लाइव कैलेंडर

March 2025
M T W T F S S
 12
3456789
10111213141516
17181920212223
24252627282930
31  
15/03/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಿನ್ನೆ ದಿನಾಂಕ 14/03/2025 ಶುಕ್ರವಾರ ಎರಡು ಮುಖ್ಯ ಚರ್ಚೆಗಳಲ್ಲಿ ಭಾಗವಹಿಸಿದೆನು.

ಒಂದು ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರ ಜೊತೆ ಶಿಕ್ಷಣದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಒಂದು ಚರ್ಚೆ.
ಇನ್ನೊಂದು ವಿಧಾನ ಪರಿಷತ್ತಿನಲ್ಲಿ ನಡೆದ ಚರ್ಚೆಯ ವೀಕ್ಷಣೆ….

ಸಮಾಜದಲ್ಲಿ ಮಾನವೀಯ ಮೌಲ್ಯಗಳು ದಿನೇ ದಿನೇ ಕುಸಿಯುತ್ತಿರುವುದು ಮಾತ್ರವಲ್ಲದೆ ವಿರುದ್ಧ ಮೌಲ್ಯಗಳು ಮಾನ್ಯತೆ ಪಡೆಯುತ್ತಿರುವ ಈ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳಿಗಾಗಿ ಕಳೆದ 12 ವರ್ಷಗಳಿಂದ ಸತತವಾಗಿ ಪ್ರತಿನಿತ್ಯ ಬರವಣಿಗೆ, ಇಡೀ ರಾಜ್ಯಾದ್ಯಂತ 385 ದಿನ 11500 ಕಿಲೋಮೀಟರ್ಗಳ ಜ್ಞಾನ ಭಿಕ್ಷಾ ಪಾದಯಾತ್ರೆ ಮತ್ತು 2500ಕ್ಕೂ ಹೆಚ್ಚು ಸಂವಾದಗಳು ಮತ್ತು ಈಗಲೂ ರಾಜ್ಯಾದ್ಯಂತ ಆಹ್ವಾನದ ಮೇರೆಗೆ ಪ್ರವಾಸ ಮಾಡಿ ಒಂದಷ್ಟು ಸಂವಾದ, ಉಪನ್ಯಾಸ, ಹೋರಾಟಗಳು ನಡೆಸುತ್ತಿರುವ ಸಂದರ್ಭದಲ್ಲಿ ಹಿರಿಯ ಗೆಳೆಯರು, ಹಿತೈಷಿಗಳು ಮತ್ತು ಮಾನವೀಯ ಮೌಲ್ಯಗಳ ಚಿಂತಕರು, ಜೊತೆಗೆ ಜಿಡ್ಡು ಕೃಷ್ಣಮೂರ್ತಿ ಅವರ ಅನುಯಾಯಿಗಳು ಆದ ಮೂಲ ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಈಗ ಬೆಂಗಳೂರಿನಲ್ಲಿ ವಾಸವಾಗಿರುವ ಶ್ರೀ ಸಿದ್ದರಾಮಪ್ಪ ದಿನ್ನಿ ಅವರ ಆಶಯದ ಫಲವಾಗಿ ನಿವೃತ್ತ ಸುಪ್ರೀಂಕೋರ್ಟ್ ಮತ್ತು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳಾಗಿದ್ದ ಮತ್ತು ಮಾನವೀಯ ಮೌಲ್ಯಗಳ ಪ್ರತಿಪಾದಕರಾದ 86 ವರ್ಷ ವಯಸ್ಸಿನ ಸನ್ಮಾನ್ಯ ಶ್ರೀ ಸಂತೋಷ ಹೆಗಡೆ ಅವರ ಮನೆಯಲ್ಲಿ ಭೇಟಿ ಮಾಡುವ ಸಂದರ್ಭ ಒದಗಿ ಬಂದಿತ್ತು.

ಬೆಳಗ್ಗೆ 11 ಗಂಟೆಗೆ ನಾನು, ಶ್ರೀ ಸಿದ್ದರಾಮಪ್ಪ ದಿನ್ನಿ, ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನದ ಸಮಾಜ ಸೇವಕರಾದ ಶ್ರೀ ಎಮ್. ಯುವರಾಜ್, ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆಯ ಕಾರ್ಯದರ್ಶಿಗಳಾದ
ಶ್ರೀ ನಾರಾಯಣ್, ಕರ್ನಾಟಕ ರಾಷ್ಟ್ರ ಸಮಿತಿಯ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಶ್ರೀ ರಘುನಂದನ್, ಜೆ ಪಿ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದೆವು.

