಜೀವನದಿಂದ ಮುಕ್ತವಾಗುವುದು ಎಂದಾದರೆ ಅದರಲ್ಲಿ ಕೇವಲ ಮಹಿಳೆ ಮಾತ್ರವಲ್ಲ, ಎಲ್ಲ ರೀತಿಯ ಶೋಷಿತರು, ಅಸಹಾಯಕರು, ದೌರ್ಜನ್ಯಕ್ಕೆ ಒಳಗಾದವರು ಎಲ್ಲರೂ ಒಳಗೊಳ್ಳುತ್ತಾರೆ. ಇದು ಮಹಿಳಾ ಲೇಖಕಿಯರ ಸಮ್ಮೇಳನವಾದ್ದರಿಂದ ಅರಿವೆಂಬಂದು ಬಿಡುಗಡೆ ಎಂಬುದು ಬಹುತೇಕ ಭಾರತೀಯ ಮಹಿಳೆಯನ್ನೇ ಕುರಿತಾಗಿದೆ…
ಭಾರತದ ಮಹಿಳೆಗೆ ನಮ್ಮ ಈಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ಇನ್ನೂ ಬಿಡುಗಡೆ ಎಂಬುದು ಸಾಧ್ಯವಾಗಿಲ್ಲ. ಮೇಲ್ನೋಟಕ್ಕೆ ಹೆಣ್ಣು ಸ್ವತಂತ್ರಳು, ಸಮಾನಳು ಕೌಟುಂಬಿಕ ವ್ಯವಸ್ಥೆಯಲ್ಲಿ ಪುರುಷ ಪ್ರಾಧಾನ್ಯತೆಯನ್ನು ಮೆಟ್ಟಿ ನಿಂತವಳು, ಆರ್ಥಿಕ ಸ್ವಾವಲಂಬನೆ ಸಾಧ್ಯವಾಗಿರುವವಳು ಎಂಬಂತೆ ತೋರುತ್ತದೆ. ಆದರೆ ಆಳದಲ್ಲಿ ಮತ್ತು ವಾಸ್ತವದಲ್ಲಿ ಆ ಬಿಡುಗಡೆ ಖಂಡಿತವಾಗಲೂ ಇನ್ನೂ ಸಾಧ್ಯವಾಗಿಲ್ಲ…
ಅರಿವೆಂಬುದು ಬಿಡುಗಡೆ ಎಂಬುದೇನೋ ನಿಜ, ಆದರೆ ಆ ಅರಿವಿನ ಬಿಡುಗಡೆಯ ದಿಕ್ಕು, ಸ್ಪಷ್ಟತೆ, ವಿಶಾಲತೆ, ಸಮಗ್ರತೆ ಯಾವ ರೀತಿಯದು, ಅದು ಕೇವಲ ವೈಯಕ್ತಿಕವಾಗಿಯೋ, ಸಾಹಿತ್ಯಿಕವಾಗಿಯೋ, ಸಾಮಾಜಿಕವಾಗಿಯೋ ಕೆಲವೇ ಜನರ ಸ್ವತಾಗುತ್ತಿದೆಯೇ ಅಥವಾ ಇಡೀ ಹೆಣ್ಣು ಸಂಕುಲ ಅರಿವೆಂಬ ಬಿಡುಗಡೆಯ ದಿಕ್ಕಿನತ್ತ ಸಾಗುತ್ತಿದೆಯೇ ಎಂಬ ಪ್ರಶ್ನೆಗಳು ಸಹ ಕಾಡುತ್ತವೆ…
ಸ್ತ್ರೀವಾದ ಮತ್ತದೇ ಪ್ರಬಲ, ವಿದ್ಯಾವಂತ, ಬಲಿಷ್ಠ ಮನಸ್ಥಿತಿಯ ನಿಯಂತ್ರಣಕ್ಕೆ ಒಳಪಟ್ಟು ಚಾಲ್ತಿಯಲ್ಲಿದೆಯೇ ಅಥವಾ ಪುರುಷ ದ್ವೇಷಿಯಾಗಿ ಮಾರ್ಪಾಡಾಗುತ್ತಿದೆಯೇ ಅಥವಾ ಇಲ್ಲಿನ ಕೌಟುಂಬಿಕ ವ್ಯವಸ್ಥೆಯ ಭಾಗವಾಗಿ ಎಲ್ಲ ಹೆಣ್ಣುಗಳ ಪ್ರಾತಿನಿಧ್ಯತೆಯನ್ನು ಪ್ರತಿಪಾದಿಸುತ್ತಿದೆಯೇ ಅಥವಾ ಮಾತೃ ಹೃದಯಿ ಎಂಬ ಭಾವನಾತ್ಮಕ ಬೆಸುಗೆಯಲ್ಲಿ ಸಿಲುಕಿದೆಯೇ ಅಥವಾ ಭೋಗದ ವಸ್ತುವೆಂಬ ಮೋಹದ ಮಾಯೆಯೇ ಎಂಬ ಪ್ರಶ್ನೆಗಳು ಹೇಳುತ್ತವೆ…..
