ಕನಸಿನಲ್ಲಿ ಕಾಡುವ ಬುಲ್ಡೋಜರ್…ಜೇಡಿ ಮಣ್ಣಿನ ಕೆಸರಿನಲ್ಲಿ ಮುಳುಗಿ ಇಡೀ ದೇಹ ಸಿಕ್ಕಿಹಾಕಿಕೊಂಡಿದೆ. ಆದರಿಂದ ಹೊರಬರಲು ಸಾಕಷ್ಟು ಪ್ರಯತ್ನ ಪಡುತ್ತಿದ್ದೇನೆ. ನನ್ನ ಎಲ್ಲಾ ಶಕ್ತಿಯನ್ನು ಉಪಯೋಗಿಸುತ್ತಿದ್ದೇನೆ.
1 min read
ಕನಸಿನಲ್ಲಿ ಕಾಡುವ ಬುಲ್ಡೋಜರ್…

*****************************
ಜೇಡಿ ಮಣ್ಣಿನ ಕೆಸರಿನಲ್ಲಿ ಮುಳುಗಿ ಇಡೀ ದೇಹ ಸಿಕ್ಕಿಹಾಕಿಕೊಂಡಿದೆ. ಆದರಿಂದ ಹೊರಬರಲು ಸಾಕಷ್ಟು ಪ್ರಯತ್ನ ಪಡುತ್ತಿದ್ದೇನೆ. ನನ್ನ ಎಲ್ಲಾ ಶಕ್ತಿಯನ್ನು ಉಪಯೋಗಿಸುತ್ತಿದ್ದೇನೆ. ಕೈ ಕಾಲುಗಳನ್ನು ನಿರಂತರವಾಗಿ ಚಲಿಸುತ್ತಾ ಮುಂದೆ ಮುಂದೆ ಸಾಗಲು ಪ್ರಯತ್ನಿಸಿದಷ್ಟೂ ಕಾಲುಗಳು ಕೆಳಕ್ಕೆ ಇಳಿಯುತ್ತಿದೆ. ಮೇಲೆ ಬರಲಾಗುತ್ತಿಲ್ಲ. ಉಸಿರು ಕಟ್ಟಿದಂತಾಗುತ್ತಿದೆ. ಜೊತೆಗೆ ಈ ರೀತಿ ಯಾವುದೋ ಸಿನಿಮಾದಲ್ಲಿ ನೋಡಿದ್ದ ಆ ದೃಶ್ಯ ಮತ್ತೆ ಮತ್ತೆ ನೆನಪಾಗುತ್ತಿದೆ. ಫ್ಯಾಕ್ಟರಿಯಲ್ಲಿ ಚಾಕೊಲೇಟ್ ತಯಾರಿಕೆಯ ಸಂದರ್ಭದಲ್ಲಿ ಹೊರ ಸೂಸುವ ದ್ರವರೂಪದ ಚಾಕಲೇಟ್ ನಲ್ಲಿ ಬಿದ್ದ ನೊಣವೊಂದು ಒದ್ದಾಡುತ್ತಾ ಹೊರಗೆ ಬರಲು ಪ್ರಯತ್ನಿಸುವ ದೃಶ್ಯ ಮತ್ತೆ ಮತ್ತೆ ನೆನಪಾಗುತ್ತಿದೆ.
ಗೊತ್ತಿಲ್ಲ, ಏಕೆ ಹೀಗಾಗುತ್ತಿದೆಯೋ. ರಾತ್ರಿಯ ಹಾಸಿಗೆಯ ಮೇಲೆ ಮಲಗಿ ದಿಂಬಿಗೆ ತಲೆಕೊಟ್ಟಾಗಿನಿಂದ ಇದೇ ರೀತಿಯ ದೃಶ್ಯಗಳು ಕಣ್ಣ ಮುಂದೆ ಸುಳಿಯುತ್ತಲೇ ಇದೆ. ಇದು ಕನಸೋ, ನನಸೋ, ವಾಸ್ತವೋ ಗೊತ್ತೇ ಆಗುತ್ತಿಲ್ಲ. ಬೆಳಗಿನ ಜಾವದವರೆಗೂ ಮನಸ್ಸಿನ ತುಂಬಾ ಇದೇ ತೊಳಲಾಟ. ತೀವ್ರ ಚಳಿಜ್ವರ ಬಂದಾಗ ಆಗುವಂತೆ ಈ ಕನಸಿನ ಕಲ್ಪನೆಯೂ ಮುಂದಕ್ಕೆ ಸಾಗುತ್ತಲೇ ಇಲ್ಲ. ಅಲ್ಲೇ ಒದ್ದಾಡುತ್ತಿದ್ದೇನೆ.
ವಿಚಿತ್ರ ಎನಿಸಬಹುದಲ್ಲವೇ ನಿಮಗೆ. ಆದರೆ ಇದು ವಿಚಿತ್ರವಲ್ಲ. ಅತ್ಯಂತ ಸಹಜವಾದ ನೋವಿನ ಅಭಿವ್ಯಕ್ತಿ. ನಾಳೆ ಬೆಳಿಗ್ಗೆ ನಾನು ಸುಮಾರು ಇಪ್ಪತ್ತೈದು ವರ್ಷಗಳಿಂದ ನಗರದ ಅತ್ಯಂತ ಜನನಿಬಿಡ ಆ ಪ್ರದೇಶದಲ್ಲಿ ವಿವಿಧ ಹಣ್ಣು ತರಕಾರಿಗಳನ್ನು ಮಾರಾಟ ಮಾಡುತ್ತಾ ಜೀವನ ಕಟ್ಟಿಕೊಂಡಿದ್ದ ಜಾಗವನ್ನು ಇದೀಗ ಹೊಸ ಮಂತ್ರಿಗಳು ಸುಪ್ರೀಂ ಕೋರ್ಟ್ ಆದೇಶದಂತೆ, ನಗರದ ಪಾದಚಾರಿಮಾರ್ಗದ ಎಲ್ಲಾ ಒತ್ತುವರಿ ಜಾಗವನ್ನು ತೆರವುಗೊಳಿಸಲು ಜೆಸಿಬಿ ಯಂತ್ರದ ಸಹಾಯದಿಂದ ಹೊಡೆದು ಹಾಕಿ ನಮ್ಮನ್ನು ಅಲ್ಲಿಂದ ಎತ್ತಂಗಡಿ ಮಾಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂತು. ಬೆಳಗ್ಗೆಯೇ ಕೆಲವು ಅಧಿಕಾರಿಗಳು ಬಂದು ನೋಟಿಸ್ ನೀಡಿ, ನಾಳೆ ಈ ಜಾಗವನ್ನು ತೆರವು ಮಾಡಬೇಕು. ಇದು ಸುಪ್ರೀಂ ಕೋರ್ಟ್ ಆರ್ಡರ್. ನಾವು ನಿಮಗೆ ನೋಟಿಸ್ ಕೊಡುವ ಅವಶ್ಯಕತೆಯೇ ಇಲ್ಲ. ಏಕೆಂದರೆ ನೀವು ಇರುವುದೇ ಅಕ್ರಮದ ಜಾಗದಲ್ಲಿ. ಆದರೂ ಮಾನವಿಯ ದೃಷ್ಟಿಯಿಂದ ನಿಮಗೆ ಎಚ್ಚರಿಕೆ ಕೊಡುತ್ತಿದ್ದೇವೆ. ದಯವಿಟ್ಟು ನಾಳೆ ಬೆಳಗ್ಗೆ ನಿಮ್ಮ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡು ಹೋಗಿ ಎಂದು ಹೇಳಿ ಹೋಗಿದ್ದಾರೆ.
