ತರೀಕೆರೆಯಲ್ಲಿ ಕಸಾಪ ಸಂಸ್ಥಾಪನಾ ದಿನಾಚರಣೆ: ದಾನಿ ಶ್ಯಾಮಲಾ ಮಂಜುನಾಥ್. ಪತ್ರಕರ್ತ ಅನಂತ ನಾಡಿಗ್ ಅವರಿಗೆ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸನ್ಮಾನ…..
1 min read
ಅವಿನ್ ಟಿವಿ ಸುದ್ದಿಜಾಲ ✍️: ತರೀಕೆರೆಯಲ್ಲಿ ಕಸಾಪ ಸಂಸ್ಥಾಪನಾ ದಿನಾಚರಣೆ:
ದಾನಿ ಶ್ಯಾಮಲಾ ಮಂಜುನಾಥ್. ಪತ್ರಕರ್ತ ಅನಂತ ನಾಡಿಗ್ ಅವರಿಗೆ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸನ್ಮಾನ.
ನನ್ನೊಳಗನ್ನು ಎಚ್ಚರಿಸಿದ್ದು ವಿಸ್ತರಿಸಿದ್ದು ವಿಕಸನಕ್ಕೆ ಎಡೆಮಾಡಿಕೊಟ್ಟಿದ್ದು ಕನ್ನಡ ನಾಡು ನುಡಿ ಭಾಷೆ: ಕಸಾಪ ಹಿರಿಯ ಸದಸ್ಯೆ ಹಾಗೂ ದಾನಿ ಶ್ಯಾಮಲಾ ಮಂಜುನಾಥ್ ಅಭಿಪ್ರಾಯ.
ಪತ್ರಕರ್ತರು ತೀರ್ಪುಗಾರ ರಾಗಬಾರದು ಸುದ್ದಿಯ ನೈಜತೆಯನ್ನು ಸಮಾಜಕ್ಕೆ ತೆರೆದಿಡುವ ಕಾವಲುಗಾರರಾಗಬೇಕು, ಸಮಸ್ಯೆಯ ಮೂಲಕ್ಕೆ ಸಂಬಂಧಪಟ್ಟವರು ಹುಡುಕಿಕೊಂಡು ಬಂದು ಆ ಸಮಸ್ಯೆಯನ್ನು ನಿವಾರಣೆ ಮಾಡುವಂತೆ ವರದಿ ಮಾಡಬೇಕು:ಹಿರಿಯ ಪತ್ರಕರ್ತ ಅನಂತ್ ನಾಡಿಗ್ ಅಭಿಮತ.
ತರೀಕೆರೆ ಮೇ ೦೮:
ದಾನ ಧರ್ಮವು ಸೇರಿದಂತೆ ಲೋಕದ ಎಲ್ಲ ವಿವರಣೆಗಳು ಮಾನವ ಜನಾಂಗಕ್ಕೆ ದಕ್ಕಿರುವುದು ಚರ್ಚೆ ವಿಮರ್ಶೆ ಪ್ರಶಂಸೆ ಮಾತುಕತೆ ಸಂವಾದದ ನಂತರವೇ, ಕನ್ನಡ ನಾಡು ನಿರ್ಮಾಣವಾಗಿದ್ದು ಹೊಗಳಿಕೆಯ ಹೂಮಾಲೆಯೊಂದಿಗೆ ಅಲ್ಲ, ಅದು ಚರ್ಚೆ ವಿಮರ್ಶೆ ಪ್ರಶಂಸೆ ಸಹಿತವಾದ ಸ್ವಾಭಿಮಾನದ ನೆಲೆಗಟ್ಟಿನ ಆಧಾರದ ಮೇಲೆ, ಸ್ವಾಭಿಮಾನದ ನೆಲಗಟ್ಟಿನ ಆಧಾರದ ಮೇಲೆ ನಿರ್ಮಾಣವಾದ ಇಂತಹ ಕನ್ನಡ ನಾಡು, ಈ ನಾಡಿನ ಭಾಷೆ, ಭಾಷೆಯೊಳಗಿರುವ ಬದುಕು ದಿನಗಳು ಕಳೆದಂತೆ ಸ್ವಾಭಿಮಾನಿ ಬದುಕಿಗೆ ಬೆನ್ನು ಮಾಡಿ, ವಿಮರ್ಶೆಗಳು ವೈರಾಗ್ಯ ತಾಳುತ್ತಿರುವ ಕಾರಣ, ಆ ಸ್ವಾಭಿಮಾನದ ಒಂದು ಘನ ಬದುಕು ತೆಳುವಾಗುತ್ತಾ ಸಾಗುತ್ತಿದೆ, ಯಾವಾಗ ಸ್ವಾಭಿಮಾನ ಎಂಬುದು ತೆಳುವಾಗಲು ಆರಂಭಿಸಿತೋ ಆ ಕ್ಷಣದಿಂದಲೇ ಮನುಷ್ಯನ ಬದುಕು ತನ್ನ ಘನತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತಿದೆ.
ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನೆಯಾಗಿದ್ದು ಸಾಹಿತ್ಯದ ರಚನೆಗಾಗಿ ಹಾಗೂ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವುದಕ್ಕೆ ಮತ್ತು ಪಡೆಯುವುದಕ್ಕಾಗಿ ಮಾತ್ರವಲ್ಲ, ಅದು ನಾಡು ನುಡಿ ನೆಲ ಜಲದ ಸಮಸ್ಯೆ ಬಂದಾಗ ಬೀದಿಗೆ ಇಳಿದು ಹೋರಾಟ ಮಾಡಬೇಕು, ಆಳುವ ಸರ್ಕಾರದ ಜನವಿರೋಧಿ ನೀತಿ ನಿರೂಪಣೆಗಳನ್ನು ,ತಪ್ಪು ನಡೆಯನ್ನು ಈ ನೆಲದ ಕನ್ನಡದ ಕಟ್ಟಾಳು ಆಗಿ ಎಚ್ಚರಿಸುತ್ತಿರಬೇಕು, ನಾಡಿನ ಸೌಹಾರ್ದತೆಗೆ ಭ್ರಾತೃತ್ವಕ್ಕೆ ಧಕ್ಕೆಯಾದಾಗ ಸಮತೆಯನ್ನು ಸಾಧಿಸಬೇಕು,
ಜನಸಾಮಾನ್ಯರ ನಿತ್ಯದ ಬದುಕು ಬವಣೆಗಳ ನಿಟ್ಟುಸಿರಿಗೆ ಧ್ವನಿಯಾಗಿ, ಸಾಹಿತ್ಯ ಸಂಸ್ಕೃತಿ ಪರಂಪರೆಯನ್ನು ಈ ನೆಲದ ಕಟ್ಟ ಕಡೆಯ ಜನರ ಮನ ಮನೆ ಬಾಗಿಲಿಗೆ ತಲುಪಿಸುವ ಸಂಬಂಧ ಅಂದು ಕಳೆದ ಶತಮಾನದ ಹಿಂದೆ ಒಂದು ಉದಾತ್ತವಾದ ಉದ್ದೇಶದೊಂದಿಗೆ ಸಂಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶಗಳನ್ನು ಒಂದು ಎಚ್ಚರಿಕೆಯಿಂದ ನಾವೆಲ್ಲ ಹಿಂತಿರುಗಿ ನೋಡಬೇಕಾಗಿದೆ, ಮತ್ತು ಇಂತಹ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನೆಗೆ ಕಾರಣೀಭೂತರಾದ ರಾಜ ಋಷಿ ನಾಲ್ವಡಿ ಕೃಷ್ಣರಾಜ ಒಡೆಯರು ಸೇರಿದಂತೆ ಪರಿಷತ್ತಿನ ಬೆಳವಣಿಗೆಗೆ ದುಡಿದ ಎಲ್ಲ ಮಹನೀಯರನ್ನು ಅಧ್ಯಯನ ಮಾಡಬೇಕಾಗಿದೆ.
