ಮತ್ತೆ ಸುದ್ದಿಯಲ್ಲಿ ಹನಿ ಟ್ರ್ಯಾಪ್…
1 min read
ಮತ್ತೆ ಸುದ್ದಿಯಲ್ಲಿ ಹನಿ ಟ್ರ್ಯಾಪ್……
ಅದೂ ವಿಧಾನಸಭಾ ಅಧಿವೇಶನದಲ್ಲಿ…….
ರಾಜ್ಯದ ಉಷ್ಣಾಂಶ ಏರು ಗತಿಯಲ್ಲಿ ಸಾಗುತ್ತಿರಬೇಕಾದರೆ, ಜನರ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರಬೇಕಾದರೆ,
ಅಗತ್ಯ ವಸ್ತುಗಳ ಬೆಲೆ ಏರು ಮುಖದಲ್ಲಿ ಇರಬೇಕಾದರೆ, ಭ್ರಷ್ಟಾಚಾರ ಆಕಾಶದೆತ್ತರಕ್ಕೆ ಸಾಗುತ್ತಿರಬೇಕಾದರೆ, ಅಧಿವೇಶನದಲ್ಲಿ ಹನಿ ಟ್ರ್ಯಾಪ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಷ್ಟು ದುರ್ಗತಿ ರಾಜಕೀಯ ಕಾರಣಕ್ಕಾಗಿ ರಾಜ್ಯಕ್ಕೆ ಬಂದಿದೆ…….
ಎಲ್ಲಾ ಅಪರಾಧ ಮಾರ್ಗಗಳಂತೆ ಇದೂ ಸಹ ಒಂದು ಅಪರಾಧ. ಇಲ್ಲಿ ಚರ್ಚಿಸಬೇಕಾದ ಹೆಚ್ಚಿನ ಅಗತ್ಯವಿಲ್ಲ. ಅಪರಾಧಿಗಳನ್ನು ಬಂಧಿಸುವ ಧೈರ್ಯ, ದಕ್ಷತೆ ಮತ್ತು ಪ್ರಾಮಾಣಿಕತೆ ಪ್ರದರ್ಶಿಸಬೇಕಷ್ಟೆ. ಚರ್ಚೆಗೆ ಅಂತಹ ಹೆಚ್ಚಿನ ಅಂಶಗಳೇನು ಇಲ್ಲ. ತನಿಖೆ ಮಾಡಬೇಕಷ್ಟೇ……
ಹನಿ ಟ್ರ್ಯಾಪ್ ಎಂಬುದು ಕೇವಲ ರಾಜಕೀಯದ ಬ್ಲಾಕ್ಮೇಲ್ ತಂತ್ರಗಾರಿಕೆ ಅಷ್ಟೇ ಅಲ್ಲ,
ಹನಿ ಟ್ರ್ಯಾಪ್ ಎಂಬುದು ಯುವಕ ಯುವತಿಯರ ಹೊಟ್ಟೆಪಾಡಿನ ಅಥವಾ ಶೋಕಿ ಜೀವನದ ಕ್ರಿಮಿನಲ್ ಮಾರ್ಗವಷ್ಟೇ ಅಲ್ಲ,
ಈ ಸಮಾಜದ ಹೆಣ್ಣುಭಾಕ ಸಂಸ್ಕೃತಿಯ, ಕೀಚಕ ಮನೋಭಾವದ, ಹೆಣ್ಣನ್ನು ಭೋಗದ ವಸ್ತುವೆಂದು ಪರಿಗಣಿಸಿರುವ, ಹಣ, ಅಧಿಕಾರ, ಅಹಂಕಾರದ ಮನಸ್ಥಿತಿಯ ಜನಗಳ ಮುಖವಾಡದ ಬಯಲಾಟ ಸಹ ಹನಿ ಟ್ರ್ಯಾಪ್ ನ ಭಾಗವಾಗಿದೆ…….
ಹನಿ ಟ್ರ್ಯಾಪ್ ಮಾಡುವವರದು ಸಂಪೂರ್ಣ ಕ್ರಿಮಿನಲ್ ಅಪರಾಧವಾದರೆ, ಅದಕ್ಕೆ ಒಳಗಾಗುವವರು ಕೆಲವು ಅಮಾಯಕರನ್ನು ಹೊರತುಪಡಿಸಿ ಬಹುತೇಕ ಹೆಣ್ಣು ಭಕ್ಷಕ ವಿಕೃತ ಮನಸ್ಥಿತಿಯವರೇ ಆಗಿರುತ್ತಾರೆ. ಈ ಎಲ್ಲಾ ಆಯಾಮಗಳನ್ನು ಈ ಹನಿ ಟ್ರ್ಯಾಪ್ ನೈ ವಿಷಯದಲ್ಲಿ ಪರಿಗಣಿಸಬೇಕಾಗುತ್ತದೆ…….