ಸರ್ಕಾರದ ನಿರ್ಧಾರದ ವಿರುದ್ಧ ಹೋರಾಡುವ ಶಕ್ತಿ ನಮಗಂತೂ ಇಲ್ಲ. ಏನೋ ಮಾಧ್ಯಮಗಳ ಮುಂದೆ ಒಂದಷ್ಟು ಕೂಗಾಡಬಹುದು, ಕಿರುಚಾಡಬಹುದು.
ಅಳಬಹುದು, ನೋವು ತೋಡಿಕೊಳ್ಳಬಹುದು. ಅದಕ್ಕಿಂತ ಹೆಚ್ಚು ಇನ್ನೇನು ಮಾಡಲು ಸಾಧ್ಯ. ಐವತ್ಮೂರು ವರ್ಷ ವಯಸ್ಸಿನ ನನಗೆ ಹಿಂದೊಮ್ಮೆ ಇದೇ ರೀತಿಯ ಆತಂಕ ಎದುರಾಗಿತ್ತು. ಆಗ ಹೆಚ್ಚಿನ ಸಮಸ್ಯೆ ಆಗದೆ ಹಾಗೆ ಬಗೆಹರಿದು ವ್ಯಾಪಾರ ಮುಂದುವರೆಯಿತು. ಆದರೆ ಈ ಬಾರಿ ಹಾಗೆ ಆಗುವ ಸಾಧ್ಯತೆ ಇಲ್ಲ. ನಿನ್ನೆಯಷ್ಟೇ ನಗರದ ಇತರ ಕಡೆ ಬುಲ್ಡೋಜರ್ ಸದ್ದು ಮಾಡಿದ್ದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದನ್ನು ನೋಡಿದೆ. ಅದಕ್ಕಾಗಿಯೇ ಈಗ ಮನಸ್ಸು ಒದ್ದಾಡುತ್ತಿದೆ.
ಆ ಬುಲ್ಡೋಜರ್ ಧ್ವಂಸ ಮಾಡುವುದು ಕೇವಲ ನನ್ನೊಬ್ಬನ ಬದುಕನ್ನೇನಲ್ಲ. ನನ್ನದು ಈಗಾಗಲೇ ಧ್ವಂಸವಾದ ಬದುಕು. ಆದರೆ ನನ್ನ ಮಗಳಿಗೆ ನಿಶ್ಚಿತಾರ್ಥವಾಗಿದೆ. ನನ್ನ ಅಂಗಡಿಯ ಆದಾಯವೇ ಮದುವೆ ಖರ್ಚಿನ ಮೂಲವಾಗಿತ್ತು. ನನ್ನ ಉಳಿತಾಯ ಹೆಚ್ಚೇನು ಇರಲಿಲ್ಲ. ಈ ಅಂಗಡಿಯನ್ನು ತೋರಿಸಿಯೇ ಸ್ವಲ್ಪ ಸಾಲವನ್ನು ಮಾಡುವ ಯೋಚನೆಯಲ್ಲಿದ್ದೆ.
ನಿಮಗೆ ಗೊತ್ತಿರಬಹುದು, ಹಣ್ಣು ತರಕಾರಿಗಳನ್ನು ಮಾರಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ. ಹೌದು, ಜನ ಈ ಬಗ್ಗೆ ಏನೇನೋ ಸಿಕ್ಕಾಪಟ್ಟೆ ಮಾತನಾಡಿಕೊಳ್ಳುತ್ತಾರೆ. ಎಲ್ಲಕ್ಕಿಂತ ಹೆಚ್ಚು ಕೊಸರಾಟ ನಡೆಯುವುದು ಹಣ್ಣು, ತರಕಾರಿ, ಸೊಪ್ಪುಗಳ ಬೆಲೆಯಲ್ಲಿ ಎಂಬುದು ಬಹಳ ಜನ ಗಮನಿಸಿರುವುದಿಲ್ಲ. ಅತಿ ಶೀಘ್ರವಾಗಿ ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ನಾಶವಾಗುವ ವಸ್ತುವೆಂದರೆ ಅದು ಹಣ್ಣು, ತರಕಾರಿ, ಸೊಪ್ಪುಗಳು ಮಾತ್ರ. ಅತಿ ಹೆಚ್ಚು ಕಾನೂನುಗಳ ಶೋಷಣೆಗೆ ಒಳಪಡುವವರೂ ವ್ಯಾಪಾರಿಗಳೇ ಎಂಬುದನ್ನು ನೀವು ಮರೆತಿರುತ್ತೀರಿ. ತೆರಿಗೆ, ಪ್ಲಾಸ್ಟಿಕ್ ನಿಷೇದ ಮುಂತಾದ ವಿಷಯಗಳಲ್ಲಿ ಅದು ಬೇಗನೆ ಅನುಷ್ಠಾನಗೊಳ್ಳುವುದು ಬೀದಿ ಬದಿಯ ವ್ಯಾಪಾರಿಗಳ ಮೇಲೆಯೇ. ಅತಿ ಹೆಚ್ಚು ಅಧಿಕಾರಿಗಳಿಂದ ದೌರ್ಜನ್ಯಕ್ಕೊಳಗಾಗುವವರು, ಪೊಲೀಸರಿಂದ ನಿಂದನೆಗೆ ಒಳಗಾಗುವವರು ಬೀದಿಬದಿಯ ವ್ಯಾಪಾರಿಗಳೇ ಎಂಬುದು ಬಹಳ ಜನರಿಗೆ ಅರ್ಥವಾಗಿರುವುದಿಲ್ಲ. ಯಾವುದೇ ಬಂದ್, ಗಲಭೆ, ಗಲಾಟೆ, ಮೆರವಣಿಗೆ, ಪ್ರತಿಭಟನೆ, ಮುಷ್ಕರಗಳಲ್ಲಿ ಅತಿ ಹೆಚ್ಚು ತೊಂದರೆಗೊಳಗಾಗುವುದು ವ್ಯಾಪಾರಿಗಳೇ ಎಂಬುದು ಸಾಮಾನ್ಯ ಜನರಿಗೆ ಗೊತ್ತಿರುವುದಿಲ್ಲ. ಯಾವುದೇ ಮಳೆ, ಗಾಳಿ, ಶೀತ, ಚಂಡಮಾರುತ ಮುಂತಾದ ಪ್ರಾಕೃತಿಕ ವಿಕೋಪಗಳಿಗೆ ಸಿಲುಕಿ ವ್ಯಾಪಾರ ನಷ್ಟ ಮಾಡಿಕೊಳ್ಳುವವರು ಬೀದಿ ಬದಿಯ ವ್ಯಾಪಾರಿಗಳೇ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಕಷ್ಟ. ಏಕೆಂದರೆ ನಾವು ಬೀದಿಬದಿಯ ಬೆತ್ತಲೆ ವ್ಯಾಪಾರಿಗಳು. ನಮಗೆ ಯಾವ ಭದ್ರತೆಯೂ ಇಲ್ಲ. ಬಹುಶಃ ಅತಿ ಹೆಚ್ಚು ರೋಗಗಳಿಗೆ ತುತ್ತಾಗುತ್ತಿರುವವರೂ ಕೂಡ ಬೀದಿಯ ಬದಿಯ ವ್ಯಾಪಾರಿಗಳೇ ಇರಬೇಕು. ಏಕೆಂದರೆ ದಿನದ ಸುಮಾರು 12 ಗಂಟೆಗೂ ಹೆಚ್ಚು ಆ ಧೂಳು, ಹೊಗೆ ಸೇವಿಸುತ್ತಾ ಉಸಿರಾಡುವವರು ಬೀದಿ ಬದಿ ವ್ಯಾಪಾರಿಗಳೇ. ನಮಗೆ ಸಮಯಕ್ಕೆ ಸರಿಯಾಗಿ ಒಳ್ಳೆಯ ಆಹಾರವೂ ದೊರೆಯುವುದಿಲ್ಲ. ಶೌಚದ ವ್ಯವಸ್ಥೆಯೂ ಇರುವುದಿಲ್ಲ. ಆದರೂ ಮಾಧ್ಯಮಗಳಲ್ಲಿನ ಜನರ ಮಾತುಗಳು ಮಾತ್ರ ನಮ್ಮನ್ನು ಇರಿಯುವಂತೆಯೇ ಇದೆ.
ನಿಜ, ಕೆಲವು ಬೀದಿ ಬದಿಯ, ಪಾದಚಾರಿ ಮಾರ್ಗದ ವ್ಯಾಪಾರಿಗಳು ರೌಡಿಗಳಂತೆ ವರ್ತಿಸುತ್ತಾರೆ. ಕೆಲವು ಬೀದಿಬದಿ ವ್ಯಾಪಾರಿಗಳು ಅಕ್ರಮದಲ್ಲೂ ಸಕ್ರಮದಂತೆಯೇ ವರ್ತಿಸುತ್ತಾರೆ. ಕೆಲವು ಅಂಗಡಿಗಳು ಒಂದಕ್ಕೆ ಎರಡು ಬೆಲೆ ಏರಿಸಿ ವ್ಯಾಪಾರ ಮಾಡುತ್ತಾರೆ. ಬೀದಿ ಬದಿ ವ್ಯಾಪಾರಿಗಳಿಂದ ಒಂದಷ್ಟು ಕಸದ ರಾಶಿಯೂ ನಿರ್ಮಾಣವಾಗುತ್ತದೆ. ಅದರಿಂದ ನಗರ ಸೌಂದರ್ಯವೂ ಹಾಳಾಗುತ್ತದೆ. ಅನೇಕ ಅಕ್ರಮ ಚಟುವಟಿಕೆ, ಬಡ್ಡಿ ವ್ಯಾಪಾರಕ್ಕೂ ಬೀದಿಬದಿಯ ವ್ಯಾಪಾರಿಗಳೇ ಕಾರಣರಾಗುತ್ತಾರೆ. ಅಂಗಡಿಗಳನ್ನು ನಡೆದಾಡಲು ಸಾಧ್ಯವಾಗದಂತೆ ರಸ್ತೆಯ ಉದ್ದಕ್ಕೂ ಚಾಚುತ್ತಾರೆ. ಅದೆಲ್ಲವೂ ನಿಜ. ಅದಕ್ಕೆ ಎತ್ತಂಗಡಿ ಒಂದೇ ಪರಿಹಾರವೇ. ನನಗೆ ಗೊತ್ತಿಲ್ಲ, ಗೊತ್ತಾದರೂ ನಾನು ಏನು ಮಾಡುವಂತೆಯೂ ಇಲ್ಲ. ಈಗ ನನಗೆ ಅದಕ್ಕಿಂತ ಮುಖ್ಯವಾಗಿ ನನ್ನ ಮಗಳ ಮದುವೆಯದೇ ಚಿಂತೆ. ಅವಳ ಭವಿಷ್ಯ ಬಹುತೇಕ ಮುಗಿದ ಅಧ್ಯಾಯ ಇರಬಹುದೇನೋ ಅನಿಸುತ್ತಿದೆ.
ಆ, ನನ್ನ ಬಗ್ಗೆ ನಿಮಗೆ ಸ್ವಲ್ಪ ಮಾಹಿತಿ ಕೊಡುತ್ತೇನೆ. ನಾನೊಬ್ಬ ಅತ್ಯಂತ ಚಿಕ್ಕ ಹಳ್ಳಿಯಿಂದ ಬದುಕು ಕಟ್ಟಿಕೊಳ್ಳಲು ನಗರಕ್ಕೆ ಬಂದವ. ನಮ್ಮಪ್ಪ ಬಡ ಕೃಷಿ ಕೂಲಿಕಾರ. ನನ್ನ ಬಡತನ ಹೇಗಿತ್ತೆಂದರೆ, ನಾನು ನಗರಕ್ಕೆ ಬಂದ ಮೇಲೆಯೇ ಅಂದರೆ ಸುಮಾರು ನನ್ನ ಇಪ್ಪತ್ತನೇ ವಯಸ್ಸಿನಲ್ಲಿ ಹೊಟ್ಟೆ ತುಂಬಾ ಊಟ ಮಾಡಿದವನು. ಅದಕ್ಕೂ ಮೊದಲು ಎಲ್ಲೋ ಸಿಕ್ಕಿದ್ದನ್ನು ತಿನ್ನುತ್ತಾ, ಅಲೆಯುತ್ತಾ, ಹೋಟೆಲಿನಲ್ಲಿ ಪಾತ್ರೆ ತೊಳೆಯುತ್ತಾ ಬೆಳೆದವನು.
