लाइव कैलेंडर

March 2025
M T W T F S S
 12
3456789
10111213141516
17181920212223
24252627282930
31  
17/03/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸುನಿತಾ ವಿಲಿಯಮ್ಸ್…….

ಬಾಹ್ಯಾಕಾಶ ಯಾನಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹಯಾತ್ರಿ 285 ದಿನಗಳ ಬಳಿಕ ಇದೇ ಮಾರ್ಚ್ 19 ಭೂಮಿಗೆ ಮರಳುತ್ತಿರುವುದು ಅತ್ಯಂತ ಹೆಮ್ಮೆಯ ಮತ್ತು ಶುಭ ಸಂದರ್ಭದಲ್ಲಿ ಅವರಿಗೆ ಶುಭಾಶಯಗಳನ್ನು ಹೇಳುತ್ತಾ….

ಕಳೆದ ಆಗಸ್ಟ್ ನಲ್ಲಿ ಅವರು ಬಾಹ್ಯಾಕಾಶ ಕೇಂದ್ರದಲ್ಲಿ ಸಿಕ್ಕಿಹಾಕಿಕೊಂಡಾಗ ಬರೆದ ಲೇಖನ ಮತ್ತೊಮ್ಮೆ…….

ಬಾಹ್ಯಾಕಾಶದಲ್ಲಿ ಸಾವಿನ ಗುಹೆಯೊಳಗೆ ತನ್ನ ಸಹಯಾತ್ರಿಯೊಂದಿಗೆ ಧೈರ್ಯದಿಂದ ಸೆಣೆಸುತ್ತಿರುವ ಸುನಿತಾ ವಿಲಿಯಮ್ಸ್………..

ಭಾಹ್ಯಾಕಾಶ ಯಾತ್ರೆಯೇ ಒಂದು ರೀತಿಯಲ್ಲಿ ಬದುಕಿನ ಅಂತಿಮ ಯಾತ್ರೆಯಂತೆ ನನಗನಿಸುತ್ತದೆ. ಈಗಲೂ ಸಹ ನಮ್ಮಂತ ಸಾಮಾನ್ಯ ಜನ ಬಸ್ಸಿನಲ್ಲೋ, ರೈಲಿನಲ್ಲೂ, ವಿಮಾನದಲ್ಲೋ ಸಂಚರಿಸುವಾಗ ಬಹುತೇಕ ನಮ್ಮ ಮನಸ್ಸಿನಲ್ಲಿ ಸುಳಿಯುವ ಭಾವನೆ ಎಂದರೆ, ಏನಾದರೂ ಅಪಘಾತವಾಗಿ ನಾವು ಸಾಯಬಹುದೇನೋ ಎನ್ನುವ ಒಂದು ರೀತಿಯ ಮಾನಸಿಕ ಸ್ಥಿತಿಯಲ್ಲಿಯೇ ಪ್ರಯಾಣಿಸುತ್ತಿರುತ್ತೇವೆ. ಅದು ನಿರಂತರವಾಗಿ ನಮ್ಮೊಳಗೆ ಹುಟ್ಟಿನಿಂದ ಸಾಯುವವರೆಗೂ ಪ್ರತಿ ಪ್ರಯಾಣದಲ್ಲೂ ಕಾಡುತ್ತಲೇ ಇರುತ್ತದೆ……..

ಇದರ ಜೊತೆಗೆ ಯಾವಾಗಲಾದರೂ, ಏನಾದರೂ ಕೆಲಸ ಕಾರ್ಯಗಳ ನಿಮಿತ್ತ ಕೆಲವು ವಾರಗಳು ಅಥವಾ ಕೆಲವು ತಿಂಗಳುಗಳು ಮನೆಯಿಂದ ಹೊರಗೆ ಇರಬೇಕಾದ ಸಂದರ್ಭದಲ್ಲಿ ಸಹ ಒಂದಷ್ಟು ಅಧೀರರಾಗುತ್ತೇವೆ ಅಥವಾ ಭಾವನಾತ್ಮಕ ನೋವು ಕಾಡುತ್ತದೆ. ಕೆಲವು ದಿನ ಎಲ್ಲರನ್ನೂ ಬಿಟ್ಟಿರಬೇಕಾಗುತ್ತದೆ ಎಂಬ ಭಾವ, ಅದರಲ್ಲೂ 24 ಗಂಟೆ ಸಂಪರ್ಕದಲ್ಲಿರಬಹುದಾದ ಮೊಬೈಲ್, ವಿಡಿಯೋ ಕಾಲ್ ಎಲ್ಲವೂ ಇದ್ದ ನಂತರವೂ ಸಹ, ಹಾಗೆಯೇ ಮನಸ್ಸು ಮಾಡಿದರೆ ಕೆಲವೇ ಗಂಟೆಗಳ ಅವಧಿಯಲ್ಲಿ ಮತ್ತೆ ನಮ್ಮ ಮನೆ ತಲುಪಬಹುದು ಎಂಬ ಅವಕಾಶ ಮತ್ತು ವ್ಯವಸ್ಥೆ ಇದ್ದರೂ, ನಮಗೆ ಆ ಹತಾಶೆ, ನೋವು, ವಿರಹ ಕಾಡುತ್ತಲೇ ಇರುತ್ತದೆ…..