ನಾಡು ನುಡಿ ಕನ್ನಡ ಭಾಷೆಗೆ ಸಂಬಂಧಪಟ್ಟಂತೆ ಕನ್ನಡ ಸಾಹಿತ್ಯ ಪರಿಷತ್ತು ಇಡೀ ಜಗತ್ತಿನ ಇತಿಹಾಸದಲ್ಲಿಯೇ ಅತಿ ದೊಡ್ಡ ಸಂಖ್ಯೆಯ ನಾಲ್ಕು ಲಕ್ಷಕ್ಕೂ ಮಿಗಿಲಾದ ಆಜೀವ ಸದಸ್ಯರನ್ನು ಹೊಂದಿದೆ, ಕನ್ನಡ ಸಾಹಿತ್ಯ ಪರಿಷತ್ತು ಹೊಂದಿರುವ ಆಜೀವ ಸದಸ್ಯರ ಸಂಖ್ಯೆಯ ಪ್ರಮಾಣದಷ್ಟು ಜನಸಂಖ್ಯೆಯನ್ನು ಜಗತ್ತಿನ ಹಲವು ದೇಶಗಳು ಹೊಂದಿಲ್ಲ ಎಂಬುದು ಗಮನಾರ್ಹವಾದ ವಿಷಯವಾಗಿದೆ.
ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕರ್ನಾಟಕ ವಿಕಾಸ ರಂಗ ಜಿಲ್ಲಾ ಘಟಕವು ಇತ್ತೀಚಿಗೆ ತರೀಕೆರೆಯ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಹಾಗೂ ದಾನಿಗಳು ಆದ ಶ್ಯಾಮಲ ಮಂಜುನಾಥ್ ಅವರ ಮನೆಯಂಗಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ೧೧೨ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.
ಕಸಾಪ ಸಂಸ್ಥಾಪನಾ ದಿನಾಚರಣೆಯ ಈ ಸಂದರ್ಭದಲ್ಲಿ , ತರೀಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಕನ್ನಡ ಭವನವನ್ನು ಕಟ್ಟಲು, ತರೀಕೆರೆ ಪಟ್ಟಣದ ಹೃದಯ ಭಾಗದಲ್ಲಿ ಬೆಲೆಬಾಳುವಂತಹ ಒಂದು ನಿವೇಶನವನ್ನು ಉಚಿತವಾಗಿ ಉದಾತ್ತ ಮನಸ್ಸಿನಿಂದ ದಾನದ ರೂಪದಲ್ಲಿ ಕೊಟ್ಟಿರುವ , ಸ್ವಾತಂತ್ರ ಹೋರಾಟದ ಮನೆತನದ ಹಿನ್ನೆಲೆ ಇರುವ ಶ್ಯಾಮಲಾ ಮಂಜುನಾಥ್ ಮತ್ತು ಅರ್ಥ ಶತಮಾನಕ್ಕೂ ಹೆಚ್ಚಿನ ಕಾಲದಿಂದ ಸುಮಾರು ೫೬ ವರ್ಷಗಳಿಂದ ನಿರಂತರವಾಗಿ, ಅಂಚೆ ವಾರ್ತೆ ಎಂಬ ಕೈ ಬರಹದ ಪತ್ರಿಕೆಯೊಂದನ್ನು ಹುಟ್ಟು ಹಾಕಿ, ತದನಂತರ ಹಲವು ಜಿಲ್ಲಾ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿ,ಪತ್ರಿಕಾ ಧರ್ಮಕ್ಕೆ ಅದರ ಮೌಲ್ಯಕ್ಕೆ ಎಂದಿಗೂ ಚ್ಯುತಿ ಬಾರದಂತೆ ಪತ್ರಿಕಾ ರಂಗದ ಘನತೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿ, ೭೪ರ ಈ ಇಳಿ ವಯಸ್ಸಿನಲ್ಲಿಯೂ ಕೂಡ ಇಂದು ರಾಜ್ಯಮಟ್ಟದ ಪತ್ರಿಕೆಯೊಂದಕ್ಕೆ ತಾಲ್ಲೂಕು ವರದಿಗಾರರಾಗಿ ದುಡಿಯುತ್ತಿರುವ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು ಆದ ಅನಂತ್ ನಾಡಿಗ್ ಅವರಿಗೆ ಕುಂಭಕ ಸಾಹಿಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಈ ಇಬ್ಬರಿಗೂ ಸನ್ಮಾನವಿತ್ತು ಗೌರವಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ತರೀಕೆರೆ ತಾಲೂಕು ಘಟಕದ ಮಾಜಿ ಅಧ್ಯಕ್ಷರು ಆದ ಕನ್ನಡ ಶ್ರೀ ಬಿ ಎಸ್ ಭಗವಾನ್ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.