ಅಪ್ಪ ಅಮ್ಮ ಸತ್ತ ವಿಷಯ ಕೂಡ ನನಗೆ ತಿಳಿದದ್ದೇ ಅವರು ಸತ್ತ ಎಷ್ಟೋ ತಿಂಗಳ ನಂತರ. ಅದೂ ಆಕಸ್ಮಿಕವಾಗಿ ಭೇಟಿಯಾದ ನಮ್ಮೂರಿನ ಒಬ್ಬ ಗೆಳೆಯನಿಂದ. ಇಬ್ಬರೂ ಕೆಲವೇ ತಿಂಗಳುಗಳ ಅಂತರದಲ್ಲಿ ತೀರಿಹೋಗಿದ್ದರು. ನನ್ನನ್ನು ಹುಡುಕಲು ಸಾಕಷ್ಟು ಪ್ರಯತ್ನಿಸಿ ವಿಫಲರಾಗಿ ಕೊನೆಗೆ ಹತ್ತಿರದ ಸಂಬಂಧಿಗಳೇ ಅವರ ಅಂತ್ಯಕ್ರಿಯೆ ಮುಗಿಸಿದ್ದಾರೆ. ಏಕೆಂದರೆ ನಾನು ಇತ್ತೀಚೆಗಷ್ಟೇ ಮೊಬೈಲ್ ಕೊಂಡಿದ್ದೇನೆ ಅದಕ್ಕೆ ಮೊದಲು ನನ್ನನ್ನು ಸಂಪರ್ಕಿಸುವ ವಿಳಾಸ ಯಾರಿಗೂ ಗೊತ್ತಿರಲಿಲ್ಲ. ಅಂತಹ ನತದೃಷ್ಟ ನಾನು. ಹೇಗೋ ಏನೋ ಆ ಹೋಟೆಲಿನಲ್ಲಿ ಆದ ಹಿಂಸೆಯನ್ನು ಸಹಿಸಲಾರದೆ ನಗರದ ಇನ್ನೊಂದು ಭಾಗಕ್ಕೆ ತಪ್ಪಿಸಿಕೊಂಡು ಓಡಿ ಬಂದವನು. ನಾನು ಅಲ್ಲೇ ರಸ್ತೆ ಬದಿಯಲ್ಲಿ ತರಕಾರಿ ಅಂಗಡಿಯ ಪಕ್ಕದಲ್ಲಿ ಮಲಗಿದವನು. ಬೆಳಿಗ್ಗೆ ಎದ್ದಾಗ ಆ ಅಂಗಡಿಯ ಮಾಲೀಕ ಮೊದಲಿಗೆ ನನ್ನನ್ನು ಅಲ್ಲಿಂದ ಓಡಿಸುತ್ತಿದ್ದ. ಆದರೆ ಕೆಲವು ದಿನಗಳ ನಂತರ ನನ್ನ ದೈನೈಸಿ ಮುಖವನ್ನು ನೋಡಿ ನನ್ನ ಬಗ್ಗೆ ತಿಳಿದು ಈ ಅಂಗಡಿಯಲ್ಲಿ ನನಗೆ ಸಹಾಯಕನಾಗಿ ಸ್ವಲ್ಪ ನೋಡಿಕೋ ಎಂದು ಹೇಳಿ ಊಟ ಬಟ್ಟೆ ಕೊಟ್ಟು ಅದೇ ಜಾಗದಲ್ಲಿ ಫುಟ್ಪಾತಿನ ಮೇಲೆಯೇ ಮಲಗುತ್ತಾ ಎರಡು ವರ್ಷ ಯಾವುದೇ ಹಣಕಾಸಿನ ಮೂಲವಿಲ್ಲದೆ ಬದುಕಿದವನು ನಾನು.
ನೀವು ನಂಬುವುದಿಲ್ಲ, ಕೆಲವು ಬಾರಿ ಎರಡು ತಿಂಗಳಿಗೊಮ್ಮೆ ಸ್ನಾನ ಮಾಡಿದವನು ನಾನು, ಯಾವುದೋ ನಲ್ಲಿಯ ಕೆಳಗೆ. ಅದೆಲ್ಲ ಇರಲಿ, ಒಂದು ದಿನ ಆ ಅಂಗಡಿಯ ಮಾಲೀಕ ಅವರ ಮನೆಯಲ್ಲಿ ತನ್ನ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಬಹುಶಃ ಆಕೆಯ ಮಗಳು ಯಾರೋ ಮಲೆಯಾಳಿ ಹುಡುಗನ ಜೊತೆ ಓಡಿ ಹೋದಳು. ಆ ಅವಮಾನ ಸಹಿಸದೆ ಆ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರಬಹುದು. ಏಕೆಂದರೆ ಆ ಸಂದರ್ಭದಲ್ಲಿ ಅವರ ಮಾತುಗಳನ್ನು ಗಮನಿಸುತ್ತಿದ್ದ ನನಗೆ ಆ ಬಗ್ಗೆ ಅನುಮಾನವಿದೆ. ಆಗ ಈ ಅಂಗಡಿಯನ್ನು ನೋಡಲು ಸಹ ಯಾರೂ ಬರಲಿಲ್ಲ. ಅವರ ಯಾವ ಸಂಬಂಧಿಕರು ಸಹ ಈ ಬಗ್ಗೆ ವಿಚಾರಿಸುವುದೂ ಇಲ್ಲ.
ಆಶ್ಚರ್ಯ, ಇದ್ದಕ್ಕಿದ್ದಂತೆ ನಾನೇ ಅಂಗಡಿಯ ಮಾಲೀಕನಾದೆ. ನನಗೇನು ಆ ಬಗ್ಗೆ ತೃಪ್ತಿ ಇರಲಿಲ್ಲ. ಈ ದೇಶದಲ್ಲಿ ಈ ರೀತಿಯ ಸಂಬಂಧರಹಿತ ಸಂಬಂಧಗಳು ಇರಬಹುದೇ ಎಂಬ ಅನಾಥಪ್ರಜ್ಞೆ ನನ್ನನ್ನು ಬಹುವಾಗಿ ಕಾಡಿತು. ಏಕೆಂದರೆ ನಾನು ಒಂದು ರೀತಿಯ ಅನಾಥನೇ ಆಗಿದ್ದೆ.
