ಕಾಡುಕೋಣ ದಾಳಿಗೆ ವೃದ್ಧ ರೈತ ತೀವ್ರ ಗಾಯ: ಸ್ಥಿತಿ ಗಂಭೀರ, ಮಂಗಳೂರಿಗೆ ರವಾನೆ….
1 min read
ಕಾಡುಕೋಣ ದಾಳಿಗೆ ವೃದ್ಧ ರೈತ ತೀವ್ರ ಗಾಯ: ಸ್ಥಿತಿ ಗಂಭೀರ, ಮಂಗಳೂರಿಗೆ ರವಾನೆ.
ತೋಟದಲ್ಲಿ ಕೆಲಸ ನಿರತರಾಗಿದ್ದ ವೃದ್ಧ ರೈತನ ಮೇಲೆ ಕಾಡುಕೋಣ ಭೀಕರ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ನಡೆದಿದೆ.
ಮಧುಗುಂಡಿ ಗ್ರಾಮದ ನಂಜೇಗೌಡ (72) ಕಾಡುಕೋಣದ ದಾಳಿಗೊಳಗಾದ ಭೀಕರ ಘಟನೆಯಲ್ಲಿ ಗಂಬಿರವಾಗಿ ಗಾಯಗೊಂಡ ರೈತರಾಗಿದ್ದಾರೆ.
ಘಟನೆಯ ವಿವರ: ಸಾಮಾನ್ಯ ದಿನಗಳಂತೆ ನಂಜೇಗೌಡ
ಅವರು ಮಂಗಳವಾರ ಬೆಳಿಗ್ಗೆ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ, ದಿಢೀರನೆ ಪ್ರತ್ಯಕ್ಷಗೊಂಡ ಕಾಡುಕೋಣ ಅವರ ಮೇಲೆ ಭೀಕರವಾಗಿ ಎರಗಿದೆ. ಕೋಣದ ತೀವ್ರ ಸ್ವರೂಪದ ದಾಳಿಯಿಂದಾಗಿ ಅವರ ದೇಹದ ವಿವಿಧ ಭಾಗಗಳಿಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದರು.
ಕೂಡಲೇ ಸ್ಥಳೀಯರು ಹಾಗೂ ಕುಟುಂಬಸ್ಥರು ಅವರನ್ನು ರಕ್ಷಿಸಿ, ಬಣಕಲ್ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಮೂಡಿಗೆರೆ ಮತ್ತು ಸುತ್ತಮುತ್ತಲಿನ ಮಲೆನಾಡು ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳ ಹಾವಳಿ ಮಿತಿಮೀರಿದ್ದು, ತೋಟಕ್ಕೆ ತೆರಳಲು ರೈತರು ಹಾಗೂ ಕಾರ್ಮಿಕರು ಭೀತಿ ಅನುಭವಿಸುವಂತಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಜಾಗೃತರಾಗಿ ಕಾಡುಕೋಣಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಮತ್ತು ಗಾಯಾಳು ರೈತನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಕ್ರೋಶದೊಂದಿಗೆ ಒತ್ತಾಯಿಸಿದ್ದಾರೆ.