ಹನಿ ಟ್ರ್ಯಾಪ್ ಎಂಬುದು
ಇತ್ತೀಚಿನ ಒಂದು ರೀತಿಯ ಭಯೋತ್ಪಾದಕ ಸುದ್ದಿಗಳು…….
ಕೆಲವು ತಂಡಗಳು ಈ ಹನಿ ಟ್ರ್ಯಾಪ್ ಎಂಬ ವಂಚಕ ಜಾಲವನ್ನು ವ್ಯವಸ್ಥಿತವಾಗಿ ಹೊಂದಿದೆ ಎಂಬುದು ವಾಸ್ತವ ಸಂಗತಿ. ಮನೆ ಕಳ್ಳತನ, ಸರ ಕದಿಯುವುದು, ವೇಶ್ಯಾವಾಟಿಕೆ, ಮಾದಕವಸ್ತುಗಳ ಮಾರಾಟ, ಜೂಜು ಕೇಂದ್ರಗಳು ಮುಂತಾದ ರೀತಿ ಹೊಸ ಆಧುನಿಕ ತಂತ್ರಜ್ಞಾನದ ದಂಧೆ ಈ ಹನಿ ಟ್ರ್ಯಾಪ್……
ಬಿಪಿ, ಶುಗರ್ ರೀತಿಯಲ್ಲಿ ಇದೂ ಸಹ ಸಾಮಾನ್ಯವಾಗಿ ಹಣವಂತರು – ಜನಪ್ರಿಯರೇ ಮುಖ್ಯ ಟಾರ್ಗೆಟ್ ಆಗಿರುತ್ತಾರೆ. ಆದರೆ ಕೆಲವೊಮ್ಮೆ ಅಮಾಯಕ ಸಾಮಾನ್ಯರು ಸಹ ಇದಕ್ಕೆ ಬಲಿಯಾಗುವುದು ಇದೆ…..
ಹೆಣ್ಣೊಬ್ಬಳು ನಿರ್ದಿಷ್ಟ ಗಂಡಸನ್ನು ಗುರಿಯಾಗಿಸಿ ಆಕರ್ಷಕವಾಗಿ – ಭಾವನಾತ್ಮಕವಾಗಿ – ದೈನೇಸಿಯಾಗಿ ಅಥವಾ ಬೇರೆ ಇನ್ಯಾವುದೋ ರೀತಿಯಲ್ಲಿ ಆಮಿಷಕ್ಕೆ ಒಳಪಡಿಸಿ ಅವರೊಂದಿಗೆ ಸ್ನೇಹ ಬೆಳೆಸಿ ನಂತರದಲ್ಲಿ ಅವರೊಂದಿಗೆ ದೈಹಿಕ ಸಂಬಂಧ ಬೆಳೆಸುವುದು ಅಥವಾ ಬೆಳೆಸಿದಂತೆ ನಟಿಸಿ ಅದನ್ನು ತನ್ನ ತಂಡದ ಸದಸ್ಯರು ಗುಪ್ತವಾಗಿ ಚಿತ್ರೀಕರಿಸಿ ನಂತರ ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಾಗಿ ಬೆದರಿಸಿ ಅವರಿಂದ ಹಣ ವಸೂಲಿ ಮಾಡುವುದೇ ಈ ಸಾಮಾನ್ಯ ಹನಿ ಟ್ರ್ಯಾಪ್. ಅಪರೂಪದಲ್ಲಿ ಹೆಣ್ಣು ಸಹ ಇದಕ್ಕೆ ಬಲಿಪಶುವಾಗಬಹುದು……
ಕೆಲವೊಮ್ಮೆ, ಇತ್ತೀಚೆಗೆ ಸುಮ್ಮನೆ ವಿಡಿಯೋ ಕಾಲ್ ಮಾಡಿ ಅದನ್ನು ಸ್ವೀಕರಿಸಿದ ತಕ್ಷಣ ಆ ಕೊನೆಯಲ್ಲಿ ಹೆಣ್ಣು ಅಶ್ಲೀಲ ಭಂಗಿ ಪ್ರದರ್ಶಿಸಿ, ಅದನ್ನು ತಂತ್ರಜ್ಞಾನದ ಸಹಾಯದಿಂದ ಚಿತ್ರೀಕರಿಸಿ, ನಮ್ಮದು ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದಾಗಿ ಹೆದರಿಸುವುದು ಸಹ ನಡೆಯುತ್ತಿದೆ……
ಇಲ್ಲಿ ಬಲಾತ್ಕಾರ ಅಥವಾ ಅತ್ಯಾಚಾರದ ಲಕ್ಷಣಗಳು ಇರುವುದಿಲ್ಲ. ಇದು ಗಂಡಿನ ಆಸೆ – ದುರಾಸೆ ಅಥವಾ ವೀಕ್ ನೆಸ್ ಅನ್ನು ದುರುಪಯೋಗಿಸಿಕೊಂಡು ಹಣ ಮಾಡುವ ಒಂದು ವಂಚಕ ತಂತ್ರಗಾರಿಕೆ. ಅದರ ಕ್ರಾಸ್ ಫೈರ್ ನಲ್ಲಿ ಕೆಲವೊಮ್ಮೆ ಅಮಾಯಕರ ಬಲಿ…..