ಆಗ ಈ ಅಂಗಡಿಯನ್ನು ನಾನೇ ನಡೆಸಿ ತೊಡಗಿದೆ. ತರಕಾರಿ, ಹಣ್ಣುಗಳು ಎಲ್ಲಿಂದ ಬರುತ್ತಿತ್ತೋ ಗೊತ್ತಿಲ್ಲ. ಅವರಿಗೆ ಹಣವನ್ನು ಹೇಗೆ ಕೊಡಬೇಕೋ ಗೊತ್ತಿಲ್ಲ. ನಿಧಾನವಾಗಿ ಒಂದೊಂದೇ, ಒಂದೊಂದೇ ಕಲಿಯುತ್ತಾ ಹೋದೆ. ಕೊಡಬೇಕಾದವರಿಗೆ ಸಮಯಕ್ಕೆ ಸರಿಯಾಗಿ ಹಣ ಕೊಡುವ ಪ್ರಾಮಾಣಿಕತೆಯನ್ನು ಬೆಳೆಸಿಕೊಂಡೆ. ಗಲ್ಲಾ ಪಟ್ಟಿಗೆಯಲ್ಲಿ ಉಳಿದಿದ್ದ ಸಾವಿರದ ಮುನ್ನೂರು ರೂಪಾಯಿ ನನ್ನ ಮೂಲ ಬಂಡವಾಳವಾಯಿತು.
ಇದೆಲ್ಲಾ ನಡೆದು ಇಪ್ಪತ್ತೈದು ವರ್ಷವಾಯಿತು. ಹಾಗೂ ಹೀಗೂ ವ್ಯಾಪಾರ ನಡೆಸುತ್ತಾ ಅಂಗಡಿ ನನ್ನ ಪಾಲಿಗೆ ಬಂದ ಎರಡೇ ವರ್ಷಕ್ಕೆ ಅಲ್ಲಿಯೇ ಮನೆ ಕೆಲಸ ಮಾಡುತ್ತಿದ್ದ ಹುಡುಗಿಯೊಬ್ಬಳನ್ನು ಮದುವೆಯಾದೆ. ಆಕೆಯೂ ತಂದೆ ತಾಯಿ ಇಲ್ಲದ, ಯಾರದೋ ಶೋಷಣೆಗೆ ಒಳಗಾಗಿ ಓಡಿ ಬಂದು, ಇನ್ಯಾರೋ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಕೆ. ಅದೃಷ್ಟವಶಾತ್ ನನ್ನಂತೆ ಆಕೆಗೂ ಬದುಕಿನಲ್ಲಿ ಯಾವುದೇ ನಿರೀಕ್ಷೆಗಳು ಇರಲಿಲ್ಲ. ಸುಮ್ಮನೆ ಹಾಗೆ ಬದುಕುತ್ತಾ ಜೀವನ ಸಾಗಿಸುತ್ತಿದ್ದವಳು. ಮದುವೆಯಾದ ನಂತರವೇ ಒಂದು ಸಣ್ಣ ಮನೆ ಮಾಡಿದೆ. ಈ ನಗರದಲ್ಲೂ ಅದರ ಬಾಡಿಗೆ ಕೇವಲ ಏಳುನೂರ ಐವತ್ತು ರೂಪಾಯಿ ಅಂದರೆ ಆ ಮನೆಯ ಪರಿಸ್ಥಿತಿಯನ್ನು ನೀವೇ ಊಹಿಸಿ. ಶೌಚಾ ಇಲ್ಲ, ಅಡುಗೆ ಮನೆ ಇಲ್ಲ, ಅಸಲಿಗೆ ಸರಿಯಾದ ಬಾಗಿಲೇ ಇರಲಿಲ್ಲ. ಆಕೆಗೂ ಬೇಸರವಿಲ್ಲ, ನನಗೂ ಬೇಸರವಿಲ್ಲ. ಏಕೆಂದರೆ ಪುಟ್ಪಾತಿಗಿಂತ ಆ ಮನೆಯೇ ಹೆಚ್ಚು ಸುರಕ್ಷಿತವಾಗಿತ್ತು, ಆರಾಮಾಗಿತ್ತು, ಸ್ವತಂತ್ರವಾಗಿತ್ತು.
ಕೇವಲ ಒಂದೇ ವರ್ಷದಲ್ಲಿ ನಮಗೊಬ್ಬ ಮಗಳು ಹುಟ್ಟಿದಳು. ಆಸ್ಪತ್ರೆಯೂ ಇಲ್ಲ, ಡಾಕ್ಟರೂ ಇಲ್ಲ. ಮನೆಯಲ್ಲಿಯೇ ಹೆರಿಗೆ. ಪಕ್ಕದ ಮನೆಯ ಆಂಟಿಯೇ ಸೂಲಗಿತ್ತಿ. ಬಾಣಂತನ ಎಂಬುದೇನು ಇರಲಿಲ್ಲ. ಎಲ್ಲವೂ ಅತ್ಯಂತ ಸಹಜವಾಗಿಯೇ ಆಯಿತು. ಮನುಷ್ಯ ಪ್ರಾಣಿ ಸಹ ಇತರ ಪ್ರಾಣಿಯಂತೆಯೇ ಅಲ್ಲವೇ . ಅದರಂತೆ ಎಲ್ಲವೂ ನಡೆದು ಹೋಯಿತು.
ಆ ಮಗು ಸಹ ಹಣ್ಣು, ತರಕಾರಿಗಳ ನಡುವೆಯೇ ಬೆಳೆಯುತ್ತಾ ಹೋಯಿತು. ಶಾಲೆಯೂ ಇಲ್ಲ, ಆಸ್ಪತ್ರೆಯೂ ಇಲ್ಲ. ನಮ್ಮಂತೆ ಆಕೆಯೂ ಬೆಳೆದಳು, ಬೆಳೆದು ನಿಂತಳು. ಇದೀಗ ಆಕೆಗೆ 22 ವಯಸ್ಸು.
ಮದುವೆ ಮಾಡಲೇಬೇಕಾದ ಅನಿವಾರ್ಯ ಒತ್ತಡವು ನಮ್ಮದಾಯಿತು. ಇತರರ ಕಣ್ಣು ಆಕೆಯ ಮೇಲೆ ಬೀಳುವ ಮೊದಲೇ ಆಕೆಯನ್ನು ಮದುವೆ ಮಾಡಿ ಕಳಿಸುವ ಯೋಚನೆಯಿಂದ ಹುಡುಗನನ್ನು ಹುಡುಕ ತೊಡಗಿದೆ. ನಾನು ಯಾವ ಜಾತಿಯೋ, ನನ್ನಾಕೆ ಯಾವ ಜಾತಿಯೋ, ಮಗಳು ಯಾವ ಜಾತಿಯೋ ನಿಜವಾಗಲೂ ಹೇಳಬೇಕೆಂದರೆ ಸರಿಯಾಗಿ ಅರ್ಥವೇ ಆಗಿರಲಿಲ್ಲ. ಆದರೂ ಗಂಡು ಹುಡುಕ ತೊಡಗಿದೆ. ಒಂದಿಬ್ಬರು ಬಂದರೂ ನಮಗೆ ಮನೆಯೇ ಇಲ್ಲದ ಕಾರಣ ಅದೆಲ್ಲ ವಿಫಲವಾಯಿತು. ಕೊನೆಗೆ ಒಂದು ಸಣ್ಣ ಮನೆಯನ್ನು ಹಿಡಿದೆವು. ಏಕೆಂದರೆ ಕನಿಷ್ಠ ಮನೆಯಾದರೂ ಇದ್ದರೆ ಹುಡುಗಿಗೆ ಮದುವೆಯಾಗಬಹುದು ಎಂಬ ಆಸೆಯಿಂದ.