86 ವರ್ಷದ ಈಗಲೂ ತುಂಬಾ ಆರೋಗ್ಯವಾಗಿರುವ ಶ್ರೀ ಸಂತೋಷ ಹೆಗಡೆಯವರು ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಹಾಗೆಯೇ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಅದರ ಪುನರುತ್ಥಾನದ ಬಗ್ಗೆ ಸಾಕಷ್ಟು ಮಾಹಿತಿ, ಸಲಹೆಯನ್ನು ನೀಡಿದರು. ಮುಖ್ಯವಾಗಿ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರವೇ ಮುಂದೆ ನಿಂತು ಕಾರ್ಯಕ್ರಮ ರೂಪಿಸುವ ಬಗ್ಗೆ ಒತ್ತಡ ತರಬೇಕಾದ ಮಹತ್ವವನ್ನು ಹೇಳಿದರು.

ಮುಂದೆ ಮಾನವೀಯ ಮೌಲ್ಯಗಳ ನೂರು ಅಂಕಗಳ ಒಂದು ಪಠ್ಯ ಕಡ್ಡಾಯವಾಗಬೇಕು ಅದಕ್ಕಾಗಿ ಯಾವ ಯಾವ ಅಧ್ಯಾಯಗಳು ಭಾರತೀಯ ಸಂವಿಧಾನ ಮತ್ತು ಈ ನೆಲದ ಸಂಸ್ಕೃತಿಯ ಅನುಗುಣವಾಗಿ, ಸರ್ವ ಧರ್ಮಗಳ ಸಮನ್ವಯ ಸಾಧ್ಯವಾಗುವಂತಹ ಪಠ್ಯಕ್ರಮ ಅಳವಡಿಸಬೇಕು ಎಂಬುದರ ಬಗ್ಗೆ ಒಂದು ತಜ್ಞರ ಸಮಿತಿಯಲ್ಲಿ ಚರ್ಚಿಸಿ ಕಾರ್ಯರೂಪಕ್ಕೆ ತರುವ ಬಗ್ಗೆ ಯೋಚಿಸಲಾಯಿತು.

ಶ್ರೀ ಸಂತೋಷ್ ಹೆಗಡೆಯವರು ಈ ಸಮಿತಿಯಲ್ಲಿ ತಾನು ಕಾರ್ಯನಿರ್ವಹಿಸಲು ಸಿದ್ಧ ಎಂಬ ಆಶ್ವಾಸನೆಯನ್ನು ನೀಡಿದ್ದಾರೆ. ಅವರೊಂದಿಗೆ ಒಂದಷ್ಟು ರಾಜ್ಯದ ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು, ಭಾಷಾ ತಜ್ಞರು, ಕಾನೂನು ಸಲಹೆಗಾರರು, ಇತಿಹಾಸಜ್ಞರು ಕಲಾ ಮಾಧ್ಯಮದವರು ಮುಂತಾದವರನ್ನು ಒಟ್ಟಾಗಿ ಸೇರಿಸಿ ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಒಂದು ಸಭೆ ಮಾಡಿ ಮಾನವಿಯ ಮೌಲ್ಯಗಳ ಪಠ್ಯದಲ್ಲಿ ಏನೇನು ಅಳವಡಿಸಿಕೊಳ್ಳಬೇಕು, ಯಾವ ರೀತಿಯಲ್ಲಿ ಅದನ್ನು ಬೋಧಿಸಬೇಕು, ಯಾವ ಹಂತದಲ್ಲಿ ಬೋಧಿಸಬೇಕು ಎಂಬುದನ್ನು ಚರ್ಚಿಸಿ, ಅದನ್ನು ಯಾರಾದರೂ ಶಾಸಕರು ಖಾಸಗಿ ಮಸೂದೆಯಾಗಿ ಮಂಡಿಸಿ ಚರ್ಚಿಸಿ, ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಪಠ್ಯವಾಗಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸುವ ಪ್ರಯತ್ನವನ್ನು ನಾವು ನಿಷ್ಠೆಯಿಂದ ಮಾಡುತ್ತೇವೆ ಎಂದು ಅವರಿಗೆ ಭರವಸೆಯನ್ನು ನೀಡಿದ್ದೇವೆ.