ಮನುಷ್ಯನ ವಂಚಕ ಇತಿಹಾಸಕ್ಕೆ ಮತ್ತೊಂದು ಮಾರ್ಗದ ಸೇರ್ಪಡೆ. ಇದರಿಂದ ಎಚ್ಚರಿಕೆ ವಹಿಸುವುದು ಹೇಗೆ ?….
ಮೊದಲನೆಯದಾಗಿ, ಎಂದಿನಂತೆ ಸ್ವಯಂ ಮಾನಸಿಕ ನಿಯಂತ್ರಣ ಅತ್ಯುತ್ತಮ ಪರಿಹಾರ. ನಮ್ಮೊಳಗೆ ಒಂದು ನೈಜ ಒಳ್ಳೆಯತನ ಸ್ವಾಭಾವಿಕವಾಗಿ ಇದ್ದರೆ ನಾವು ಇದಕ್ಕೆ ಸಿಲುಕದಂತೆ ತಡೆಯುತ್ತದೆ. ಧೈರ್ಯವಾಗಿ ಎಂದಿನಂತೆ ಯಾವುದೇ ಆತಂಕ ಇಲ್ಲದಂತೆ ಜೀವಿಸಬಹುದು….
ಎರಡನೆಯದಾಗಿ,
ಯಾವುದೇ ವ್ಯವಹಾರ ಅಥವಾ ಸಂಬಂಧಗಳಿಗೆ ಅಪರಿಚಿತರನ್ನು ನಾವು ಆತ್ಮೀಯವಾಗಿ ಸ್ವೀಕರಿಸುವ ಮೊದಲು ಸಾಕಷ್ಟು ಮಾನಸಿಕ ಪರೀಕ್ಷೆಗೆ ಒಳಪಡಿಸಬೇಕು ಮತ್ತು ಒಂದಷ್ಟು ದೀರ್ಘ ಸಮಯ ತೆಗೆದುಕೊಳ್ಳಬೇಕು…..
ಮೂರನೆಯದಾಗಿ,
ಕೆಲವೊಮ್ಮೆ ಎಲ್ಲಾ ಎಚ್ಚರಿಕೆಗಳ ಹೊರತಾಗಿಯೂ ಎಡವುವ ಸಾಧ್ಯತೆ ಇರುತ್ತದೆ. ಆಗ ಅದರ ಪರಿಣಾಮಗಳನ್ನು ಎದುರಿಸುವ ಧೈರ್ಯ ಪ್ರದರ್ಶಿಸಬೇಕು. ಅಂದರೆ ಅದನ್ನು ಒಪ್ಪಿಕೊಳ್ಳುವ ಮತ್ತು ಕಾನೂನಾತ್ಮಕ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕು. ತಕ್ಷಣಕ್ಕೆ ವಿಚಿಲಿತರಾಗಿ ವಂಚಕರ ಬಲೆಯೊಳಗೆ ಬೀಳದೆ ಅವಮಾನ ಸಹಿಸಿಕೊಂಡು ತಾಳ್ಮೆಯಿಂದ ಎದುರಿಸಬೇಕು…….
ನಾಲ್ಕನೆಯದಾಗಿ,
ಒಂದು ವೇಳೆ ನಮ್ಮ ಯಾವ ತಪ್ಪೂ ಇಲ್ಲದೆಯೇ ವಂಚನೆಗೆ ಒಳಗಾದರೆ ಅದನ್ನು ಪೋಲೀಸರಿಗೆ ದೂರು ನೀಡಿ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಗಮನಕ್ಕೆ ತರಬೇಕು. ನಮ್ಮ ಒಳ್ಳೆಯ ಹಿನ್ನೆಲೆ ಇಲ್ಲಿ ಸಹಾಯಕವಾಗುತ್ತದೆ. ಇದಕ್ಕೆ ದೃಢ ಮನಸ್ಥಿತಿಯ ಅವಶ್ಯಕತೆ ಇದೆ……..