ಒಂದು ವರ್ಷದ ಸತತ ಪ್ರಯತ್ನದ ನಂತರ ರೈಲ್ವೆ ಕೂಲಿ ಒಬ್ಬ, ಆತನೂ ಅನಾಥನೇ, ಮಗಳನ್ನು ಮದುವೆಯಾಗಲು ಮುಂದೆ ಬಂದ. ಆಗ ನಡೆದ ಮಾತುಕತೆಗಳು, ಚರ್ಚೆಗಳು, ಬೇಡಿಕೆಗಳು ಅದೇ ಒಂದು ಅಧ್ಯಾಯವಾಗಬಹುದು. ಈಗ ಎಲ್ಲವೂ ಸರಿ ಹೋಗಿರುವಾಗ ಅದರ ಬಗ್ಗೆ ಹೆಚ್ಚು ವಿವರಣೆ ಬೇಡ. ಇನ್ನೇನು ಕೆಲವೇ ದಿನಗಳಲ್ಲಿ ಒಂದು ದೇವಸ್ಥಾನದಲ್ಲಿ ಮದುವೆ ಮಾಡಿ ಅವರ ಬದುಕಿಗೆ ಒಂದು ದಾರಿ ತೋರಿಸುವ ಉತ್ಸಾಹದಲ್ಲಿದ್ದೆ. ಇದೀಗ ಈ ಪಾದಚಾರಿಮಾರ್ಗದ ತೆರವಿನ ಯೋಜನೆ ಬರಸಿಡಿಲಿನಂತೆ ಬಂದೋರಗಿದೆ.
ಆ.. ಹಾ… ಇದನ್ನು ಕೇಳಿಸಿಕೊಳ್ಳುತ್ತಿರುವ ನಿಮಗೆ ಆಶ್ಚರ್ಯವಾಗಬಹುದು ಅಥವಾ ಇದು ಕೇವಲ ಕಲ್ಪನೆ ಇರಬಹುದು ಅಥವಾ ಉತ್ಪ್ರೇಕ್ಷೆ ಆಗಿರಬಹುದು ಎಂದೆನಿಸಬಹುದು. ಏಕೆಂದರೆ ನಗರದ ವಿದ್ಯಾವಂತ, ಬುದ್ಧಿವಂತ ಮದ್ಯಮ ವರ್ಗದ ಜನರು ಒಬ್ಬ ಮನುಷ್ಯನಿಗೆ ಇಷ್ಟೊಂದು ಕಷ್ಟ ಬರಲು ಸಾಧ್ಯವೇ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟವಾಗಬಹುದು. ನಗರದ ಈ ವಾಹನಗಳ ಭರಾಟೆಯಲ್ಲಿ, ಕಟ್ಟಡಗಳ ಕಿಷ್ಕಿಂದೆಯಲ್ಲಿ, ಜನರ ಈ ಒತ್ತಡದ ಬದುಕಿನಲ್ಲಿ ಇಷ್ಟೊಂದು ಬಡತನದ ಜನರಿರುವರೇ ಎಂಬುದು ನಿಮ್ಮ ಕಲ್ಪನೆಗೆ ಬರದೇ ಇರಬಹುದು. ಏಕೆಂದರೆ ಈ ಪಾದಚಾರಿ ಮಾರ್ಗದ ಗೂಡಂಗಡಿಗಳು ತೆರುವು ಮಾಡುವ ವಿಷಯದಲ್ಲಿ ಟಿವಿ, ಪತ್ರಿಕೆ ಅಥವಾ ಸಾಮಾಜಿಕ ಜಾಲತಾಣದಲ್ಲಿ ಅದಕ್ಕೆ ಬಹುತೇಕ ಜನ ಬೆಂಬಲ ನೀಡುತ್ತಿದ್ದಾರೆ. ಸಾರ್ವಜನಿಕರು ಪಾದಚಾರಿ ಮಾರ್ಗದಲ್ಲಿ ನಡೆಯುವುದು ಅವರ ಹಕ್ಕು, ಅದಕ್ಕೆ ತೊಂದರೆ ಕೊಡುತ್ತಿರುವವರನ್ನು ತೆರವು ಮಾಡಿಸಲೇಬೇಕು. ಇವರನ್ನು ಹೀಗೆ ಬಿಟ್ಟರೆ ಇಡೀ ನಗರವನ್ನು ಆಕ್ರಮಿಸಿಕೊಳ್ಳುತ್ತಾರೆ ಮುಂತಾಗಿ ಜನ ಮಾತನಾಡಿಕೊಳ್ಳುವುದನ್ನು ಕೇಳಿಸಿಕೊಂಡಿದ್ದೇನೆ.
ನಗರದ ಸೌಂದರ್ಯ ಹಾಳಾಗಳು, ನಗರದ ಪರಿಸರ ಹಾಳಾಗಲು, ನಗರದ ಜನರ ಮಾನಸಿಕ, ದೈಹಿಕ ಆರೋಗ್ಯ ಹಾಳಾಗಲು ಅನೇಕ ಕಾರಣಗಳು ತಮ್ಮ ಅರಿವಿನಂಚಿನಲ್ಲಿಯೇ ನಡೆಯುತ್ತಿದ್ದರು ಅದನ್ನು ನಿರ್ಲಕ್ಷಿಸುವ ಇದೇ ಜನ ನಮ್ಮಂತ ಬಡಜನರ ತೊಂದರೆಯನ್ನೇ ಅಗಾಧ ಸಮಸ್ಯೆ ಎಂದು, ಸೌಂದರ್ಯಕ್ಕೆ ಧಕ್ಕೆ ಎಂದೂ ಮಾತನಾಡಿಕೊಳ್ಳುವುದನ್ನು ನೋಡಿ ಸೋಜಿಗವೆನಿಸುತ್ತದೆ, ವಿಷಾದವೆನಿಸುತ್ತದೆ.
ನಿಜ, ನಮ್ಮಿಂದ ತೊಂದರೆ ಆಗುತ್ತಿರುವುದನ್ನು ಆತ್ಮ ಸಾಕ್ಷಿಯಾಗಿ ಒಪ್ಪಿಕೊಳ್ಳುತ್ತೇನೆ. ಆದರೆ ಆ ಸಣ್ಣ ತೊಂದರೆಯ ಕಾರಣದಿಂದ ನಮ್ಮ ಬದುಕಿನ ಮೇಲೆಯೇ ಬುಲ್ಡೋಜರ್ ಹರಿಸುವುದು ಎಷ್ಟು ಸರಿ. ನಾವು ನಿಮ್ಮವರಲ್ಲವೇ. ನಮಗೂ ಬದುಕುವ ಹಕ್ಕಿದೆಯಲ್ಲವೇ. ನಮಗೂ ಹೊಸದೊಂದು ಪರ್ಯಾಯ ಮಾರ್ಗ ತೋರಿಸಬಹುದಲ್ಲವೇ.