ಲೋಕಾಯುಕ್ತ ನ್ಯಾಯಮೂರ್ತಿಗಳಾಗಿದ್ದ ಶ್ರೀ ಎಂ ವೆಂಕಟಾಚಲಯ್ಯ ಅವರು ಮತ್ತು ಅವರ ನಂತರ ಅದರ ನೇತೃತ್ವ ವಹಿಸಿದ ಶ್ರೀ ಸಂತೋಷ್ ಹೆಗಡೆಯವರು ರಾಜ್ಯದ ಭ್ರಷ್ಟರ ಪಾಲಿಗೆ ಸಿಂಹ ಸಪ್ನವಾಗಿದ್ದವರು. ಮುಖ್ಯವಾಗಿ ಗಣಿ ದಣಿಗಳ ಭ್ರಷ್ಟಾಚಾರವನ್ನು ಬಯಲು ಮಾಡಿ ಜೈಲಿಗಟ್ಟಿದವರು. ಇವರ ಸಮಯದಲ್ಲಿಯೇ ರಾಜ್ಯದ ಅತ್ಯಂತ ಪ್ರಾಮಾಣಿಕ ಪೊಲೀಸ ಅಧಿಕಾರಿ ದಿವಂಗತ ಶ್ರೀ ಮಧುಕರ ಶೆಟ್ಟಿಯವರು ಕಾರ್ಯನಿರ್ವಹಿಸಿದ್ದು ಈಗಲೂ ಜನ ಮಾನಸದಲ್ಲಿ ಅಚ್ಚಳಿಯಾಗಿ ಉಳಿದಿದೆ….

ಆಗಾಗ ತಮ್ಮ ಭಾಷಣ, ಉಪನ್ಯಾಸಗಳಲ್ಲಿ ಸಂತೋಷ ಹೆಗಡೆಯವರು ಮಾನವಿಯ ಮೌಲ್ಯಗಳ ಬಗ್ಗೆ ಹೆಚ್ಚು ಮಾತನಾಡುವುದರಿಂದ ಅವರ ಬಳಿ ಸಲಹೆ ಪಡೆಯುವುದು ಸೂಕ್ತವೆಂದು ಅವರನ್ನು ಭೇಟಿ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಮತ್ತಷ್ಟು ಜನರನ್ನು ಭೇಟಿಯಾಗಿ ಮನವೊಲಿಸುವ ಕೆಲಸ ಮಾಡುತ್ತೇವೆ. ಮುಖ್ಯಮಂತ್ರಿಗಳಿಗೆ ಇದನ್ನು ತಲುಪಿಸಿ ಶೀಘ್ರವೇ ಅದಕ್ಕೆ ಕಾನೂನಾತ್ಮಕವಾಗಿ ಮಾನ್ಯತೆ ಪಡೆಯಲು ನಮ್ಮೆಲ್ಲ ಶ್ರಮವನ್ನು ವಿನಿಯೋಗಿಸುತ್ತೇವೆ…..

ಈ ಸಮಾಜದ ಮಾನವೀಯ ಮೌಲ್ಯಗಳು ಸರಿಪಡಿಸಲಾಗದಷ್ಟು ಅಧೋಗತಿಗೆ ಇಳಿದಿದೆ ಎಂಬ ನಿರಾಸೆ ಹಲವಾರು ಜನರಲ್ಲಿ ಮನೆ ಮಾಡಿದೆ. ಆದರೆ ಸಮಾಜ ಕೆಡುತ್ತಿದೆ, ಪರಿಸರ ನಾಶವಾಗುತ್ತಿದೆ, ಆಹಾರ ವಿಷಯುಕ್ತವಾಗುತ್ತಿದೆ, ಗಾಳಿ ನೀರು ಮಲಿನವಾಗುತ್ತಿದೆ, ನಮ್ಮೊಳಗಿನ ಪ್ರೀತಿ, ಸ್ನೇಹ, ಸಂಯಮ, ಸಭ್ಯತೆ, ತಾಳ್ಮೆ, ಕ್ಷಮಾಗುಣ, ಕರುಣೆ, ತ್ಯಾಗ, ಸಹಕಾರ, ಸಮನ್ವಯ ಮುಂತಾದ ಮಾನವೀಯ ಮೌಲ್ಯಗಳು ಕಾಣೆಯಾಗುತ್ತಿವೆ ಎಂದು ಜನರು ಮಾತನಾಡಿಕೊಳ್ಳ ತೊಡಗಿದ್ದಾರೆ ಎಂಬುದೇ ಒಂದು ಭರವಸೆಯ ಬೆಳಕು. ಸಮಸ್ಯೆ ಸರಿಯಾಗಿ ಅರ್ಥವಾಗುವುದೇ ಪರಿಹಾರದ ಮೊದಲನೆಯ ಹೆಜ್ಜೆ. ಈ ಭರವಸೆಯೊಂದಿಗೆ ನಾವು ಮುನ್ನಡೆಯೋಣ…..