ಕೆಲವರು ಅತಿ ಹೆಚ್ಚು ಎಂದರೆ ನೂರು ದಿನಗಳ ಕಾಲ ಮನೆ ಬಿಟ್ಟು ಬೆಂಗಳೂರಿನ ಮುಖ್ಯ ಪ್ರದೇಶದಲ್ಲಿಯೇ ಇರುವ ಒಂದು ಸುಸಜ್ಜಿತ ಬಿಗ್ ಬಾಸ್ ಬಂಗಲೆಯಲ್ಲಿ ವಾಸಿಸಲು ಸ್ಪರ್ಧೆಯ ಕಾರಣಕ್ಕಾಗಿ ಹೋಗುವಾಗಲೂ ಅವರು ಪಡುವ ಆತಂಕ, 40 – 50 ದಿನಗಳ ನಂತರ ಅವರ ಮನೆಯವರನ್ನು ನೋಡಿದಾಗ ಗೊಳೋ ಎಂದು ಅಳುವುದು ನೋಡಿದರೆ ಸುನಿತಾ ವಿಲಿಯಮ್ಸ್ ಸಾಹಸ ಎಷ್ಟು ಮಹತ್ವದ್ದು ಎಂಬುದು ಅರ್ಥವಾಗುತ್ತದೆ…..

ನೂರಾರು ಕಿಲೋಮೀಟರ್ ಗಳು ಕೇವಲ ಒಬ್ಬ ಸಹವರ್ತಿಯೊಂದಿಗೆ ಏನೂ ಗ್ಯಾರಂಟಿ ಇಲ್ಲದ, ಆಕಸ್ಮಿಕ ಅಪಘಾತವಾಗುವ ಸಾಧ್ಯತೆಯೇ ಹೆಚ್ಚಿರುವ ವಾಹನದಲ್ಲಿ, ಅಷ್ಟು ದೂರ ಹೋಗಿ ಸಂಶೋಧನೆ ಮಾಡಿ, ಅಲ್ಲಿ ಕೆಲವು ದಿನಗಳಿದ್ದು ವಾಪಸ್ಸು ಬರುವ, ಬಹುದೊಡ್ಡ ಸಾವಿನ ಗುಹೆಯೊಳಗೇ ಹೋಗಿದ್ದಾರೆ. ಈಗ ನಿಜವಾಗಿಯೂ ವಾಪಸ್ ಬರುವ ತೊಂದರೆಯಿಂದಾಗಿ ಅಂದರೆ, ಅವರ ವಾಹನದ ಹೀಲಿಯಂ ಸೋರಿಕೆಯ ಕಾರಣದಿಂದ ಇನ್ನೂ ವಾಪಸ್ ಬರುವುದು ನಿಶ್ಚಿತವಾಗದೇ ಇರುವ ಸಮಯದಲ್ಲಿ, ಆಕೆ ಎದುರಿಸುತ್ತಿರುವ ಮಾನಸಿಕ ಪರಿಸ್ಥಿತಿಯ ಬಗ್ಗೆ ಒಂದಷ್ಟು ಕುತೂಹಲ. ಅದನ್ನು ವಿವರಿಸುವುದು ತುಂಬಾ ಕಷ್ಟ. ಬಹುಶಃ ಸಾಮಾನ್ಯರಾದ ನಮ್ಮ ಊಹೆಗೂ ಮೀರಿದ್ದು……