ನೀವೇ ಹೇಳಿ ಸರ್ಕಾರದ ಅವಶ್ಯಕತೆ ಇರುವುದು ಎಲ್ಲರಿಗಿಂತ ಹೆಚ್ಚಾಗಿ ನಮ್ಮಂತ ಕಟ್ಟ ಕಡೆಯ ಕಡುಬಡವರ ಬಗ್ಗೆ ಅಲ್ಲವೇ. ಯಾರೋ ಕೆಲವು ತರಕಾರಿ ಮಾರುವವರ ದುಷ್ಟತನದಿಂದ, ಮಾಫಿಯಾದಿಂದ, ಅಕ್ರಮಗಳಿಂದ ಇಡೀ ಬೀದಿಬದಿಯ ವ್ಯಾಪಾರಿಗಳನ್ನೇ ದೂಷಿಸುವುದು ಎಷ್ಟು ಸರಿ.
ಇದನ್ನು ನಿಮ್ಮ ವಿವೇಚನೆಗೆ ಬಿಡುತ್ತಾ, ನನ್ನ ನೋವನ್ನು ನಾನೇ ಅನುಭವಿಸುತ್ತಾ, ನನ್ನ ಹೆಂಡತಿಯನ್ನು ಸಮಾಧಾನಿಸುತ್ತಾ, ಮಗಳ ದುರಾದೃಷ್ಟಕ್ಕೆ ಅಸಹಾಯಕತೆ ವ್ಯಕ್ತಪಡಿಸುತ್ತಾ,
ಹೌದು, ನನ್ನ ಮಗಳು ದುರಾದೃಷ್ಟವಂತೆ. ಮನೆಯಲ್ಲಿ ಚಾಪೆಯ ಮೇಲೆ ಮಲಗಿ ನನ್ನ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನನಗಿದು ತೀರಾ ಅನಿರೀಕ್ಷಿತ. ಬದುಕನ್ನು ಎಷ್ಟೊಂದು ಕಷ್ಟಗಳ ನಡುವೆ, ಸಂಘರ್ಷಗಳೊಂದಿಗೆ ಕಳೆದವರು ನಾನು ಮತ್ತು ನನ್ನ ಪತ್ನಿ.
ಈಗ ನಮ್ಮ ಅಂಗಡಿ ಜೆಸಿಬಿ ಯಂತ್ರದ ಚಕ್ರಗಳಿಗೆ ಸಿಲುಕಿ ನಾಶವಾದರೆ ಬಹುತೇಕ ಈ ಮದುವೆ ನಡೆಯುವುದಿಲ್ಲ. ನನ್ನ ಮಗಳನ್ನು ಸಮಾಧಾನಿಸುವುದು ಬಹಳ ಕಷ್ಟ. ಏಕೆಂದರೆ ಆಕೆ ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದಾಳೆ. ಈಗ ಅದು ಮಣ್ಣುಪಾಲಾಗುತ್ತಿದೆ. ಅದನ್ನು ಆಕೆ ಹೇಗೆ ಸ್ವೀಕರಿಸುತ್ತಾಳೋ ಅರ್ಥವಾಗುತ್ತಿಲ್ಲ. ರಾತ್ರಿ ಮಲಗಿದಾಗ ಆಕೆ ಏನಾದರೂ ಆತ್ಮಹತ್ಯೆ ಮಾಡಿಕೊಂಡರೆ ಹೇಗೆ ಎಂದು ಕೆಟ್ಟ ಕೆಟ್ಟ ಕನಸುಗಳು ಬೀಳುತ್ತಿವೆ. ಆಕೆಯ ಮದುವೆಯಾಗುವ ಹುಡುಗನಿಗೆ ಈ ವಿಷಯ ತಿಳಿಸುವುದು ಹೇಗೆ, ಅವನು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೋ ಅದು ಮತ್ತೊಂದು ಒತ್ತಡವನ್ನು ಸೃಷ್ಟಿಸುತ್ತಿದೆ.
ಕಷ್ಟಗಳ ಸರಪಳಿ ಇಲ್ಲಿಗೆ ನಿಲ್ಲುವುದಿಲ್ಲ. ಇರುವ ಸ್ವಲ್ಪ ಹಣವನ್ನು ಬೇರೆ ಅಂಗಡಿಗೆ ಮುಂಗಡವಾಗಿ ನೀಡಿ ವ್ಯವಹಾರ ಮಾಡಿದರೆ ಮದುವೆಗೆ ಇಟ್ಟಿರುವ ಸ್ವಲ್ಪ ಹಣವೂ ಖರ್ಚಾಗುತ್ತದೆ. ಈ ಅಂಗಡಿಯ ಮೇಲೆ ಸಾಲವೂ ದೊರೆಯುವುದಿಲ್ಲ. ಈ ಕ್ಷಣಕ್ಕೆ ಹತ್ತಿರದಲ್ಲಿ ಬೇರೆ ಜಾಗದಲ್ಲಿ ವ್ಯಾಪಾರ ಮಾಡುವುದು ಸಾಧ್ಯವಿಲ್ಲ. ತಲೆಯಲ್ಲಿ ಏನೇನೋ ಓಡುತ್ತಿದೆ. ಬಡವರಾಗಿ ಹುಟ್ಟುವುದು ತಪ್ಪೇ ಅಥವಾ ಇದು ಪ್ರಕೃತಿಯೇ ನಮಗೆ ನೀಡುತ್ತಿರುವ ಶಿಕ್ಷೆಯೋ ಒಂದೂ ಅರ್ಥವಾಗುತ್ತಿಲ್ಲ.
ಇರಲಿ ಬಿಡಿ ನನ್ನ ಗೋಳು. ನಿಮಗೆ ಇದಕ್ಕಿಂತ ಒಳ್ಳೆಯ ಕಥೆಯೇ ಬೇಕೆಂದರೆ, ಭಾವನೆಗಳು ಕೆರಳಿ, ಮನರಂಜನೆಯೇ ಮುಖ್ಯವಾಗಬೇಕಾದರೆ ನಿಮ್ಮ ಕಲ್ಪನಾ ಶಕ್ತಿಯನ್ನು ವಿಸ್ತರಿಸಿಕೊಳ್ಳಿ. ಆದರೆ ನಾನು ನನ್ನ ಒಡಲಾಳದ ನೋವನ್ನು ವಾಸ್ತವ ಪ್ರಜ್ಞೆಯೊಂದಿಗೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.