ಸ್ತ್ರೀ ವಾದ ಕೇವಲ ಹೆಣ್ಣಿನ ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆಯನ್ನು ಮಾತ್ರ ಪ್ರತಿಪಾದಿಸುತ್ತಿದೆಯೇ ಅಥವಾ ಹೆಣ್ಣುಗಳ ಹಕ್ಕು, ಕರ್ತವ್ಯ, ಜವಾಬ್ದಾರಿ, ಪ್ರಾಮಾಣಿಕತೆ ಮುಕ್ತತೆ, ಭ್ರಷ್ಟಾಚಾರ ರಹಿತ, ಜಾತಿ ರಹಿತ, ಶುದ್ಧ ನಾಗರೀಕ ಗುಣಲಕ್ಷಣಗಳ ಆಧುನಿಕ ಸಮಾಜದ ಪಾತ್ರ ನಿರ್ವಹಣೆಯನ್ನು ಪ್ರತಿಪಾದಿಸುತ್ತದೆಯೇ ಎಂಬುದು ಸಹ ಮುಖ್ಯ…
ಏಕೆಂದರೆ ಒಂದು ಕಡೆ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ನಿಧಾನವಾಗಿ ತನ್ನ ಛಾಪನ್ನು ಮೂಡಿಸಿ ಸ್ವಾವಲಂಬನೆಯತ್ತ ಸಾಗುತ್ತಿರುವಾಗ ಸಾಮಾಜಿಕ ಮೌಲ್ಯಗಳು, ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ, ಹೆಣ್ಣು ಆ ನಿಟ್ಟಿನಲ್ಲಿಯೂ ಯೋಚಿಸಿ ಕಾರ್ಯಪ್ರವೃತ್ತರಾಗಬೇಕಾಗುತ್ತದೆ. ಇಲ್ಲದಿದ್ದರೆ ಈ ಕಾರ್ಪೊರೇಟ್ ಜಗತ್ತಿನ ನಿಯಂತ್ರಣಕ್ಕೊಳಪಡುತ್ತಿರುವ ಕೌಟುಂಬಿಕ, ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆ ಮೇಲ್ನೋಟಕ್ಕೆ ಕಂಡುಬಂದರೂ ಕೌಟುಂಬಿಕ ಪುರುಷನಿಂದ ಅರವಿನ ಬಿಡುಗಡೆ ಹೊಂದಿದರೂ, ಆರ್ಥಿಕ ಗುಲಾಮಿತನಕ್ಕೆ ಒಳಗಾಗಿ ಮತ್ತದೇ ಶೋಷಣೆಯ ಬೇರೆ ರೂಪಕ್ಕೆ ಸಿಲುಕುವ ಸಾಧ್ಯತೆಯೂ ಇದೆ. ಯಾವುದೋ ಹೊಟ್ಟೆ ಪಾಡಿಗಾಗಿ ಮಾಡುವ ಉದ್ಯೋಗವು ಸ್ವಾಭಿಮಾನಕ್ಕೆ ಬದಲಾಗಿ ಗುಲಾಮಿತನಕ್ಕೆ ದೂಡಿ ಅದು ಮತ್ತೊಂದು ಹೋರಾಟಕ್ಕೆ ದಾರಿ ಮಾಡಿಕೊಡುತ್ತದೆ…
ಅರಿವೆಂಬ ಬಿಡುಗಡೆ ಸಮಗ್ರವಾಗಿದ್ದಾಗ ಮಾತ್ರ ಮಹಿಳಾ ಸ್ವಾತಂತ್ರ್ಯ ಮತ್ತು ಸಮಾನತೆಗೆ ಒಂದು ದಿಕ್ಸೂಚಿ ಸಿಗುತ್ತದೆ, ಅರ್ಥ ಸಿಗುತ್ತದೆ. ಇಲ್ಲದಿದ್ದರೆ ಅರಿವೆಂಬ ಬಿಡುಗಡೆ ದೈಹಿಕ ಮತ್ತು ಮಾನಸಿಕ ಸ್ಥಿತಿಗೆ ಮಾತ್ರ ಸೀಮಿತವಾಗಿ ಸಮಗ್ರ ವ್ಯವಸ್ಥೆಯಲ್ಲಿ ಮತ್ತದೇ ಕಾರ್ಪೊರೇಟ್ ದಗಾಕೋರರ ನಿಯಂತ್ರಣಕ್ಕೆ ಸಿಲುಕಿದರೆ ಅರಿವೆಂಬುದು ಅರ್ಥ ಕಳೆದುಕೊಳ್ಳುತ್ತದೆ. ಬಿಡುಗಡೆ ಅಪೂರ್ಣವಾಗುತ್ತದೆ…
