ಜಾಣತನವನ್ನು ಮಾತ್ರವಲ್ಲ ಮನುಷ್ಯನ ದೌರ್ಬಲ್ಯಗಳನ್ನು ಬಳಸಿಕೊಂಡು ಬಹುದೊಡ್ಡ ಆರ್ಥಿಕ ವ್ಯವಹಾರ ಮಾಡುತ್ತಿವೆ ಸಾಮಾಜಿಕ ಜಾಲತಾಣಗಳು:
1 min read
ಅವಿನ್ ಟಿವಿ ಸುದ್ದಿಜಾಲ ✍️: ಜಾಣತನವನ್ನು ಮಾತ್ರವಲ್ಲ ಮನುಷ್ಯನ ದೌರ್ಬಲ್ಯಗಳನ್ನು ಬಳಸಿಕೊಂಡು ಬಹುದೊಡ್ಡ ಆರ್ಥಿಕ ವ್ಯವಹಾರ ಮಾಡುತ್ತಿವೆ ಸಾಮಾಜಿಕ ಜಾಲತಾಣಗಳು: ತರೀಕೆರೆಯಲ್ಲಿ ಡಿಜಿಟಲ್ ಜಗತ್ತನ್ನು ಕುರಿತು ಸಂವಾದ.
ತರೀಕೆರೆ: ಯಾವುದೇ ತಂತ್ರಜ್ಞಾನಗಳು ಮನುಷ್ಯರ ಸೇವಕರಾಗಬೇಕೆ ಹೊರತು ಮನುಷ್ಯ ತಂತ್ರಜ್ಞಾನದ ಸೇವಕನಾಗಬಾರದು, ಜನಸಂದಣಿ ಇರುವ ಒಂದು ರಸ್ತೆಯನ್ನು ದಾಟುವಾಗ ವಹಿಸುವ ಎಚ್ಚರದಷ್ಟೇ ಎಚ್ಚರವನ್ನು ಡಿಜಿಟಲ್ ಜಗತ್ತನ್ನು ಬಳಸುವಾಗಲೂ ಸಹ ವಹಿಸಬೇಕು, ಈ ಎಚ್ಚರ ನಮ್ಮದಾಗದಿದ್ದರೆ ಪ್ರಕೃತಿ ದತ್ತವಾಗಿ ಬಂದ ಮಾನವನ ಬುದ್ದಿ ಕೌಶಲ್ಯ ಮಸುಕಾಗಿ ಮನುಷ್ಯ ತನ್ನ ಸ್ವಂತಿಕೆ ಕಳೆದುಕೊಳ್ಳಬಹುದು, ಈ ನಿಟ್ಟಿನಲ್ಲಿ ಈಗ ಇಡೀ ಜಗತ್ತಿನಾದ್ಯಂತ ಸದ್ದುಮಾಡುತ್ತಿರುವ AI ಅಂದರೆ ಕೃತಕ ಬುದ್ದಿ ಮತ್ತೆ ಕುರಿತು ಇತ್ತೀಚಿಗೆ ತರೀಕೆರೆ ಗ್ಲಾಸಿ ಕಿಡ್ಸ್ ಸದ್ವಿಧ್ಯಾ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ವಿಷಯ ತಜ್ಞರಿಂದ ನವಮಾಧ್ಯಮಗಳ ಸಾಧಕ ಭಾದಕದ ಬಗ್ಗೆ ಚರ್ಚೆ, ಉಪನ್ಯಾಸ, ಸಂವಾದ ನೆಡಿಯಿತು.
ಚಿಕ್ಕಮಗಳೂರಿನ ಹೊನ್ನಬಿತ್ತೇವು ಹೊಲಕೆಲ್ಲ ಬಳಗ ಮತ್ತು ನ್ಯೂಸ್ ಕಿಂಗ್ ಸುದ್ದಿವಾಹಿನಿ ಹಾಗೂ ತರೀಕೆರೆ ಗ್ಲಾಸಿ ಕಿಡ್ಸ್ ಸದ್ವಿಧ್ಯಾ ಪಬ್ಲಿಕ್ ಸ್ಕೂಲ್ ಸಂಯುಕ್ತವಾಗಿ ಈ ಒಂದು ದಿನದ ತರಬೇತಿ ಶಿಬಿರ ಆಯೋಜನೆ ಮಾಡಿತ್ತು.