ಮುಂದಿನ ತುರ್ತು ಅಗತ್ಯವಾಗಿರುವ, ಎಲ್ಲರೂ ಸದಾ ಕಾಲ ಜಪ ಮಾಡುತ್ತಿರುವ, ಮಾನವೀಯ ಮೌಲ್ಯಗಳು ವಿದ್ಯಾರ್ಥಿ ದೆಸೆಯಲ್ಲಿ ಕನಿಷ್ಠ ಅವರ ಅಧ್ಯಯನ ವಿಷಯವಾಗಿ ಅವರ ಕಿವಿಯೊಳಗೆ ಬಿದ್ದು, ಮನಸ್ಸಿನಲ್ಲಿ ಉಳಿದರೆ ಮುಂದಿನ 10/15 ವರ್ಷಗಳಲ್ಲಿ ಈ ಸಮಾಜದ ಮಾನವೀಯ ಮೌಲ್ಯಗಳು ಮತ್ತೆ ಚೇತರಿಸಿಕೊಂಡು ಒಂದಷ್ಟು ನೆಮ್ಮದಿ ಕಾಣಬಹುದು ಎಂಬ ಭರವಸೆ ನಮ್ಮದು. ಅದಕ್ಕಾಗಿ ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ….

ಅಲ್ಲಿಂದ ನಾವು ಗೆಳೆಯ ಹಾಗೂ ಪತ್ರಕರ್ತರಾದ ಶ್ರೀ ಶಿವರಾಜ್ ಅಲ್ಬೂರು ಅವರ ಸಲಹೆಯ ಮೇರೆಗೆ ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಕಾರ್ಯಕಲಾಪಗಳನ್ನು ಸುಮಾರು 15/20 ನಿಮಿಷಗಳಷ್ಟು ವೀಕ್ಷಿಸಲು ಅನುಮತಿ ದೊರೆಯಿತು. ಎಂದಿನಂತೆ ಒಂದು ಕಾಟಾಚಾರದ ಅಥವಾ ಔಪಚಾರಿಕ ಪ್ರಶ್ನೋತ್ತರ, ಆಲಸ್ಯ ಎಲ್ಲವೂ ಕಾಣುತ್ತಿತ್ತು. ಆಸನಗಳ ಸಂಖ್ಯೆ ಕೂಡ ಖಾಲಿ ಇತ್ತು. ಏನೋ ಅಧಿಕೃತವಾಗಿ ಅಧಿವೇಶನ ಮುಗಿಸಬೇಕು ಎನ್ನುವಂಥ ಮನಸ್ಥಿತಿ ಕಾಣುತ್ತಿತ್ತು.

ನಿಜಕ್ಕೂ ಸ್ಪಷ್ಟ, ದಿಟ್ಟ, ಇಚ್ಛಾಶಕ್ತಿಯ ಕೊರತೆಯಂತು ಎಲ್ಲರಲ್ಲೂ ಎದ್ದು ಕಾಣುತ್ತಿತ್ತು. ಏಕೆಂದರೆ ಎಲ್ಲರಿಗೂ ಎಲ್ಲವೂ ತಿಳಿದಿದೆ. ಹೇಗಿದ್ದರೂ ಇದೇನು ಅಷ್ಟೊಂದು ಪರಿಣಾಮ ಬೀರುವುದಿಲ್ಲ ಎನ್ನುವ ಮನೋಭಾವ ಕಾಣುತ್ತಿತ್ತು.

ಜೊತೆಗೆ ಅವರು ಎಲ್ಲರೂ ಒಬ್ಬರಿಗೊಬ್ಬರು ಪರಿಚಿತರು, ಆತ್ಮೀಯರು, ಅವಲಂಬಿತರೇ ಆಗಿರುತ್ತಾರೆ. ಸಾರ್ವಜನಿಕರ ಭಯದಿಂದ ಅಥವಾ ಸಾರ್ವಜನಿಕರನ್ನು ಮೆಚ್ಚಿಸಲು ಒಂದಷ್ಟು ಪ್ರೋತ್ಸಾಹದ ಚರ್ಚೆಗಳನ್ನು ಕೈಗೊಳ್ಳುತ್ತಾರೆ ಅಷ್ಟೇ.

ಇರಲಿ ಅವರ ಸ್ನೇಹ ಸಂಬಂಧಕ್ಕೆ ನಮ್ಮದೇನು ತಕರಾರಿಲ್ಲ. ಆದರೆ ರಾಜ್ಯದ ಜನತೆಯ ಹಿತಾಸಕ್ತಿಯನ್ನು ಕಾಪಾಡಿ, ಮುಖ್ಯವಾಗಿ ಕಷ್ಟದಲ್ಲಿರುವ ಜನರಿಗೆ ನೆರವಾಗಿ ಆ ನಿಟ್ಟಿನಲ್ಲಿ ವಿಧಾನಸಭೆ ಅಧಿವೇಶನಗಳ ಚರ್ಚೆ ಇರಬೇಕೆಂಬುದು ಮತದಾರರಾದ ನಮ್ಮೆಲ್ಲರ ಆಶಯ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068……

About Author

Leave a Reply

Your email address will not be published. Required fields are marked *