ಅವರು ಸಾಕಷ್ಟು ತರಬೇತಿಯನ್ನು ಪಡೆದಿರುತ್ತಾರೆ ಮತ್ತು ಅದಕ್ಕಾಗಿ ಮಾನಸಿಕವಾಗಿ ಸದೃಢವಾಗಿರುತ್ತಾರೆ ಎಂಬುದು ನಿಜ, ಅಲ್ಲದೆ ಅವರಿಗೆ ಇದು ಎರಡನೆಯ ಬಾರಿಯಾದ್ದರಿಂದ ಸ್ವಲ್ಪ ಅನುಭವವೂ ಇರುತ್ತದೆ ಎನ್ನಬಹುದು. ಆದರೆ ಎಷ್ಟೇ ತರಬೇತಿ, ಅನುಭವ ಇದ್ದರು ಆ ಪ್ರಯಾಣ ತುಂಬಾ ಕಠಿಣ ಮತ್ತು ಅತ್ಯಂತ ಅಪಾಯಕಾರಿ ಎಂದು ಎಲ್ಲರಿಗೂ ತಿಳಿದಿರುವುದೇ. ಇಲ್ಲಿ ತಾಂತ್ರಿಕ ದೋಷಗಳು, ಸಾಹಸ ಪ್ರವೃತ್ತಿ ಇತ್ಯಾದಿಗಳನ್ನೆಲ್ಲ ಹೊರತುಪಡಿಸಿ, ಕೇವಲ ಸುನಿತಾ ವಿಲಿಯಮ್ಸ್ ಅವರ ಮನ:ಸ್ಥಿತಿಯನ್ನು ಮಾತ್ರ ಗಣನೆಗೆ ತೆಗೆದುಕೊಂಡಾಗ ನಾವೆಲ್ಲ ಖಂಡಿತ ಅದರಿಂದ ಬಹಳ ದೂರ ಇದ್ದೇವೆ ಅನಿಸುತ್ತದೆ……

ಅಂದರೆ ಸಣ್ಣಪುಟ್ಟ ಸಮಸ್ಯೆಗಳಿಗೆ, ಮುಂದೆ ಆಗಬಹುದಾದ ಅನೇಕ ಸಾಧ್ಯತೆಗಳ ಊಹಾತ್ಮಕ ಘಟನೆಗಳಿಗೆ, ಇನ್ನೂ ಅನೇಕ ವಿಷಯಗಳಲ್ಲಿ ನಾವು ಮತ್ತು ನಮ್ಮ ಪ್ರತಿಕ್ರಿಯೆ ಎಷ್ಟೊಂದು ದುರ್ಬಲವಾಗಿರುತ್ತದೆ ಎಂದರೆ, ಒಮ್ಮೊಮ್ಮೆ ನಮಗೇ ನಮ್ಮ ಬಗ್ಗೆ ಜಿಗುಪ್ಸೆ ಹುಟ್ಟುತ್ತದೆ. ಸುನಿತಾ ವಿಲಿಯಮ್ಸ್ ಅಂತ ಅಪಾರ ಧೈರ್ಯಶಾಲಿ, ದೃಢ ವಿಶ್ವಾಸಿ ನಿಜಕ್ಕೂ ನಮಗೆ ಸ್ಪೂರ್ತಿಯಾಗಬೇಕು, ಮಾದರಿಯಾಗಬೇಕು. ನಮ್ಮ ಎಲ್ಲಾ ಕಷ್ಟಗಳನ್ನು ಎದುರಿಸುವ ಸಮಯದಲ್ಲಿ ಆಕೆಯ ನೆನಪು ನಮ್ಮಲ್ಲಿ ಆತ್ಮವಿಶ್ವಾಸ ಜೀವನೋತ್ಸಾಹ ಮೂಡಿಸಬೇಕು……

ತನ್ನ ಭಾಹ್ಯಾಕಾಶ ಜೊತೆಗಾರನೊಂದಿಗೆ ಆಕೆ ಏನೆಲ್ಲ ಮಾತನಾಡುತ್ತಿರಬಹುದು, ಆಕೆಯ ಮನದಲ್ಲಿ ಏನೆಲ್ಲಾ ಭಾವನೆ ಮೂಡಿರಬಹುದು, ತನ್ನನ್ನು ಕರೆತರುವ ಜವಾಬ್ದಾರಿ ವಹಿಸಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದೊಂದಿಗೆ ಆಕೆ ಏನೆಲ್ಲಾ ವಿಚಾರ ವಿನಿಮಯ ಮಾಡಿಕೊಳ್ಳುತ್ತಿರಬಹುದು, ತನ್ನ ಜೀವ ಮತ್ತು ಜೀವನದ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ಮನಸ್ಸಿನಲ್ಲಿ ಮೂಡುತ್ತಿರಬಹುದು, ಈ ಎಲ್ಲವೂ ತುಂಬಾ ಕುತೂಹಲ ಮತ್ತು ಸಂಕೀರ್ಣವೆನಿಸುತ್ತದೆ…..