ಮನುಷ್ಯನಂತೆಯೇ ಚಿಂತಿಸುವ ಮತ್ತು ಪ್ರತಿಕ್ರಿಯಿಸುವ ಸಾಮರ್ಥ್ಯವುಳ್ಳ ತಂತ್ರಜ್ಞಾನವೇ ಕೃತಕ ಬುದ್ದಿ ಮತ್ತೆ ಅಥವಾ AI, (Artificial Intelligence )
ಯಾವುದೇ ವೇತನವಿಲ್ಲದೆ, ಬಡ್ತಿ ಇಲ್ಲದೆ, ರಜೆಹಾಕದೆ, ಮೈಗಳ್ಳತನಮಾಡದೆ, ಲಂಚ ಕೇಳದೆ, ಸ್ವಲ್ಪವೂ ಗೊಣಗದೆ ಸದಾ ಚುರುಕಾಗಿ ಕೆಲಸಮಾಡಿ ಮುಗಿಸಿ ಮತ್ತೆ ಮುಂದೇನು ಕೆಲಸ ಎಂಬ ಆದೇಶಕ್ಕಾಗಿ ಕಾಯುತ್ತಾ ದಿನದ 24ಘಂಟೆಯು ದಣಿವರಿಯದೆ ದುಡಿಯಲು ತುದಿಗಾಲ ಮೇಲೆ ಆಪ್ತ ಸೇವಕನಂತೆ ನಿಂತಿರಿವ ಈ ಕೃತಕ ಮತ್ತೇಯು ಕೋಟ್ಯಂತರ ಜನರ ಉದ್ಯೋಗವನ್ನು ಕಸಿದುಕೊಂಡು, ಇಂದು ನಿಮ್ಮ ಕೊನೆಯ ದಿನದ ಕೆಲಸವಾಗಿದೆ, ನಿಮ್ಮ ಕಂಪ್ಯೂಟರ್, ಇ ಮೇಲ್ ಮತ್ತು ಫೈಲ್ ಗಳಿಗೆ ಪ್ರವೇಶವನ್ನು ಶೀಘ್ರದಲ್ಲೇ ನೀಷ್ಕ್ರಿಯಗೊಳಿಸಲಾಗುತ್ತದೆ ಎಂಬ ಸಂದೇಶವನ್ನು ಬೆಳಗಿನ ಸುಪ್ರಭಾತಾದೊಂದಿಗೆ ಕಳಿಸಿ ಇದ್ದಕ್ಕಿದ್ದಹಾಗೆ ಕೋಟ್ಯಂತರ ಉದ್ಯೋಗವನ್ನು ಕಸಿದುಕೊಂಡು ನಿರುದ್ಯೋಗದ ಭಯಕ್ಕೆ ಯುವಸಮುದಾಯವನ್ನು ಈ ಕೃತಕ ಬುದ್ದಿಮತ್ತೆ ತಳ್ಳುತ್ತಿದೆ.
ಪ್ರಪಂಚದ ಐದನೇ ಒಂದು ಭಾಗದಷ್ಟು ಜನಸಂಖ್ಯೆ ಇರುವ ದೇಶ ಭಾರತ, ಸುಮಾರು 75ಕೋಟಿ ಯುವಜನರು ಭಾರತದಲ್ಲಿ ಇದ್ದಾರೆ, ಯಾವುತ್ತೂ ಸಹ ಇಷ್ಟು ಸಂಖ್ಯೆಯ ಯುವಜನರು ನಮ್ಮ ದೇಶದಲ್ಲಿ ಇರಲಿಲ್ಲ, ಹಾಗಾಗಿ ಇದು ಝೆನ್ ಜೀ ಯುಗ.
ಈ ಝೆನ್ ಜೀ ಯುವಸಮುದಾಯಕ್ಕೆ ಎ ಐ ಎಂಬ ಅದರ ಸಾಧಕ ಭಾದಕ ಅರ್ಥವಾಗುವ ಹೊತ್ತಿಗೆ ಕಾಲ ಸರಿದುಹೋಗಬಹುದು,ಮಾಹಿತಿ ತಂತ್ರಜ್ಞಾನ, ಅರೋಗ್ಯ, ಹಣಕಾಸು, ಬೌದ್ಧಿಕ ಶಿಕ್ಷಣ, ಉತ್ಪಾದನೆ ಮತ್ತು ಸೇವಾ ಕ್ಷೇತ್ರದಲ್ಲಿ ಮುಂದಿನ ಐದು ವರ್ಷಗಳಲ್ಲಿ ಎರಡರಿಂದ ಮೂರು ಕೋಟಿ ಉದ್ಯೋಗಗಳು ಇಲ್ಲವಾಗಬಹುದು ಎಂಬ ಆತಂಕದ ಸಮೀಕ್ಷೆಗಳು ಹೊರಬರುತ್ತಿವೆ.