ಅರಿವೆಂಬ ಬಿಡುಗಡೆ ಭಾವನಾತ್ಮಕವಾಗಬಾರದು, ಮೌಢ್ಯವಾಗಬಾರದು. ಅದೊಂದು ಸಮಗ್ರತೆಯ ಮತ್ತು ವೈಚಾರಿಕ ಪ್ರಜ್ಞೆಯಾದರೆ ಹೆಚ್ಚು ಉಪಯುಕ್ತವಾಗುತ್ತದೆ, ಮುಕ್ತವಾಗುತ್ತದೆ. ಇಲ್ಲದಿದ್ದರೆ ಜ್ಞಾನದ ಮಿತಿಗೆ ಒಳಪಟ್ಟು ಕೇವಲ ಸಾಹಿತ್ಯಕ ಪರಿಭಾಷೆಯಾಗಿ ಉಳಿದುಬಿಡುತ್ತದೆ…
ಮಹಿಳಾ ಲೇಖಕಿಯರ ಈ ಸಮ್ಮೇಳನಗಳು ಸಹ ಇತರ ಬೇರೆ ಸಮ್ಮೇಳನಗಳಂತೆ ಔಪಚಾರಿಕವಾಗದೆ, ಕೆಲವೇ ವ್ಯಕ್ತಿ, ವಿಷಯಗಳಿಗೆ ಸೀಮಿತವಾಗದೆ, ನಾಡಿನ ಮಹಿಳೆಯರ ಧ್ವನಿಯಾಗಿ, ಪುರುಷರ ಅಥವಾ ಇಡೀ ಸಮಾಜದ ಆತ್ಮಾವಲೋಕನ ಮತ್ತು ಪರಿವರ್ತನೆಯ ಮಾರ್ಗವಾಗಿ, ಕೌಟುಂಬಿಕ ವ್ಯವಸ್ಥೆಯ, ಸಾಮಾಜಿಕ ವ್ಯವಸ್ಥೆಯ, ಆಡಳಿತ ಮತ್ತು ರಾಜಕೀಯ ವ್ಯವಸ್ಥೆಯ ಶುದ್ಧೀಕರಣ ಕ್ರಿಯೆಯಾಗಿ ಮುಂದುವರಿದರೆ ಅಭಿವೃದ್ಧಿಯ ಚಲನೆ ಸಮಗ್ರವಾಗಿರುತ್ತದೆ. ಮಹಿಳೆಯ ಸ್ವಾತಂತ್ರ್ಯ, ಸಮಾನತೆ, ಭಾಗವಹಿಸುವಿಕೆಯ ಜವಾಬ್ದಾರಿ ಬಹುತೇಕ ಸಮ ಪ್ರಮಾಣಕ್ಕೆ ಬಂದು ನಿಲ್ಲುತ್ತದೆ…
ಏಕೆಂದರೆ ಗ್ರಾಮೀಣ ಭಾಗದ ಮಹಿಳೆಯರ ಭಾಗವಹಿಸುವಿಕೆ ತೀರ ಅಲ್ಪ ಪ್ರಮಾಣದಲ್ಲಿ ಇರುವುದರಿಂದ, ಪುರುಷ ಸಮಾಜದಿಂದ ಪ್ರತ್ಯೇಕಿಸಲ್ಪಟ್ಟ ರೀತಿಯಲ್ಲಿ ಭಾಸವಾಗುವುದರಿಂದ, ಸಮ್ಮೇಳನದ ಸಾರ್ಥಕತೆ ಗಂಭೀರ ಪರಿಣಾಮ ಬೀರುತ್ತಿಲ್ಲ. ಈ ಬಗ್ಗೆಯೂ ಮುಂದೆ ಯೋಚಿಸುವಂತಾಗಲಿ ಎಂದು ಆಶಿಸುತ್ತಾ….
ಅರಿವೆಂಬ ಬಿಡುಗಡೆ ಎಲ್ಲಾ ಶೋಷಿತ ಸಮುದಾಯಗಳಿಗೂ, ಸಾಮಾನ್ಯ ಜನರಿಗೂ ಸಹಜವಾಗಿಯೇ ಸಿಗುವಂತಾಗಲಿ. ಅದೊಂದು ಅದ್ಭುತ ಮನಸ್ಥಿತಿ. ಅದರಿಂದ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಅತ್ಯುತ್ತಮ ಪರಿಣಾಮ ಬೀರವಂತಾಗಲಿ, ಅದು ಸಾಮಾನ್ಯರ ಅರಿವಿಗೂ ಬರುವಂತಾಗಲಿ, ಅದೊಂದು ಕ್ರಾಂತಿಕಾರಿ ಸುಧಾರಣೆಯಾಗಲಿ ಎಂಬ ಭರವಸೆಯೊಂದಿಗೆ…
ಮಹಿಳೆಯೊಳಗಿನ ಅಂತರ್ಗತ ಶಕ್ತಿ ಪುರುಷ ಅಥವಾ ಪುರಷರೊಳಗಿನ ಅಂತರ್ಗತ ಶಕ್ತಿ ಮಹಿಳೆ ಎಂಬ ಚರ್ಚೆಗಿಂತ ಎರಡೂ ಶಕ್ತಿಗಳು ಪ್ರಾಕೃತಿಕ ಸಂಪತ್ತು ಮತ್ತು ಸಮಾನ ಎಂಬ ಪ್ರಜ್ಞೆ ಎಲ್ಲರಲ್ಲಿ ಸದಾ ಜಾಗೃತರಾಗಿರಲಿ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068…….