ನನಗೆ ಗೊತ್ತು ನೀವು ಕೇಳುತ್ತೀರಿ, ಅನಕ್ಷರಸ್ತ, ಅಜ್ಞಾನಿ ಹಳ್ಳಿಯ ಐದಾ, ತರಕಾರಿ ಮಾರುವವನೊಬ್ಬ ತನ್ನ ಭಾವನೆಗಳನ್ನು ಹೀಗೆ ಈ ರೀತಿಯ ಪದಪುಂಜಗಳೊಂದಿಗೆ ವರ್ಣಿಸಲು ಹೇಗೆ ಸಾಧ್ಯ. ಆತನಿಗೆ ಭಾಷೆಯ ಹಿಡಿತ ಎಲ್ಲಿಂದ ಬಂದಿರುತ್ತದೆ ಹೀಗೆ ಅನೇಕ ಪ್ರಶ್ನೆಗಳನ್ನು ಕೇಳುವಿರಿ. ಏಕೆಂದರೆ ನೀವು ವಿದ್ಯಾವಂತರು, ಬುದ್ಧಿವಂತರು, ಹಣವಂತರು. ನಮ್ಮ ಕರುಳಿನ ಕೂಗು ನಿಮಗೆ ಅರ್ಥವಾಗುವುದಿಲ್ಲ. ನೀವು ಅಭಿವೃದ್ಧಿಯ ನಾಗಾಲೋಟದಲ್ಲಿ ಸಾಗುತ್ತಿರುವಿರಿ. ಕರುಳ ಬಳ್ಳಿಯ ಸಂಕಟ ಭಾಷೆ ಭಾವಗಳನ್ನು ಮೀರಿದ್ದು ಎಂದು ನಿಮಗೆ ಅರ್ಥ ಮಾಡಿಸುವುದಾದರೂ ಹೇಗೆ ? ಕಲಿತ ಅಕ್ಷರಗಳಿಂದ ಅನುಭವ ರೂಪ ಕೊಡುವ ಬರಹ ಇದಲ್ಲ. ಅನುಭವಗಳಿಗೆ ಅಕ್ಷರ ರೂಪ ಕೊಡುವ ಪ್ರಯತ್ನವಷ್ಟೇ
ಈ ಬದುಕನ್ನು ಇಷ್ಟೊಂದು ಕಷ್ಟಗಳ ನಡುವೆಯೂ ಮುಂದುವರಿಸಿಕೊಂಡು ಬರಲು ಆಗಿನ ಕಾಲದಲ್ಲಿ ರೇಡಿಯೋ ಹೆಚ್ಚು ಚಾಲ್ತಿಯಲ್ಲಿ ಇದ್ದ ಕಾರಣದಿಂದ. ನಮ್ಮ ಅಂಗಡಿಯಲ್ಲಿ ದಿನವೂ ರೇಡಿಯೋದಲ್ಲಿ ಬರುತ್ತಿದ್ದ ಅನೇಕ ಹಾಡುಗಳನ್ನು ಕೇಳುತ್ತಲೇ ವ್ಯಾಪಾರ ಮಾಡುತಿದ್ದೆ. ಏಕಾಂತದಲ್ಲಿ ರೇಡಿಯೋನೇ ನನ್ನ ಸಂಗಾತಿಯಾಗಿತ್ತು.
” ಬಾನಿಗೊಂದು ಎಲ್ಲೆ ಎಲ್ಲಿದೇ, ನಿನ್ನಾಸೆಗೆಲ್ಲಿ ಕೊನೆಯಿದೇ, ಏಕೆ ಕನಸು ಕಾಣುವೇ, ನಿಧಾನಿಸು, ನಿಧಾನಿಸು… “,
” ನನ್ನವರು ಯಾರೂ ಇಲ್ಲ, ಯಾರಿಗೆ ಯಾರೂ ಇಲ್ಲ, ಪ್ರೀತಿ ವಾತ್ಸಲ್ಯಕ್ಕೆ ಅರ್ಥವೇ ಇಲ್ಲ…. “, ” ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ, ಅಂಗೈ ಅಗಲಾ ಜಾಗ ಸಾಕು ಹಾಯಾಗಿರೋಕೆ… “,
” ನೀ ನಡೆವ ಹಾದಿಯಲ್ಲಿ, ನಗೆ ಹೂವು ಬಾಡದಿರಲಿ, ಈ ಬಾಳ ಬುತ್ತಿಯಲಿ, ಸಿಹಿ ಪಾಲು ನಿನಗಿರಲಿ, ಕಹಿಯೆಲ್ಲ ನನಗಿರಲಿ… ” ಹೀಗೆ ಒಳ್ಳೊಳ್ಳೆಯ ಹಾಡುಗಳು ನನ್ನನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ಈ ಟಿವಿ ಬಂದಮೇಲೆ ಹಾಡು ಕೇಳುವುದು ಬಹುತೇಕ ನಿಂತಿದೆ ಈಗ ನೋಡಿದರೆ ಈ ಕಷ್ಟವನ್ನು ಎದುರಿಸುವುದು ಸಾಧ್ಯವೇ ಆಗುತ್ತಿಲ್ಲ. ಒಮ್ಮೊಮ್ಮೆ ನಾನು ಆತ್ಮಹತ್ಯೆ ಮಾಡಿಕೊಂಡು ಬಿಡಲೇ ಎನಿಸುತ್ತದೆ. ಆದರೆ ಹೆಂಡತಿ, ಮಗಳನ್ನು ನೋಡಿದಾಗ ” ಜಗತ್ತಿನ ಎಲ್ಲಾ ಜೀವರಾಶಿಗಳು ಹೋರಾಡುವುದು ಬದುಕಲೇ ಹೊರತು ಸಾಯಲು ಅಲ್ಲ. ಸಾವು ತಾನಾಗೆ ಬರುತ್ತದೆ. ನಮ್ಮ ಹೋರಾಟ ಏನಿದ್ದರೂ ಬದುಕಿಗಾಗಿಯೇ ಇರಬೇಕು.. ” ಹೀಗೆ ಯೋಚಿಸುತ್ತಲೇ ಇದ್ದೇನೆ. ಇನ್ನು ಕೆಲವೇ ಗಂಟೆಗಳು, ನನ್ನ ಅಂಗಡಿಯನ್ನು ಬುಲ್ಡೋಜರ್ ದ್ವಂಸ ಮಾಡುತ್ತದೆ. ಮುಂದೆ ಗೊತ್ತಿಲ್ಲ…
ಆದರೆ ಏನೇ ಆಗಲಿ, ಯಾವುದೇ ಪರಿಸ್ಥಿತಿ ಉದ್ಭವವಾಗಲಿ ನಾನು ಧೈರ್ಯವಾಗಿ ಎದುರಿಸುತ್ತೇನೆ, ಕೊನೆಯ ಉಸಿರಿನವರೆಗೂ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….