ಅದರಲ್ಲೂ ಇಲ್ಲಿಂದ ನಾವು ಅದನ್ನು ಊಹಿಸಿಕೊಂಡರೆ ಅದು ಮತ್ತಷ್ಟು ಕಠಿಣವಾಗಿ ಕಾಣುತ್ತದೆ. ಸಣ್ಣಪುಟ್ಟ ಕಷ್ಟಗಳಿಗೆ ತೀರಾ ಕುಸಿದು ಹೋಗುವ ನಾವು ನಿಜಕ್ಕೂ ಸುನೀತಾ ವಿಲಿಯಮ್ಸ್ ಅವರ ಪರಿಸ್ಥಿತಿಯನ್ನು ನೆನಪಿಸಿಕೊಂಡು ನಮ್ಮ ಕೆಲಸಗಳಲ್ಲಿ ಧೈರ್ಯವಾಗಿ ಮುನ್ನುಗ್ಗಬಹುದು. ಸಾವಿನ ಆತಂಕವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು……

ಪ್ರಕೃತಿಯ ಶಿಶುವಾದ ನಾವು ಸಾವಿಗೆ ಅಂಜುತ್ತಲೇ ಪ್ರತಿನಿತ್ಯ ಅದರ ಛಾಯೆಯಲ್ಲಿಯೇ ಇಡೀ ಜೀವನ ಸಾಗಿಸುತ್ತೇವೆ. ಆದರೆ ಸುನಿತಾ ವಿಲಿಯಮ್ಸ್ ನಂತವರು ಸಾವಿಗೇ ಸವಾಲಾಗಿ ಬದುಕುತ್ತಿರುತ್ತಾರೆ. ನಾವುಗಳು ಜೀವನದಲ್ಲಿ ಅನೇಕ ಕೊರತೆಗಳ ಬಗ್ಗೆಯೇ ಮಾತನಾಡುತ್ತಾ ಬದುಕಿನ ಸ್ವಾರಸ್ಯವನ್ನೇ ಕಳೆದುಕೊಂಡಿರುತ್ತೇವೆ. ಇಂತಹ ಸಂದರ್ಭದಲ್ಲಿ ಅವರ ಬಾಹ್ಯಾಕಾಶಯಾನ ನಮ್ಮಲ್ಲಿ ಜೀವನೋತ್ಸಾಹ ತುಂಬಿಸಲಿ ಎಂಬ ಕಾರಣದಿಂದ ಲೇಖನ……

ಏನಾದರಾಗಲಿ, ಸುನೀತಾ ವಿಲಿಯಮ್ಸ್ ಮತ್ತು ಅವರ ಸಹಯಾತ್ರಿ ಇನ್ನು ಕೆಲವೇ ದಿನಗಳಲ್ಲಿ ಯಶಸ್ವಿಯಾಗಿ ಭೂಮಿಗೆ ಮರಳಲಿ, ಇನ್ನಷ್ಟು ದಿನ ಆಕೆ ತನ್ನ ಕುಟುಂಬದೊಂದಿಗೆ ಜೀವನ ಕಳೆಯಲಿ, ಆಕೆಯ ಅನುಭವ ನಮ್ಮೊಡನೆ ಹಂಚಿಕೊಳ್ಳಲಿ ಎಂದು ಆಶಿಸುತ್ತಾ……

ಈಗ ನಮ್ಮ ಆಶಯ ಇನ್ನೇನು ಕೆಲವೇ ಗಂಟೆಗಳಲ್ಲಿ ಫಲಿಸಬಹುದು. ಏಕೋ ಏನೋ ನಿಜಕ್ಕೂ ಮನಸ್ಸಿಗೆ ತುಂಬಾ ಖುಷಿಯಾಗುತ್ತಿದೆ..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068…….

About Author

Leave a Reply

Your email address will not be published. Required fields are marked *