ಐದನೆಯದಾಗಿ,
ಈ ಆಧುನಿಕ ತಂತ್ರಜ್ಞಾನದ ಸಂದರ್ಭದಲ್ಲಿ ಇದೆಲ್ಲಾ ಸಹಜ ಎಂದು ಅರ್ಥಮಾಡಿಕೊಂಡು ನಿರ್ಲಕ್ಷಿಸಬೇಕು. ಇಲ್ಲದಿದ್ದರೆ ವ್ಯವಸ್ಥೆ ನಮ್ಮನ್ನೇ ಬಲಿ ಪಡೆಯುತ್ತದೆ. ಜೊತೆಗೆ ನಮ್ಮ ಸುತ್ತಮುತ್ತಲಿನ ಗೆಳೆಯರು ಸಹ ಹನಿ ಟ್ರ್ಯಾಪ್ ಬಗ್ಗೆ ಅತಿರಂಜಿತ ವರದಿಗಳನ್ನು ನಂಬದೆ ನಿರ್ಲಕ್ಷಿಸಬೇಕು……
ಆರನೆಯದಾಗಿ,
ಕೆಲವು ಕಚ್ಚೆ ಹರುಕು ವ್ಯಕ್ತಿಗಳು ಇದರಲ್ಲಿ ಸುಲಭವಾಗಿ ಸಿಲುಕುತ್ತಾರೆ. ಅವರ ಸ್ವಭಾವವೇ ಹಾಗಿರುತ್ತದೆ. ಅಂತಹವರು ಅದನ್ನು ಅನುಭವಿಸಲೇ ಬೇಕು……
ಒಟ್ಟಿನಲ್ಲಿ ನಮ್ಮ ವ್ಯಕ್ತಿತ್ವಕ್ಕೆ ಒಂದು ಸವಾಲು ಎದುರಾಗಿದೆ. ನಾವು ಅತ್ಯಂತ ವಿವೇಚನೆಯಿಂದ ಇದನ್ನು ನೋಡಬೇಕಿದೆ. ನಮ್ಮ ಗೆಳೆಯರು ಇದರಲ್ಲಿ ಸಿಲುಕಿದಾಗ ಅವರ ಬಗ್ಗೆ ನಮಗೆ ಸಾಕಷ್ಟು ವರ್ಷಗಳ ಮಾಹಿತಿ ಇರುವಾಗ ಅವರನ್ನು ಸಿನಿಕವಾಗಿ ಮಾತನಾಡಿಸಿ ಮತ್ತಷ್ಟು ಹಿಂಸಿಸದೆ ಧೈರ್ಯ ತುಂಬಬೇಕು. ಅನಾವಶ್ಯಕವಾಗಿ ಅವರನ್ನು ಅನುಮಾನದಿಂದ ನೋಡಬಾರದು. ಸಮಾಜದ ಪ್ರತಿಕ್ರಿಯೆ ಇಲ್ಲಿ ಬಹಳ ಮುಖ್ಯವಾಗುತ್ತದೆ……
ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಅಂತರ ಸ್ಪಷ್ಟವಾಗಿ ಇರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಕೆಟ್ಟವರು ಒಳ್ಳೆಯವರನ್ನು ಕೆಟ್ಟವರೆಂದು ಬಿಂಬಿಸಿ ತಮ್ಮ ಕೆಟ್ಟ ಕೆಲಸಗಳಿಗೆ ಸಾರ್ವಜನಿಕ ಮಾನ್ಯತೆ ಪಡೆದು ಆರಾಮವಾಗಿ ಕೆಟ್ಟ ಕೆಲಸ ಮಾಡಿಕೊಂಡು ಆರಾಮವಾಗಿ ಇರುತ್ತಾರೆ ಈಗಿನ ಕೆಲವು ಕ್ಷೇತ್ರಗಳ ಗಣ್ಯರಂತೆ…….
ಈ ವಿಷಯದಲ್ಲಿ ರಾಜಕಾರಣಿಗಳ, ಮಾಧ್ಯಮಗಳ ಅಥವಾ ಸಾಮಾಜಿಕ ಜಾಲತಾಣಗಳ ಸುದ್ದಿಗಳನ್ನು ನಂಬುವ ಮೊದಲು ನಿಮ್ಮ ಸ್ವಂತ ವಿವೇಚನೆ ಬಳಸಿ ಅಭಿಪ್ರಾಯ ರೂಪಿಸಿಕೊಳ್ಳಿ. ಅದೇ ನೀವು ವಹಿಸಬಹುದಾದ ಎಚ್ಚರಿಕೆ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……