ದಾನಿ ಶ್ಯಾಮಲಾ ಮಂಜುನಾಥ್ ಅವರ ಪರಿಚಯ ಮತ್ತು ಸಾಧನೆಯನ್ನು ತರೀಕೆರೆ ತಾಲ್ಲೂಕು ಕಸಾಪ ಘಟಕದ ಅಧ್ಯಕ್ಷರಾದ ರವಿ ದಳವಾಯಿ ಹಾಗೂ ಪತ್ರಕರ್ತ ಅನಂತ್ ನಾಡಿಗ್ ಅವರ ಪರಿಚಯ ಮತ್ತು ಅವರ ಸಮಾಜಿಕ ಬದುಕನ್ನು ಕುರಿತು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಹಿರೇಮಗಳೂರು ಪುಟ್ಟಸ್ವಾಮಿ ಮಾಡಿಕೊಟ್ಟರು.
ತರೀಕೆರೆ ಕಸಾಪ ಘಟಕದ ಮತ್ತೋರ್ವ ಮಾಜಿ ಅಧ್ಯಕ್ಷರು ಹಾಗೂ ವಕೀಲರಾದ ಎಸ್.ಸುರೇಶ್ ಚಂದ್ರ ಅವರು ಮರೆಯುವ ಮುನ್ನ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಕಸಾಪ ಸಂಸ್ಥಾಪನಾ ದಿನಾಚರಣೆ ಮತ್ತು ಕಾರ್ಯಕ್ರಮದ ಉದ್ದೇಶವನ್ನು ಕುರಿತು ಡಿ. ಎಂ ಮಂಜುನಾಥ ಸ್ವಾಮಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕರ್ನಾಟಕ ವಿಕಾಸರಂಗ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಈ ಕಾರ್ಯಕ್ರಮದ ರೂವಾರಿಯು ಆದ ಕುಂದೂರು ಅಶೋಕ್ ವಹಿಸಿದ್ದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಕಸಾಪ ಜಿಲ್ಲಾ ಘಟಕದ ಪ್ರಧಾನ ಸಂಚಾಲಕ ಇಮ್ರಾನ್ ಅಹಮದ್ ಬೇಗ್. ಕಸಾಪ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್. ಪ್ರಕೃತಿ ಶ್ರೀ ಕಲಾ ಕುಟೀರದ ಮುಖ್ಯಸ್ಥೆ ಉಮಾ ಪ್ರಕಾಶ್. ಸದ್ವಿಧ್ಯಾ ಪಬ್ಲಿಕ್ ಸ್ಕೂಲ್ ಮುಖ್ಯ ಶಿಕ್ಷಕಿ ಹರ್ಷಿಣಿ ಡಿ. ಆರ್. ನವೀನ್ ಕುಮಾರ್. ಗಾಯಕಿ ರೋಹಿಣಿ ನರಸಿಂಹಮೂರ್ತಿ. ಸೈಯದ್ ಮುಹೀಬುಲ್ಲಾ ಮುಂತಾದವರು ಉಪಸ್ಥಿತರಿದ್ದರು.
•••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