ಈ ಹಿನ್ನೆಲೆಯಲ್ಲಿ ಕೃತಕ ಬುದ್ದಿಮತ್ತೆ ಎಂಬ ಆದುನಿಕ ತಂತ್ರಜ್ಞಾನ ಉದ್ಯೋಗವನ್ನು ಕಸಿದುಕೊಳ್ಳುತ್ತದೆಯೋ ಅಥವಾ ಉದ್ಯೋಗಗಳಲ್ಲಿ ಕೆಲಸದ ಸ್ವರೂಪ ಬದಲಾಗುತ್ತದೆಯೋ ಎಂಬ ಬಗ್ಗೆ ವಿಷಯ ತಜ್ಞರು ಹಾಗೂ ಚಿಕ್ಕಮಗಳೂರಿನ ಐ ಐ ಪಿ ಪ್ರಕಾಶನದ ಮುಖ್ಯಸ್ಥರಾದ ನಂಜೇಶ್ ಬೆಣ್ಣೂರು ಮತ್ತು ಹಾಸನದ ನವ್ಕಿಸ್ ಇಂಜಿನಿಯರಿಂಗ್ ಕಾಲೇಜಿನ ಎ ಐ ವಿಭಾಗದ ಮುಖ್ಯಸ್ಥರಾದ ಪ್ರೊ. ವಿವೇಕಾನಂದ ಅವರು ವಿಷಯ ತಜ್ಞರಾಗಿ ಆಗಮಿಸಿ, ಕಾರ್ಯಕ್ರಮ ಉದ್ಘಾಟಿಸಿ ಸಂವಾದನೆಡಸಿಕೊಟ್ಟರು.
ಸಭೆಯ ಅಧ್ಯಕ್ಷತೆಯನ್ನು ಗ್ಲಾಸಿ ಕಿಡ್ಸ್ ಸದ್ವಿಧ್ಯಾ ಶಾಲೆಯ ಪ್ರಾಂಶುಪಾಲರಾದ ಡಿ ಆರ್ ಹರ್ಷಿಣಿ ವಹಿಸಿದ್ದರು,
ಪ್ರಾಸ್ತವಿಕವಾಗಿ ರೈತಸಂಘದ ಹಿರಿಯ ಮುಖಂಡ ಗುರುಶಾಂತಪ್ಪ ಮಾತಾಡಿದರು.
ನ್ಯೂಸ್ ಕಿಂಗ್ ಸುದ್ದಿವಾಹಿನಿ ಸಂಪಾದಕ ಎನ್ ರಾಜು ಕಾರ್ಯಕ್ರಮಕ್ಕೆ ಸಹಕರಿಸಿ ದುಡಿದವರನ್ನು ಗೌರವಿಸಿ ಮಾತನಾಡಿದರು.
ಜಾನಪದ ತಜ್ಞ ಡಾ. ಬಸವರಾಜ ನೆಲ್ಲಿಸರ, ಸಾಹಿತಿ ಮತ್ತು ಅಂಕಣಕಾರ ಮನಸುಳಿ ಮೋಹನ್, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಪಿ. ವೇಲಾಯುಧನ್, ಸದ್ವಿಧ್ಯಾ ಶಾಲೆಯ ಮುಖ್ಯಸ್ಥರಾದ ಕುಮಾರ್, ಡಿ. ಎಂಮಂಜುನಾಥಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಯುವಜನರರು, ಹಲವು ಸಂಘ ಸಂಸ್ಥೆಯ ಮುಖಂಡರು, ಮಾಧ್ಯಮದ ಮಿತ್ರರು, ಶಿಕ್ಷಕ ಸಮೂಹ ಸೇರಿದಂತೆ ಅನೇಕರು ಈ ತರಬೇತಿ ಶಿಬಿರದ ಪ್ರಯೋಜನ ಪಡೆದುಕೊಂಡರು.
••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ … ✍️
ಚಿಕ್ಕಮಗಳೂರು

